ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹರಟೆಕಟ್ಟೆಯಲ್ಲಿ ‘ಜಾಲ ತರಂಗ’ದ ಜಾಣ!

By Super
|
Google Oneindia Kannada News

ಅಕ್ಟೊಬರ್‌ 31 ರ ಬೆಳಿಗ್ಗೆ ಕ್ಯಾರಿಯ ಹರಟೆಕಟ್ಟೆಯಲ್ಲಿ ನಡೆದದ್ದು ಕನ್ನಡದ ಹರಟೆ. ರಾಜ್ಯೋತ್ಸವದ ಮುನ್ನಾದಿನ ನಡೆದ ಈ ಹರಟೆಗೆ ಒಂದು ನಿಶ್ಚಿತ ಆಯಾಮ ಒದಗಿಸಿದವರು, ಹಿರಿಯ ಮಿತ್ರ, ಅಮೇರಿಕನ್ನಡಿಗ, ಜಾಲತರಂಗದ ಜಾಣ, ಗೊರೂರು ಪ್ರಶಸ್ತಿ ವಿಜೇತ, 'ನಾವ್ಯಾರೂ ಸಾಹಿತಿಗಳಲ್ಲ..' ಎಂದು ವಿನಯದಿಂದಲೇ ನಾಚಿಕೊಳ್ಳುವ ಡಾ। ಮೈ ಶ್ರೀ. ನಟರಾಜ್‌.

ಹರಟೆ ಕಟ್ಟೆಯ ಉದ್ದೇಶ ಕಾಲಹರಣ, ಕಾಲಕ್ಷೇಪವಷ್ಟೇ ಆಗದಿರಲಿ ಎಂಬ ಕಿವಿಮಾತು ಹೇಳುತ್ತ ನಟರಾಜ್‌ ಮಾತು ಆರಂಭಿಸಿದರು. ಗೊರೂರು ಪ್ರಶಸ್ತಿಯ ಮೂಲಕ, ಅಮೇರಿಕನ್ನಡಿಗರ ಬದುಕು ಮತ್ತು ಸಾಹಿತ್ಯವು ತಾಯ್ನಾಡಿನ ಇತಿಹಾಸಕ್ಕೆ ಅರ್ಥವತ್ತಾಗಿದೆ ಎಂಬುದನ್ನು ತೋರಿಸಿಕೊಟ್ಟ ನಟರಾಜರ ಬರಹದ ಬೇರುಗಳು ವರ್ತಮಾನದಲ್ಲಿಯೇ ಗಟ್ಟಿಯಾಗಿ ಊರುವುದು, ಅವರ ಉದ್ದೇಶವೂ ಆಗಿದೆ.

ಇಹ ಪರಗಳ ತುಲನೆಯಲ್ಲಿ, ಪರವನ್ನೇ ಶ್ರೇಷ್ಠವೆಂದು ಬಗೆಯುವ ಸಂಸ್ಕೃತಿಯಲ್ಲಿ ಬೆಳೆದ ನಟರಾಜ್‌, ಪಶ್ಚಿಮದ ನೆಲದಲ್ಲಿ ಬದುಕು ಸಾಗಿಸುತ್ತ, ವರ್ತಮಾನಕ್ಕೆ ತಮ್ಮನ್ನು ಸಂಪೂರ್ಣವಾಗಿ ತೆರೆದುಕೊಂಡು, ಅದರ ರಾಜಕೀಯ ಮತ್ತು ಸಾಮಾಜಿಕ ಮೌಲ್ಯಗಳ ಘರ್ಷಣೆಗಳನ್ನು ತಮ್ಮ ಸಾಹಿತ್ಯದ ವಸ್ತುವನ್ನಾಗಿಸಿಕೊಂಡಿದ್ದಾರೆ. ಹಾಗಿದ್ದೂ ನವೆಂಬರ್‌ 1ರ ಮುನ್ನಾದಿನ ಸೇರಿದ ಹರಟೆಕಟ್ಟೆಯ ಪಡ್ಡೆ ಹುಡುಗ ಹುಡುಗಿಯರಿಗೆ, ನಟರಾಜ್‌ ನೆನಪಿಸಿದ್ದು 1000 ವರ್ಷಕ್ಕೂ ಹೆಚ್ಚು ಇತಿಹಾಸವಿರುವ ಕನ್ನಡದ ಹೆಗ್ಗಳಿಕೆಯನ್ನು. ಕನ್ನಡಿಗರ ಬಗೆಗಿನ ಆಕ್ಷೇಪವೆನ್ನುವುದಕ್ಕಿಂತ, ಕನ್ನಡಿಗರನ್ನು ವ್ಯಾಖ್ಯಾನಿಸಲು ಬಳಸಬೇಕಾದ ಗುಣದಂತೆ ಕಂಡುಬರುವ ನಮ್ಮ ಅಭಿಮಾನಶೂನ್ಯತೆಯ ಬಗ್ಗೆ ಒಂದೆರಡು ಹಾಸ್ಯಭರಿತ ಸನ್ನಿವೇಶಗಳನ್ನು ನೆನಪಿಸಿಕೊಂಡು ಆರಂಭಿಸಿದ ತಮ್ಮ ಮಾತುಗಳನ್ನು, ನಟರಾಜ್‌ ಕಾಲನ ಸಾಗರದಲ್ಲಿ, ತಮ್ಮ ನೆನಪಿನ ದೋಣಿಯಲ್ಲಿ ತೇಲುತ್ತಾ ಹರಟೆ ಕಟ್ಟೆಗೆ ಹೇಳಿದ ಕಥೆಗೆ ಕನ್ನಡದ ಸಾವಿರ ವರ್ಷಗಳ ಇತಿಹಾಸದ ಜೊತೆಗೆ, ಅಮೇರಿಕನ್ನಡಿಗರ ಮೂರು ದಶಕಗಳ ರಂಗು ಸಹ ಸೇರಿಕೊಂಡಿತ್ತು.

