ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಜೆಗಳೇ ಪ್ರಭುಗಳು : ಒಂದು ಜಾಗತಿಕ ನೋಟ

By Super
|
Google Oneindia Kannada News

ಪ್ರಜಾಪ್ರಭುತ್ವವನ್ನು ಈಗ ಹೆಚ್ಚು ಕಡಿಮೆ ಪ್ರಪಂಚದಾದ್ಯಂತ ಎಲ್ಲರೂ ಮನಃಪೂರ್ವಕ ಸ್ವೀಕರಿಸಿಯಾಗಿದೆ. 'ಜನತೆಯ ಕೈಗೆ ಅಧಿಕಾರ...' ಎನ್ನುವುದು ಸಾಮಾನ್ಯವಾಗಿ ಎಲ್ಲ ಕಡೆಯೂ ಕೇಳಿಬರುವ ಮಾತು. ಪ್ರಜಾಪ್ರಭುತ್ವ ಒಳ್ಳೆಯದು ಮತ್ತು ಅದು ಪರಮೋಚ್ಛ ಸ್ವಾತಂತ್ರ ್ಯ ಎಂಬುದೂ ಹಾಸುಹೊಕ್ಕಾಗಿರುವ ನಂಬಿಕೆ. ಹೀಗಿದ್ದರೂ ಆಗೊಮ್ಮೆ ಈಗೊಮ್ಮೆ, 'ಹಿಂದಿನ ಮಹಾರಾಜರ ಕಾಲವೇ ಒಳ್ಳೆಯದಿತ್ತಪ್ಪಾ...' ಎಂದು ಹೇಳುವ ಹಿರೀಕರ ಮಾತುಗಳನ್ನೂ, 'ಪ್ರಸ್ತುತ ಭಾರತದ ಸ್ಥಿತಿಯನ್ನು ರಿಪೇರಿ ಮಾಡಬೇಕಿದ್ದರೆ ಒಬ್ಬ ಸರ್ವಾಧಿಕಾರಿ ಹಿಟ್ಲರನೇ ಹುಟ್ಟಿಬರಬೇಕು...' ಎಂಬ ಹತಾಶೆಯನ್ನೂ ಕೇಳಿದ್ದುಂಟು. ಆದರೂ ನನ್ನ ಅಭಿಪ್ರಾಯದಲ್ಲಿ ಇವು ಅರೆಕಾಲಿಕ ಹತಾಶೆಯ ಮಾತುಗಳೇ ವಿನಃ ಮತ್ತೆ ಮಹಾರಾಜರ ಸಾಮ್ರಾಜ್ಯಶಾಹಿಯಲ್ಲಿ, ಸರ್ವಾಧಿಕಾರಿಯ ಕರಿನೆರಳಲ್ಲಿ ಬದುಕುವ ಕಲ್ಪನೆಯೇ ಅಶಕ್ಯ, ಅಸಹ್ಯವೆನಿಸುತ್ತದೆ; ಪ್ರಜಾಪ್ರಭುತ್ವವೇ ಆಪ್ಯಾಯಮಾನವಾಗುತ್ತದೆ.

ಪ್ರಜಾಪ್ರಭುತ್ವದ ಪ್ರಲೋಭನೆ ಅಥವಾ ಕಾಂತಶಕ್ತಿಯೇ ಅಂಥದು. ಸದ್ದಾಂ ಹುಸೇನ್‌ ಅಥವಾ ಯುಗೋಸ್ಲಾವಿಯಾದ ಸ್ಲೊಬೊಡನ್‌ ಮಿಲೊಸೆವಿಕ್‌ನಂಥ ಸರ್ವಾಧಿಕಾರಿಗಳೂ ಕೂಡ ತಂತಮ್ಮ ದೇಶಗಳಲ್ಲಿ ಚುನಾವಣೆಗಳನ್ನು ನಡೆಸಲು ಅಪಾರ ಹಣವನ್ನೂ, ಶಕ್ತಿಯನ್ನೂ ವ್ಯಯಿಸುತ್ತಾರೆ. ಈ ಚುನಾವಣೆಗಳನ್ನೆಲ್ಲ ತಾವೇ ಗೆದ್ದುಕೊಳ್ಳುತ್ತಾರೆ ಎನ್ನುವ ಮಾತು ಬೇರೆ. ಕಮ್ಯುನಿಸ್ಟ್‌ ದೇಶವಾದ ಪೂರ್ವ ಜರ್ಮನಿ ಕೂಡ ತನ್ನನ್ನು 'ಜರ್ಮನ್‌ ಡೆಮಾಕ್ರಟಿಕ್‌ ರಿಪಬ್ಲಿಕ್‌' ಎಂದು ಗುರುತಿಸಿಕೊಳ್ಳಲು ಇಚ್ಛಿಸುವುದು ಇಲ್ಲಿ ಗಮನೀಯ.

