• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅವಿದ್ಯಾವಂತ ಶತಾಯುಷಿ ಕೊಟ್ಟದ್ದೆಲ್ಲ ವಿದ್ಯಾರ್ಥಿಗಳಿಗೆ

By Staff
|

ಕೆನಡಾ ಗಡಿಯ ಅಮೇರಿಕದ ಶೀತಲ ಮಧ್ಯಪ್ರಾಚ್ಯ ರಾಜ್ಯಗಳಲ್ಲೊಂದಾದ ಮೋಂಟಾನದ ಗ್ರೇಟ್‌ ಫಾಲ್ಸ್‌ ಊರಿನ ಶತಾಯುಷಿಯಾಬ್ಬ, ಎರಡು ವರ್ಷದ ಹಿಂದೆ ನಡೆದ ತನ್ನ ನೂರನೆ ಹುಟ್ಟುಹಬ್ಬದ ಆಚರಣೆಯ ದಿನ ಒಳ್ಳೆಯ ಶಿಕ್ಷಣವನ್ನು ಕೂಡಿಡುವ ಚಿನ್ನಕ್ಕೆ ಹೋಲಿಸುತ್ತ ಹೇಳಿದ್ದು 'ಎಲ್ಲರೂ ಎಷ್ಟು ಹೆಚ್ಚಿಗೆ ಸಾಧ್ಯವೋ ಅಷ್ಟು ಶಿಕ್ಷಣ ಪಡೆಯಬೇಕು." ಆ ನಿಟ್ಟಿನಲ್ಲಿ ಶಿಕ್ಷಣಕ್ಕಾಗಿ ಹಣದ ಅವಶ್ಯಕತೆ ಇರುವ ವಿದ್ಯಾರ್ಥಿಗಳಿಗಾಗಿ, 800 ವಿದ್ಯಾರ್ಥಿಗಳಿರುವ ಆ ಊರಿನ ವಿಶ್ವವಿದ್ಯಾಲಯಕ್ಕೆ ತಾನು ಕಳೆದ ತಿಂಗಳು ಸತ್ತಾಗ ಆತ ಬಿಟ್ಟು ಹೋದ ದೇಣಿಗೆ 2.3 ದಶಲಕ್ಷ ಡಾಲರ್‌ಗಳು (ಸುಮಾರು ಹತ್ತು ಕೋಟಿ ರೂಪಾಯಿಗಿಂತ ಹೆಚ್ಚು.)

ಜೀನ್‌ ಆಗರ್ಭ ಶ್ರೀಮಂತನೇನೂ ಅಲ್ಲ. ಹುಟ್ಟಿದ್ದು ಕಳೆದ ಶತಮಾನದ ಆರಂಭದಲ್ಲಿ, ಇಟಲಿಯಲ್ಲಿ. ಕಲಿತದ್ದು ಮೂರನೆಯ ತರಗತಿಯವರೆಗೆ ಮಾತ್ರ; ಅದೂ ಪ್ರಥಮ ವಿಶ್ವಯುದ್ಧಕ್ಕಿಂತ ಮುಂಚೆಯೇ. 1921ರಲ್ಲಿ ಅಂದರೆ ತನ್ನ 19ನೆಯ ವಯಸ್ಸಿನಲ್ಲಿ ಅಮೆರಿಕದಲ್ಲಿ ಕೆಲಸ ಮಾಡುತ್ತಿದ್ದ ತಂದೆಗೆ ಜೊತೆಯಾಗಲು ಕಡಲು ದಾಟಿದವ. ನಂತರ ಇಪ್ಪತ್ತು ವರ್ಷಗಳ ಕಾಲ ಡ್ರೈ ಕ್ಲೀನಿಂಗ್‌ನಲ್ಲಿ ಕೆಲಸ ಮಾಡಿ ತನ್ನ ಅರ್ಧ ಆಯಸ್ಸು ಮುಗಿಯುತ್ತ ಬಂದ ಸಮಯದಲ್ಲಿ 1948ರಲ್ಲಿ ತನ್ನದೇ ಆದ ಸನ್‌ ಕ್ಲೀನರ್ಸ್‌ ಎಂಬ ಡ್ರೈ ಕ್ಲೀನಿಂಗ್‌ ಅಂಗಡಿಯನ್ನು ಗ್ರೇಟ್‌ ಫಾಲ್ಸ್‌ನಲ್ಲಿ ಸ್ಥಾಪಿಸಿದ. ಇದಾದ ಮೂರು ವರ್ಷಕ್ಕೆ, ಇನ್ನೇನು ಐವತ್ತು ವರ್ಷ ವಯಸ್ಸಾಯಿತು ಎನ್ನುವ ಸಮಯದಲ್ಲಿ ಲೂಸಿಲ್ಲೆ ಯನ್ನು ಮದುವೆಯಾದ. 46 ವರ್ಷಗಳ ಇವರ ದಾಂಪತ್ಯ ಕೊನೆಯಾದದ್ದು ಲೂಸಿಲ್ಲೆ 1997ರಲ್ಲಿ ತೀರಿಕೊಂಡಾಗ. ಇವರಿಗೆ ಮಕ್ಕಳಿರಲಿಲ್ಲ.

