ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುನಾವಣೆ- 2004 : ಮತದಾರ - ಸೂತ್ರಧಾರ

By Staff
|
Google Oneindia Kannada News

ರಾಜ್ಯ ಮತ್ತು ರಾಷ್ಟ್ರದ ರಾಜಕಾರಣದಲ್ಲಿ ಮತ್ತೊಮ್ಮೆ ಮತದಾರನ ಪಾತ್ರ, ಆಶಯಗಳು ಬಹಿರಂಗಗೊಂಡಿವೆ. ಪಕ್ಷಿನೋಟದಲ್ಲಿ ಆಡಳಿತ ಸತ್ತೆಯ ವಿರುದ್ಧ ಮತ ಚಲಾವಣೆಯಂತೆ ಕಂಡರೂ, ಒಳಗೊಳಗೆ ವಿಸ್ಮಯಗಳಿಗೆ ಕೊರತೆ ಏನಿಲ್ಲ . ಒಟ್ಟಿನಲ್ಲಿ , ಚುನಾವಣೆಯ ಮುನ್ನ, ಚುನಾವಣಾ ಸಮಯದಲ್ಲಿ ಸಮೀಕ್ಷೆಗಳಿಂದ ಹೊರಬಂದ, ಸತ್ಯಕ್ಕೆ ಹತ್ತಿರವಾದ ಅಂಕಿ-ಅಂಶಗಳೂ, ದೇಶದಾದ್ಯಂತ ಯಶಸ್ವಿಯಾಗಿ ಬಳಸಿದ ಎಲೆಕ್ಟ್ರಾನಿಕ್‌ ಮತಚಲಾವಣಾ ಉಪಕರಣಗಳೂ ಸ್ವಾತಂತ್ರ್ಯೋತ್ತರ ಭಾರತದಲ್ಲಿ ಒಂದು ಮಹತ್ವದ ಮೈಲಿಗಲ್ಲನ್ನು ನಿರ್ಮಿಸಿವೆ.

ರಾಷ್ಟ್ರ ರಾಜಕಾರಣದಲ್ಲಿ ಸೋನಿಯಾರ ದಂಡು ನಿರೀಕ್ಷೆಗಿಂತ ಹೆಚ್ಚಿನ ಗೆಲುವನ್ನು ಸಾಧಿಸಿದ್ದು ಮುಂಚೂಣಿಯಲ್ಲಿದೆ. ಇದರ ಜೊತೆಯಲ್ಲೇ ಯಾವುದೇ ಪಕ್ಷವೂ ನಿಚ್ಚಳ ಬಹುಮತ ಪಡೆಯದೇ, ‘ಬಳಗ’ದ ಶುಭ ಹಾರೈಕೆಯ ಬಲದಿಂದ ನಿಂತುಕೊಳ್ಳಲೇ ಬೇಕಾದ ಅತಂತ್ರ ಸರ್ಕಾರವೂ ನಿರ್ಮಾಣವಾಗುವ ಹಂತದಲ್ಲಿದೆ. ಹಿಂದಿನ ಅತಂತ್ರ ಸರ್ಕಾರಗಳ ಕಹಿನೆನಪನ್ನು ಜನರು ಇಷ್ಟು ಬೇಗ ಮರೆತು ಬಿಡುತ್ತಾರೆಂದೆನಿಸಿರಲಿಲ್ಲ. ಕಳೆದ ಹತ್ತು ವರ್ಷಗಳ ಭಾರತೀಯ ರಾಜಕಾರಣದಲ್ಲಿ ಸೋನಿಯಾ ಬಹುಮುಂದೆ ಬೆಳೆದು ಬಂದಿದ್ದಾರೆ. ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದರೆ, ಅವರೇ ಪ್ರಧಾನಿಯಾಗುವುದು ಖಂಡಿತವೆನಿಸಿದರೂ, ಮಗ ರಾಹುಲನನ್ನು ನಿರೀಕ್ಷೆಗಿಂತ ಮುಂದೆ ತಂದು ಚುಕ್ಕಾಣಿ ಹಿಡಿಸುವ ಸಾಧ್ಯಾಸಾಧ್ಯತೆಗಳೂ ಇಲ್ಲದಿಲ್ಲ. ಇಂದಿರಾಗಾಂಧಿಯವರ ನಿರ್ಗಮನದೊಂದಿಗೆ ರಾಜಕೀಯಕ್ಕೆ ಪರಿಚಿತರಾದರಾದ ರಾಜೀವರನ್ನು ಜನರು ಇನ್ನೂ ಮರೆತಿಲ್ಲವಷ್ಟೇ.