ಡೆಮಾಕ್ರಸಿಯ ಈ ಕ್ರೇಜ್‌, ಬರೀ ರಾಜಕೀಯ ಮತ್ತು ಸರಕಾರಗಳನ್ನು ರಚಿಸುವುದರಲ್ಲಿ ಮಾತ್ರವಲ್ಲ, ಇತರೆಡೆಗೂ ತನ್ನ ಕಬಂಧಬಾಹುಗಳನ್ನು ಚಾಚಿದೆ. ಒಬ್ಬ ಕಲಾಕಾರನ ಮೌಲ್ಯಮಾಪನ, ಕೀರ್ತಿ, ಸಂಭಾವನೆಗಳೆಲ್ಲ ಹಳೇಕಾಲದಲ್ಲಾದರೆ ಸಮಾಜದ ಉನ್ನತಸ್ಥಾನದಲ್ಲಿರುವ ಕೆಲವೇ ಕೆಲವು ಉದ್ದಾಮ ('ಎಲೀಟ್‌' ಎಂದು ಗುರುತಿಸಿಕೊಳ್ಳುವ) ಮಂದಿಯ ಶಿಫಾರಸ್ಸಿನಂತೆ ಆಗುತ್ತಿದ್ದುವು. ಈ ವಂದಿಮಾಗಧರ ಮೊಹರು ಬಿದ್ದರೆ ಮಾತ್ರ ಆ ಕಲಾವಿದ 'ಶ್ರೇಷ್ಠ'ನೆನಿಸಿಕೊಳ್ಳುತ್ತಿದ್ದ. ಈಗ ಹಾಗಲ್ಲ. ಇವತ್ತಿನ ದಿನ ಅತಿ ಹೆಚ್ಚು ಗಳಿಕೆಯ ಕಲಾವಿದ ಅತಿ ಜನಪ್ರಿಯನೂ ಆಗಿರುತ್ತಾನೆ. ಒಂದು ಸಣ್ಣ ಉದಾಹರಣೆ ತಗೊಳ್ಳಿ. ನಸೀರುದ್ದೀನ್‌ ಶಾಗೆ ಆತನ ಕಲಾಪ್ರೌಢಿಮೆಗೆ 'ಕ್ರಿಟಿಕ್ಸ್‌ ಚಾಯ್ಸ್‌' ಪ್ರಶಸ್ತಿಗಳು ಸಿಗಬಹುದು. ಆದರೆ ಕೈತುಂಬಾ ಹಣ ಹರಿಯುವುದು ಅಮಿತಾಭ್‌ ಬಚ್ಚನ್‌, ಶಾರುಖ್‌ ಖಾನ್‌ ಅವರಂಥ ಸ್ಟಾರ್‌ಗಳಲ್ಲೇ! ಅವರಲ್ಲಿ ಪ್ರತಿಭೆಯಿಲ್ಲ ಎನ್ನುತ್ತಿಲ್ಲ ನಾನು. ಜನಸಾಮಾನ್ಯರ ಪರಾಕು ಸಿಗುವುದು ಬಚ್ಚನ್‌, ಶಾರುಖ್‌ ಖಾನ್‌ಗೆ ಹೊರತು ನಸೀರುದ್ದೀನ್‌ಗಲ್ಲ. ಇದೇ ಮಾತು ಟೀವಿ ಕಾರ್ಯಕ್ರಮಗಳಿಗೂ ಹಿಡಿಸುತ್ತದೆ. ಅತ್ಯಧಿಕ ಟಿ.ಆರ್‌.ಪಿ ಇರುವ ಧಾರಾವಾಹಿ/ಕಾರ್ಯಕ್ರಮ ಚ್ಯೂಯಿಂಗ್‌ ಗಮ್‌ನಂತೆ ಎಳೆದರೂ ಮುಂದುವರಿಯುತ್ತದೆ. 'ಎಲೀಟ್‌', 'ಕ್ವಾಲಿಟಿ' ಕಾರ್ಯಕ್ರಮಗಳಿಗೆ ಎತ್ತಂಗಡಿ ಕಟ್ಟಿಟ್ಟ ಬುತ್ತಿ.

