• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

‘ಕನ್ನಡದ ಕಣ್ವ’ನ ನೆನೆಯುತ್ತಾ ... ಕಾರಿಹೆಗ್ಗಡೆ ಮಗಳಿಗೊಂದು ಹನಿ...

By Staff
|
Kannadada Kanva, B. M. Shrikantaiahಅನುವಾದದ ತಾಕಲಾಟದ ಸಂಕಟದ ಸಮಯದಲ್ಲಿ ನಮಗೆ ನೆನಪಾಗುವುದು ಹಿರಿಯ ಕವಿ ಬಿ.ಎಂ.ಶ್ರೀ ಮತ್ತು ಅವರ ಪ್ರಖ್ಯಾತ ಅನುವಾದಿತ 65 ಕವಿತೆಗಳಲ್ಲಿ ಒಂದಾದ ‘ಕಾರಿಹೆಗ್ಗಡೆಯ ಮಗಳು’ (‘ಇಂಗ್ಲೀಷ್‌ ಗೀತೆಗಳು’ ಕವನ ಸಂಕಲನದ ಅನುವಾದಿತ ಪದ್ಯಗಳ ಬಗ್ಗೆ ಬರೆಯಲು ಹೋದರೆ ಮಹಾಪ್ರಬಂಧವೇ ಆದೀತು. ಕ್ಷಮಿಸಿ; ನನ್ನ ಪ್ರಿಯವಾದ ಕವಿತೆಯ ಬಗ್ಗೆ ಮಾತ್ರ ಬರೆಯುತ್ತಿದ್ದೇನೆ). ಬಿ.ಎಂ.ಶ್ರೀ ಅವರ ಸಾಮರ್ಥ್ಯದ ಅರಿವಾಗುವುದು Thomas Campbell ನ Lord Ullins daughter ನಿರಾಯಾಸವಾಗಿ ಕಾರಿಹೆಗ್ಗಡೆಯ ಮಗಳಾಗಿ ಪರಿವರ್ತಿತವಾದಾಗ. ಯಾವುದೋ ದೂರದೂರಿನ ದುರಂತಮಯ ಪ್ರೇಮಕಥೆಯಾಂದಕ್ಕೆ ಕವಿ ಕನ್ನಡದ ಕಂಪನ್ನು ನೀಡಿದಾಗ. ಅವರು ಪಾತ್ರಗಳನ್ನು ಪರಿಚಯಿಸುವ ರೀತಿಯನ್ನೇ ನೋಡಿ:

ಪಡುವ ದಿಬ್ಬದ ಗೌಡನೊಬ್ಬನು
ಬಿಡದೆ ತೊರೆಯನ ಕೂಗಿಕೊಡನು;
‘ತಡೆಯದೀಗಲೆ ಗಡುವ ಹಾಯಿಸು,
ಕೊಡುವೆ ಕೇಳಿದ ಹೊನ್ನನು’

‘ಆರು ನೀವೀ ಕರುಗಿ ಮೊರೆಯುವ
ನೀರ ಕಾಯಲ ಹಾಯುವವರು?’
‘ಪಡುವ ದಿಬ್ಬದ ಗೌಡ ನಾನೀ
ಮಡದಿ ಕಾರಿಯ ಕುವರಿಯು’

Campbell ನ ಕೃತಿಯ ಪಾತ್ರಗಳ ಪ್ರವೇಶ-

A chieftain to the highlands bound,
Cries,"Boatman, do not tarry!
And Ill give thee a silver pound
To row us over the ferry!"

"Now,who be ye,would cross lochgyle,
This dark and stormy weather?"
"O,Im the chief of Ulvas isle,
and this, Lord Ullins daughter,

ಯುವ ಜೋಡಿಯ ಆತಂಕದ ಛಾಯೆ, ಬಂದೆರಗಬಹುದಾದ ಆಪತ್ತಿನ ಸುಳಿವು, ಮೊರೆಯುವ ಸಾಗರವನ್ನು ದಾಟುವ ಪ್ರಮೇಯವೇನೋ ಎಂಬ ಅಂಬಿಗನ ಕುತೂಹಲ... ಎಲ್ಲ ಭಾವನೆಗಳು ಮೂಲದಲ್ಲಿರುವಂತೆಯೇ ಅಚ್ಚುಕಟ್ಟಾಗಿ ಬಿಂಬಿತವಾಗಿದೆ. ಆದರೆ, ಬೆಚ್ಚನೆಯ ಗೂಡಿನಲ್ಲಿರಬೇಕಾದ ಹಕ್ಕಿಗಳು ಆ ಭಯಂಕರ ರಾತ್ರಿಯಂದು ಕಡಲ ತೀರಕ್ಕೆ ಪಲಾಯನಗೈದದ್ದಾದರೂ ಏಕೆ? ಬಲವಾದ ಕಾರಣವಿಲ್ಲದಿಲ್ಲ.

And fast before her fathers men
Three days we have fled together,
For should he find us in the glen,
My blood will stain the heather,

His Horsemen hard behind us ride;
Should they our steps discover,
Then who will cheer my bonny bride
When they have slain her lover?"

ಇದೇ ಅಗಲಿಕೆಯ ಭಯ, ವಿರಹಿಣಿ ಕಾಂತೆಯ ಬಗ್ಗೆ ಕಾಳಜಿಯನ್ನು ಪಡುವ ದಿಬ್ಬದ ಗೌಡ ವ್ಯಕ್ತಪಡಿಸುವ ರೀತಿ-

‘ಓಡಿ ಬಂದೆವು ಮೂರು ದಿವಸ;
ಜಾಡ ಹಿಡಿದು ಹಿಂದೆ ಬಂದರು
ನಮ್ಮನೀ ಕಣಿವೆಯಲಿ ಕಂಡರೆ
ಚಿಮ್ಮಿ ಹರಿವುದು ನೆತ್ತರು.

ಹತ್ತಿ ಕುದುರೆಯ ತರುಬಿ ಬರುವರು,
ಮುತ್ತಿಕೊಂಡರೆ ನನ್ನ ಕೊಲುವರು;
ಘೋರ ದುಃಖದ ನಾರಿಯನು ಬಳಿ
-ಕಾರು ನಗಿಸಲು ಬಲ್ಲರು?’

ಅಂಬಿಗನೂ ಸಹ ಎಲ್ಲರಂತಲ್ಲ ; ಇವರ ಪ್ರೇಮವನ್ನು ಸಲುಹಲು ತನ್ನ ಜೀವವನ್ನೇ ಪಣಕ್ಕಿಡುತ್ತಾನೆ!

Ill go, my chief... Im ready ;
It is not for your silver bright;
But for your winsome lady;

‘ಬೇಗ ಜೀಯಾ, ಓಡ ತರುವೆನು
ಸುಡಲಿ ಹೊನ್ನು, ಬೆಡಗಿ, ನಿನ್ನೀ
ಮಡದಿಗೋಸುಗ ಬರುವೆನು.’

ಎಂಥ ಧೈರ್ಯ, ಏನು ಔದಾರ್ಯ!!

So,though the waves are raging white,
Ill row you oer the ferry

‘ಕಡಲು ನೊರೆಗಡೆದೆದ್ದು ಕುದಿಯಲಿ
ಗಡುವ ಹಾಯಿಸಿಬಿಡುವೆನು’

ಯಾರೋ ಅಪರಿಚಿತರಿಗಾಗಿ ಎಂಥ ಆತ್ಮಾರ್ಪಣೆ! ಆದರೆ, ಆ ರುದ್ರರಾತ್ರಿಯಂದು ಕಾರಿಹೆಗ್ಗಡೆ ಮಾತ್ರ ಅಲ್ಲ ; ಪ್ರಕೃತಿಯೂ ಇವರ ವಿರುದ್ಧವಿತ್ತು.

The boat has left a stormy land,
A stormy sea before her,
When, O! too strong for a human hand,
The tempest gatherd oer her.

And still they rowd amidst the roar
Of waters fast prevailing ;
Lord Ullin reachd that fatal shore,
His wrath was changed to wailing.