ಈ ಹಿಂದೆ ಅಧಿಕಾರ ಹಿಡಿದವರ ಯಾದಿಯಲ್ಲಿ ಭಾರತೀಯ ಜನತಾ ಪಕ್ಷದವರು ಮಾಡಿರುವ ತಪ್ಪನ್ನು ಬೇರೆ ಯಾರೂ ಮಾಡಿರಲಾರರು. ಅವರ ನಾಲ್ಕು ವರ್ಷಗಳ ಅಧಿಕಾರಾವಧಿಯಲ್ಲಿ ಏನೇನೆಲ್ಲ ಬೆಳವಣಿಗೆಗಳು, ಬದಲಾವಣೆಗಳು ಬಂದಿದ್ದರೂ, ಅವುಗಳ ಸದುಪಯೋಗದ ನೆರಳಲ್ಲಿ , ಈ ಹಿಂದೆ ನಿರೀಕ್ಷೆಗೂ ಮೀರಿ ಹೆಚ್ಚಿನ ಫಲಿತಾಂಶ ಬಂದ ಕೆಲವು ರಾಜ್ಯಗಳ ಮತದಾರರನ್ನು ನಂಬಿ, ಅವಧಿ ಮುಗಿಯುವ ಮೊದಲೇ ಚುನಾವಣಾ ಹುನ್ನಾರವೆಬ್ಬಿಸಿ, ಬಾಲ ಸುಟ್ಟ ಬೆಕ್ಕಿನಂತಾಗಿದ್ದು ಈಗ ಇತಿಹಾಸ. ಇನ್ನು ಕೆಲವು ತಿಂಗಳುಗಳು ತಡೆದಿದ್ದರೆ ಲೆಕ್ಕಾಚಾರವೇ ಬದಲಾಗುವ ಸಂಭವವಿತ್ತು. ಇನ್ನು ಎರಡನೆಯದಾಗಿ, ಪ್ರಮೋದ್‌ ಮಹಾಜನರೋ, ಮತ್ತ್ಯಾರೋ ನಿರ್ಧಾರ ತೆಗೆದುಕೊಂಡ ಮಾತ್ರಕ್ಕೆ ಮೂರ್ನಾಲ್ಕು ದಶಕಗಳ ಅನುಭವವಿರುವ ನುರಿತ ರಾಜಕಾರಣಿಗಳಿಗೆ ಸಾಮಾನ್ಯಜ್ಞಾನ ಕೈಕೊಟ್ಟಿದ್ದು. ಕೇವಲ ಕೆಲವೇ ವರ್ಷಗಳ ಹಿಂದೆ ಜೆ. ಜಯಲಲಿತಾರಿಂದ ಒದೆ ತಿಂದು, ಸರ್ಕಾರವೇ ಕೈಬಿಟ್ಟು, ಮತ್ತೆ ಚುನಾವಣೆಯಲ್ಲಿ ಏದುಸಿರೆದ್ದರೂ ಪಾಠ ಕಲಿಯಲಿಲ್ಲವೆಂದರೆ? ಹೋಗೀ-ಹೋಗೀ, ಹಗಲು ಕಂಡ ಬಾವಿಯಲ್ಲಿ ರಾತ್ರಿ ಬಿದ್ದಂತಾಯಿತು. ಜಯಲಲಿತಾರ ಸಹವಾಸದಿಂದ ಬಿಜೆಪಿ ಬಣಕ್ಕೆ ಎರಡು ರೀತಿಯ ನಷ್ಟ : ಒಂದು ಜಯಲಲಿತಾ ವಿರೋಧಿಗಳ ಸಹವಾಸದಿಂದ ದೂರ ಉಳಿಯುವಂತಾದದ್ದು, ಎರಡನೆಯದು ಜಯಲಲಿತಾರ ಪಕ್ಷ ಒಂದೇ ಒಂದು ಸ್ಥಾನವನ್ನೂ ಗಳಿಸದೇ ಮೈತ್ರಿಕೂಟಕ್ಕೆ ದೊಡ್ಡ ಹೊಡೆತವನ್ನೇ ಕೊಟ್ಟಿದ್ದು.