ಆರ್ಥಿಕ ವ್ಯವಸ್ಥೆಯಲ್ಲೂ ಜನಾಧಿಕಾರವೇ ನಡೆಯುತ್ತದೆ. ಜನತೆಯ 'ಕೊಳ್ಳುವ ಶಕ್ತಿ, ಇಚ್ಛೆ'ಗಳೇ ಇಲ್ಲಿ ಮತದಾನವಿದ್ದಂತೆ. ಕಂಪೆನಿ 'ಎ'ಯ ಉತ್ಪನ್ನವು ಗುಣಮಟ್ಟದಲ್ಲಿ ಕಂಪೆನಿ 'ಬಿ'ಯ ಉತ್ಪನ್ನಕ್ಕಿಂತಲೂ ಗುಲಗಂಜಿ ತೂಕದಷ್ಟು ಹೆಚ್ಚೇ ಇರಬಹುದು. ಆದರೂ 'ಬಿ'ಯ ಉತ್ಪನ್ನಕ್ಕೇ ಜನ ಮುಗಿಬಿದ್ದರೆ ಕಂಪೆನಿ 'ಎ' ಚುನಾವಣೆಯಲ್ಲಿ ಠೇವಣಿ ಕಳಕೊಂಡಂತೆಯೇ! ಮುಂದಿನ ಸಲಕ್ಕಾದರೂ ತನ್ನ ಉತ್ಪನ್ನದ ಮಾರಾಟತಂತ್ರವನ್ನು, ಜಾಹೀರಾತುಜಾಲವನ್ನು ವಿಸ್ತರಿಸದಿದ್ದರೆ ಅದು ದಿವಾಳಿ ಎದ್ದುಹೋಗಬೇಕಾದೀತು!

1908ರಲ್ಲಿ ಹೆನ್ರಿ ಫೋರ್ಡ್‌ ತನ್ನ ಫೋರ್ಡ್‌ ಕಂಪೆನಿಯ 'ಮಾಡೆಲ್‌-ಟಿ' ಕಾರುಗಳನ್ನು ಉತ್ಪಾದಿಸಿ ಮಾರತೊಡಗಿದ. ಆವಾಗೆಲ್ಲ ಕಾರುಗಳು ಕಪ್ಪುಬಣ್ಣದಲ್ಲೇ ಇರುತ್ತಿದ್ದುವು. ವಿವಿಧ ಬಣ್ಣಗಳಲ್ಲಿ ಕಾರುಗಳನ್ನು ತಯಾರಿಸಿ ಎಂಬ ಗ್ರಾಹಕರ ಬೇಡಿಕೆಯನ್ನು ಗೇಲಿಮಾಡಿ ತಿರಸ್ಕರಿಸಿದ ಎಂಬ ಕುಖ್ಯಾತಿ ಹೆನ್ರಿ ಫೋರ್ಡ್‌ನಿಗಿದೆ. ಆದರೆ ಇವತ್ತು ನೋಡಿ, ಯಾವ ಬಣ್ಣದ ಕಾರು ಬೇಕು ನಿಮಗೆ? ಒಂದೊಂದು ಕಂಪೆನಿಯ ಒಂದೊಂದು ಮಾಡೆಲ್‌ನಲ್ಲೂ ಗ್ರಾಹಕನಿಗೆ ಅದೆಷ್ಟು ಆಯ್ಕೆಗಳಿವೆ! Customer is the King... ಎನ್ನುವ ಮಾರ್ಕೆಟಿಂಗ್‌ ಮಂತ್ರ ಬಂದದ್ದು ಸುಮ್ಮನೆ ಅಲ್ಲ.

