• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಲಹರಿ : ನಾಮತ್ರಯ ತಾಪತ್ರಯ !

By Staff
|
Prof. T.Mahadev Rao, NewYork ಟಿ. ಮಹದೇವ ರಾವ್‌

trao@brockport.edu

ನನಗೊಬ್ಬ ಕಿರಿಯ ಮಿತ್ರ ಇದ್ದಾನೆ, ಎಸ್‌. ಶಂಕರ್‌; ಪೂರ್ತಿ ಹೆಸರು ಸೋಮಪ್ಪ ಶಂಕರ್‌. ಸರಿಯಾಗಿ ಗೆಸ್‌ ಮಾಡಿದಿರಿ. ಅವನ ತಂದೆಯವರ ಹೆಸರು ಸೋಮಪ್ಪ. ಅಮೇರಿಕಕ್ಕೆ ಬಂದ ಮೇಲೆ, ಈ ಫಸ್ಟ್‌ ನೇಮ್‌, ಲಾಸ್ಟ್‌ ನೇಮ್‌ ವ್ಯವಸ್ಥೆಗೆ ಸರಿಹೊಂದುವಂತೆ, ಶಂಕರ್‌ ಸೋಮಪ್ಪ ಎಂದು ಹೆಸರು ಬದಲಿಸಿಕೊಂಡ. ಕಾಲ ಸರಿಯಿತು. ಶಂಕರನಿಗೊಬ್ಬ ಮಡದಿ ಬಂದಳು, ಉಮಾ. ಗಂಡನ ಲಾಸ್ಟ್‌ ನೇಮ್‌ ಹೆಂಡತಿಗೂ ಬರುವುದು ಸಂಪ್ರದಾಯವಷ್ಟೆ? ಹಾಗಾಗಿ ಆಕೆ ಉಮಾ ಸೋಮಪ್ಪ . ಮತ್ತಷ್ಟು ಕಾಲ ಸರಿಯಿತು. ಪುಟ್ಟ ವಿನಯ್‌ ಹುಟ್ಟಿದ. ನರ್ಸರಿ ಸ್ಕೂಲಿಗೆ ಸೇರಿ ವಿನಯ್‌ ಸೋಮಪ್ಪ ಆದ. ಉಮಾ ನರ್ಸರಿ ಟೀಚರ್‌ಗೆ ಸಹಾಯಕಿಯೂ ಆದಳು. ಅಮೇರಿಕದಲ್ಲಿ ಒಬ್ಬರನ್ನು ಅವರ ಮೊದಲ ಹೆಸರಿನಿಂದ ಕರೆಯುವುದು ಸ್ನೇಹದ, ಅನೌಪಚಾರಿಕತೆಯ ಸಂಕೇತ. ಆದರೆ, ಸ್ಕೂಲ್‌ ಟೀಚರ್‌ಗಳನ್ನು ಮಾತ್ರ ಅದೇಕೋ ಪ್ರಥಮ ನಾಮದಿಂದ ಕರೆಯಲಾಗದು. ಮಕ್ಕಳೂ, ಅವರ ಮಾತಾಪಿತರೂ, ಟೀಚರ್‌ಗಳನ್ನು ಮಿಸೆಸ್‌ ಬ್ರೌನ್‌, ಮಿಸ್‌ ಸ್ಮಿತ್‌, ಮುಂತಾಗಿಯೇ ಕರೆಯುವುದು. ಈಗ ಬಂತು ನೋಡಿ ನಮ್ಮ ಉಮಾಗೆ ತೊಂದರೆ. ಆಕೆಯನ್ನು ಸ್ಕೂಲಿನಲ್ಲಿ ಮಕ್ಕಳು ಮಿಸೆಸ್‌ ಸೊಮ್ಯಾಪ ಎಂದು ಕರೆದರು. ಆಕೆಗೋ ಮುಜುಗರ. ‘ನಾನು ಮಿಸೆಸ್‌ ಸೋಮಪ್ಪ ಅಲ್ಲಾರೀ, ನಾನು ಮಿಸೆಸ್‌ ಶಂಕರ್‌. ಸೋಮಪ್ಪ ನನ್ನ ಗಂಡನ ಹೆಸರಲ್ಲ, ನನ್ನ ಮಾವನ ಹೆಸರು’ ಅಂತ ಕಿರುಚಿಕೊಳ್ಳುವ ಹಾಗೆ ಆಗೋದು. ಆದರೇನು, ದಾಖಲೆಗಳಲ್ಲೆಲ್ಲಾ ಉಮಾ ಸೋಮಪ್ಪ ಎಂದೇ ಇದೆ. ಮಾತಾಡುವ ಹಾಗಿಲ್ಲ. ಮುಜುಗರಿಸಿಕೊಂಡೇ ಇದ್ದಾಳೆ.

