ಹೂವಿಂದ ಹೂವಿಗೆ ಹಾರುವ ದುಂಬಿ ಮತ್ತು ದಿಕ್ಕುಗಾಣದ ಪ್ರಜೆ
- ಪ್ರಶಾಂತ್ ಬೀಚಿ
ದೇಶಸೇವೆ ಮಾಡೋಕೆ ಇಷ್ಟೊಂದು ಜನ ಮೇಲೆ ಮೇಲೆ ಬಿದ್ದು ಬರ್ತಾರಲ್ಲಾ, ಇದನ್ನ ನೋಡಿದ್ರೆ ನಮ್ಮ ದೇಶ ಯಾಕೆ ಇನ್ನೂ ಹೀಗಿದೆ ಅಂತ ಉತ್ತರನೆ ಸಿಗೋಲ್ಲ. ಬರಿ ಸ್ವಲ್ಪ ಜನ ದೇಶಸೇವೆ ಮಾಡೋಕೆ ನಿಂತ್ರು ದೇಶ ಉದ್ಧಾರ ಆಗೋಕೆ ಕೆಲವೇ ವರ್ಷ ಸಾಕು, ಅಂತದ್ದರಲ್ಲಿ ಇಷ್ಟೊಂದು ಜನ ಹಿಂಗೆ ಹಿಂಡು ಹಿಂಡಾಗಿ ಬಂದ್ರು, ದಶಕಗಳೇ ಕಳುದ್ರು, ಅರ್ಧ ಶತಮಾನ ಉರುಳಿದ್ರು, ಇನ್ನು ನಾವು ಮುಂದುವರಿತಾ ಇರೋ ದೇಶ ಅಂತಾನೆ ಕರೆಸಿಕೊಳ್ತಾ ಇದ್ದೀವಿ. ಏನು ರಾಜಕೀಯ ಸ್ವಾಮಿ ಇದು. ದೇಶಾನ ಉಳುಸ್ತಾರೋ, ಉರುಳುಸ್ತಾರೋ, ಬೀಳುಸ್ತಾರೋ, ಮುಂದೆ ತರ್ತಾರೋ, ಮುಗ್ಗರಿಸಿ ಬೀಳುಸ್ತಾರೋ ಒಂದೂ ಗೊತ್ತಾಗುತ್ತಿಲ್ಲ. ಪ್ರಪಂಚದ ಬೇರಾವ ದೇಶದಲ್ಲೂ ಆಗದಂತಹ ವಿಚಿತ್ರವಾದ, ವಿಪರೀತವಾದ ರಾಜಕೀಯ ಬೆಳವಣಿಗೆ ಈ ಬಾರಿ ಕಾಣುತ್ತಿದೆ.
ಕೆಲವೇ ವರ್ಷಗಳ ಹಿಂದಿನ ತನಕ ನನಗೂ ರಾಜಕೀಯಕ್ಕೂ ನಂಟೇ ಇರಲಿಲ್ಲ. ಅದೇನಾಯಿತೊ ಏನೋ, ಇದ್ದಕ್ಕಿದ್ದಂತೆ ರಾಜಕೀಯ ಆಸಕ್ತಿ ಜಾಸ್ತಿಯಾಗುತ್ತಿದೆ. ಅದರಲ್ಲೂ ಈ ಚುನಾವಣೆ ಹತ್ತಿರಕ್ಕೆ ಬಂದಂತೆ, ಬದಲಾವಣೆಗಳು ಕಣ್ಣಿಗೆ ಕುಕ್ಕುತ್ತಿದೆ. ಸುಮ್ಮನೆ ಕುಳಿತು ಯೋಚಿಸಿದರೆ ಮನಸ್ಸಿಗೆ ಏನೋ ಆನಂದ, ಎಷ್ಟೊಂದು ಜನ ನಮ್ಮ ದೇಶದ ಬೆಳವಣಿಗೆಗಾಗಿ, ಬಡವರ ಉದ್ಧಾರಕ್ಕಾಗಿ, ನಾಡಿನ ಹಿತಕ್ಕಾಗಿ ಏನೇನೋ ಬಿಟ್ಟು, ಇರುವುದೆಲ್ಲ ಕೊಟ್ಟು, ‘ನಾನಿರುವುದೆ ನಿಮಗಾಗಿ’ ಎಂದು ಬರುತ್ತಿದ್ದಾರೆ. ಅವರ ಹೇಳಿಕೆ ಕೇಳಿದರೆ ಇವರಿಗಿಂತ ಉತ್ತಮ ನಾಯಕ ನಮಗೆ ಸಿಗಲಾರ ಅನ್ನಿಸುತ್ತದೆ. ಅವರು ಮಾಡುವುದೆಲ್ಲ ಸರಿ ಅನ್ನಿಸುತ್ತದೆ. ಉಳಿದೆಲ್ಲರಿಗಿಂತ ಇವನೇ ಉತ್ತಮ, ಅತ್ಯುತ್ತಮ, ಸರ್ವೋತ್ತಮ ಅನ್ನಿಸುತ್ತದೆ. ವಿಪರ್ಯಾಸವೆಂದರೆ ಇವನ ಕಡುವೈರಿ, ಎದುರು ಪಕ್ಷದವನು ಬಂದು ಬಾಯಿ ತೆರೆದಾಗಲೂ ಅದೇ ಅಭಿಪ್ರಾಯಗಳು ಹೊರಹೊಮ್ಮುತ್ತವೆ. ಯಾರು ಸರಿ ಯಾರು ತಪ್ಪು ಎಂದು ಯೋಚಿಸುವುದರೊಳಗೆ ಚುನಾವಣೆ ಎನ್ನುವ ಮರೀಚಿಕೆ ಮುಗ್ಗರಿಸಿರುತ್ತದೆ. ಬಿದ್ದವರು ಎದ್ದವನ ಮೇಲೆ ಆರೋಪಗಳ ಬಾಣ ಬಿಡುತ್ತಿದ್ದರೆ, ಎದ್ದವನು ಎಬ್ಬಿಸಿದವರನ್ನು ಮರೆತು ಕೊಬ್ಬಿದ ಕೋಣನಂತೆ ಕುಳಿತುಕೊಳ್ಳುತ್ತಾನೆ.
ಹೀಗಾಗುವುದನ್ನು ನಾವು ಬಹಳ ವರ್ಷಗಳಿಂದ ನೋಡುತ್ತಾ ಬಂದಿದ್ದೇವೆ. ಇದೊಂದು ಮುಗಿಯದ ಅಧ್ಯಾಯ. ಆದರೆ ಈ ಸಾರಿಯ ಚುನಾವಣೆಗೆ ಅದರದೇ ಆದ ಛಾಪು ಮೂಡಿದೆ. ನೆನ್ನೆವರೆಗೆ ಕೊರಳು ಪಟ್ಟಿ ಹಿಡಿದು ಗುದ್ದಾಡಿದ ಕಡು ವೈರಿಗಳು ಇವತ್ತು ಹೆಗಲ ಮೇಲೆ ಹೆಗಲು ಹಾಕಿ ನಾವು ಚಡ್ಡೀ ದೋಸ್ತು ಎಂದು ಹೂಂಕರಿಸುತ್ತಿದ್ದಾರೆ. ಇದ್ದವನು ಬಿಟ್ಟುಹೋದ ಎಂದ ತಕ್ಷಣ, ಬೆನ್ನಿಗೆ ಚೂರಿ ಹಾಕಿದ, ಉಪ್ಪು ತಿಂದ ಮನೆಗೆ ದ್ರೋಹ ಬಗೆದ, ಹತ್ತಿದ ಮೇಲೆ ಏಣಿ ದೂಕಿದ, ಮಂಗನ ಬುದ್ದಿ ಇದ್ದುದರಿಂದ ಕೊಂಬೆಯಿಂದ ಕೊಂಬೆಗೆ ಹಾರಿದ ಎಂಬ ಬಹಳಷ್ಟು ಮಾತುಗಳು ಕೇಳಿಬರುತ್ತಿವೆ ಈ ಚುನಾವಣೆಯಲ್ಲಿ. ಊರಿಗೆ ಹೋಗಿ ಬರುತ್ತೇನೆ ಎಂದು ಹೇಳಿ ಪಕ್ಷ ಬದಲಾಯಿಸಿದವರು, ಪಕ್ಷದಲ್ಲಿ ಬೆಲೆ ಇಲ್ಲ ಎಂದು ಹೊರಬಂದವರು, ನಮ್ಮ ಪಕ್ಷಕ್ಕೆ ಭವಿಷ್ಯವಿಲ್ಲ ಎಂದು ಪಕ್ಷಾಂತರಿಸಿದವರು, ನಮ್ಮ ಲೀಡರ್ರೇ ಹೋಗಿದ್ದಾರೆ ಎಂದು ಬಾಲ ಹಿಡಿದವರು, ನನ್ನ ವೈರಿಗೆ ಇವನು ವೈರಿ ಎಂದು ಹತ್ತಿರವಾದವರು, ಪಿತೃವಾಕ್ಯ ಪರಿಪಾಲಕ ಎಂದು ಹಿಂಬಾಲಿಸಿದವರು, ಇದು ನನ್ನ ತವರು ಮನೆ ಎಂದು ಬಂದವರು, ಆಗ ಸರಿ ಇರಲಿಲ್ಲ ಈಗ ಸರಿ ಇದೆ ಎಂದು ತಮಗೆ ತೋಚಿದ ಕಾರಣಗಳನ್ನು ಹೇಳಿ ಪಕ್ಷದಿಂದ ಪಕ್ಷಕ್ಕೆ ಹಾರಿದವರ ಪಟ್ಟಿ ಸಹಸ್ರ ನಾಮಾವಳಿ ಹಾಗೆ ಬೆಳೆದಿದೆ.
ಈ ಸಾರಿಯ ಚುನಾವಣೆಯಲ್ಲೂ ವಾಗ್ಬಾಣಗಳಿಗೇನೂ ಕಡಿಮೆ ಇಲ್ಲ. ದೇವೇಗೌಡರ ಮೇಲೆ ಶಿವಕುಮಾರ್ ದಾಳಿ, ಶಿವಕುಮಾರ್ ಮೇಲೆ ವಿಶ್ವನಾಥ್ ಬಿರುಗಾಳಿ, ಇವರಿಬ್ಬರನ್ನು ಸಮಾಧಾನಿಸಲು ಕೃಷ್ಣರ ತಂಗಾಳಿ. ವಾಜಪೇಯಿ ಕಾಂಗ್ರೆಸ್ ಮೇಲೆ, ಸೋನಿಯ ವಾಜಪೇಯಿ ಮೇಲೆ, ದೇಯೇಗೌಡರು ಇವರಿಬ್ಬರ ಮೇಲೆ. ಬಿಜೆಪಿ ಪೋನ್ ಕದ್ದಾಲಿಕೆ ಮಾಡುತ್ತಿದೆ ಎನ್ನುವ ಆರೋಪವಿದ್ದರೆ, ಕಾಂಗ್ರೆಸ್ ತನಿಖಾದಳದ ದುರುಪಯೋಗ ಪಡೆಯುತ್ತಿದೆ ಅನ್ನುವ ಆರೋಪ. ಸಿನಿಮಾ ನಟ ನಟಿಯರನ್ನು ಎಳೆದುಕೊಳ್ಳಲು ಎಲ್ಲಾ ಪಕ್ಷಗಳು ಕೈ ಕೈ ಮಿಲಾಯಿಸಿ ಕುಸ್ತಿ ಆಡುತ್ತಿವೆ. ನೆನ್ನೆ ಮೊನ್ನೆ ಪ್ರಸಿದ್ಧಿಗೆ ಬಂದವರಿಂದ ಹಿಡಿದು, ಅಕಾಲ ಮರಣಕ್ಕೆ ತುತ್ತಾದ ಪರಿವಾರದವರನ್ನು ಎಳೆದುಕೊಳ್ಳಲು ಪ್ರಮುಖ ಪಕ್ಷಗಳು ಹೋರಾಡುತ್ತಿವೆ.