ಹರಟೆ ಕಟ್ಟೆಯ ವತಿಯಿಂದ, 'ಡಿ ಸಿ ಯಿಂದ ಬಂದಂತ, ಜಾಲ ತರಂಗ ಜಾಣ ..' ಎಂದು ಸಾಗುವ ಅಣುಕು ಹಾಡನ್ನು ಸ್ನೇಹದಲ್ಲಿ ರಚಿಸಿ, ಹಾಡಿ ಹಿರಿಯ ಸ್ನೇಹಿತನನ್ನು ಸ್ವಾಗತಿಸಿದವರು ಸವಿತಾ ರವಿಶಂಕರ್‌. ಆಧುನಿಕ ಕನ್ನಡ ಸಾಹಿತ್ಯದಲ್ಲಿಯೂ ಸೃಷ್ಟಿಯಾದ ಮಹಾಕಾವ್ಯಗಳ ಮೂಲಕ ಕನ್ನಡ ಸಾಹಿತ್ಯದ ಸಾಧನೆಗಳ ಬಗ್ಗೆ ಗಮನ ಸೆಳೆದ ಜೊತೆಯಲ್ಲಿಯೇ, ಪ್ರಶಸ್ತಿಗಳಿಂದಷ್ಟೇ ಒಂದು ಭಾಷೆಯ ಉಳಿವು ಸಾಧ್ಯವಾಗುವುದಿಲ್ಲ ಎಂಬ ಅಂಶದತ್ತ ನಟರಾಜ್‌ ಗಮನ ಸೆಳೆಯುವಲ್ಲಿ ವ್ಯಕ್ತವಾದದ್ದು, ಕನ್ನಡದಲ್ಲಿ ಬರೆಯುವ ಎಲ್ಲ ಮನಸ್ಸುಗಳ ಆತಂಕ ನಿರಾಶೆ. ಮೂರು ದಶಕಗಳ ಕಾಲದಲ್ಲಿ, 'ಸುದ್ದಿ ಸಾರಂಗಿ, ಬೆಳ್ಳಿ ಬುಗ್ಗೆ, ಅಮೇರಿಕನ್ನಡ' ಹೀಗೆ ಅಮೇರಿಕದಲ್ಲಿ ನಡೆದ ಕನ್ನಡ ಪತ್ರಿಕೆಯ ಪ್ರಕಟಣೆಗಳ ಪ್ರಯತ್ನ ವನ್ನು ನೆನಪಿಸಿಕೊಂಡದ್ದು ಅರ್ಥಪೂರ್ಣವಾಗಿತ್ತು. ಇಂದಿನ ಹೈಟೆಕ್‌ ಯುಗದಲ್ಲಿ ಕಂಪ್ಯೂಟರಿನ ಮುಂದೆ ನಿರಾಳವಾಗಿ ಟೈಪಿಸುತ್ತ ಹೋಗುವುದೆಲ್ಲಿ, ತಮ್ಮದೇ ಕೈ ಬರಹದಲ್ಲಿ ಕನ್ನಡದ ಸುದ್ದಿ ಸಾರಗಳನ್ನು ಬರೆದು, ಝೆರಾಕ್ಸ್‌ ಪ್ರತಿಗಳ ಮೂಲಕ ಪ್ರಸರಣ ಮಾಡುತಿದ್ದ 'ಸುದ್ದಿ ಸಾರಂಗಿ' ಯ ಪ್ರಯತ್ನವೆಲ್ಲಿ? ಹಾಗೆಯೇ ಮುಂದುವರಿದು, ಡಾ. ಕ. ರಂಗಾಚಾರ್ಯರ, ತಂತ್ರಾಂಶದ ಮೂಲಕ 'ಬೆಳ್ಳಿ ಬುಗ್ಗೆ' ಪ್ರಕಟಿಸಿದ ತಮ್ಮ ಪ್ರಯತ್ನವನ್ನೂ ಸಹ ನೆನಪಿಸಿಕೊಂಡ ನಟರಾಜ್‌ ಮಾತುಗಳು ಹರಟೆ ಮಲ್ಲರ ನಡುವೆ ವಿಷಾದ ಮತ್ತು ಹೆಮ್ಮೆಯ ಭಾವ ಮೂಡಿಸಿದ್ದು ನಿಜ. ಒಂದು ಭಾಷೆ ಮತ್ತು ಸಂಸ್ಕೃತಿಯ ಉಳಿವಿಗೆ ಕಾರಣವಾಗುವ ಅಂಶಗಳ ಸಂಕೀರ್ಣತೆಯನ್ನು ತೋರಿಸಿಕೊಡುವಲ್ಲಿ ಅಮೇರಿಕನ್ನಡಿಗರ ಇಂತಹ ಪ್ರಯತ್ನಗಳು ಸಫಲವಾಗುವುದು ಖಂಡಿತ.