ನನ್ನೊಬ್ಬ ಸಹಪಾಠಿಯ ಹೆಸರು ಕೆ. ವೀರಣ್ಣ ಅಂತ. ನಾವಿಬ್ಬರೂ ವಿದ್ಯಾರ್ಥಿಗಳಾಗಿದ್ದಾಗ ಅಮೇರಿಕದಲ್ಲಿ ಉನ್ನತ ವ್ಯಾಸಂಗಕ್ಕೆ ಅರ್ಜಿ ಹಾಕುತ್ತಿದ್ದೆವು. ಅರ್ಜಿ ಫಾರಂಗಳಲ್ಲಿ ಫಸ್ಟ್‌ ನೇಮ್‌, ಮಿಡ್ಲ್‌ ನೇಮ್‌, ಲಾಸ್ಟ್‌ ನೇಮ್‌ ಕೇಳಿಬಿಟ್ಟಿರುತ್ತಾರೆ. ನನ್ನ ಮಿತ್ರನಿಗೆ ಬಂತು ನೋಡಿ ತಾಪತ್ರಯ. ಫಸ್ಟ್‌ ನೇಮ್‌ಗೆ ಕೊಟ್ಟೂರು ಅಂತ ಬರೆದ. ಮಿಡ್ಲ್‌ ನೇಮ್‌ಗೆ ವೀರಣ್ಣ ಅಂತ ಬರೆದ. ಇನ್ನು ಲಾಸ್ಟ್‌ ನೇಮ್‌ ಏನು ಬರೆಯಬೇಕೆಂದು ತೋಚಲಿಲ್ಲ. ಖಾಲಿ ಬಿಟ್ಟರೆ ಹೇಗೋ ಏನೋ! ಲಾಸ್ಟ್‌ ನೇಮ್‌ ಜಾಗದಲ್ಲಿ NIL ಅಂತ ಬರೆದ. ಒಂದು ತಿಂಗಳಾದರೂ ಉತ್ತರ ಬರಲಿಲ್ಲ. ಬೇರೆಲ್ಲರಿಗೂ ಉತ್ತರ ಬಂದಿದೆ. ಇವನಿಗೆ ಕಳವಳ. ತಲುಪಿಸಲಾಗದ ಕಾಗದಗಳನ್ನು ಒಂದು ನೋಟೀಸ್‌ ಬೋರ್ಡ್‌ ಮೇಲೆ ಚುಚ್ಚಿರುತ್ತಾರೆ. ಅಲ್ಲಿ ಹೋಗಿ ನೋಡಿದರೆ ಸಿಕ್ಕಿತು ಪತ್ರ. ಅದರ ಮೇಲಿನ ಅಡ್ರಸ್‌: Mr. K.V. Nil.