ಸೋನಿಯಾ ಗಾಂಧಿಯೋ, ರಾಹುಲ್‌ ಗಾಂಧಿಯೋ, ಶರದ್‌ ಪವಾರೋ, ಯಾರೇ ಪ್ರಧಾನಿಯಾದರೂ ಇಷ್ಟು ಮಾತ್ರ ಗ್ಯಾರಂಟಿ: ಅವರ ಸುತ್ತಮುತ್ತಲಿನಲ್ಲಿ ಕೋಲೇ ಬಸವಣ್ಣಗಳ ಮಹಾಪೂರವೇ ಇದೆ, ಹತ್ತು ವರುಷಗಳಲ್ಲಿ ಅಧಿಕಾರ ರಹಿತರಾಗಿ ಹಸಿದವರ ಲಾಲಸೆ ಇದೆ, ಅಲ್ಲದೇ ಇತ್ತೀಚೆಗೆ ಹೊಸ ಅಸ್ತಿತ್ವದ ಹುಡುಕಾಟದಲ್ಲಿ ಅತ್ತಿತ್ತ ನೆಗೆದವರ, ಕುದುರೆ ವ್ಯಾಪಾರದಲ್ಲಿ ಬೀಳು ಬಿಟ್ಟವರ ದೊಡ್ಡ ದಂಡೇ ಇದೆ. ಇಂಥವರ ನಡುವಿನಲ್ಲಿ ಆಡಳಿತ ಚುಕ್ಕಾಣಿ ಹಿಡಿದು ದೇಶದ ವಿದ್ಯಮಾನವನ್ನು ಸುಲಲಿತವಾಗಿ ನಡೆಸಿಕೊಂಡು ಹೋಗುವುದು ಚಕ್ರವ್ಯೂಹವನ್ನು ಭೇದಿಸಿ ಗೆದ್ದಂತೆಯೇ ಸರಿ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವರು ಕಾಂಗ್ರೆಸ್‌ ಅಧಿಕಾರವನ್ನು ಈಗಾಗಲೇ ಸ್ವಾಗತಿಸಿಯಾಗಿದೆ. ಮುಂಬರುವ ಯೂರೋಪ್‌, ಉತ್ತರ ಅಮೇರಿಕಾ ಚುನಾವಣೆಗಳು, ಹೊಸ ಸರ್ಕಾರಗಳ ಹೊಸ ನಿಲುವುಗಳು, ಇವುಗಳೆಲ್ಲದರ ಜೊತೆಯಲ್ಲಿ ಕಳೆದ ಹತ್ತು ವರ್ಷಗಳಿಂದ ಅಭಿವೃದ್ಧಿಯೆಡೆಗೆ ಮುಖಮಾಡಿದ ಭಾರತ ಸಾಧಿಸಬೇಕಾದ್ದು ಇನ್ನೂ ಬಹಳಷ್ಟಿದೆ. ಇವೆಲ್ಲವೂ ಮುಂದಿನ ಹತ್ತು-ಹನ್ನೆರಡು ತಿಂಗಳುಗಳನ್ನು ಮಹತ್ತರವನ್ನಾಗಿ ಮಾಡಬಲ್ಲವು, ಒಳಿತನ್ನು ಆಶಿಸಿ, ಕಾದು ನೋಡಬೇಕಷ್ಟೇ.

ಇನ್ನು ರಾಜ್ಯ ರಾಜಕಾರಣದ ಮಟ್ಟಿಗೆ ಹೇಳುವುದಾದರೆ - ಎಸ್‌.ಎಂ. ಕೃಷ್ಣರ ಪಡೆಗೆ ಹಿನ್ನೆಡೆ ದೊರೆತ ಸುದ್ದಿ ಫಲಿತಾಂಶ ಹೊರಬರುವ ಮೊದಲೇ ಯಾರೂ ಊಹಿಸಬಹುದಾಗಿತ್ತು. ಚುನಾವಣಾ ಪೂರ್ವ ಸಮೀಕ್ಷೆಗಳು ಏನನ್ನು ಹೇಳುತ್ತಿದ್ದವೋ ಏನೋ, ತೆಲುಗು ದೇಶಂ ಪಕ್ಷ ನೆಲಕಚ್ಚಿದ ಸುದ್ದಿ ರಾಜ್ಯ ಕಾಂಗ್ರೆಸ್‌ ಪಾಳಯದಲ್ಲಿ ಆತಂಕದ ಅಲೆಗಳನ್ನು ಎಬ್ಬಿಸಿದ್ದಂತೂ ನಿಜ. ಇತ್ತ ಯಾವೊಂದು ಪಕ್ಷಕ್ಕೂ ನಿಚ್ಚಳ ಬಹುಮತ ಬರದೇ, ದೇವೇಗೌಡರ ಕೈಯಲ್ಲಿ ನಿರ್ಣಾಯಕ ‘ಸೂತ್ರ’ ಸಿಕ್ಕಿದ್ದು ಭಾರೀ ಕುತೂಹಲವನ್ನೇ ಮೂಡಿಸಿದೆ. ಈಗಾಗಲೇ ರಾಷ್ಟ್ರ ರಾಜಕಾರಣದಲ್ಲಿ ತೂಕಡಿಸಿದ ಗೌಡರಿಗೆ ರಾಜ್ಯದ ಪ್ರದೇಶ ಕಾಂಗ್ರೆಸ್‌ ಸಮಿತಿಯವರ್ಯಾರೂ ಕಣ್ಣಿಗೆ ಕಾಣದೇ, ದೆಹಲಿಯಾಂದೇ ಮನಪಟಲದಲ್ಲಿ ಸುಳಿದರೆ ಅಚ್ಚರಿಯೇನಲ್ಲ. ಅವರವರ ಸ್ಥಿತಿಗತಿಗೆ ತಕ್ಕಂತೆ ನಮಗೂ ಯೋಜನಾ ಆಯೋಗವೋ, ಇನ್ನೊಂದೋ ದೊರಕಲಾರದೇಕೆ ಎಂಬ ಜಿಜ್ಞಾಸೆಯೂ ಇದ್ದಿರಬಹುದು.

