ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಮಿಸ್‌ ಅಮೆರಿಕನ್ನಡ’ ಸಾರಥಿ ಸುಪ್ರಿಯಾ ದೇಸಾಯಿ ಸಂದರ್ಶನ

By Staff
|
Google Oneindia Kannada News

ನಮಸ್ಕಾರ ಸುಪ್ರಿಯಾ. ದಟ್ಸ್‌ಕನ್ನಡ ಓದುಗರಿಗೆ ನಿಮ್ಮ ಪರಿಚಯವನ್ನು ನೀವೇ ಮಾಡಿಕೊಳ್ಳುವಿರಾ ?

ಖಂಡಿತಾ. ನನ್ನ ಹೆಸರು ಸುಪ್ರಿಯಾ ದೇಸಾಯಿ. ಅಮೆರಿಕಾ ಕನ್ನಡ ಕೂಟಗಳ ಆಗರ- ‘ಅಕ್ಕ’ದ ಮಂಡಳಿ ಸದಸ್ಯರಲ್ಲಿ ನಾನೂ ಇದ್ದೇನೆ. 1998ರಲ್ಲಿ ‘ಅಕ್ಕ’ ಸ್ಥಾಪನೆಯಾದಾಗ ಚಾಲನ ಸಮಿತಿಯ ಸದಸ್ಯೆಯೂ ಆಗಿದ್ದೆ . ಎರಡು ವಿಶ್ವಕನ್ನಡ ಸಮ್ಮೇಳನ ನಡೆದಾಗ ‘ಅಕ್ಕ’ ಜೊತೆಗಿದ್ದೆ . ಅಷ್ಟೇ ಅಲ್ಲ , ‘ಅಕ್ಕ’ ಬಳಗದ ಆಜೀವ ಸದಸ್ಯೆ ಕೂಡಾ ಹೌದು. ಅಕ್ಕ ಮಾತ್ರವಲ್ಲದೆ, ಇತರ ಭಾರತೀಯ ಸಂಘಟನೆಗಳ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ಭಾಗವಹಿಸುತ್ತೇನೆ. ಸ್ಥಳೀಯ ‘ಸಂಪಿಗೆ’ ಕೂಟದ ಸ್ಥಾಪಕಿ ನಾನೇ. ಹಿಂದೂ ಸೊಸೈಟಿ, ಭಾರತೀಯ ಶಾಸ್ತ್ರೀಯ ಸಂಗೀತ ಸಮಾಜಗಳ ಚಟುವಟಿಕೆಗಳಲ್ಲೂ ನಾನು ಇದ್ದೇ ಇರುವೆ.

ವೃತ್ತಿಪರವಾಗಿ, ನಾನು ಭರತನಾಟ್ಯ ಕಲಾವಿದೆ. ಶಿಕ್ಷಕಿ ಹಾಗೂ ಸಂಯೋಜಕಿಯಾಗಿಯೂ ಉತ್ತರ ಕೆರೋಲಿನಾದಲ್ಲಿ ಕೆಲಸ ಮಾಡುತ್ತಿರುವೆ. ನನ್ನ ಆರಂಗ್ರೇಟಂ ಬೆಳ್ಳಿಹಬ್ಬ ಆಚರಿಸಿಕೊಂಡಿದೆ. ಶಿಕ್ಷಕಿಯಾಗಿ 10 ವರ್ಷಗಳಿಂದಲೂ ದುಡಿಯುತ್ತಿರುವೆ. ಅನೇಕ ಮೆಗಾ ಡಾನ್ಸ್‌ ಮತ್ತು ಡಾನ್ಸ್‌ ಪ್ರೊಡಕ್ಷನ್‌ಗಳನ್ನು ಸಂಯೋಜಿಸಿರುವೆ. ಡೆಟ್ರಾಯಿಟ್‌ ವಿಶ್ವ ಸಮ್ಮೇಳನದಲ್ಲಿ - ಮಹಿಷಾಸುರ ಮರ್ದಿನಿ ಎನ್ನುವ ನೃತ್ಯ ಕಾರ್ಯಕ್ರಮ ಸಂಯೋಜಿಸಿದ್ದೆ . ಪ್ರಸ್ತುತ ನಾನು ಪಾಯಲ್‌ ಡಾನ್ಸ್‌ ಅಕಾಡೆಮಿ (Payal Dance Academy) ಎನ್ನುವ ನೃತ್ಯ ಶಾಲೆ ನಡೆಸುತ್ತಿರುವೆ. ನನ್ನೀ ಶಾಲೆ 1994ರಿಂದಲೂ ನಡೆಯುತ್ತಿದೆ.