ಇನ್ನೊಬ್ಬ ಮಿತ್ರ, ರಾಘವೇಂದ್ರ ರಾವ್‌, ಅವರ ಮಗಳ ಹೆಸರು ಲಲಿತಾ. ಸ್ಕೂಲಿನಲ್ಲಿ R.ಲಲಿತಾ. ಲಲಿತಾ ಅಮೇರಿಕದಲ್ಲಿ ಅಡ್ಮಿಷನ್‌ಗೆ ಅರ್ಜಿ ಹಾಕಿದಳು. ಏಡ್‌ ಸಿಗುತ್ತೋ ಇಲ್ಲವೋ ಅಂತ ಆತಂಕ. ದಿನಾಲು ಪೋಸ್ಟ್‌ ಕಾದು ಕಾದು ಬೇಸರವಾಯಿತು. ಯೂನಿವರ್ಸಿಟಿಗೆ ಫೋನ್‌ ಮಾಡಿದಳು. ಅವರು ಕೇಳಿದರು: ನಿನ್ನ ಹೆಸರೇನು? ಇವಳು ಹೇಳಿದಳು: ಲಲಿತಾ. ಸ್ಪೆಲ್ಲಿಂಗ್‌ ಎಲ್ಲಾ ಕೇಳಿದ ಮೇಲೆ ಅವರು ಹೇಳಿದರು, ಆ ಹೆಸರಿನ ಅಪ್ಲಿಕೇಷನ್ನೇ ಇಲ್ಲಿಗೆ ಬಂದಿಲ್ಲ ಅಂತ. ಹುಡುಗಿಗೆ ದಿಗಿಲು. ಮರುದಿನ ಮತ್ತೆ ಫೋನ್‌ ಮಾಡಿದಳು. ಈ ಸಲ ಸಿಕ್ಕಿದವಳು ನಿನ್ನ ಲಾಸ್ಟ್‌ ನೇಮ್‌ ಏನು ಎಂದು ಕೇಳಿದಳು. ಇವಳು ಬಹಳ ಕಷ್ಟಪಟ್ಟು ಎರೆಡೆರಡು ಸಲ ಸ್ಪೆಲ್‌ ಮಾಡಿ ರಾಘವೇಂದ್ರ ರಾವ್‌ ಅಂತ ಹೇಳಿದಳು. ಮತ್ತೆ ಅದೇ ಉತ್ತರ. ಆ ಹೆಸರಿನ ಅಪ್ಲಿಕೇಷನ್‌ ಬಂದಿಲ್ಲ ಅಂತ. ಹುಡುಗಿ ಅಳುವುದೊಂದೇ ಬಾಕಿ. ಅದೇ ಸಮಯದಲ್ಲಿ ನಾನು ಬೆಂಗಳೂರಿನಲ್ಲಿದ್ದೆ. ನನ್ನ ಮಿತ್ರರು ಇದೇನೋ ರಗಳೆ, ನೀವಾದರೂ ಫೋನ್‌ ಮಾಡಿ ಅಂದರು. ಲಾಸ್ಟ್‌ ನೇಮ್‌ ರಾವ್‌, ಫಸ್ಟ್‌ ನೇಮ್‌ ಲಲೀಟ ಅಂತ ಹೇಳಿದ ತಕ್ಷಣ ಅರ್ಜಿ ಸಿಕ್ಕೇ ಬಿಟ್ಟಿತು. ಏಡ್‌ ಸಿಕ್ಕಿದ ಸುದ್ದಿಯೂ ತಿಳಿಯಿತು.

ಹರಪನಹಳ್ಳಿ ರಾಮಮೂರ್ತಿ ಅವರ ಕತೆ ಇನ್ನೂ ಬೇರೆ ಥರದ್ದು. ಇವರು ಮಹಾ ಜಾಣರು. ಈ ಫಸ್ಟ್‌ ನೇಮ್‌, ಲಾಸ್ಟ್‌ ನೇಮ್‌ ತಾಪತ್ರಯ ಅವರಿಗೆ ಗೊತ್ತಿತ್ತು. ಅವರು ವೀಸಾಗೆ ಅರ್ಜಿ ಹಾಕುವಾಗಲೆ ಫಸ್ಟ್‌ ನೇಮ್‌ ಹರಪನಹಳ್ಳಿ, ಮಿಡ್ಲ್‌ ನೇಮ್‌ ರಾಮ, ಲಾಸ್ಟ್‌ ನೇಮ್‌ ಮೂರ್ತಿ ಎಂದು ಬರೆದು ಬಿಟ್ಟಿದ್ದರು. ಅವರಿಗೀಗ ವಾರಕ್ಕೆ ಎರಡೋ ಮೂರೋ ಕ್ರೆಡಿಟ್‌ ಕಾರ್ಡ್‌ ಆಮಂತ್ರಣಗಳು ಬರುತ್ತವೆ. ಪ್ರತಿಯಾಂದೂ, Dear Harapanaha, ಎಂದೇ ಆರಂಭವಾಗುತ್ತವೆ. ಕ್ರೆಡಿಟ್‌ ಕಾರ್ಡ್‌ ಕಂಪನಿಯವರ ಕಂಪ್ಯೂಟರ್‌ಗೆ Harapanahalli ತುಂಬಾ ಉದ್ದ. ಅವರ ಅಮೇರಿಕನ್‌ ಕೊಲೀಗ್ಸ್‌ ಎಲ್ಲಾ ಹೇ, ಹಾರ್ಪ್‌ ಅಂತ ಕೂಗುತ್ತಾರೆ. ಸಾಮಾನ್ಯವಾಗಿ ರಾಮೂ ಅಂತ ಕರೆಯುವ ಅವರ ಹೆಂಡತಿ ಕೂಡ ಕೆಲವುಸಲ ಅವರನ್ನು ‘ಹರಪೂ’ ಅಂತ ರೇಗಿಸ್ತಾರೆ.