ಇಲ್ಲಿಯವರೆಗೆ ಬೇರೆ ಬೇರೆ ಪಕ್ಷಗಳಿಗೆ ಹಣಕೊಟ್ಟು ಗೆಲ್ಲಿಸುತ್ತಿದ್ದ ಹೆಂಡದ ದೊರೆಗಳು ತಮ್ಮದೇ ಪಕ್ಷ ಕಟ್ಟಿ ಗೆಲ್ಲಲು ಒದ್ದಾಡುತ್ತಿದ್ದರೆ, ಅವರನ್ನು ನಂಬಿಸಿ ಪಕ್ಷ ಕಟ್ಟಿಸಿದವರು, ಮಧ್ಯದಲ್ಲಿಯೇ ಅವರನ್ನು ಬಿಟ್ಟು ಓಡಿಹೋಗುತ್ತಿದ್ದಾರೆ. ಮದಿರಾ ಮಾಡುವವರ ನಿದಿರಾ ಕೆಡಿಸಿದರೆ, ಮುಂದೆ ಆಪತ್ತು ಎನ್ನುವುದು ಎದುರಾ ಬದುರಾ ಕುಳಿತುಕೊಳ್ಳುತ್ತದೆ ಎನ್ನುವುದು ಪಾಪ ಅವರಿಗೆ ತಿಳಿದಿಲ್ಲ. ಯಾರು ಯಾವ ಹೊತ್ತು, ಎಲ್ಲಿ ಇರುತ್ತಾರೆ, ಯಾವ ಪಾರ್ಟಿಯಲ್ಲಿ ಇರುತ್ತಾರೆ, ಯಾವಾಗ ಕೈ ತೋರಿಸುತ್ತಾರೆ, ಯಾವಾಗ ಕೈಯಲ್ಲಿ ಕಮಲ ಹಿಡಿಯುತ್ತಾರೆ, ಯಾವಾಗ ನೇಗಿಲು ಹೊತ್ತು ತಿರುಗುತ್ತಾರೆ, ಯಾವಾಗ ಚಕ್ರ ತಿರುಗಿಸುತ್ತಾರೆ ಎನ್ನುವುದು ಸಾಮಾನ್ಯ ಜನರ ಸಾಮಾನ್ಯಜ್ಞಾನಕ್ಕೆ ಎಟುಕಲಾರದ ವಿಷಯವಾಗಿದೆ. ದೇಶಸೇವೆಗಾಗಿ ನಾ ಮುಂದು ತಾ ಮುಂದು ಎಂದು ಹೊಡೆದಾಡುವವರನ್ನು ನೋಡಿದರೆ, ಇವರಿಗಿಂತ ದೇವರು ಬೇಕಾ ಅನ್ನಿಸುತ್ತದೆ, ಆದರೆ ಮನುಷ್ಯರಾದ ಇವರು ದೇವರಾಗಲು ಏಕೆ ಹೊರಟಿದ್ದಾರೆ ಎನ್ನುವುದು ಸಂಶಯದ ವಿಷಯ.
ಕೆಟ್ಟವರೆಲ್ಲಾ ರಾಜಕಾರಣಿಗಳು ಎನ್ನಲಾಗುವುದಿಲ್ಲ, ಹಾಗೆಯೇ ರಾಜಕೀಯಕ್ಕೆ ಹೋಗುವರೆಲ್ಲಾ ಕೆಟ್ಟವರಾಗಿರುವುದಿಲ್ಲ. ರಾಜಕೀಯಕ್ಕೆ ಹೋದಮೇಲೆ ಅವರು ಏನಾಗುತ್ತಾರೆ ಎನ್ನುವುದು ಚರಿತ್ರೆಯೇ ಹೇಳುತ್ತದೆ. ರಾಜೀವ್ ಗಾಂಧಿ ಪ್ರಧಾನಿಯಾದಾಗ, ಭಾರತದ ಚರಿತೆ ಬದಲಾಗುತ್ತದೆ ಅನ್ನುತ್ತಿದ್ದರು, ಆದರೆ, ಮತ್ತದೇ ಸಂಜೆ, ಅದೇ ಮೌನ, ಅದೇ ಏಕಾಂತ. ವಾಜಪೇಯಿ ಪ್ರಧಾನಿಯಾದಾಗ, ಹಿಂದೂಸ್ಥಾನವು ಹಿಂದೆಂದೂ ಕಾಣದಂತಹ ದಿನಗಳನ್ನು ಕಾಣುತ್ತದೆ ಎಂದು ಹೇಳುತ್ತಿದ್ದರು, ಅದರೆ ಇಂದಿಗೂ ಕಾಣುತ್ತಿರುವುದು ಹಿಂದಿನ ದಿನಗಳೆ. ಅಬ್ದುಲ್ ಕಲಾಂ ರಾಷ್ಟ್ರಪತಿಗಳಾದಾಗ ಇನ್ನೇನು ಭಾರತ ಎನ್ನುವುದು ರಾಕೆಟ್ ತರ ಹೋಗುತ್ತದೆ ಎನ್ನುತ್ತಿದ್ದೆವು, ಆದರೆ ಅವರ ತತ್ವದೊಂದಿಗೆ ಅವರನ್ನು ಕೂರಿಸಿ ರಾಜತಂತ್ರ ನಡೆಸಿದರು ನಮ್ಮ ರಾಜಕಾರಣಿಗಳು.
