ಪ್ರೀತಿಯ ಸಾರದ ಗುಟ್ಟು
ಇನ್ನು ಡೇಟ್ (ಪ್ರೀತಿ?) ಮಾಡುವುದಕ್ಕೆ ಇವರುಗಳು ಸಂಗಾತಿಗಳನ್ನು ಆರಿಸಿಕೊಳ್ಳುವ ರೀತಿಗೂ ನಮ್ಮ ಗಂಡು ಹೆಣ್ಣಿನ ಹುಡುಕಾಟಕ್ಕೂ ಹೆಚ್ಚಿನ ವ್ಯತ್ಯಾಸವೇನೂ ಇಲ್ಲ. ಹುಡುಗನಾದರೆ, ಲಾಯರ್ ಅಥವಾ ಡಾಕ್ಟರ್ ಆಗಿದ್ದರೆ, ಪ್ರೀತಿ ಪ್ರೇಮ ಸುಲಭವಾಗಿ ಹುಟ್ಟುತ್ತದೆ. ಇಲ್ಲ ಕೊನೆ ಪಕ್ಷ ಒಳ್ಳೆ ಕೆಲಸದಲ್ಲಿದ್ದು ದುಬಾರಿ ಕಾರು ಓಡಿಸುವವನಾಗಿದ್ದರೆ ಪ್ರೀತಿಗೆ ರಹದಾರಿ ಸುಲಭ. ಇವೇನೂ ಆಗಿರದೆ ಪ್ರೇಮ ಭಿಕ್ಷೆ ಯಾಚಿಸಿದವನಿಗೆ ‘ಲೂಸರ್’ ಎಂಬ ಪಟ್ಟ ಕಟ್ಟಿಟ್ಟದ್ದೆನ್ನಿ. ಒಟ್ಟಿನಲ್ಲಿ ನಮ್ಮಲ್ಲಿನ ಮದುವೆಯ ದೊಂಬರಾಟಕ್ಕೂ, ಇಲ್ಲಿನವರ ಪ್ರೇಮದಾಟಕ್ಕೂ ನನಗೆ ಹೆಚ್ಚಿನ ವ್ಯತ್ಯಾಸವೇನೂ ಕಂಡುಬರದ್ದಕ್ಕೋ ಏನೋ, ವಾಲೆಂಟೈನ್ ದಿನ ನನ್ನನ್ನು ರೋಮಾಂಚನಗೊಳಿಸಿವ ಬದಲು ನನ್ನ ಸುತ್ತಣ ಸಂಸ್ಕೃತಿಯಾಂದರ ನಿರ್ದಿಷ್ಟ ಹಬ್ಬವೊಂದರ ಆಚರಣೆಯಲ್ಲಿ ಭಾಗಿಯಾಗುತ್ತಿದ್ದೇನೆ ಅನ್ನುವ ಭಾವ ಹುಟ್ಟಿಸುತ್ತಿತ್ತು.
ಇಲ್ಲಿನವರ ಬದುಕಿನಲ್ಲಿನ ಪ್ರೇಮಕ್ಕೆ ಅರ್ಥವಿಲ್ಲವೆಂಬುದಾಗಲೀ, ನಮ್ಮ ಮದುವೆಯ ರೀತಿಯನ್ನು ಸಮರ್ಥಿಸಿಕೊಳ್ಳುವ ಉದ್ದೇಶವಾಗಲೀ ನನಗೆ ಖಂಡಿತಾ ಇಲ್ಲ. ಹೆಣ್ಣಿನ ವೈಯಕ್ತಿಕ ಬದುಕಿಗೆ ಹೆಚ್ಚು ಸ್ವಾತಂತ್ರ್ಯವಿತ್ತಿರುವ ಈ ಸಮಾಜದ ರೀತಿಯನ್ನು ಖಂಡಿತಾ ಮೆಚ್ಚಿಕೊಳ್ಳಲೇಬೇಕು. ಆದರೆ, ಹೊರ ಸಂಸ್ಕೃತಿಯಾಂದರ ಒಳ್ಳೆಯದಷ್ಟನ್ನೇ ಅನುಸರಿಸಬೇಕೆಂದುಕೊಂಡ ನನಗೆ ಇಲ್ಲಿನವರ ಪ್ರೀತಿ ಪ್ರೇಮಗಳಿಗಿಂತ ಹೆಚ್ಚು ನಮ್ಮವರ ಬದುಕಿನಲ್ಲಿ ಪ್ರೇಮ ಪ್ರಣಯವನ್ನು ಕಂಡಿದ್ದೇನೆ ಅನ್ನಿಸಿದಾಗೆಲ್ಲ, ಬೆಂಗಳೂರು, ಮೈಸೂರಿನಿಂದ ಬರುವ ವಾಲೆಂಟೈನ್ ಕಾರ್ಡುಗಳ ಟೊಳ್ಳುತನದ ಬಗ್ಗೆ ದುಃಖವಾಗುತ್ತದೆ ಅಷ್ಟೇ. ಮೊನ್ನೆ ಅನಂತಮೂರ್ತಿಯವರೊಡನೆ ಎಸ್ತರ್ ಪತ್ರಿಕಾಲಯದ ಮುಂದೆ ಪ್ರತಿಭಟಿಸಿ ಧರಣಿಗೆ ಕುಳಿತ ಚಿತ್ರ ನೆನೆಯುತ್ತಲೇ ನಮ್ಮವರ ಪ್ರೀತಿಯ ಬಗ್ಗೆ ಇನ್ನಷ್ಟು ಕೋಡು ಮೂಡಿ ಬಂದಿತ್ತು. ಕಷ್ಟದಲ್ಲೂ ಸುಖದಲ್ಲೂ ಭಾಗಿಯಾಗಿ ಬದುಕುವ ನಮ್ಮ ಸಂಸ್ಕೃತಿಯ ಜೋಡಿಗಳಿಗೆ ಸರಿಯಾಗಿ ನಿಲ್ಲಲಾರದ ಬೇರೊಂದು ಸಂಸ್ಕೃತಿಯ ಆಚರಣೆಗೇಕೆ ಜೋತು ಬೀಳಬೇಕೆಂಬ ಭಾವ ಸಹಾ ಆಗ ಬರುತ್ತದೆನ್ನಿ...! ಹಾಗಂತ ಮರೆಯೋ ಹಾಗಿಲ್ಲ, ನನ್ನ ಪುಟ್ಟ ಪುಟ್ಟಿಗೆ, ಎರಡು ಮಕ್ಕಳ ತಾಯಿಗೆ, ಅವಳ ನನ್ನ ಮೇಲಿನ ಭಾರತೀಯ ಪ್ರೇಮಕ್ಕೆ ಕೃತಜ್ಞತೆ ಭರಿತ ನನ್ನ ಪ್ರೇಮದ ಅರಿವು ಮಾಡಿಸುವ ಕೆಲಸವಿನ್ನೂ ಇದೆ. ಏನಾದರೂ ‘ಒರಿಜಿನಲ್ ಐಡಿಯಾ’ ಇದ್ದರೆ ದಯವಿಟ್ಟು ಹೇಳಿ.