ಮಗು ಹುಟ್ಟಿದಾಗ ಹೆಸರಿಡುವುದು ಎಲ್ಲ ಸಂಸ್ಕೃತಿಗಳಲ್ಲೂ ಇರುವ ಪದ್ಧತಿ. ಅದು ಮಗುವಿನ ಇಟ್ಟ ಹೆಸರು - ಅಥವಾ ಫಸ್ಟ್ಟ್‌ ನೇಮ್‌. ಕುಟುಂಬ, ನೆರೆ-ಹೊರೆ ವಲಯಗಳಲ್ಲಿ ಮಗುವನ್ನು ಗುರುತಿಸಲು ಒಂದು ಹೆಸರೇ ಸಾಕು. ಹೊರ ಜಗತ್ತಿನ ಜತೆ ವ್ಯವಹರಿಸಲು, ಒಂದು ಹೆಸರು ಸಾಲದಲ್ಲವೆ? ಒಂದೇ ಹೆಸರಿನವರು ಬಹಳ ಜನ ಇರಬಹುದು. ಆಗ ಇನ್ನೂ ಒಂದೋ ಎರಡೋ ಹೆಸರುಗಳನ್ನು ಸೇರಿಸಬೇಕಾಗುತ್ತದೆ. ಅವುಗಳಿಗೆ ಅಡ್ಡ ಹೆಸರು, ಸರ್‌ನೇಮ್‌, ಮಿಡ್ಲ್‌ ನೇಮ್‌, ಲಾಸ್ಟ್‌ ನೇಮ್‌ ಮುಂತಾಗಿ ಕರೆಯುವುದುಂಟು. ಅಮೆರಿಕದಲ್ಲಿ ಬಹು ಜನರ ಪೂರ್ತಿ ಹೆಸರಿನಲ್ಲಿ ಫಸ್ಟ್‌, ಮಿಡ್ಲ್‌, ಮತ್ತು ಲಾಸ್ಟ್‌ ನೇಮ್‌ ಎಂಬ ನಾಮತ್ರಯ ಇರುವುದು ಸಾಮಾನ್ಯ. ಹೆಸರುಗಳನ್ನು ಬರೆಯಲು, ದಾಖಲಿಸಲು ನಮ್ಮ ಕರ್ನಾಟಕದಲ್ಲಿ ಎಂಥ ಸಿಸ್ಟಂ ಇದೆ? ಯೋಚಿಸೋಣವೆ?