ಹಲವಾರು ವರ್ಷಗಳಿಂದ ರಾಜ್ಯದಲ್ಲಿ ಬಿಜೆಪಿಯನ್ನು ಪೋಷಿಸಿ ಬೆಳೆಸಿದ ಯಡಿಯೂರಪ್ಪ, ಈಶ್ವರಪ್ಪ ಯಾರ ಕಣ್ಣಿಗೂ ಕಾಣದೇ, ಬರೀ ಬಂಗಾರಪ್ಪ, ಸಿದ್ಧರಾಮಯ್ಯ, ಮುಂತಾದವರೇ ಸುದ್ದಿಯಲ್ಲಿರೋದು ಇನ್ನೂ ಸ್ವಾರಸ್ಯಕರವಾಗಿದೆ. ಒಟ್ಟಿನಲ್ಲಿ ದೇವೇಗೌಡರ ಬಣ ಕಾಂಗ್ರೆಸ್‌ನೊಂದಿಗೆ ಸೇರಿ ಸರ್ಕಾರ ಸ್ಥಾಪಿಸಬೇಕೆಂಬುದು ಹಲವರ ಆಶಯ, ಇನ್ನು ಕೆಲವರ ಊಹೆ, ಎಲ್ಲದಕ್ಕೂ ಕಾದು ನೋಡೋಣ. ನಮ್ಮ ರಾಜ್ಯದಲ್ಲಿ ಬರದಿಂದ ಬೆಂದ ಜನ ಬರೆ ಎಳೆದರೆಂದು ಅಧಿಕೃತವಾಗಿ ಎಸ್‌.ಎಂ. ಕೃಷ್ಣರವರು ಘೋಷಿಸಿದರೂ, ಪಕ್ಕದ ರಾಜ್ಯದಲ್ಲೂ ಇದೇ ಸ್ಥಿತಿ ಇದ್ದು, ಅಲ್ಲಿಯೂ ಹೀಗೇ ಆದುದನ್ನು ಗಮನಿಸಿದರೆ, ಆಂಧ್ರದ ರಾಜಶೇಖರ ರೆಡ್ಡಿಯವರ ‘ಬಡವ-ಬಲ್ಲಿದರ’ ಕಾಳಜಿಯ ಮಾತಿನಲ್ಲಿ ಸತ್ಯವಿದೆಯೆಂದೆನಿಸುತ್ತೆ. ಕಾವೇರಿ ವಿವಾದ, ರಾಜ್‌ಕುಮಾರ ಅಪಹರಣ ಹಾಗೂ ರೈತರ ಬವಣೆಗಳನ್ನು ಕೃಷ್ಣರ ಸರ್ಕಾರ ಇನ್ನೂ ವ್ಯವಸ್ಥಿತವಾಗಿ ನೋಡಿಕೊಳ್ಳಬಹುದಿತ್ತು. ಬರೀ ಮಾಹಿತಿ ತಂತ್ರಜ್ಞಾನದ ಪ್ರಗತಿಯಷ್ಟೇ ಸಾಲದೇ ಸರ್ವತೋಮುಖ ಪ್ರಗತಿಯ ಅಗತ್ಯವೆಷ್ಟು ಎಂಬುದಕ್ಕೆ ಇಂದಿನ ರಾಜ್ಯ ರಾಜಕೀಯ ಸ್ಥಿತಿ ಒಳ್ಳೆಯ ನಿದರ್ಶನವಾಗಬಹುದು.

ಮುಖಪುಟ / ಎನ್‌ಆರ್‌ಐ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X