‘ಪೇಚಿನ ಪ್ರಸಂಗಗಳು’ ಹಾಗೂ ಪೆದ್ದು ನಗುವಿನ ಉಪಾಯ
- ವಾಣಿ ರಾಮದಾಸ್, ಸಿಂಗಾಪುರ
sosale@singnet.com.sg

ಇಪ್ಪತ್ತು ವರುಷಗಳ ಹಿಂದೆ ಬೆಂಗಳೂರಿನಲ್ಲಿ ಈಗಿರುವಷ್ಟು ‘ಇಂಗ್ಲೀಷ್’ ಗಾಳಿ ಬೀಸಿರಲಿಲ್ಲ. ಕನ್ನಡ ಮಾತು ಹೆಚ್ಚು ಬಳಕೆಯಲ್ಲಿತ್ತು. ಕಾಲೇಜಿನಲ್ಲಿ , ಗೆಳತಿಯರೊಂದಿಗೆ, ಕಚೇರಿಗಳಲ್ಲಿ , ಮನೆಯಲ್ಲಿ ಕನ್ನಡದ ಪ್ರಾಬಲ್ಯ ಹೆಚ್ಚಿತ್ತು. ಇಂಗ್ಲೀಷಿನಲ್ಲಿ ಮಾತನಾಡುವುದು ಅಷ್ಟು ರೂಢಿಯಲ್ಲಿರಲಿಲ್ಲ. ಮದುವೆಯಾಗಿ ಪತಿಗೃಹಕ್ಕೆ ಮುಂಬಯಿಗೆ ತೆರಳಿದ್ದೆ. ಮುಂಬಯಿಗೆ ಹೋದದ್ದು ಏಪ್ರಿಲ್ ತಿಂಗಳಿನಲ್ಲಿ. ಬಹಳ ಸೆಖೆ. ಹೊಸ ವಾತಾವರಣ. ಹವೆ ಬದಲಾದ ಕಾರಣವೋ ಅಥವಾ ತೌರನ್ನು ಬಿಟ್ಟು ಬಂದ ಕೊರಗೋ, ಸ್ವಲ್ಪ ಜ್ವರ ಬಂದಿತ್ತು. ಹತ್ತಿರದಲ್ಲೇ ಇದ್ದ ಡಾ।ಬೆಡೇಕರ್ ಬಳಿ ಯಜಮಾನರು ಕರೆದೊಯ್ದರು. ಆತ ವಯಸ್ಸಾದವರು. ಒಳಗೆ ಹೋದ ಮೇಲೆ ಪತಿರಾಯರು ‘ಶಿ ಇಸ್ ಮೈ ವೈಫ್’ ಎಂದು ಪರಿಚಯ ಮಾಡಿ ‘ಶಿ ಹ್ಯಾಸ್ ಫೀವರ್’ ಎನ್ನುವ ಮೊದಲೇ ನಾನು ಅವಸರದಿಂದ ‘ಹೌ ಆರ್ ಯೂ’ ಎಂದಾಗ ಡಾಕ್ಟರ್ ಒಂದು ಕ್ಷಣ ಏನೂ ಹೇಳಲು ತೋಚದೆ ನನ್ನವರ ಕಡೆ ನೋಡಿದರು. ಡಾಕ್ಟರ್ ಬಳಿ ಔಷಧಿ ಪಡೆಯಲು ಬಂದ ನಾನು ಅವರನ್ನೇ ‘ಹೌ ಆರ್ ಯೂ’ ಎಂದರೆ? ತಕ್ಷಣ ನಾಲಿಗೆ ಕಚ್ಚಿಕೊಂಡು ಪೆಚ್ಚು ಪೆಚ್ಚಾಗಿ, ಪೆದ್ದಾಗಿ ನಗುತ್ತಾ ಪಲ್ಸ್ ನೋಡಲು ಡಾಕ್ಟರಿಗೆ ಕೈ ನೀಡಿದೆ. ಪೆದ್ದ ನಗುವಿನ ಪಾಡು ದೇವರಿಗೇ ಪ್ರೀತಿ!