ಉತ್ತರ ಕರ್ನಾಟಕದಲ್ಲಿ ಸಾಮಾನ್ಯವಾಗಿ ಎಲ್ಲರಿಗೂ ಒಂದು ಅಡ್ಡ ಹೆಸರು ಅಥವಾ ಸರ್‌ನೇಮ್‌ ಇರುತ್ತದೆ. ಗಂಡಸರಿಗೆ ಮತ್ತು ಮದುವೆಯಾಗದ ಹುಡುಗಿಯರಿಗೆ, ತನ್ನ ಹೆಸರು, ತಂದೆಯ ಹೆಸರು, ಆಮೇಲೆ ಅಡ್ಡ ಹೆಸರು ಹೀಗೆ ಬರೆಯುವುದು ಸಾಮಾನ್ಯಪದ್ಧತಿ. ಮದುವೆಯಾದ ಹೆಂಗಸರಿಗಾದರೆ ಹೆಸರು, ಗಂಡನ ಹೆಸರು, ಅಡ್ಡ ಹೆಸರು. ಇದೇ ಪದ್ಧತಿ ಮಹಾರಾಷ್ಟ್ರ , ಗುಜರಾತ್‌ ರಾಜ್ಯಗಳಲ್ಲೂ ಇದೆ. ಈ ಅಡ್ಡ ಹೆಸರು, ಪರಂಪರೆಯಿಂದ ಇಳಿದು ಬಂದದ್ದು. ಆ ಕುಟುಂಬದ ಮುಂದಿನ ಪೀಳಿಗೆಗೂ ಮುಂದುವರಿಯುತ್ತದೆ. ಇಂಥ ಹೆಸರುಗಳಿಗೆ ಮೇಲೆ ಹೇಳಿದ ತಾಪತ್ರಯ ಇರದು. ದಕ್ಷಿಣ ಕರ್ನಾಟಕದಲ್ಲಿಯೇ ಹೆಸರಿನ ಸಮಸ್ಯೆ ಬರೋದು. ನಮ್ಮ ಬಳ್ಳಾರಿ ಜಿಲ್ಲೆ ಉತ್ತರ ಕರ್ನಾಟಕವೋ? ದಕ್ಷಿಣವೋ? ನನಗಂತೂ ತಿಳಿಯದು. ನಾನು ವಿದ್ಯಾಭ್ಯಾಸಕ್ಕೆ ಧಾರವಾಡಕ್ಕೆ ಹೋದಾಗ, ನನ್ನ ಸಹಪಾಠಿಗಳು ನನ್ನ ಹೆಸರನ್ನು ನೋಡಿ ನಾನು ಬೆಂಗಳೂರು ಕಡೆಯವನೆಂದು ಬಗೆಯುತ್ತಿದ್ದರು. ಬೆಂಗಳೂರಿಗೆ ಬಂದಾಗ ನನ್ನ ಭಾಷೆಯನ್ನು ಕೇಳಿ ಧಾರವಾಡದ ಕಡೆಯವನು ಎನ್ನುತ್ತಿದ್ದರು. ಬಳ್ಳಾರಿ ಜಿಲ್ಲೆಯಲ್ಲಿ ಹೆಸರುಗಳಲ್ಲಿ ಸಾಮಾನ್ಯವಾಗಿ ಎರಡು ಪದಗಳಿರುತ್ತವೆ. ಕಿನ್ನಾಳ ಬಸವರಾಜ, ಉಳ್ಳಾಗಡ್ಡಿ ತಿಪ್ಪಯ್ಯ, ಇತ್ಯಾದಿ. ಇವನ್ನು K.ಬಸವರಾಜ, U.ತಿಪ್ಪಯ್ಯ ಎಂದು ಬರೆಯುವುದು ರೂಢಿ. ಹಳೆಯ ಮೈಸೂರು ವಿಭಾಗದಲ್ಲಿ , ಹೆಸರಿನಲ್ಲಿ ಸಾಮಾನ್ಯವಾಗಿ ಮೂರು ಪದಗಳಿರುತ್ತವೆ. ಎಮ್‌. ಆರ್‌. ಶ್ರೀನಿವಾಸ್‌ ಎನ್ನುವ ಹೆಸರಿನಲ್ಲಿ, ಎಮ್‌ ಎಂದರೆ ಮೈಸೂರು (ಅವರ ಮೂಲ ಸ್ಥಳ), ಆರ್‌ ಎಂದರೆ ರಂಗನಾಥ (ತಂದೆಯ ಹೆಸರು). ಶ್ರೀನಿವಾಸ್‌ ಎಂಬುದು ಈತನ ಇಟ್ಟ ಹೆಸರು. ಎಲ್ಲರೂ ಈತನನ್ನು ಶ್ರೀನಿವಾಸ ಎಂದೇ ಕೂಗುವುದು. ಅಮೆರಿಕದ ಪದ್ಧತಿಯಲ್ಲಿ ಅದು ಆತನ ಫಸ್ಟ್‌ ನೇಮ್‌. ಆದರೆ ಬರೆಯುವಾಗ ಅದನ್ನು ಕೊನೆಯಲ್ಲಿ ಬರೆಯುತ್ತೇವೆ. ಇಲ್ಲೇ ತೊಂದರೆ ಪ್ರಾರಂಭ.

