• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಿಂಹದಂತಹ ಸಿಂಹವನ್ನೇ ಲೆಕ್ಕಿಸದ ಕಾಡು ಜನಾಂಗ ‘ಮಸಾಯಿ’

By Staff
|
  • ಪ್ರಶಾಂತ್‌ ಬೀಚಿ, ತಾನ್ಜಾನಿಯ

prashanth@bol.co.tz

Masai ladyಒಂದು ಸಂಸ್ಕೃತಿ, ಒಂದು ಜನಾಂಗ, ಒಂದು ನಾಡು, ಒಂದು ನುಡಿ, ಒಂದು ವೈಚಾರಿಕತೆ, ಒಂದು ವೈಶಿಷ್ಟ್ಯತೆ, ಒಂದು ಆಚಾರ, ಒಂದು ವಿಚಾರ, ಕೆಲವು ಸಾಂಪ್ರದಾಯ ಇವುಗಳನ್ನು ಕಾಪಾಡಿಕೊಳ್ಳಲು ಅದರ ಜನರು ಪ್ರಯತ್ನಿಸುತ್ತಾರೆ. ಕೆಲವು ಸಾಂಪ್ರದಾಯಗಳು ಸಾವಿರಾರು ವರುಷಗಳಾದರೂ ಬದಲಾಗುವುದಿಲ್ಲ. ಬದಲಾವಣೆಗೆ ಅವರು ಆಶಿಸುವುದಿಲ್ಲ. ಅವರ ಸಾಂಪ್ರದಾಯವನ್ನು ಮುಂದುವರೆಸುವುದು ಅವರಿಗೆ ಹೆಮ್ಮೆಯ ವಿಷಯ. ಒಂದು ವಿಶಿಷ್ಟ ರೀತಿಯ ಸಾಂಪ್ರದಾಯವನ್ನು ಅವರದೇ ರೀತಿಯಲ್ಲಿ ಮುಂದುವರೆಸುತ್ತಿರುವ ಕಾಡು ಜನಾಂಗ ಕಾಣಬೇಕಾದರೆ ಆಫ್ರಿಕಾ ಖಂಡಕ್ಕೆ ಬರಬೇಕು, ಇಲ್ಲ ದಕ್ಷಿಣ ಅಮೇರಿಕಾದ ಕಾಡುಗಳಲ್ಲಿ ಹುಡುಕಬೇಕು. ಕಾಡು ಜನಾಂಗದ ಜನರು ಈಗ ಊರುಗಳಲ್ಲಿ ವಾಸಿಸುತ್ತಿದ್ದರೂ ಅವರ ಸಾಂಪ್ರದಾಯಗಳು, ಆಚಾರ-ವಿಚಾರಗಳು ಹಳೆಯ ರೀತಿಯವೆ ಆಗಿರುತ್ತವೆ. ಕಾಡುಜನಾಂಗಗಳು ನನಗೆ ಬಹಳ ಆಕರ್ಷಿಸಿದ್ದು ಹಾಗು ಅವರನ್ನು ಹತ್ತಿರದಿಂದ ತಿಳಿಯುವ ಸೌಭಾಗ್ಯ ಸಿಕ್ಕಿದ್ದು ಪೂರ್ವ ಆಫ್ರಿಕಾದ ತಾನ್ಜಾನಿಯಾಗೆ ಬಂದ ಮೇಲೆ. ಬಹಳ ದಿನದಿಂದ ಹಲವು ರೀತಿಯ ಕಾಡು ಜನರನ್ನು ಭೇಟಿ ಮಾಡಿ, ಅವರ ವಿಚಾರ ತಿಳಿದು ಅವರ ಬಗ್ಗೆ ಬರೆಯುತ್ತಿದ್ದೇನೆ. ಒಂದು ಕಾಡು ಜನಾಂಗದ, ವೈಶಿಷ್ಟ್ಯ ಸಾಂಪ್ರದಾಯದ, ವಿಶೇಷ ಸಂಸ್ಕೃತಿಯ ಸುತ್ತ ಸುತ್ತಿ ಬರೋಣ.