ಅಂದಹಾಗೆ, ಈ ಬಾರಿಯ ಒರ್ಲಾಂಡೊ ವಿಶ್ವಕನ್ನಡ ಸಮ್ಮೇಳನದಲ್ಲಿ ಸೌಂದರ್ಯ ಸ್ಪರ್ಧೆ ಏರ್ಪಡಿಸಿರುವ ವಿಷಯ ತಿಳಿಯಿತು ? ಸ್ಪರ್ಧೆಯ ವಿವರಗಳು ಹಾಗೂ ಸ್ಪರ್ಧೆಯಲ್ಲಿ ನಿಮ್ಮ ಪಾತ್ರದ ಕುರಿತು ತಿಳಿಸುವಿರಾ ?

ಇತ್ತೀಚೆಗಷ್ಟೇ ನನ್ನ ತವರಿನಲ್ಲಿ ‘ಮಿಸ್‌ ಇಂಡಿಯಾ ನಾರ್ತ್‌ ಕೆರೋಲಿನಾ’ ಹೆಸರಿನ ಸೌಂದರ್ಯ ಸ್ಪರ್ಧೆ ನಡೆಯಿತು. ಈ ಸ್ಪರ್ಧೆಯಲ್ಲಿ ನನ್ನ ಕಿರಿಯ ಮಗಳು ‘ಮಿನಿ ಮಿಸ್‌ ಇಂಡಿಯಾ’ ಪ್ರಶಸ್ತಿ ಗಳಿಸಿದಳು. ಮಗಳ ಬಹುಮಾನದ ಮಾತು ಬಿಡಿ, ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಎರಡನೇ ಪೀಳಿಗೆ ಭಾರತೀಯರ ಉತ್ಸಾಹ ಕಂಡು ಚಕಿತಳಾದೆ. ಸೌಂದರ್ಯ ಸ್ಪರ್ಧೆಯ ಐಡಿಯಾ ಹೊಳೆದದ್ದು ಆಗಲೇ ಅನ್ನಬೇಕು. ರಾಷ್ಟ್ರಮಟ್ಟದಲ್ಲಿ ಯುವ ಜನಾಂಗದ ಮೂಲಕ ಕನ್ನಡಿಗ-ಕನ್ನಡಪ್ರಜ್ಞೆಯನ್ನು ಬಿಂಬಿಸಬೇಕೆಂಬುದು ನನ್ನ ಬಯಕೆ. ಇನ್ನು ‘ಮಿಸ್‌ ಇಂಡಿಯಾ ಯುಎಸ್‌ಎ’ ಸ್ಪರ್ಧೆಯ ವಿಷಯ ಕೇಳಿ. ಭಾರತೀಯ ಸಂಘಟನೆಗಳು ತಂತಮ್ಮ ರಾಜ್ಯಗಳಲ್ಲಿ ನಡೆಸುವ ಸ್ಪರ್ಧೆಗಳ ವಿಜೇತರು ‘ಮಿಸ್‌ ಇಂಡಿಯಾ ಯುಎಸ್‌ಎ’ ರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾಗವಹಿಸುತ್ತಾರೆ. ಅಮೆರಿಕಾದಲ್ಲಿನ ಎಲ್ಲ ರಾಜ್ಯಗಳ ಕನ್ನಡಿಗರ ಸೌಂದರ್ಯ ಪ್ರತಿನಿಧಿಗೂ ‘ಮಿಸ್‌ ಇಂಡಿಯಾ ಯುಎಸ್‌ಎ’ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಿಕೊಡಬೇಕೆಂದು ಸ್ಪರ್ಧೆ ನಡೆಸುವ ಸಂಸ್ಥೆಯನ್ನು ಸಂಪರ್ಕಿಸಿದ್ದೇನೆ. ಸಂಸ್ಥೆ ಒಪ್ಪಿಕೊಂಡಿದೆ.