ಇಂಟರ್‌ನೆಟ್‌ ಎಂಬ ಮಾಯಾಜಾಲ ಬಂದ ನಂತರವಂತೂ ಪೀತಪತ್ರಿಕೆಗಳಿಂದ ಹಿಡಿದು ಗಾಸಿಪ್‌, ವಿಭಿನ್ನ-ವಿಶಿಷ್ಠ ಮಾಹಿತಿಕೋಶ, ಹೊಸಹೊಸ ಯೋಚನೆ-ಯೋಜನೆಗಳೆಲ್ಲ ಪ್ರಜಾಪ್ರಭುತ್ವದ ವ್ಯಾಪ್ತಿಗೆ ಬಂದಿವೆ. ಯಾವನೋ ಪ್ರಕಾಶಕನಿಗೆ ದುಂಬಾಲು ಬಿದ್ದು, ಸಂಪಾದಕನ ಕೃಪಾಕಟಾಕ್ಷಕ್ಕೊಳಗಾಗಿ ಪುಸ್ತಕವನ್ನೋ, ಲೇಖನವನ್ನೋ, ಕವಿತೆಯನ್ನೋ ಪ್ರಕಟಿಸುವುದೆಲ್ಲ ಹಳೇ ಮಾತಾಯಿತು. ಈಗ ಯಾರೂ ಸಿಗದಿದ್ದರೆ ನೀವೇ ಒಂದು ವೆಬ್‌ಸೈಟ್‌ ಸ್ಥಾಪಿಸಿ ಸೈಬರ್‌ಲೋಕದಲ್ಲಿ ಠಿಕಾಣಿ ಹೂಡಿದರಾಯಿತು. ನೀವೇ ಲೇಖಕ, ಪ್ರಕಾಶಕ, ಮಾರಾಟಗಾರ, ದಲ್ಲಾಳಿ... ಎಲ್ಲವೂ. 'ಕ್ಲಿಕ್‌'ಆಗದಿದ್ದರೆ ನೀವೇ ಏಕೈಕ ಗ್ರಾಹಕನೂ ಆಗಬೇಕಾಗುತ್ತದೆಯೆನ್ನುವ ಸಂಗತಿ ಒತ್ತಟ್ಟಿಗಿರಲಿ.

ಅಮೆರಿಕದ ಅಧ್ಯಕ್ಷ ಬುಷ್‌ ಮತ್ತವನ ಸಹಚರರ ಹೆಬ್ಬಯಕೆಯೆಂದರೆ ಇರಾಕ್‌ನ ಜನತೆಗೆ ಪ್ರಜಾಪ್ರಭುತ್ವ ಮತ್ತು ಸ್ವಾತಂತ್ರ್ಯದ ಮರುಸ್ಥಾಪನೆ ಮಾಡುವುದು. ಕ್ರಮೇಣ ಇದು ಅರೇಬಿಯನ್‌ ಕೊಲ್ಲಿ ಪ್ರದೇಶಗಳಿಗೆಲ್ಲ ಹರಡಿ ಅಲ್ಲೆಲ್ಲ ಡೆಮಾಕ್ರಸಿಯ ಧ್ವಜ ಹಾರುವಂತಾಗಬೇಕು, ಆಗುತ್ತದೆ ಎನ್ನುವುದು ಅವರ ವಾದ. (ಈ ವಿಷಯದಲ್ಲಿ ನಾನು ಬುಷ್‌ ಧೋರಣೆಯನ್ನು ಅನುಮೋದಿಸುತ್ತೇನೆ. ತುಂಬ ಮಂದಿ ಇದನ್ನು ಒಪ್ಪಲಿಕ್ಕಿಲ್ಲವೆಂಬುದೂ ನನಗೆ ಗೊತ್ತು; ಇರಲಿ, ಈ ಪ್ರಬಂಧವು ಬುಷ್‌ ಅಥವಾ ಇರಾಕ್‌ ಕುರಿತಾದದ್ದಲ್ಲ). ಇರಾಕ್‌ನಲ್ಲಿ ಆಯತೊಲ್ಲಾ ಸಿಸ್ಟಾನಿ ನೇತೃತ್ವದ ಶಾಹಿ ಗುಂಪಿಗೆ (ಇರಾಕ್‌ನ ಜನಸಂಖ್ಯೆಯ ಶೇ.60 ರಿಂದ 70ರಷ್ಟು ಶಾಹಿಗಳಿದ್ದಾರೆ) ಬುಷ್‌ನ ಈ ಪ್ಲಾನ್‌ ಸಮ್ಮತಿಯಿದೆಯಾದರೂ ನೇರ ಚುನಾವಣೆಯ ಮೂಲಕ ಸರಕಾರ ಸ್ಥಾಪನೆಯಾಗಬೇಕೆಂಬುದು ಅದರ ಬಯಕೆ. ಅಮೆರಿಕದಲ್ಲಿದ್ದಂತೆ ಪಕ್ಷದ ಪ್ರಾದೇಶಿಕ ಸಂಘಟನೆ (caucus)ಗಳಲ್ಲಿ ಚುನಾವಣೆ ನಡೆದು ಪರೋಕ್ಷವಾಗಿ ಅಧ್ಯಕ್ಷನ ಆಯ್ಕೆ ನಡೆಯುವ ಕ್ರಮ ಅವರಿಗೆ ಇಷ್ಟವಿಲ್ಲ.