ಹೀಗೆಯೇ ಒಂದು ದಿನ ಬೆಳಿಗ್ಗೆ ಮನೆಯ ಬಾಲ್ಕನಿಯಲ್ಲಿ ಇಟ್ಟಿದ್ದ ಹೂ ಗಿಡಗಳಿಗೆ ನೀರೆರೆದು ಹೊರಗೆ ನೋಡುತ್ತಾ ನಿಂತಿದ್ದೆ. ಯಜಮಾನರು ಆಫೀಸಿಗೆ ತೆರಳಿದ್ದರು. ಒಬ್ಬ ಹುಡುಗ ಬಂದು ‘ತಾಯೀ, ಕುಂಡಿ ಪಾಯಿಜೇ ಕಾ?’ ಎಂದು ಕೇಳಿದಾಗ ಮರಾಠಿ ಬರದಿದ್ದ ನಾನು ಹೌಹಾರಿದೆ. ‘ಏನಪ್ಪಾ ಇದು, ಇವನು ಈ ತರಹ ಕೇಳ್ತಾ ಇದಾನೆ, ಏನೂ ಅರ್ಥವಾಗುತ್ತಿಲ್ಲ’ ಎಂದು ಮನದಲ್ಲಿ ಅಂದುಕೊಳ್ಳುತ್ತಾ ಪಕ್ಕದ ಮನೆಯ ಕಡೆ ನೋಡಿದೆ. ಅಲ್ಲಿಯೂ ಯಾರೂ ಕಾಣಲಿಲ್ಲ. ಅಷ್ಟರಲ್ಲಿ ಆ ಹುಡುಗ ಗಾಡಿಯಲ್ಲಿ ತುಂಬಿದ್ದ ಹೂ ಕುಂಡಗಳನ್ನು ತಳ್ಳುತ್ತಾ ಮುಂದೆ ಬಂದನು. ಅಯ್ಯೋ, ಹೂ ಕುಂಡಗಳಿಗೆ ಮರಾಠಿಯಲ್ಲಿ ಹೀಗೆನ್ನುತ್ತಾರೆಯೇ ಎಂದು ಪೆಚ್ಚಾದೆ. ಅಬ್ಬಾ, ಸದ್ಯ ಇದೇ ವಾಕ್ಯ ಬೆಂಗಳೂರಿನಲ್ಲಿ ಕೇಳಿದ್ದರೆ ಚಪ್ಪಲಿ ಸೇವೆ ಖಂಡಿತಾ ಎಂದು ನಗುವನ್ನು ತಡೆ ಹಿಡಿಯುತ್ತಾ ‘ಭಯ್ಯಾ, ಪಾಯೀಜೇ’ ಎಂದು ಎರಡು ಹೂ ಕುಂಡಗಳನ್ನು ತೆಗೆದುಕೊಂಡೆ. (ತಾಯೀ ಕುಂಡಿ ಪಾಯಿಜೇ ಕಾ ? ಎಂದರೆ ಅಕ್ಕಾ, ಹೂ ಕುಂಡಗಳು ಬೇಕೇ ಎಂದರ್ಥ).
ನನ್ನ ಮಗನ ಮುಂಜಿಯ ಹಿಂದಿನ ದಿನ ಉದ್ಯಾಪನೆ ನಡೆಯುತ್ತಿತ್ತು. ಅಂದು ಸ್ವಲ್ಪ ಬೇಗನೇ ಬಂದಿದ್ದ ಪುರೋಹಿತರು ಬ್ರಾಹ್ಮಣ ಪಂಗಡಗಳ ಬಗ್ಗೆ, ಉಪನಯನದ ಬಗ್ಗೆ ನನ್ನ ಮಗನಿಗೆ ಮತ್ತು ಸುತ್ತಲೂ ಕುಳಿತಿದ್ದವರಿಗೆ ಮಾಹಿತಿ ನೀಡುತ್ತಿದ್ದರು. ಮಣೆಯ ಮೇಲೆ ವಟುವನ್ನು ಕೂರಿಸುವ ಮೊದಲು ಪುರೋಹಿತರು ನೀವು ಯಾವ ಬ್ರಾಹ್ಮಣ ಪಂಗಡದವರು ಎಂದು ಕೇಳಿದ್ದಕ್ಕೆ(ಸ್ಮಾರ್ತ+ಅಯ್ಯಂಗಾರ್ =) ‘ನಾನು ಸ್ಮಾರ್ಟ್ ಅಯ್ಯಂಗಾರಿ’ ಎಂದು ಜೋರಾಗಿ ಕೇಳಿ ಬಂತು ವಟುವಿನ ಉತ್ತರ. ಪಾಪ ಒಂದು ಕ್ಷಣ ಪೆಚ್ಚಾದ ಪುರೋಹಿತರು ‘ಒಳ್ಳೇ ಉತ್ತರ’ ಎಂದು ಜೋರಾಗಿ ನಕ್ಕರು. ಸುತ್ತಲಿದ್ದವರೆಲ್ಲರೂ ಚಪ್ಪಾಳೆ ತಟ್ಟಿ ಘೂಳ್ಳನೆ ನಕ್ಕರು.
