ಅಮೆರಿಕಾದಲ್ಲಿ ಮುಕ್ತ ವಿವಿ ಉಪ ಕುಲಪತಿ ಡಾ.ಸುಧಾರಾವ್
- ದಟ್ಸ್‌ಕನ್ನಡ ಬ್ಯೂರೊ
ಕಲಿಯುವವರ ಮನೆಬಾಗಿಲಿಗೆ ವಿದ್ಯೆಯನ್ನು ಒಯ್ಯುತ್ತಿರುವ, ಮೈಸೂರನ್ನು ಕೇಂದ್ರವಾಗುಳ್ಳ ‘ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ’ದ ಉಪ ಕುಲಪತಿ ಡಾ.ಕೆ.ಸುಧಾರಾವ್ ಈಗ ಅಮೆರಿಕಾ ಪ್ರವಾಸದಲ್ಲಿದ್ದಾರೆ. ಮೇ 10ರಿಂದ 28ರವರೆಗೆ ಡಾ.ಸುಧಾರಾವ್ ಉತ್ತರ ಕ್ಯಾಲಿಫೋರ್ನಿಯ ಪ್ರದೇಶದಲ್ಲಿ ತಂಗಲಿದ್ದಾರೆ.
ಕ್ರಮಬದ್ಧ ಕಲಿಕೆಯನ್ನು ಅರ್ಧಕ್ಕೆ ನಿಲ್ಲಿಸಿದ ಹಾಗೂ ಕಲಿಯುವ ಆಸಕ್ತಿಯುಳ್ಳವರಿಗೆ ವಯೋಭೇದವಿಲ್ಲದೆ ಅವಕಾಶ ಕಲ್ಪಿಸುವಲ್ಲಿ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಪಾತ್ರ ಬಹುಮುಖ್ಯವಾದುದು. ಈ ಮುನ್ನ ಮೈಸೂರು ವಿಶ್ವವಿದ್ಯಾಲಯದ ಒಂದಂಗವಾಗಿ ಕಾರ್ಯ ನಿರ್ವಹಿಸುತ್ತಿದ್ದ ಅಂಚೆ ಮತ್ತು ತೆರಪಿನ ಶಿಕ್ಷಣ ಸಂಸ್ಥೆ , ಇದೀಗ- ‘ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ’ ಎನ್ನುವ ಹೆಸರಿನಡಿ ಸ್ವತಂತ್ರವಾಗಿ ಕಾರ್ಯ ನಿರ್ವಹಿಸುತ್ತಿದೆ. ಪದವಿ, ಸ್ನಾತಕೋತ್ತರ ಪದವಿ, ವಿವಿಧ ವಿಷಯಗಳ ಡಿಪ್ಲೊಮ, ಸಂಶೋಧನೆ, ಅಧ್ಯಯನಕ್ಕೆ ಅವಕಾಶ ಕಲ್ಪಿಸುತ್ತಿರುವ ಮುಕ್ತ ವಿವಿಯ ಹರಹು ದೊಡ್ಡದು. ರಾಜ್ಯದ ಸಾವಿರಾರು ವಿದ್ಯಾರ್ಥಿಗಳು (ಗೃಹಿಣಿಯರು, ನೌಕರಿಯಲ್ಲಿರುವವರು, ಹಿರಿಯ ನಾಗರಿಕರು, ಅರ್ಧಕ್ಕೆ ವ್ಯಾಸಂಗ ನಿಲ್ಲಿಸಿದವರು) ಈ ವಿವಿಯಡಿ ತಮ್ಮ ಕಲಿಕೆಯ ಆಸಕ್ತಿಯನ್ನು ಈಡೇರಿಸಿಕೊಳ್ಳುತ್ತಿದ್ದಾರೆ.