ಪ್ರಜಾಪ್ರಭುತ್ವದ ಮಿತಿಮೀರಿದ ಬೆಳವಣಿಗೆ, ಸರ್ವವ್ಯಾಪಿತ್ವಗಳು ಸಮಾಜದ ಆರೋಗ್ಯಕ್ಕೆ ಒಳ್ಳೆಯದೇ? ಅಲ್ಲವೆಂದು ಹೇಳಬೇಕಾಗುತ್ತದೆ!

ಕ್ಯಾಲಿಫೋರ್ನಿಯಾ ಮತ್ತಿತರ ಕೆಲ ಸಂಸ್ಥಾನಗಳಲ್ಲಿ 'ಜನತೆಯ ಕೈಗೆ ಅಧಿಕಾರ' ಎನ್ನುವ ವಿಚಾರ ಎಂತಹ ಅಪಾಯಕಾರಿ, ಅಪ್ರಯೋಜಕ ಮಟ್ಟಕ್ಕೆ ತಲುಪಿದೆಯೆಂದರೆ ಅಲ್ಲಿ ಯೋಜನೆಗಳು, ಉಪಕ್ರಮಗಳು ಅನುಷ್ಠಾನವಾಗಬೇಕಾದರೆ ಮತದಾನ ನಡೆಯುತ್ತದೆ. ಸಾಮಾನ್ಯವಾಗಿ ಶಾಸನಾಧಿಕಾರವುಳ್ಳ ಚುನಾಯಿತ ಪ್ರತಿನಿಧಿಗಳು ಮಾತ್ರ ನಿರ್ಧರಿಸಬೇಕಾದ್ದನ್ನೂ ಜನತೆಯ 'ಅದಾಲತ್‌' ನಿರ್ಧರಿಸುತ್ತದೆ.

ಇದು ಕೆಲವೊಮ್ಮೆ ಎಷ್ಟು ವಿರೋಧಾಭಾಸ, ಅಧ್ವಾನಗಳಿಗೆ ಎಡೆ ಮಾಡುತ್ತದೆ ಎಂದು ಒಂದು ಉದಾಹರಣೆ ನೋಡಿ. 'ರಾಜ್ಯ ಸರಕಾರವು ಶಿಕ್ಷಣ ವ್ಯವಸ್ಥೆಯನ್ನು, ಶಾಲೆಗಳನ್ನು ಸುಧಾರಿಸಬೇಕೇ?' ಎಂಬ ಚರ್ಚೆ. ಸಾರ್ವಜನಿಕರ ಒಕ್ಕೊರಲಿನ ಮುದ್ರೆ - 'ಹೌದು'. 'ರಾಜ್ಯ ಸರಕಾರ ವಿಧಿಸುವ ಆದಾಯ ತೆರಿಗೆಯನ್ನು ಕಡಿಮೆ ಮಾಡಬೇಕೇ?' ಎನ್ನುವ ಇನ್ನೊಂದು ಉಪಕ್ರಮಕ್ಕೆ (initiative)ಜನತೆಯ ಮತ - 'ಖಂಡಿತವಾಗಿ ಮಾಡಬೇಕು!' ಹಾಗಾದರೆ, ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸಲು ಬೇಕಾದ ಆರ್ಥಿಕ ಸಂಪನ್ಮೂಲ ಎಲ್ಲಿಂದ ಬರಬೇಕು? ಪರಿಣಾಮ : ಬಜೆಟ್‌ನಲ್ಲಿ ಅರ್ಥಹೀನ ಗೊಂದಲ.