ಮಾತು ಕನ್ನಡ ಸಾಹಿತ್ಯ, ಆಧುನಿಕ ಸಾಹಿತ್ಯ, ಅಮೇರಿಕನ್ನಡಿಗರ ಸಾಹಿತ್ಯದಿಂದ ಹರಿದು ಬರುವಷ್ಟರಲ್ಲಿ, ನಟರಾಜ್‌ ತಮ್ಮದೇ ಪುಸ್ತಕಗಳಿಂದ ಒಂದೆರಡು ಕವನಗಳನ್ನು ಓದಿ, ವರ್ತಮಾನದಲ್ಲಿ ಅರ್ಥವತ್ತಾಗುವ 'ಗಂಡ - ಭಂಡ', 'ತ್ರಿವೇಣಿ ಮೂರು ಜಡೆಗಳ ಸಿಕ್ಕು', 'ಜಾಗೋಣ ಬನ್ನಿ', 'ನಾನೂ ಅಮೇರಿಕನ್‌ ಆಗಿ ಬಿಟ್ಟೆ' ಕವನಗಳನ್ನು ಓದಿ ನೆರೆದವರ ಭಾವಕ್ಕೆ ಹತ್ತಿರವಾಗಿದ್ದರು. ಮೂರು ದಶಕಗಳ ನಂತರ ಬಂದ ಗಂಡಂದಿರಿನ್ನೂ ಭಂಡರೇ ಆಗಿರುವುದು ನೋಡಿ, ಹರಟೆ ಮಲ್ಲೆಯರ ಜೊತೆ ಸೇರಿ, ಶ್ರೀಮತಿ ನಟರಾಜ್‌ ನಕ್ಕಿದ್ದು ಅರ್ಥಪೂರ್ಣವಾಗಿತ್ತು.