***
ಪ್ರೀತಿಯ ಸಾರದ ಗುಟ್ಟು
ತಾನು ಬಡವ ಆಕೆ ಬಡವಿಯಾದರೂ ಪ್ರೀತಿಸುವ ಗಂಟು
ಮರೆಯದಿರಿಂದು ವ್ಯಾಲೆಂಟೈನ್ ಎಂಬೀ ಥಳುಕಿನ ದಿನಗಳ ಅಂಟು
ಬದುಕು ಕಸಕಿ ಹೊಸಕಿದಾಗ, ‘ನೀ ಹೀಂಗ ನೋಡ ಬ್ಯಾಡ..’ ಎಂದ ನಂಟು
ಮುಪ್ಪಿನ ನೆರಿಗೆಗಳನೆ ಬೆಸೆದುಕೊಂಡು ಬೊಚ್ಚು ಬಾಯಲೆ ಮುತ್ತಿನ ತುತ್ತನಿಟ್ಟು
ನಡೆದು ಬಂದ ದಾರಿಯಲ್ಲೆಲ್ಲ ಕೆಂಪು ಗುಲಾಬಿಯನ್ನೆ ಆಯ್ದುಕೊಂಡು
ಇಲ್ಲ ಜಾಜಿ ಮಲ್ಲಿಗೆ ಕೆಂಪು ಕೇದಿಗೆ ಸಂಪಿಗೆಯ ಮೊಗ್ಗನಷ್ಟೆ ಕೊಯ್ದು
ಹಾದಿಯಲ್ಲಿನ ಕಲ್ಲು ಮುಳ್ಳುಗಳ ನೋವನ್ನೆಲ್ಲ ಮರೆತು
ಚಂದ್ರ ಮಂಚದ ಚಕೋರಿಯನ್ನ, ಕಾಲದುದ್ದಗಲಕ್ಕು ನೆನೆದು
ಚಂದ್ರನಿರದ ರಾತ್ರಿಗಳಿಗೆ ಬೆಳಕಾಗಿ ನೆನೆದುಕೊಂಡು
ಹರಿದುಬಂದ ಸಮಯಗತಿಗಿದೋ ಓತಪ್ರೋತ ಪ್ರೀತಿ ಇತ್ತು
ಡೇಟು ಗೀಟುಗಳ ಭರಾಟೆಗೂ ಮೊದಲೇ
ಕಾರು ಬಾರುಗಳ ನಾಟಕದಾಟಕ್ಕು ಮೊದಲೇ
ಕಣ್ಣ ನೋಟದಲ್ಲೆ ಪ್ರೇಮದ ಸಂಚು ಹೊತ್ತು
ಸೆರಗಿನಂಚಿನಲೆ ಪ್ರಿಯಕರಗೆ ಬುತ್ತಿ ಕಟ್ಟಿಟ್ಟು
ಚಂದ್ರ ಮೂಡುವವರೆಗೆ ಕೈಯ ಹೂ ಮುತ್ತನಿತ್ತು
ಹುಟ್ಟು ಸಾವಿನವರೆಗೆ ಪ್ರೇಮಕ್ಕೆ ತಾಳಿ ಕಟ್ಬಿಟ್ಟು
ಅಮರ ಪ್ರೇಮಕ್ಕೆ ಕೊಟ್ಟ ಅರ್ಥ ಕುಂಕುಮದ ಬೊಟ್ಟು
ನೀ ಹೋದೆಡೆ ನಾ ಬರುವೆನೆಂಬ ಪಾಶದ ಪಟ್ಟು
ಸಹಸ್ರಾರು ವರ್ಷಗಳಿಗು ನಡೆಸಿರುವವರ ಗುಟ್ಟು
ಹೊಸನೀರ ಕೆಸರಿನಲ್ಲಿ ಮರೆಯದಿರೋ ಲೋ ಪುಟ್ಟು
ಐ ಲವ್ ಯು ಎಂಬುದಷ್ಟೆ ಪ್ರೀತಿಯಲ್ಲವೋ ಕಿಟ್ಟು
ಕಲಿತುಕೊಳ್ಳೋ ನಿನ್ನ ಪುಟ್ಟಿಗಾಗಿ ತಾತ ತಾತಿಯರ ಪಟ್ಟು












Click it and Unblock the Notifications