ಈ ರೀತಿ ಶಾಸನಾಧಿಕಾರವನ್ನು ಜನಸಾಮಾನ್ಯರಿಗೆ ವರ್ಗಾಯಿಸುವುದರಿಂದ ಆಗುವ ತೊಂದರೆಗಳಲ್ಲಿ ಬಜೆಟ್‌ನಲ್ಲಿ ಏರುಪೇರು ಮಾತ್ರವೇ ಅಲ್ಲ ; ನೈತಿಕವಾಗಿ ಪ್ರಶ್ನಾರ್ಹವಾದ ಕೆಲವು ವಿಚಾರಗಳೂ ಇದರಿಂದ ಹುಟ್ಟಿಕೊಳ್ಳುವ ಅಪಾಯವಿದೆ. ನವೆಂಬರ್‌ 1994ರಲ್ಲಿ ಕ್ಯಾಲಿಫೋರ್ನಿಯಾ ಮತದಾರರು Proposition 187 ಎಂಬ ಒಂದು ಉಪಕ್ರಮವನ್ನು ಜಾರಿಗೊಳಿಸಿದ್ದರಿಂದ ಅಕ್ರಮ ವಲಸೆಗಾರರ ಮಕ್ಕಳಿಗೆ ವೈದ್ಯಕೀಯ ಸೌಲಭ್ಯ, ಶಾಲೆಗೆ ಪ್ರವೇಶ, ಮತ್ತಿತರ ಸಾಮಾಜಿಕ ಸೌಲಭ್ಯಗಳಿಗೆಲ್ಲ ಕತ್ತರಿ ಬಿತ್ತು.

ಇಷ್ಟಾಗಿಯೂ ಅಥವಾ ಇದರಿಂದಾಗಿಯೇ ಎನ್ನುವಂತೆ ಕ್ಯಾಲಿಫೋರ್ನಿಯಾದ ಜನತೆ ಒಬ್ಬ ವಿದೇಶಿ ಸಂಜಾತ ನಟನನ್ನು, ರಾಜಕೀಯದಲ್ಲಿ ಸೀಮಿತ ಪ್ರತಿಭೆಯುಳ್ಳವನನ್ನು ಗವರ್ನರ್‌ ಆಗಿ ಚುನಾಯಿಸಿತು. ರಾಜಕಾರಣಿಗಳ ವಿರುದ್ಧ ಕಿಡಿಕಾರುತ್ತಿರುವವರಿಗೆ ಇದೊಂದು ಎಚ್ಚರಿಕೆಯ ಗಂಟೆ ಎಂದರೆ ತಪ್ಪಲ್ಲ. (ಅಂದ ಹಾಗೆ, ಸೀಮಿತ ರಾಜಕೀಯ-ಪಕ್ವತೆಯ ನಟನಟಿಯರು ರಾಜ್ಯಗಳಲ್ಲಿ ಆಡಳಿತ ನಡೆಸಿದ/ನಡೆಸುತ್ತಿರುವ ಇತರ ಉದಾಹರಣೆಗಳೂ ನಿಮ್ಮ ಮನಸ್ಸಲ್ಲಿ ಹಾಯ್ದುಹೋಗಬಹುದು; ಅದು ಕೇವಲ ಆಕಸ್ಮಿಕ).

ಪ್ರಜಾಪ್ರಭುತ್ವ ಮತ್ತು ಸ್ವಾತಂತ್ರ್ಯ- ಇವೆರಡೂ ಸಮಾನಾರ್ಥಕವೇ? ಮತ್ತೆ ಅಲ್ಲವೆನ್ನಬೇಕಾಗುತ್ತದೆ.