ಸಿಂಗಾಪುರದ ರಾಯಭಾರಿ ಕಚೇರಿಯಲ್ಲಿ ತಾತ್ಕಾಲಿಕವಾಗಿ ಹಲವು ತಿಂಗಳು ನೌಕರಿ ಸಿಕ್ಕಿತ್ತು. ಪಾಸ್ ಪೋರ್ಟ್ ಅರ್ಜಿಗಳನ್ನು ಪರಿಶೀಲಿಸಿ ಅದಕ್ಕಾಗಿ ಸಲ್ಲುವ ಮೊತ್ತವನ್ನು ಪಡೆಯುವ ಕೆಲಸ. ಯಾವಾಗಲೂ ಗಿಜಿ ಗಿಜಿ ಜನ. ಒಂದು ದಿನ ಕೌಂಟರ್ ಬಳಿ ತುಂಬು ಕೂದಲಿನ ಒಬ್ಬಾತ ಅರ್ಜಿಯನ್ನು ಎರಡು ಫೋಟೋಗಳೊಂದಿಗೆ ಕೊಟ್ಟರು. ಫೋಟೋ ಒಂದು ಬಿಳಿಯ ಕವರ್‌ನಲ್ಲಿ ಇತ್ತು. ಅರ್ಜಿಯನ್ನು ಪರಿಶೀಲಿಸಿ ಕವರಿನಲ್ಲಿ ಇಟ್ಟಿದ್ದ ಫೋಟೋ ಕೈಗೆ ತೆಗೆದುಕೊಂಡೆ. ಸುಮಾರು ಐವತ್ತು ವರುಷದವರ ಫಳ ಫಳನೆ ಹೊಳೆಯುವ ಬಕ್ಕ ತಲೆಯಾತನ ಫೋಟೋ. ಅರ್ಜಿಯನ್ನು ಕೊಟ್ಟವರು ಮತ್ತು ಫೋಟೋದಲ್ಲಿ ಇದ್ದವರು ಒಂದೇ ತರಹ ಇದ್ದರು. ಫೋಟೋ ನೋಡಿ ಮತ್ತೆ ಕೌಂಟರ್‌ನಲ್ಲಿ ನಿಂತಿದ್ದ ಮಹಾಶಯನ ಮುಖ ನೋಡಿದೆ. ತಕ್ಷಣ ಆತ ತಲೆಯಲ್ಲಿ ಹಾಕಿದ್ದ ವಿಗ್ ತೆಗೆದು ಹೊಳೆಯುವ ಬಕ್ಕ ತಲೆಯನ್ನು ಸವರುತ್ತಾ ‘ಐ ಯಾಮ್ ದ ಸೇಮ್ ಪರ್ಸನ್ ಮ್ಯಾಡಮ್’ ಎಂದಾಗ ಒಂದು ಕ್ಷಣ ನಗಲೂ ಆಗದೆ ಏನೂ ಹೇಳಲೂ ತೋಚದೆ ಪೆಚ್ಚು ಪೆಚ್ಚಾಗಿ ಆತನೆಡೆ ನೋಡಿದೆ.