ಅಮೇರಿಕನ್‌ ಪ್ರಜೆಯಾಗುವಲ್ಲಿನ ತಮ್ಮ ಮಾನಸಿಕ ತೊಳಲಾಟದಿಂದ ಸೇರಿದವರ ಅಂತಃಕರಣವನ್ನು ಎಚ್ಚರಿಸಿದ ನಟರಾಜರ ವಿಚಾರಕ್ಕೆ ಬಂದ ಪ್ರತಿಕ್ರಿಯೆ ಮತ್ತು ಸಹಾನುಭೂತಿಗಳಲ್ಲಿದ್ದ ಭಾವ ಮತ್ತು ವಿಚಾರದ ಆಳ ಈ ಲೇಖನಕ್ಕೆ ಹೊರತಾಗಿ ನಿಲ್ಲುವಷ್ಟಿವೆ. ಈ ಮಧ್ಯೆ ತಮ್ಮ ಸ್ನೇಹಿತೆ ಶಶಿಕಲ ಅವರ 'ಇಬ್ಬನಿ' ಕವನ ಹಾಗೂ ಲಕ್ಷ್ಮೀನಾರಾಯಣ ಭಟ್ಟರ ಕವನವೊಂದರ ಇಂಗ್ಲೀಷ್‌ ಅನುವಾದವನ್ನು ಸಹ ಹರಟೆ ಕಟ್ಟೆಗೆ ಓದಿದ ನಟರಾಜ್‌ ತಮ್ಮ ಸಾಹಿತ್ಯ ಕೃಷಿಯ ಇನ್ನೊಂದು ಮುಖವನ್ನು ಸಹ ತೋರಿಸಿಕೊಟ್ಟರು. ಭಟ್ಟರ ಕವನದ ಇಂಗ್ಲೀಷ್‌ ಅನುವಾದ Rumblings ಖಂಡಿತವಾಗಿಯೂ ಗಮನ ಸೆಳೆಯುವ ಯತ್ನ. ಭಟ್ಟರ ಕವನದಲ್ಲಿನ ಭಾರತೀಯ ಪರಿಸರ ಮತ್ತು ಬದುಕಿನ ಆಳ, ಅದರಲ್ಲಿನ ಕಾವ್ಯ ಪ್ರತಿಮೆಗಳು ಇಂಗ್ಲೀಷ್‌ ಅನುವಾದದಲ್ಲಿ ಸಮರ್ಥವಾಗಿ ಮೂಡಿ ಬಂದಿದೆಯೆನ್ನಿಸಿತು. ಬರೇ ಭಾಷಾನುವಾದದ ಬದಲು ಭಾವಾನುವಾದ (Transcreation vs. translation) ಮಾಡುವಲ್ಲಿ ನಟರಾಜ್‌ ಸಫಲವಾಗಿದ್ದಾರೆಯೆನಿಸಿತು. ನಟರಾಜರ ಕನ್ನಡ ಅನುವಾದ, ಅಸಲು ಭಾವಾನುವಾದ ಎಂಬುದರ ಬಗ್ಗೆ ಎರಡು ಮಾತಿಲ್ಲ. ಅದಕ್ಕೆ ಸಾಕ್ಷಿಯಾಗಿ ಅವರ 'ತನಗೆ ತಾನೇ ಹೇಳಿಕೊಂಡದ್ದು' ಅಂತಹ ಕವನಗಳಿವೆ.

