ಮೆಚ್ಚಿದ ಕೈತಟ್ಟಿದ ಅಭಿಮಾನಿಗಳಿಗೆ ಶರಣು
ನಮ್ಮದಿದು ಎದೆಯಾಳದ ಸೆಳೆತ ಮತ್ತು ಮನದ ಮಾತು. ಕವಿ ಪುತಿನ ‘ಹರಿಣಾಭಿಸರಣ’ದಲ್ಲಿ ತಾಯಿ ಸೀತೆಯ ಮಾತಿನಲ್ಲಿ ಹಾಡಿದ ಭಾವ -‘’ಮಾತಿಗಿಂತಲೂ ಮೌನವೇ ಲೇಸು’ ಎಂಬುದು ಸತ್ಯವಾದರೂ ಮಾತಿನ ಮಂಟಪದಲ್ಲಿ ಭಾವವೆಂಬ ಮದುಮಗಳು ಅರಳಲೇಬೇಕಲ್ಲ.ಆತ್ಮೀಯರೇ, ಸೆ 3 ರಂದು ಬಿರುಗಾಳಿಯಾಂದಿಗೆ ಒರ್ಲಾಂಡೋದಲ್ಲಿ ನಮ್ಮ ಕರಾವಳಿಯ ಯಕ್ಷಲೋಕವನ್ನು ಧರೆಗಿಳಿಸಿದೆವು. ಹಾಡಿದೆವು. ಹಾರಾಡಿದೆವು. ಕುಣಿದು ಕುಪ್ಪಳಿಸಿದೆವು. ಅಗಸ್ಟ, ಹ್ಯೂಸ್ಟನ್, ಡೆಟ್ರಾಯಿಟ್, ವೇಯ್ನ್ ಸ್ಟೇಟ್ ಯುನಿವರ್ಸಿಟಿ, ಸ್ಕಾೃಂಟನ್, ನ್ಯೂಜೆರ್ಸಿ, ಎಲ್ ಎ ಶ್ರೀ ಪುತ್ತಿಗೆ ಮಠ, ಸಾಲ್ಟ್ ಲೇಕ್ ಸಿಟಿ, ಸ್ಯಾನ್ ಹೋಸೆ ಹಾಗೂ ಲಾಸ್ ಎಂಜಲೀಸ್ ತಾಣಗಳ ವಿವಿಧ ಸಂಘಟನೆಗಳ ಆಶ್ರಯದಲ್ಲಿ ವಿವಿಧ ಸಭಾಭವನಗಳಲ್ಲಿ ಯಕ್ಷ ರಂಗಸ್ಥಳ ಕಟ್ಟಿದೆವು. ನಿಮ್ಮೆಲ್ಲರ ತುಂಬು ಪ್ರೋತ್ಸಾಹದಿಂದ ರಂಗ ಪೂಜೆ ನೆರವೇರಿಸಿದೆವು. ನಮೋ ನಮಃ.ರುಗ್ಮಿಣೀಶ ವಿಜಯ, ಪಾಂಚಾಲಿ, ಶಬರಿಯಂಥ ರಂಗಪ್ರಯೋಗಗಳಾನ್ನು ವಿಮರ್ಶಾತ್ಮಕವಾಗಿ ಸ್ವೀಕರಿಸಿದಿರಿ. ಶೂರ್ಪನಖಾ ವಿವಾಹ, ಪಂಚವಟಿ, ಲಂಕಾದಹನ, ಜಾಂಬವತಿ ಕಲ್ಯಾಣ, ಗದಾಯುದ್ಧ ಎಂಬೀ ವಿವಿಧ ಪ್ರಸಂಗಗಳನ್ನು ನೇರ ಹಾಡುಗಾರಿಕೆಯ ಹಿಮ್ಮೇಳದೊಂದಿಗೆ ಕಿರೀಟ, ಕೇದಗೆ ಮುಂದಲೆ, ದೊಡ್ಡ ಮುಂಡಾಸು, ಗಂಡು - ಹೆಣ್ಣು ಬಣ್ಣದ ರಾಕ್ಷಸ ರಾಕ್ಷಸಿ ವೇಷ ಸಹಿತ ಆಡಿ ತೋರಿಸಲು ನೀವೆಲ್ಲ ನೀಡಿದ ಸಹಕಾರ, ಸ್ಪಂದನ, ಸಹಯೋಗ, ಸಾಮಿಪ್ಯವನ್ನು ಎಂದೆಂದೂ ಮರೆಯಲಾರೆವು. ಈ 10 - 11 ಪ್ರದರ್ಶನಗಳಲ್ಲಿ ಸಾವಿರಾರು ಕನ್ನಡಿಗರು ಹಾಗೂ ವಿವಿಧ ಭಾಷಾವಲಯದ ಕಲಾ ಸಹೃದಯರು, ಚಿಂತಕರು, ಅಭಿಮಾನಿಗಳು, ಬಂಧುಗಳು ನಮ್ಮ ಪ್ರಯೋಗಗಳನ್ನು ಕಂಡುಂಡು ಮನತಣಿಯಲೂ ನೀವೇ ಕಾರಣರೆಂಬುದು ನಮ್ಮ ಮನದಂಗಳದ ಸ್ಮರಣೆ. ನೀಡಿದ ಆತಿಥ್ಯ, ತೋರಿದ ಅಭಿಮಾನ ಹಾಗೂ ಮನೆಮನೆಯಲ್ಲೂ ನಮ್ಮ ಹಾಡು - ಕುಣಿತ, ಚಿಂತನ ಮಂಥನ ಸಂವಾದಗಳನ್ನು ಕೇಳಿ ನೋಡಿ ಆನಂದಿಸಿದ ನಿಮ್ಮನ್ನು ನೆನಪಿಸುವುದೇ ನಮಗೆ ಸಂತಸದ ವಿಷಯ.ನಮ್ಮೊಂದಿಗಿರಬಹುದಾದ ಕೆಡುಕುಗಳು ಮರೆಯಾಗಲಿ. ಕಲೆಯ ಬಲೆಯ ಒಳಿತುಗಳು ಸದಾ ಅರಳಲಿ. ಯಕ್ಷಗಾನ ಬೆಳಗಿ ಬಾಳಲಿ. ಕಲೆ ಮತ್ತು ಕಲಾವಿದರ ಅಭಿವೃದ್ಧಿಗಾಗಿ ಶ್ರಮಿಸುವ ಅಪೂರ್ವ ಸಂಘಟನೆ - ‘ಯಕ್ಷಗಾನ ಕಲಾರಂಗ ಉಡುಪಿ’ ಹಾಗು ಸುಮಾರು 40 ಭಿನ್ನ ರಂಗಕೃತಿಗಳನ್ನು ನಿರ್ಮಿಸಿ ಸದಾ ಕ್ರಿಯಾಶೀಲವಾಗಿರುವ ರಂಗ ಪ್ರಯೋಗದ ಸಂಘಟನೆ ಸಮೂಹ ಉಡುಪಿ - ನಿಮ್ಮ ನೆರವಿನ ನಿರೀಕ್ಷೆಯಲ್ಲಿ.
| ಕಲಾವಿದರು - ಕೆ ಜೆ ಗಣೇಶ್ ಕೆ ಜೆ ಕೃಷ್ಣ ನೀಲಾವರ ಮಹಾಬಲ ಶೆಟ್ಟಿ ಮುರಳಿ ಕಡೆಕಾರ್ ಡಾ। ವಸುಂಧರಾ ದೊರೆಸ್ವಾಮಿ ಭ್ರಮರಿ ಶಿವಪ್ರಕಾಶ್. |
| - ಉದ್ಯಾವರ ಮಾಧವ ಆಚಾರ್ಯ ಜಯಂತಿ ಮಾಧವ ಆಚಾರ್ಯ 6-1-82 ಸಿ ಸಿರಿಮನೆ ಚಿಟ್ಪಾಡಿ, ಉಡುಪಿ. 576101 ಕರ್ನಾಟಕ, ಭಾರತ. |
(ಇನ್ಫೋ ವಾರ್ತೆ)












Click it and Unblock the Notifications