ಹೀಗೆ ಮುಂದಿನ ಸಾಲುಗಳಲ್ಲಿ ವಿವರಿಸಲ್ಪಡುವ ಪ್ರಕೃತಿಯ ಪ್ರಳಯ ನರ್ತನವನ್ನು ಬಿ.ಎಂ.ಶ್ರೀ-

ತೂರು ಗಾಳಿಗೆ ಕಡಲು ಕುದಿಯಿತು,
ನೀರ ದೆವ್ವಗಳರಚಿಕೊಂಡುವು.
ಹೆಪ್ಪು ಮೋಡದ ಹುಬ್ಬುಗಂಟಿಗೆ
ಕಪ್ಪಗಾದವು ಮುಖಗಳು.

ಕೆರಳಿ ಕೆರಳಿ ಗಾಳಿ ಚಚ್ಚಿತು;
ಇರುಳ ಕತ್ತಲೆ ಕವಿದು ಮುಚ್ಚಿತು;
ಕಣಿವೆಯಿಳಿವರ ಕುದುರೆ ಕತ್ತಿಯ
ಖಣಿ ಖಣಿ ಧ್ವನಿ ಕೇಳಿತು!

ಎಂದು ವಿವರಿಸುತ್ತಾರೆ; ಕವಿತೆಯ ಹರಿವು, ತಾಳಕ್ಕೆ ಚ್ಯುತಿಯಾಗದಂತೆ. ಸಂದರ್ಭದ ಭೀಕರತೆ ತಗ್ಗದಂತೆ. ಒಂದೆಡೆ ಶರಧಿಯ ಅಟ್ಟಹಾಸ, ಚಂಡಮಾರುತ; ಮತ್ತೊಂದೆಡೆ ತಂದೆಯ ಕೆಂಗಣ್ಣು. ಎರಡನೆಯದೇ ಭೀಷಣವೆನಿಸಿತೇನೋ....

Ill meet the raging skies,
But not an angry father,

‘ಮುಳಿದ ಮುಗಿಲ ತಡೆಯಬಲ್ಲೆ ,
ಮುಳಿದ ತಂದೆಯ ತಡೆಯೆನು’

ಕಡಲ ಆರ್ಭಟ, ಬಿರುಗಾಳಿಗಳ ನಡುವೆ ತರಗೆಲೆಯಾದ ಕರುಳ ಬಳ್ಳಿಯನ್ನು ಕಂಡು ಕಾರಿಹೆಗ್ಗಡೆಯ ಉಗ್ರ ಕೋಪ ಶಮನವಾಗುತ್ತದೆ. ಅವಳ ಜೊತೆಗಾರನನ್ನು ಒಪ್ಪುವುದಾಗಿ ಮಾತು ಕೊಟ್ಟು ಮನೆಗೆ ಮರಳಲು ಬೇಡುತ್ತಾನೆ. ಯುವತಿ ಆಸರೆಗಾಗಿ ಒಂದು ಕೈ ಚಾಚುತ್ತಾಳೆ...

One lovely hand she stretchd for aid,
And one was round her lover.

ಒಂದು ಕೈ ನೀಡಿದಳು ನೆರವಿಗೆ,
ಒಂದು ತಬ್ಬಿತು ನಲ್ಲನ!

ಎಲ್ಲೂ ಪ್ರೀತಿಯ ಬಗ್ಗೆ ಸುದೀರ್ಘ ಭಾಷಣಗಳಿಲ್ಲ ; ಇರುವುದು ಕೊನೆಗಾಲದಲ್ಲೂ ಜೊತೆಗೆ ನಿಲ್ಲುವ ಒಂದು ಮೌನ ಭರವಸೆ ಮಾತ್ರ! ಆದರೆ ಕಡಲು ತಂದೆಯಷ್ಟು ಕ್ಷಮಾಶೀಲವಾಗಲಿಲ್ಲ.

Twas vain; the loud waves lashd the shore,
Return or aid preventing ;
The waters wild went over his child,
And he was left lamenting.

ಮರಳಬಹುದೆ? ಹೋಗಬಹುದೆ?
ಕರೆಯ ತೆರೆಯಪ್ಪಳಿಸಿ ಹೊಯ್ದು
ಮರಳಿ ಹೋದುವು ಮಗಳ ಮೇಲೆ
ಕೊರಗಿನಲಿ ಅವನುಳಿದನು.