Masai warriorಪೂರ್ವ ಆಫ್ರಿಕಾದಲ್ಲಿ ಇರುವಷ್ಟು ಕಾಡುಗಳು, ಬೆಟ್ಟ ಗುಡ್ಡಗಳು, ಪರ್ವತಗಳು, ಪ್ರಾಣಿಗಳು ಹಾಗು ವಿವಿಧ ಕಾಡು ಜನರು, ಪ್ರಪಂಚದ ಬೇರೆಲ್ಲೂ ಸಿಗರು. ಪರಿಸರವನ್ನು ಪಕ್ಕಕ್ಕಿಟ್ಟು ಬರೀ ಕಾಡು ಜನರನ್ನು ತೆಗೆದುಕೊಂಡರೆ ಸುಮಾರು ನೂರಕ್ಕೂ ಹೆಚ್ಚು ವಿವಿಧ ಕಾಡು ಜನಾಂಗ ಇಲ್ಲಿ ಸಿಗುತ್ತದೆ, ಅದರಲ್ಲಿ ಸಿಂಹ ಪಾಲು ಹೊಂದಿರುವ ಜನಾಂಗದ ಹೆಸರು ‘ಮಸಾಯಿ’ . ಕೆಂಪು, ಕಪ್ಪು, ಹಳದಿ ಮಿಶ್ರಿತ ಚೌಕವಿರುವ ಬಟ್ಟೆಯನ್ನು ದೇಹದ ಮೇಲ್ಬಾಗಕ್ಕೆ ಹೊದ್ದು, ಕಚ್ಚೆಯಂತಹ ಉಡುಪನ್ನು ಕೆಳಗೆ ಕಟ್ಟಿ, ಸೊಂಟಕ್ಕೆ ಹರಿತವಾದ ಎರಡು ಅಡಿಯ ಚಾಕುವನ್ನು ಸಿಗಿಸಿ, ಕಚ್ಚೆಯನ್ನು ಹಿಡಿಯುವಂತೆ ಅಗಲವಾದ ಬೆಲ್ಟನ್ನು ಕಟ್ಟಿ, ಕೈಯಲ್ಲಿ ದಪ್ಪ ತಲೆಇರುವ ಒಂದು ಕೋಲನ್ನು ಹಿಡಿದು ಊರುಗಳಲ್ಲಿ ಓಡಾಡುತ್ತಿದ್ದರೆ, ಅವರನ್ನು ತಡೆದು ಹೆದರಿಸುವ ಹರ ಸಾಹಸಕ್ಕೆ ಯಾರೂ ಕೈ ಹಾಕುವುದಿಲ್ಲ. ಹಾಗೆಂದು ಸುಮ್ಮನಿದ್ದವರ ಮೇಲೆ ಅವರ್ಯಾವತ್ತೂ ಮೇಲೆ ಬೀಳುವುದಿಲ್ಲ. ಕಾಡಿನಲಿದ್ದಾಗಲೂ ಅವರ ವಸ್ತ್ರ ವಿನ್ಯಾಸದಲ್ಲಿ ಬದಲಾವಣೆ ಇಲ್ಲದಿದ್ದರೂ ಅವರ ಕೈಯಲ್ಲಿ ಒಂದು ಬರ್ಜಿ ಹಾಗು ಬಿಲ್ಲು-ಬಾಣ ಇರುತ್ತದೆ. ಮಸಾಯಿ ಹೆಂಗಸರಿಗೆ ಸೌಂದರ್ಯದ ಬಗ್ಗೆ ಕಾಳಜಿ ಜಾಸ್ತಿ. ಅವರ ವೇಷ ಭೂಷಣಗಳನ್ನೂ ನೋಡಿಯೆ ತೀರಬೇಕು. ಕತ್ತಿಗೆ ಒಂದು, ಕೈಗೆ ಒಂದು, ಸೊಂಟಕ್ಕೆ ಒಂದು, ಎಲ್ಲೆಲ್ಲಿಗೆ ಸಾದ್ಯವೊ ಅಲ್ಲಿಗೆಲ್ಲಾ ಬಳೆಗಳ ತರಹದ ವಸ್ತುವನ್ನು ಸಿಕ್ಕಿಸಿಕೊಂಡಿರುತ್ತಾರೆ. ಗಂಡಸರೂ ಹಾಗು ಹೆಂಗಸರೂ ಇಬ್ಬರು ದೊಡ್ಡದಾಗಿ ಚುಚ್ಚಿಸಿಕೊಂಡಿರುತ್ತಾರೆ. ಕಾಡಿನಲ್ಲಿ ಇವರು ನೆಡೆದು ಹೋಗುತ್ತಿದ್ದರೆ ಎದುರಿಗೆ ಬರುವ ಸಿಂಹ ಕೂಡ ಪಕ್ಕಕ್ಕೆ ಸರಿಯುತ್ತದೆ. ಅದಕ್ಕೆ ಬಹಳ ನಿದರ್ಶನಗಳು ಇವೆ. ಮಸಾಯಿಗಳ ಬಗ್ಗೆ ಕೆಲವು ವಿಷಯಗಳು ಉತ್ಪ್ರೇಕ್ಷೆ ಅನ್ನಿಸಿದರೂ ಅದನ್ನು ಕಣ್ಣಾರೆ ನೋಡಬಹುದಾಗಿದೆ. ಮಸಾಯಿಗಳು ತಾನ್ಜಾನಿಯ, ಕೀನ್ಯ ಮತ್ತು ಉಗಾಂಡಗಳಲ್ಲಿ ಕಾಣಿಸಿದರೂ ಅವರ ಜನಸಂಖ್ಯೆ ತಾನ್ಜಾನಿಯಾ-ಕೀನ್ಯಾಕ್ಕೆ ಸೇರಿಕೊಂಡಿರುವ ಕಾಡುಗಳಲ್ಲಿ ಹಾಗು ಅದರ ಹತ್ತಿರ ಇರುವ ಊರುಗಳಲ್ಲಿ ಜಾಸ್ತಿ. ಕಾಡಿನಲ್ಲೆ ಇರುವ ಮಸಾಯಿಗಳು ಜಾಸ್ತಿ ಇದ್ದರೂ ಊರುಗಳಲ್ಲಿ ಇರುವ ಮಸಾಯಿಗಳೂ ಇದ್ದಾರೆ. ಊರುಗಳಲ್ಲಿ ವಾಸಿಸುವರು ಕಾಡಿನವರಿಗಿಂತ ನಾಗರೀಕರಾಗಿ ವರ್ತಿಸುತ್ತಾರಾದರು ಉಡುಗೆ-ತೊಡುಗೆಗಳಲ್ಲಿ ಇಬ್ಬರೂ ಒಂದೆ. ಅವರ ಸಾಂಪ್ರದಾಯವನ್ನು ಅವರು ಎಂದಿಗೂ ತೊರೆಯುವುದಿಲ್ಲ. ಮಸಾಯಿಗಳಲ್ಲಿ ಗಂಡು ಸಂತತಿ ಕಡಿಮೆ. ಮಸಾಯಿಗಳ ಮುಖ್ಯ ಕೆಲಸ ಜಾನುವಾರುಗಳನ್ನು ಸಾಕುವುದು. ಹಸು, ಕುರಿ, ಕೋಳಿ ಇವರು ಸಾಕುವ ಪ್ರಾಣಿಗಳು. ಒಬ್ಬೊಬ್ಬ ಮಸಾಯಿ ಕೂಡ ಕಡಿಮೆ ಅಂದರೂ ಹತ್ತು ಹಸು, ಇಪ್ಪತೈದು ಕುರಿ, ಐವತ್ತು ಕೋಳಿಗಳನ್ನು ಸಾಕುತ್ತಿರುತ್ತಾನೆ. ಹಾಲನ್ನು ಮಾರಿ ಜೀವನ ಸಾಗಿಸುತ್ತಾನೆ. ಈ ಪ್ರಾಣಿಗಳನ್ನು ಸಾಕಲು ಊರ ಹೊರಗೆ ವಾಸಿಸುತ್ತಾನೆ. ತನಗೆ ಎಂದು ಮನೆ ಕಟ್ಟಿಕೊಂಡು ಅದರ ಪಕ್ಕದಲ್ಲೆ ಪ್ರಾಣಿಗಳನ್ನು ಬೇಲಿ ಹಾಕಿ ರಕ್ಷಿಸುತ್ತಾನೆ. ಮನೆ ಕಟ್ಟುವುದು, ಬೇಲಿ ಹಾಕುವುದು, ಹಾಲು ಕರೆಯುವುದು ಹೆಂಗಸರ ಕೆಲಸವಾದರೆ, ಹಸು, ಕುರಿ ಮೇಯಿಸುವುದು ಮಕ್ಕಳ ಕೆಲಸ. ಹಾಲು ಮಾರುವುದು, ಬೇಟೆಯಾಡುವುದು ಮನೆಯ ಓಡೆಯನ ಕೆಲಸ.