ಭಾರತದಲ್ಲಿ ಇದ್ದಾಗ, ಈ ನಾಮತ್ರಯದ ತಾಪತ್ರಯ ಅಷ್ಟಾಗಿ ಇರದು. ಸಂಸ್ಕೃತಿಯ ಏಕತೆಯಿಂದ ನಮ್ಮ ಹೆಸರು ಸುತ್ತಮುತ್ತಲಿನ ಜನಗಳಿಗೆ ಅರ್ಥವಾಗುತ್ತದೆ. ದೇಶ ಬಿಟ್ಟು ಹೊರಬಂದಾಗಲೇ ಅದು ತಾಪತ್ರಯವಾಗುವುದು. ಈ ಸಮಸ್ಯೆಯನ್ನು ಜನರು ವಿವಿಧ ವಿಧಾನಗಳಿಂದ ನಿವಾರಿಸಿಕೊಳ್ಳುತ್ತಾರೆ. ಕೆಲವರು ಹೆಸರಿನ ಕೊನೆಯ ಭಾಗವನ್ನೇ ಲಾಸ್ಟ್‌ ನೇಮ್‌ ಮಾಡಿಕೊಳ್ಳುತ್ತಾರೆ: ಮೂರ್ತಿ, ಕುಮಾರ್‌, ರಾವ್‌, ಇತ್ಯಾದಿ. ಆತ್ರೇಯ, ಕಶ್ಯಪ್‌ ಮುಂತಾದ ಗೋತ್ರಗಳನ್ನು ಲಾಸ್ಟ್‌ ನೇಮ್‌ ಆಗಿ ಬಳಸುವುದೂ ಉಂಟು. ಅಮೆರಿಕನ್‌ ನಾಲಿಗೆಗೆ ಸುಲಭವಾಗುವಂತೆ ಫಸ್ಟ್‌ ನೇಮ್‌ಗಳನ್ನು ತಿರುಚುವುದೂ ಇದೆ. ವಿನಯ್‌ ‘ವಿನ್ನೀ’ ಆದರೆ, ನಿಖಿಲ್‌ ‘ನಿಕ್ಕೀ’ ಆಗುತ್ತಾನೆ. ಒಟ್ಟಿನಲ್ಲಿ ಪ್ರಥಮ ಪೀಳಿಗೆಯ ವಲಸೆಗಾರರಿಗೆ ಮಾತ್ರ, ಈ ತಾಪತ್ರಯ. ಎರಡನೆಯ ಪೀಳಿಗೆ ನಾಮತ್ರಯ ಪದ್ಧತಿಗೆ ಹೊಂದಿಕೊಂಡು ಬಿಟ್ಟಿರುತ್ತದೆ.

ಒಟ್ಟಿನಲ್ಲಿ , ಜನ-ಭೂ ವೈವಿಧ್ಯದಂತೆಯೇ ‘ಹೆಸರು’ ವೈವಿಧ್ಯವೂ ಸಮೃದ್ಧವಾದುದು. ಎಲ್ಲರೂ ಮಾಡುವುದು ಹೆಸರಿಗಾಗಿ ತಾನೆ ? ಹಾಗಾಗಿ, ವ್ಯಕ್ತಿ ಅದೆಷ್ಟೇ ಎತ್ತರದವನಾದರೂ ಗಿಡ್ಡದಾದ ‘ಹೆಸರು’ ದೊಡ್ಡದು ! ನೀವೆನಂತೀರಿ ಸಾರ್‌ ?

ಮುಖಪುಟ / ಎನ್‌ಆರ್‌ಐ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more