ಪ್ರತಿಯಾಬ್ಬ ರಾಜಕಾರಣಿಯಿಂದ ಸಾಮಾನ್ಯ ಪ್ರಜೆ ಒಳ್ಳೆಯದನ್ನು ನಿರೀಕ್ಷಿಸುತ್ತಾನೆ, ಅದು ಎಟುಕಲಾರದ್ದಾ? ಮನುಷ್ಯನ ಯೋಗ್ಯತೆ ನೋಡಿ ಅವರಿಂದ ನಿರೀಕ್ಷಿಸಿದರೂ ಅದು ಸಿಗಲಿಲ್ಲವಾದಾಗ ಏನು ಮಾಡಬೇಕು? ಒಬ್ಬ ಮನುಷ್ಯನಿಂದ ಭಾರತದಂತಹ ಬೃಹತ್‌ದೇಶ ಬದಲಾಗದು. ಅದಕ್ಕೆ ಒಂದು ಬಲಿಷ್ಠ ಸಮೂಹ ಬೇಕು. ಅಬ್ದುಲ್ ಕಲಾಂ ಅಪ್ರತಿಮ ಚತುರರು ಎನ್ನುವುದರಲ್ಲಿ ಎರಡು ಮಾತಿಲ್ಲ . ಆದರೆ ದೇಶದ ಬದಲಾವಣೆಗೆ ಅವರಂತಹ ಸಮೂಹ ಬೇಕು.
ಪಕ್ಷದಿಂದ ಪಕ್ಷಕ್ಕೆ ಹಾರಿ ಹೋಗುವ ರಾಜಕಾರಣಿಗಳಲ್ಲಿ ಏನು ಉದ್ದೇಶ ಎನ್ನುವುದೇ ತಿಳಿಯುತ್ತಿಲ್ಲ. ಅವರು ಹೇಳುವ ಕಾರಣಗಳು ಸರಿ ಎನ್ನಿಸಿದರು ಅದನ್ನು ನಂಬುವ ವಿಶ್ವಾಸ ಅವರುಗಳು ಕಳೆದುಕೊಂಡಿದ್ದಾರೆ. ಹೂವಿಂದ ಹೂವಿಗೆ ಹಾರುವ ದುಂಬಿ ಏನನೊ ಹೇಳುತಿದೆ ಎನ್ನುವ ಹಾಗೆ, ಅವರು ಏನು ಹೇಳುತ್ತಿದ್ದಾರೆ ಎನ್ನುವುದು ಸರಿಯಾಗಿ ತಿಳಿಯದಾಗಿದೆ. ಯಾವ ಪಕ್ಷವೇ ಆಗಲಿ, ಯಾವ ಮಂತ್ರಿಯೆ ಆಗಲಿ, ಅವರನ್ನು ನಂಬಿದ ಜನರಿಗೆ, ಅವರ ಕ್ಷೇತ್ರಕ್ಕೆ ಒಳಿತನ್ನು ಮಾಡಿ ತಮ್ಮ ಅವಧಿಯ ಸಾರ್ಥಕ್ಯ ಮಾಡಿಕೊಳ್ಳಬೇಕಾಗಿದೆ. ಅಂತವರನ್ನು ನಾವು ಆರಿಸಬೇಕಾಗಿದೆ.
ಈ ಬಾರಿಯ ಚುನಾವಣೆ ಬಿರುಸಾಟ ನೋಡಿದರೆ, ಏನಾಗುತ್ತಿದೆ ಎಂಬುದೇ ತಿಳಿಯುತ್ತಿಲ್ಲ. ಯಾರ ನಂಬುವುದು ನಮ್ಮ ಹಿತ ಕಾಯುವರೆಂದು ?