Genesio Morlacci (right) with his friend, celebrated his 100th birthday in july 2002ಜೀನ್‌ ಎಂದು ಕರೆಯಲ್ಪಡುತ್ತಿದ್ದ ಜಿನಿಸಿಯಾ ಮೊರ್ಲಾಷಿ ಸಾಮಾನ್ಯ ಕೆಲಸಗಾರನಾಗಿರಲಿಲ್ಲ. ದಿನಕ್ಕೆ 18-20 ಗಂಟೆಗಳ ಕಾಲ ದುಡಿಯುತ್ತಿದ್ದ. ತನ್ನ ಅಂಗಡಿಯಲ್ಲಿ ಕ್ಯಾಷಿಯರ್‌ ಮಾತ್ರ ಬೇರೆ; ಮಿಕ್ಕ ಎಲ್ಲಾ ಕೆಲಸಗಳೂ - ಬಟ್ಟೆ ಸಂಗ್ರಹ, ಬಟವಾಡೆ, ಒಗೆಯುವುದು, ಇಸ್ತ್ರಿ, ಎಲ್ಲವನ್ನೂ ತಾನೇ ಮಾಡುತ್ತಿದ್ದ. ಕಾಯಕಕ್ಕೆ ತುಂಬಾ ಬೆಲೆ ಕೊಡುತ್ತಿದ್ದ.

ತನ್ನ ಅಂಗಡಿಯನ್ನು ಮಾರಿಯಾದ ಮೇಲಿನ ವಿಶ್ರಾಂತ ಜೀವನದಲ್ಲಿ ಸಹ ಸುಮ್ಮನೆ ಕೂಡಲಿಲ್ಲ. ಗ್ರೇಟ್‌ ಫಾಲ್ಸ್‌ ವಿಶ್ವವಿದ್ಯಾಲಯದಲ್ಲಿ ಸ್ವಚ್ಛತಾ ಕೆಲಸಗಾರನಾಗಿ (janitor) ದಿನಕ್ಕೆ ನಾಲ್ಕು ಗಂಟೆಗಳ ಕಾಲ ದುಡಿಯುತ್ತಿದ್ದ. ಈ ಕೆಲಸವನ್ನು ಪೂರ್ಣಾವಧಿ ಮಾಡಬೇಕೆಂದು ಆಡಳಿತ ಮಂಡಳಿ ತೀರ್ಮಾನಿಸಿದಾಗ ಆ ಕೆಲಸ ಬಿಟ್ಟ.

ಈತ ಗೋರೂರು ರಾಮಸ್ವಾಮಿ ಅಯ್ಯಂಗಾರರ ಭೂತಯ್ಯನಂತೆ ಮಹಾಜಿಪುಣ ಎನ್ನಬಹುದು. ತನ್ನ ಬಟ್ಟೆಗಳ ತೂತು-ತೇಪೆಗಳಿಗೆ ತೇಪೆ ಹಚ್ಚುತ್ತಿದ್ದ. ಮಾಸಿದ, ಬಣ್ಣ ಕಳೆದುಕೊಂಡ ಅಂಗಿಯ ಕಾಲರ್‌ ಹೊಲಿಗೆ ಬಿಚ್ಚಿ, ಅದನ್ನು ತಿರುವಿ ಒಳಗೆ ಹಾಕಿ ಮತ್ತೆ ಹೊಲಿದು ಅದೇ ಬಟ್ಟೆ ಉಡುತ್ತಿದ್ದ. ಬಟ್ಟೆಗಳ ಕತೆ ಸಂಪೂರ್ಣವಾಗಿ ಮುಗಿದ ನಂತರವೇ ಬಿಸಾಕುತ್ತಿದ್ದ. ಅಪರೂಪಕ್ಕೆ ಮಾತ್ರ ಗಂಡಹೆಂಡತಿ ಹೊರಗೆ ಹೋಟೆಲ್‌ಗಳಲ್ಲಿ ತಿನ್ನುತ್ತಿದ್ದರು. ಅಂತಹ ಸಮಯದಲ್ಲಿಯೂ ಕಡಿಮೆ ಬೆಲೆಯ ಹೋಟೆಲ್‌ಗಳಿಗೇ ಹೋಗುತ್ತಿದ್ದರು. ಅವರು ಮಾಡುತ್ತಿದ್ದ ದೊಡ್ಡ ಖರ್ಚೆಂದರೆ ಅಪರೂಪಕ್ಕೊಮ್ಮೆ ಹೋಗುತ್ತಿದ್ದ ಇಟಲಿ ಪ್ರವಾಸ ಮಾತ್ರವಾಗಿತ್ತು. ಅಂತಹ ಸಮಯದಲ್ಲಿಯೂ ಸಹ ಆತನ ಹೆಂಡತಿ ಒಂದಕ್ಕಿಂತ ಹೆಚ್ಚು ಹೊಸ ಬಟ್ಟೆ ಖರೀದಿಸುತ್ತಿರಲಿಲ್ಲ.