ಸಿಂಗಾಪುರಕ್ಕೆ ಬಂದ ಮೇಲೆ ಒಂದು ದಿನ ಹೊರಗೆ ಹೊರಟಾಗಲೇ ಮೋಡ ಮುಸುಕಿತ್ತು. ಮಳೆರಾಯ ಬರುವಷ್ಟರಲ್ಲಿ ಮನೆಗೆ ಬೇಕಾಗಿದ್ದ ಸಾಮಗ್ರಿಗಳನ್ನು ತರಲು ಮುಸ್ತಫಾ ಶಾಪಿಂಗ್ ಸೆಂಟರ್ ಮೊರೆಹೊಕ್ಕೆ. ಸಾಮಾನುಗಳನ್ನು ತೆಗೆದುಕೊಂಡು ಎದುರಿಗೇ ಇದ್ದ ಟ್ಯಾಕ್ಸಿ ಸ್ಟಾಂಡಿನಲ್ಲಿ ನನ್ನ ಸರದಿಗಾಗಿ ಕಾಯುತ್ತಿದ್ದೆ. ತುಂತುರು ಹನಿ ಬೀಳಲು ಶುರುವಾಯಿತು. ಟ್ಯಾಕ್ಸಿ ಬಂದು ನಿಂತಿತು. ಡ್ರೆೃವರ್ ಕಿಟಕಿಯ ಗಾಜು ಇಳಿಸಿರಲಿಲ್ಲ. ನನ್ನ ಬಳಿಯಿದ್ದ ಸಾಮಾನುಗಳನ್ನು ಟ್ಯಾಕ್ಸಿಯ ಬೂಟ್ (ಡಿಕ್ಕಿ) ಯಲ್ಲಿ ಇಡಬೇಕಾಗಿತ್ತು. ಕೈಯಲ್ಲಿ ಎರಡೂ ಚೀಲ ಹಿಡಿದು ಡ್ರೈವರ್ ಗೆ ಹಿಂದಿನ ಬೂಟ್ (ಡಿಕ್ಕಿ) ತೆಗೆಯಲು ಹೇಳೋಣವೆಂದು ಸ್ವಲ್ಪ ಮುಂದೆ ಬಂದೆ. ಅಷ್ಟರಲ್ಲಿ ಹಿಂದಿನಿಂದ ‘ಓಪನ್ ಬಿಹೈಂಡ್, ಓಪನ್ ಬಿಹೈಂಡ್, ಥಿಂಗ್ಸ್ ಟು ಬಿ ಪುಟ್ ಇನ್ಸೈಡ್’ ಎಂದು ಜೋರಾಗಿ ಒಬ್ಬಾತ ಕೂಗಿದರು. ಗಾಬರಿಯಿಂದ ತಿರುಗಿ ನೋಡಿದೆ. ಪಾಪ, ನನಗೆ ಸಹಾಯ ಮಾಡಲು ನನ್ನ ಹಿಂದೆ ನಿಂತಿದ್ದ ಚೀನೀ ಮಹಾಶಯ ಟ್ಯಾಕ್ಸಿ ಡ್ರೈವರನಿಗೆ ಬೂಟ್ ತೆಗೆಯಲು ವಿನಂತಿಸುತ್ತಿದ್ದ. ಆತನ ಮಾತಿನಿಂದ ಏನೂ ಹೇಳಲು ತೋಚದೆ ಪೆಚ್ಚು ಪೆಚ್ಚಾಗಿ ಆತನಿಗೆ ಥಾಂಕ್ಸ್ ಹೇಳಿ ಟ್ಯಾಕ್ಸಿಯಲ್ಲಿ ಕೂತೆ. (ಇದು ‘ಸಿಂಗ್ಲೀಷ್’ ನ ಒಂದು ಉದಾಹರಣೆ ಕೂಡ)
ಈ ಪರಿಯ ‘ಪೆಚ್ಚು’ ನಗುವಿನ ಘಟನೆಗಳು ನಿಮ್ಮ ಜೀವನದಲ್ಲೂ ಆಗಿರಬಹುದಲ್ಲವೇ? ಹಂಚಿಕೊಳ್ಳಿ- feedback@thatskannada.com