ವಿದೇಶಿ ನೆಲದಲ್ಲಿ ಕನ್ನಡ ಹಾಗೂ ಭಾರತೀಯ ಕಲೆ ಮತ್ತು ಸಂಸ್ಕೃತಿಯನ್ನು ಅಭಿವೃದ್ಧಿಪಡಿಸಲು ನನ್ನನ್ನು ನಾನು ತೊಡಗಿಸಿಕೊಂಡಿರುವೆ. ಈ ಸಂಸ್ಕೃತಿ ಸಂವಹನ ಪ್ರಕ್ರಿಯೆಯಲ್ಲಿ ಮುಂದಿನ ತಲಮಾರಿನವರು ಹೆಚ್ಚು ಸಕ್ರಿಯರಾಗಿರಬೇಕೆಂಬುದು ನನ್ನ ಬಯಕೆ. ನಮ್ಮ ಸಂಸ್ಕೃತಿಯ ಸಮೃದ್ಧತೆಯನ್ನು ಎಲ್ಲರಿಗೂ ಮುಟ್ಟಿಸಬೇಕು, ಆ ಕಾರಣದಿಂದಲೇ ಸಂಸ್ಕೃತಿ ಹಾಗೂ ಸಾಹಿತ್ಯವನ್ನು ಸ್ಪರ್ಶಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಪ್ರಯತ್ನ ಮಾಡುತ್ತಿರುತ್ತೇನೆ.

ಸೌಂದರ್ಯ ಸ್ಪರ್ಧೆಗೂ ಕನ್ನಡ ಸಂಸ್ಕೃತಿಗೂ ಎತ್ತಣ ಸಂಬಂಧ ?

ಸಂಬಂಧ ಇದೆ. ಸೌಂದರ್ಯ ಸ್ಪರ್ಧೆಯೆನ್ನುವುದು ಆಕರ್ಷಣೀಯ ಮುಖ ಹಾಗೂ ಬಳ್ಳಿಯಂಥ ದೇಹಕ್ಕೆ ಸಂಬಂಧಿಸಿದ್ದು ಎನ್ನುವ ಸಾಮಾನ್ಯ ತಪ್ಪು ಕಲ್ಪನೆ ನಮ್ಮಲ್ಲಿದೆ. ಆದರೆ ದೈಹಿಕ ಸೌಂದರ್ಯಕ್ಕಿಂತಲೂ ಅಭ್ಯರ್ಥಿಯ ಪ್ರತಿಭೆ, ತಿಳಿವಳಿಕೆ ಹಾಗೂ ಅಭಿವ್ಯಕ್ತಿ ಸಾಮರ್ಥ್ಯಗಳು ಹೆಚ್ಚು ಮುಖ್ಯವಾದವು. ಸ್ಪರ್ಧೆಯಲ್ಲಿ ಭಾರತೀಯ ಉಡುಗೆತೊಡುಗೆಗಳ ಒಂದು ಕೆಟಗರಿಯೇ ಇದೆ. ಇಷ್ಟೇ ಅಲ್ಲ , ಕರ್ನಾಟಕಕ್ಕೆ ಸಂಬಂಧಿಸಿದಂತೆ ಕನ್ನಡದಲ್ಲೇ ನಡೆಯುವ ಪ್ರಶ್ನೋತ್ತರ ಕಾರ್ಯಕ್ರಮವಿದೆ. ಕನ್ನಡ ಹಾಗೂ ಕರ್ನಾಟಕಕ್ಕೆ ಸಂಬಂಧಿಸಿದಂತೆ ಸಂದರ್ಶನ ಮತ್ತು ಪ್ರತಿಭಾ ಪರೀಕ್ಷೆ ಇರುತ್ತದೆ. ಸ್ಪರ್ಧೆಯಲ್ಲಿ ಓರ್ವ ಅಭ್ಯರ್ಥಿಯನ್ನು ‘ಅಕ್ಕ ರಾಯಭಾರಿ’ ಯನ್ನಾಗಿ ಆರಿಸುತ್ತೇವೆ. ಆಕೆ ಅಕ್ಕದ ವಿವಿಧ ದತ್ತಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ‘ಅಕ್ಕ’ ಬಳಗವನ್ನು ಪ್ರತಿನಿಧಿಸುವುದು ಮಾತ್ರವಲ್ಲದೆ ತನ್ನನ್ನು ತಾನು ಅಭಿವ್ಯಕ್ತಗೊಳಿಸಿಕೊಳ್ಳಲು ಆಯ್ಕೆಗೊಳ್ಳುವ ಸುಂದರಿಗೆ ಇದೊಂದು ಅವಕಾಶವಾಗಲಿದೆ.

ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸುವ ಸ್ಪರ್ಧಿಗಳಿಗೆ ಏನೇನು ಆಕರ್ಷಣೆಗಳಿವೆ ?

ಸೌಂದರ್ಯ ಸ್ಪರ್ಧೆ ಆಕರ್ಷಕವಾಗಿರುವುದು ಖಂಡಿತಾ. ವಿಜೇತರಿಗೆ ಭಾರತ ಸುತ್ತಿಬರಲು ಬಹುಮಾನದ ರೂಪದಲ್ಲಿ ಟಿಕೆಟ್‌ ನೀಡಲು ಪ್ರಾಯೋಜಕರ ವ್ಯವಸ್ಥೆ ಮಾಡಲಾಗಿದೆ. ಇಷ್ಟೇ ಅಲ್ಲದೆ, ‘ಮಿಸ್‌ ಅಮೆರಿಕನ್ನಡ’ ಪ್ರಶಸ್ತಿ ವಿಜೇತೆ, ‘ಮಿಸ್‌ ಇಂಡಿಯಾ ಯುಎಸ್‌ಎ’ ಸ್ಪರ್ಧೆಗೆ ನೇರವಾಗಿ ಪ್ರವೇಶ ಗಿಟ್ಟಿಸುತ್ತಾಳೆ. ಸ್ಪರ್ಧೆ ರಂಗೇರಲು ಇನ್ನೇನು ಬೇಕು.

ಸೌಂದರ್ಯ ಸ್ಪರ್ಧೆಯ ಬಗ್ಗೆ ಸಾಕಷ್ಟು ವಿಷಯ ತಿಳಿಸಿಕೊಟ್ಟಿರುವಿರಿ. ಸ್ಪರ್ಧೆ ಯಶಸ್ವಿಯಾಗಲೆಂದು ದಟ್ಸ್‌ಕನ್ನಡ ಹಾರೈಸುತ್ತದೆ. ನಮಸ್ಕಾರ.

ನಮಸ್ಕಾರ.

‘ಮಿಸ್‌ ಅಮೆರಿಕನ್ನಡ’ ಸ್ಪರ್ಧೆಯ ವಿವರಗಳಿಗಾಗಿ ಆಸಕ್ತರು ಕೆಳಕಂಡ ವಿಳಾಸವನ್ನು ಸಂಪರ್ಕಿಸಬಹುದು :
Supriya Desai,
AKKA director and Miss Amerikannada 2004 coordinator.
919-854-9989, [email protected]

ಸೌಂದರ್ಯ ಸ್ಪರ್ಧೆಯ ನಿಯಮಾವಳಿ ಹಾಗೂ ಅರ್ಜಿ ನಮೂನೆ

ಮುಖಪುಟ / ಎನ್‌ಆರ್‌ಐ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X