ಹೆಂಡತಿಯನ್ನು ಸಾವಿನ ನಂತರ ಊಟ, ಬಟ್ಟೆ, ಬಾಡಿಗೆ, ಸ್ವಚ್ಛತೆಗೆ ಎಲ್ಲಾ ಸೇರಿ ಕೇವಲ 500 ಡಾಲರ್‌ ಮಾತ್ರ ಕೊಡಬೇಕಿದ್ದ ನಿವೃತ್ತಗೈಹದಲ್ಲಿ ಜೀವಿಸುತ್ತಿದ್ದ. ಆಲ್ಜೈಮರ್‌ ಕಾಯಿಲೆಗೆ ಬಿದ್ದ ಇತ್ತೀಚಿನ ವರ್ಷಗಳಲ್ಲಿ ನರ್ಸಿಂಗ್‌ ಹೋಮಿಗೆ ದಾಖಲಾಗಿದ್ದು ಅಲ್ಲೇ ಆತ ಸತ್ತಿದ್ದು.

ಹಾಗೆಂದ ಮಾತ್ರಕ್ಕೆ ಭೂತಯ್ಯನಂತೆ ಎಂಜಲು ಕೈಯಲ್ಲಿ ಕಾಗೆ ಓಡಿಸದವನೇನೂ ಆಗಿರಲಿಲ್ಲ ಜೀನ್‌. ಅನೇಕ ಒಳ್ಳೆಯ ಕಾರ್ಯಗಳಿಗೆ ದುಡ್ಡು ಕೊಡುತ್ತಿದ್ದ. ಸರ್ಕಾರ ಮತ್ತು ತುಂಬಾ ಜನ ತಮ್ಮ ಆದಾಯಕ್ಕಿಂತ ಹೆಚ್ಚಿಗೆ ಖರ್ಚು ಮಾಡುತ್ತಾರೆ ಎಂದು ನಂಬಿದ್ದ. ತಕ್ಷಣದಲ್ಲಿ ಸಂತೃಪ್ತಿ, ಮೆಚ್ಚಿಗೆ ಬಯಸುವ ಬೇಡುವ ಯುವಜನರ ಬಗ್ಗೆ ಆತನಿಗೆ ಅಂತಹ ಒಳ್ಳೆಯ ಅಭಿಪ್ರಾಯವಿರಲಿಲ್ಲ.

ಈತ ಗಳಿಸಿದ್ದೆಲ್ಲವೂ ಶ್ರಮಜೀವನದಿಂದ, ಮತ್ತು ಹೀಗೆ ಅಬ್ಬಬ್ಬ ಎನ್ನಿಸುವ ರೀತಿಯಲ್ಲಿ ಉಳಿತಾಯ ಮಾಡುವುದರ ಮೂಲಕ. ಬುದ್ಧಿವಂತನಾಗಿದ್ದ ಈತ ಒಳ್ಳೆಯ ಕಡೆ ಬಂಡವಾಳ ತೊಡಗಿಸುತ್ತಿದ್ದ. ಈತನಿಗೆ ತೆರಿಗೆರಹಿತ ಬಾಂಡ್‌ಗಳ ಮೇಲೆ ಒಲವಿತ್ತು. ಜನರಿಗೆ, ಮನೆಗಳಿಗೆ, ಕಾಲೇಜುಗಳಿಗೆ ಸಾಲ ಕೊಡುತ್ತಿದ್ದ. ಹೀಗೆ ತನ್ನ ಶತಮಾನದ ಜೀವನದಲ್ಲಿ ಗಳಿಸಿದ್ದು ಆ 2.3 ದಶಲಕ್ಷ ಡಾಲರ್‌ಗಳು. ಇದೆಲ್ಲವನ್ನೂ ಹೀಗೆ ವಿಶ್ವವಿದ್ಯಾಲಯಕ್ಕೆ ಬರೆದ ಸಮಯದಲ್ಲಿ ಈತನ ಲಾಯರ್‌ ವಿಶ್ವವಿದ್ಯಾಲಯದ ಅಧಿಕಾರಿಗಳನ್ನು ಭೇಟಿ ಮಾಡಿಸುವ ವಿಚಾರ ಪ್ರಸ್ತಾಪಿಸಿದಾಗ ಬೇಡವೆಂದು ತಳ್ಳಿ ಹಾಕಿದ್ದ. ಯಾವುದೇ ರೀತಿಯ ಮೆರವಣಿಗೆ, ಮೆರೆಸುವಿಕೆ, ತೋರ್ಪಡಿಕೆಯನ್ನು ಆದಷ್ಟು ತಡೆಯುತ್ತಿದ್ದ.