ಡಾ.ಕೆ.ಸುಧಾರಾವ್ ಉಪ ಕುಲಪತಿಗಳಾದ ನಂತರ ಮುಕ್ತ ವಿಶ್ವವಿದ್ಯಾಲಯದ ಚಟುವಟಿಕೆಗಳ ಹರಹು ಇನ್ನಷ್ಟು ದೊಡ್ಡದಾಗಿದೆ. ಸುಧಾರಾವ್ ಅವರ ದಕ್ಷ ನೇತೃತ್ವದಲ್ಲಿ ಹಲವು ಹೊಸ ಹಾಗೂ ಉಪಯುಕ್ತ ಯೋಜನೆಗಳನ್ನು ಹೊಂದಿರುವ ವಿಶ್ವವಿದ್ಯಾಲಯ, ತನ್ನ ಜ್ಞಾನ ಪ್ರಸಾರದ ಸಾಧ್ಯತೆಗಳನ್ನು ಹೆಚ್ಚಿಸಿಕೊಂಡಿದೆ. ಪ್ರಸ್ತುತ ಅಮೆರಿಕಾ ಪ್ರವಾಸದಲ್ಲಿರುವ ಸುಧಾರಾವ್- ಈ ಪ್ರವಾಸದ ಸಮಯದಲ್ಲೂ ವಿವಿ ಕುರಿತ ಯೋಜನೆ-ಯೋಚನೆಗಳಲ್ಲೇ ಮುಳುಗಿದ್ದಾರೆ.
ಡಾ.ಸುಧಾರಾವ್ ಅವರನ್ನು ಭೇಟಿಯಾಗಿ ಚರ್ಚಿಸಲು ಅಮೆರಿಕನ್ನಡಿಗರಿಗೆ ಇದೊಂದು ಸುವರ್ಣಾವಕಾಶ. ಅಂತರ್ಜಾಲದ ಮೂಲಕವೂ ಮುಕ್ತವಿಶ್ವವಿದ್ಯಾಲಯದ ಕಲಿಕೆಯ ಅವಕಾಶಗಳು ದೊರೆಯುವಂತಾದರೆ, ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರೂ ಮುಕ್ತ ವಿವಿ ಸವಲತ್ತುಗಳನ್ನು ಹೊಂದುವುದು ಸಾಧ್ಯವಾದರೆ.......- ಈ ನಿಟ್ಟಿನಲ್ಲಿ ಅಮೆರಿಕನ್ನಡಿಗರು ಸುಧಾರಾವ್ ಅವರೊಂದಿಗೆ ಚರ್ಚಿಸಬಹುದು. ಸುಧಾರಾವ್ ಉದ್ದೇಶ ಕೂಡ ಇದೇ- ಮುಕ್ತ ವಿವಿ ಕವಲುಗಳನ್ನು ವಿಸ್ತರಿಸುವುದು.
ಅಮೆರಿಕ ಭೇಟಿಯ ಸಂದರ್ಭದಲ್ಲಿ ಡಾ.ಸುಧಾರಾವ್ ತಮ್ಮ ಮಗನ ಮನೆಯಲ್ಲಿ ತಂಗುವರು. ಅವರನ್ನು ಸಂಪರ್ಕಿಸಬಹುದಾದ ವಿಳಾಸ :
Nishit Rao in Foster City, North CA, (Phone numbers: (650) 572-1633; (650) 888-9658( cell) and eMail : [email protected]
ಡಾ.ಸುಧಾರಾವ್‌ರ ಇ-ಮೇಲ್ : [email protected]
ಮುಕ್ತ ವಿವಿ ಹಾಗೂ ಅಮೆರಿಕನ್ನಡಿಗರು- ಉಭಯತ್ರರಿಗೂ ಅನುಕೂಲವಾಗುವಂಥ ಯೋಜನೆಯಾಂದು ಸುಧಾರಾವ್ ಅವರ ಭೇಟಿಯ ಸಮಯದಲ್ಲಿ ಸಾಧ್ಯವಾಗುವುದಾದರೆ, ಅದು ಕನ್ನಡ ನುಡಿ ಬೆಳವಣಿಗೆಯ ಸಾಧ್ಯತೆಯೂ ಹೌದು. ಈ ನಿಟ್ಟಿನಲ್ಲಿ ಅಮೆರಿಕನ್ನಡಿಗರು ಹಾಗೂ ಕನ್ನಡ ಸಂಘಗಳು ಚಿಂತಿಸಬೇಕು.












Click it and Unblock the Notifications