ತಮ್ಮ ವಾರಾಂತ್ಯದ ತರಾತುರಿಯ ನಡುವೆಯೂ ಹರಟೆ ಕಟ್ಟೆಗೆ ಭೇಟಿ ಕೊಡುವೆನೆಂದು ವರವಿತ್ತ ನಟರಾಜರ ಪಾಡು ಮಾತ್ರ ಈಗ ಭಸ್ಮಾಸುರನಿಗೆ ವರಕೊಡುವೆನೆಂದ ಶಿವನ ಪಾಡಾಗಿತ್ತು. ಅವರ ಸುತ್ತ ಸೇರಿದ್ದ ತಲೆಹರಟೆಗಳಿಗೆ ಇನ್ನೂ ಮಧ್ಯಾಹ್ನದ 1 ಘಂಟೆಯಷ್ಟೇ ಆಗಿ ಹರಟೆ ಕೊಚ್ಚುವ ಗುಂಗಿದ್ದರೆ, ನಟರಾಜ್‌ ಸಂಸಾರಕ್ಕೆ, ಐದಾರು ಗಂಟೆಗಳ ಪ್ರಯಾಣ ಮಾಡಿ ಮನೆ ಸೇರಿಕೊಳ್ಳುವ ಯೋಚನೆಯಿತ್ತು. ಹಾಗೆಂದೋ ಏನೋ ಹರಟೆ ಕಟ್ಟೆಯ ಸಂಹಿತೆಗನುಗುಣವಾಗಿ ಇನ್ನೊಂದು ತಲೆಹರಟೆ ಕವನ ಓದಿಬಿಡೋಣವೆಂದು, 'ಸದ್ದಾಮನ ನಿಶ್ಶಸ್ತ್ರೀಕರಣ' ಕವನ ಓದಿದರು. ಈ ನಟರಾಜನ ವಾರಾಂತ್ಯದ ಬವಣೆಯ ಅರಿವಿದ್ದ, ರವಿಶಂಕರ್‌ ಅವರನ್ನು ಊಟಕ್ಕೆ ಆಹ್ವಾನಿಸುವ ಮೂಲಕ ಅವರಿಗೆ, ಸೇರಿದ್ದ ಹಲವಾರು ಶುದ್ಧ ತರಲೆಗಳಿಂದ ಬಿಡುವು ಮಾಡಿಕೊಟ್ಟರು. 'ಮಿಸ್‌ ಟೀನ್‌ ಅಮೇರಿಕನ್ನಡಿತಿ' ಸಿಂಧು ರವಿಶಂಕರ್‌ ಸ್ವಯಂ ತಾನೇ ತಯಾರು ಮಾಡಿದ, ಏಳು ಜ್ಞಾನಪೀಠಿಗಳ ಭಾವಚಿತ್ರವುಳ್ಳ ಟೀ-ಶರ್ಟ್‌ ಅರ್ಪಿಸುವುದರ ಮೂಲಕ ಹರಟೆ ಕಟ್ಟೆಯ ಪರವಾಗಿ ಕೃತಜ್ನತೆಗಳನ್ನರ್ಪಿಸಿದರು.