ಜೀನ್‌ ಮೊರ್ಲಾಷಿ ತನ್ನ ಉಯಿಲಿನಲ್ಲಿ ತಾನು ಕೊಡುತ್ತಿರುವ ಹಣದ ಶೇ. 95 ರಷ್ಟು ವಿದ್ಯಾರ್ಥಿವೇತನಕ್ಕೆ ಹೋಗುವಂತೆ ಮತ್ತು ಮಿಕ್ಕ ಶೇ. 5 ನ್ನು ವಿಶ್ವವಿದ್ಯಾಲಯ ತನ್ನ ತಿಳಿವಿನ ಪ್ರಕಾರ ಉಪಯೋಗಿಸಿಕೊಳ್ಳುವಂತೆ ಆದೇಶಿಸಿದ್ದಾನೆ. ಸುಮಾರು 800 ವಿದ್ಯಾರ್ಥಿಗಳಿರುವ ಈ ಸಣ್ಣ ಕಾಲೇಜಿಗೆ ಅವನ ಹಣ ಪ್ರತಿವರ್ಷ ಸರಿಸುಮಾರು ಒಂದು ಲಕ್ಷ ಡಾಲರ್‌ಗಳನ್ನು ಉತ್ಪತ್ತಿಸುತ್ತದೆ. ಇದರ ಬಗ್ಗೆ ಕೃತಜ್ಞತಾಪೂರ್ವಕವಾಗಿ ಮಾತನಾಡುತ್ತಾ ಈ ವಿಶ್ವವಿದ್ಯಾಲಯದ ಅಧ್ಯಕ್ಷ ಹೇಳಿದ್ದು - 'ಜೀನ್‌ ಇದಕ್ಕಾಗಿ ತುಂಬಾ ಕಷ್ಟ ಪಟ್ಟು ದಿನಕ್ಕೆ 18-20 ಗಂಟೆಗಳ ಕಾಲ ದುಡಿದ. ಆ ಕೆಲಸದ ಪ್ರತಿ ಗಂಟೆಯ ಸಮಯದಲ್ಲಿ ತಾನು ಎಂದಿಗೂ ಭೇಟಿಯಾಗದ ಒಬ್ಬ ವಿದ್ಯಾರ್ಥಿಗಾಗಿ ಏನೋ ಒಂದನ್ನು ಮಾಡುತ್ತಿದ್ದ. ಆತ ಒಂದು ಬಲಿಷ್ಠ ಸ್ಥಳೀಯ ವಿಶ್ವವಿದ್ಯಾಲಯದ ಅವಶ್ಯಕತೆ ಮತ್ತು ಶಿಕ್ಷಣಕ್ಕಾಗಿ ಹಣದ ನೆರವು ಬೇಕಾಗಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನದ ಅವಶ್ಯಕತೆಯನ್ನು ನಂಬಿದ್ದ."

ಜೀನ್‌ ತನ್ನ ಡ್ರೈ ಕ್ಲೀನಿಂಗ್‌ ಅಂಗಡಿಯನ್ನು ಮಾರಿದ ನಂತರ ಕೊಂಡುಕೊಂಡ ತನ್ನ ಸರಳವಾದ ಮನೆಯ ಹಿತ್ತಲಿನಲ್ಲಿ ಗುಲಾಬಿ ಮತ್ತು ಟೊಮ್ಯಾಟೊ ಗಿಡಗಳ ಆರೈಕೆ ಮಾಡುವುದನ್ನು ತುಂಬಾ ಪ್ರೀತಿಸುತ್ತಿದ್ದ. ನೂರಾಎರಡು ವರ್ಷಗಳ ಆ ಮುತ್ಯಾನ ಸಾರ್ಥಕ ಜೀವನಕ್ಕಾಗಿ ಮತ್ತು ತದನಂತರದ ಆತನ ತ್ಯಾಗ, ತೀರ್ಮಾನಕ್ಕಾಗಿ ಆ ಅಜ್ಜನಿಗೊಂದು ಈ ಅಕ್ಷರಗುಲಾಬಿಯ ಶ್ರದ್ಧಾಂಜಲಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X