'ಚುನಾವಣೆಗಳು ಮುಕ್ತವೂ ನೀತಿಸಂಹಿತೆಯಿಂದ ನಡೆಸಿದವೂ ಆಗಿರಬಹುದು, ಆದರೆ ಚುನಾಯಿತ ಪ್ರತಿನಿಧಿಗಳು ಜಾತಿವಾದಿಗಳೂ, ಕೋಮುವಾದಿಗಳೂ ಆಗಿದ್ದರೆ?' ರಿಚರ್ಡ್‌ ಹಾಲ್‌ಬ್ರೂಕ್‌ ಎನ್ನುವ ಅಮೆರಿಕನ್‌ ರಾಯಭಾರ ತಜ್ಞ ವ್ಯಕ್ತಪಡಿಸಿರುವ ಆತಂಕ ಅದೇ. ಯುಗೋಸ್ಲಾವಿಯಾವನ್ನು ಉದಾಹರಿಸಿ ಆತ ಹೇಳಿರುವ ಮಾತುಗಳಿವು. ಹಾಲ್‌ಬ್ರೂಕ್‌ನ ವಾಕ್ಚಾತುರ್ಯಕ್ಕಷ್ಟೇ ಇದನ್ನು ಪರಿಗಣಿಸದೆ ಗಂಭೀರವಾಗಿ ಆಲೋಚಿಸಿದರೆ ನಮಗೆ ಗೊತ್ತಾಗುತ್ತದೆ. 1933ರ ಜರ್ಮನಿಯ ಸಾರ್ವತ್ರಿಕ ಚುನಾವಣೆಗಳಲ್ಲಿ ಹಿಟ್ಲರನ ನಾಜಿ ಪಕ್ಷವು ಚಲಾಯಿತ ಮತಗಳ ಸುಮಾರು 44%ದಷ್ಟು ಬಾಚಿ ಜರ್ಮನಿಯ ಅತಿ ದೊಡ್ಡ ರಾಜಕೀಯ ಪಕ್ಷವಾಯಿತು. ಹಾಗೆ ನೋಡಿದರೆ ದೇವಾಧಿಪತ್ಯದ ಧರ್ಮಸಾಮ್ರಾಜ್ಯದ ಪರಾಕಾಷ್ಠೆಯ ಇವತ್ತಿನ ಇರಾನ್‌ ಸರಕಾರ ಕೂಡ ಪ್ರಜಾಪ್ರಭುತ್ವದ ಮೂಲಕವೇ ರೂಪಿತವಾದದ್ದು. ಡೆಮಾಕ್ರಸಿಯ ತೊಂದರೆಯೆಂದರೆ ಅದು ಅಲ್ಪಸಂಖ್ಯಾತರ ಮೇಲಿನ ನಿರಂಕುಶ ಪ್ರಭುತ್ವವಾಗಿಬಿಡುವ ಅಪಾಯವಿರುವುದು.

ಪ್ರಜಾಪ್ರಭುತ್ವದ ಹೆಸರಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆವ ದಬ್ಬಾಳಿಕೆ, ಪ್ರಜಾಪೀಡನಗಳನ್ನು ಕಡಿಮೆ ಮಾಡಲು ಏನಾದರೂ ಉಪಾಯವಿದೆಯೇ? ಪ್ರಜಾಪ್ರಭುತ್ವದ ಅನುಷ್ಠಾನಯೋಗ್ಯ ವಿಶೇಷ ಮಾದರಿಗಳೇನಾದರೂ ಇವೆಯೇ? ಕೆಲವು ದೇಶಗಳಲ್ಲಿ ಸಾರಾಸಗಟಾಗಿ ಯಶಸ್ವಿಯಾಗುವ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತೆ ಕೆಲವೆಡೆ ಏಕೆ ಮುಗ್ಗರಿಸಿ ಬೀಳುತ್ತದೆ? ಇತ್ಯಾದಿ ಅನೇಕ ಪ್ರಶ್ನೆಗಳು ಮೂಡುತ್ತವೆ. ಅವನ್ನೆಲ್ಲ ಇನ್ನೊಮ್ಮೆ ಯಾವಾಗಾದರೂ ವಿಮರ್ಶಿಸಬಯಸುತ್ತೇನೆ.

(ಇಂಗ್ಲಿಷ್‌ನಲ್ಲಿ ಬರೆದ ಈ ಲೇಖನವನ್ನು ಕನ್ನಡಕ್ಕೆ ಅನುವಾದಿಸಲು ನೆರವಾದ ಶ್ರೀವತ್ಸ ಜೋಶಿಯವರಿಗೆ ಕೃತಜ್ಞತೆಗಳು - ಲೇಖಕ.)

English summary
Democracy : An over view by Sheshadri in NewJersy
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X