ತಂದೆ ಮಗಳ ಮನಸ್ಸನ್ನರಿಯುವ ವೇಳೆಗೆ ಬಹಳ ತಡವಾಗಿಹೋಗಿತ್ತು. ಅಷ್ಟರಲ್ಲಾಗಲೇ ಮಗಳು ನೆನಪಾಗಿ, ಅವಳ ಕನಸು ಕಥೆಯಾಗಿ, ಶೋಕತಪ್ತ ಕಾರಿಹೆಗ್ಗಡೆ ಏಕಾಂಗಿಯಾಗಿ ಹೋಗಿದ್ದನು.

ಈ ದಂತಕಥೆಯ ತವರು ಸ್ಕಾಟ್‌ಲೆಂಡ್‌ನ ಒಂದು ಚಿಕ್ಕ ಊರು. ಆದರೆ Lord Ullins daughter-Chief of Ulvas isle ಕ್ರಮವಾಗಿ ಕಾರಿಹೆಗ್ಗಡೆಯ ಮಗಳು-ಪಡುವ ದಿಬ್ಬದ ಗೌಡರಾದಾಗ ಕರುನಾಡ ಕರಾವಳಿಯಲ್ಲಿ ನಿನ್ನೆ-ಮೊನ್ನೆ ನಡೆದ ಕಥೆಯೇನೊ ಎನಿಸುವಷ್ಟರ ಮಟ್ಟಿಗೆ ಹೃದಯಸ್ಪರ್ಶಿಯಾಗುತ್ತದೆ. ಕನಸು ಇನ್ನೇನು ಕೈಗೂಡಿತು ಎನ್ನುವಾಗಲೇ ಅಕಾಲಿಕ ಮೃತ್ಯುವಿಗೆ ತುತ್ತಾದ ಯುವ ಜೋಡಿಗಾಗಿ ಮನ ವ್ಯಾಕುಲಗೊಳ್ಳುತ್ತದೆ. ವರುಷಗಳ ನಂತರವೂ ನೆನಪಿನಂಗಳದಲ್ಲಿ ಹಸಿರಾಗುಳಿಯುವುದು ಈ ಜೋಡಿಯ ಪ್ರೇಮದ ಉತ್ಕಟತೆ, ತೊರೆಯನ ಮನೋವೈಶಾಲ್ಯತೆ, ಆ ಪ್ರಳಯಾಂತಕ ರಾತ್ರಿ, ಕಾರಿಹೆಗ್ಗಡೆಯ ವೇದನೆ, ಪಶ್ಚಾತ್ತಾಪ....ಮೂಲದಲ್ಲಿರುವ ಹಾಗೆಯೇ.

ಭಾವನೆಗಳಿಗೆ ಭಾಷೆಯ ಹಂಗೇಕೆ? ಭಾವನೆಗಳೇ ಜಾಗತಿಕ ಭಾಷೆ. ಕಾಲ, ದೇಶ, ಭಾಷೆ, ಪಾತ್ರಗಳು ಭಿನ್ನ ಭಿನ್ನವಾದರೂ ಎಲ್ಲರ ಕಥೆ-ವ್ಯಥೆ ಒಂದೇ. ಅಲ್ಲಿಗೆ ಬಿ.ಎಂ.ಶ್ರೀ ಅವರ, ‘ಇವಳ ಸೊಬಗನವಳು ತೊಟ್ಟು ನೋಡಬಯಸಿದ, ಅವಳ ತೊಡಿಗೆ ಇವಳಿಗಿಟ್ಟು ಹಾಡಬಯಸಿದ’ ರೀತಿಯಲ್ಲಿ ಕಾಣುವುದು ಅನನ್ಯತೆ, ಅನ್ಯೋನ್ಯತೆ. ಇಷ್ಟೆಲ್ಲ ಓದಿದ ಕನ್ನಡಿಗನ ಸಂವೇದನಾಶೀಲ ಹೃದಯ ಆರ್ದ್ರವಾಗಿ, ಕಂಗಳು ಒಂದು ಬಿಂದು ಕಂಬನಿಮಿಡಿದರೆ, ಕವಿಗೆ ಅದಕ್ಕಿಂತ ಮಿಗಿಲಾದ ಸಾರ್ಥಕತೆ ಬೇರೊಂದಿದೆಯೇ?

ಮುಖಪುಟ

/ ಎನ್‌ಆರ್‌ಐ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X