ಅದನ್ನು ಕಂಡ ತರಲೆಯಾಬ್ಬರು, 'ಪಾಪ ಅಷ್ಟು ದೂರದಿಂದ ಬಂದು ಮಾತನಾಡಿದವರಿಗೆ ಊಟದ ಜೊತೆ ಬೇರೆ ದಕ್ಷಿಣೆಯೇನು ಇಲ್ಲವೋ..' ಎಂದು ಚಟಾಕಿ ಹೊಡೆದರೆ, ಅವರ ಕೈಯಲ್ಲಿದ್ದ ನಟರಾಜರ 'ಮಧು ಚಂದ್ರ ಸಿರಿಕೇಂದ್ರ' ಕವನ ಸಂಕಲನ ಪುಕ್ಕಟ್ಟೆಯಲ್ಲವೆಂದು ನೆನಪಿಸಿ ಹತ್ತು ಡಾಲರು ವಸೂಲಿ ಮಾಡಿಯೇ ಬಿಟ್ಟೆ. ಅವರ ಮುಖ ಹುಳ್ಳಗಾಗಿದ್ದನ್ನು ಕಂಡು, 'ಬೇಕಾದರೆ ಇನ್ನೂ ದೊಡ್ಡ ಡಾಲರ್‌ ಮೊತ್ತದ ಚೆಕ್‌ ಬರೆಯಿರಿ..' ಎಂದು ಹೇಳಬೇಕೆಂದಿದ್ದವನು ಸುಮ್ಮನಾಗಿಬಿಟ್ಟೆ. ಈ ಮಧ್ಯೆ ಮಾಮೂಲಿನಂತೆ ಸೇರಿದ ತರಲೆಯಾಬ್ಬರು ಗುಸು ಪಿಸ ಮಾತನಾಡಿಕೊಂಡು, 'ಅವರಿಗೆ ಸುಮಾರು.. ಎಷ್ಟು ವಯಸ್ಸು?, ಮಗಳನ್ನು (ರೂಪದರ್ಶಿಯಂತಿರುವ ಹಿರಿಯ ಮಗಳು ಮಧುಲಿಕಾ ನಟರಾಜ್‌ ತಂದೆತಾಯಿಯರ ಜೊತೆ ಹರಟೆ ಕಟ್ಟೆಗೆ ಭೇಟಿ ನೀಡಿ ಕಟ್ಟೆಗೊಂದು ಶೋಭೆ ತಂದಿದ್ದರೆಂದು ಬೇರೆಯೇ ಹೇಳಬೇಕಿಲ್ಲವಷ್ಟೆ) ನೋಡಿದರೆ, ಇವರಿಗೆ ಅರವತ್ತಾದರೂ ಇರಬೇಕು...' ಅಂತ ಗುಸ ಪಿಸ ಮಾಡಿ ನಾವಿನ್ನೂ ಹರಟೆಕಟ್ಟೆಯಲ್ಲಿಯೇ ಇರುವುದರ ನೆನಪು ಮಾಡಿಕೊಟ್ಟರು. ನಾನು ಮಾತ್ರ, ಪೆಜತ್ತಾಯರು, ನಟರಾಜರ ಬಗ್ಗೆ ಬರೆದ ಕವನದ ಗುಟ್ಟು ರಟ್ಟು ಮಾಡದೆ, ಗೀತಾ ನಟರಾಜ್‌, 'ಹದಿಹರೆಯದ ತಾಯಿಯಾಗಿದ್ದರೆ..' ಅನ್ನುವ ರೇ-ಸಾಮ್ರಾಜ್ಯಕ್ಕೆ ಒಂದು ಬಾಗಿಲು ತೆರೆದು ಬಿಟ್ಟೆ. ಹಾಗೆಯೇ ಇನ್ನು ಮುಂದೆ ನಮ್ಮ ಮಕ್ಕಳು ನಮ್ಮನ್ನು 'ಅಪ್ಪ/ಅಮ್ಮ' ಅನ್ನುವ ಬದಲು 'ಅಣ್ಣ/ಅಕ್ಕ' ಎಂದು ಕರೆಯುವಲ್ಲಿನ ಲಾಭವನ್ನು ಮನಗಂಡೆ. ಹಾಗೆಯೇ, ನಟರಾಜರ ತಲೆಯಲ್ಲಿನ್ನೂ ಉಳಿದಿರುವ ಕೂದಲುಗಳ ಬಗ್ಗೆ ಮಾತನಾಡಿಕೊಂಡು, ಪ್ರಶ್ನೆ ಕೇಳಿದವರ ತಲೆಯಲ್ಲಿದ್ದ ಕೂದಲುಗಳ ಲೆಕ್ಕ ಮತ್ತು ಅವರ ವಯಸ್ಸಿನ ಲೆಕ್ಕಕ್ಕನುಗುಣವಾಗಿ, ನಟರಾಜರಿಗಿನ್ನೂ 40 ರಿಂದ 50 ರ ವಯಸ್ಸಿರಬೇಕು ಎಂದು ಸೂಚಿಸಿದೆ. ನೀವೂ ಅಷ್ಟೆ, ನಿಮ್ಮ ಮಕ್ಕಳು ದೊಡ್ಡವರಾಗುತ್ತಿದ್ದಂತೆ, ನೀನು ನನಗೆ ಸ್ನೇಹಿತ/ತೆ ಯಂತೆ ಎನ್ನುವ ಜೊತೆಗೆ, ನಿಮ್ಮನ್ನು 'ಅಣ್ಣ ಅಥವಾ ಅಕ್ಕ' ಎಂದು ಕರೆಯಲು ಸೂಚಿಸುವಲ್ಲಿ ಕೆಲ ಲಾಭಗಳುಂಟು; ಎನ್ನುವಲ್ಲಿ ಹರಟೆ ಕಟ್ಟೆಯ ಮೇಲೆ ಮರಳಿ 'ಲ್ಯಾಂಡಿಂಗ್‌' ಮಾಡುತ್ತಾ ವಿಶ್ರಮಿಸಿ ಕೊಳ್ಳುತ್ತೇನೆ.

ಹರಟೆ ಕಟ್ಟೆಯ ತರಲೆ ಹಾಗೂ ತರಳೆಯರ ವತಿಯಿಂದ ನಮ್ಮ ನಡುವೆ ತಮ್ಮ ಸಮಯವನ್ನು ಕಳೆದು ತಮ್ಮ ಬದುಕಿನ ತುಣುಕುಗಳನ್ನು ಹಂಚಿಕೊಂಡ ಡಾ. ಮೈ ಶ್ರೀ. ನಟರಾಜ್‌ ಮತ್ತವರ ಸಂಸಾರಕ್ಕೆ ವಂದನೆಗಳೊಂದಿಗೆ.

English summary
North Carolina Kannadigas arrange informal Chat with visiting Kannada dignataries on a periodical basis. Last month Dr. Nataraj, thatskannada columnist chat with carry kannadigas in Harate Katte. A repot by Lakshminarayana Ganapathi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X