Masai girlಒಬ್ಬ ಮಸಾಯಿಗೆ ಕಡಿಮೆ ಎಂದರೂ ನಾಲ್ಕು ಜನ ಹೆಂಡತಿಯರು ಇರುತ್ತಾರೆ. ಇವನು ವಾಸಿಸುವ ಜಾಗಕ್ಕೆ ಬೋಮ ಎಂದು ಕರೆಯುತ್ತಾರೆ. ಒಂದು ವೃತ್ತಾಕಾರದ ಗುಡಿಸಲನ್ನು ಕಟ್ಟಿ ಅದರ ಸುತ್ತಾ ನಾಲ್ಕೈದು ಸಣ್ಣ ಸಣ್ಣ ವೃತ್ತಾಕಾರದ ಗುಡಿಸಲುಗಳು. ಮಧ್ಯೆ ಕಟ್ಟಿದ ಗುಡಿಸಲಲ್ಲಿ ಮಾಲಿಕ ಇದ್ದರೆ, ಸುತ್ತಲೂ ಇರುವ ಸಣ್ಣ ಸಣ್ಣ ಗುಡಿಸಲಲ್ಲಿ ಅವನ ಹೆಂಡತಿಯರು ಇರುತ್ತಾರೆ. ಅದರ ಸಮೂಹವನ್ನು ಬೋಮ ಎಂದು ಕರೆಯುತ್ತಾರೆ. ಮನೆ ಕಟ್ಟುವುದು ಅವರ ಸಾಂಪ್ರದಾಯಿಕ ಕಲೆ. ಒಂದು ಮನೆ ಕಟ್ಟಲು ಅವರಿಗೆ ಏಳು ತಿಂಗಳು ಹಿಡಿಯುತ್ತದೆ. ಮನೆ ಎಂದರೆ ಗುಡಿಸಲು, ಅದು ಒಂದು ವೃತ್ತಾಕಾರವಾಗಿ ಇರುವ ಜಾಗ. ಒಳಗೆ ಬೇರೆ ರೂಂ ಇರುವುದಿಲ್ಲ. ಸಗಣಿ, ಹುಲ್ಲು, ಒಣಗಿದ ಎಲೆಗಳ ಪುಡಿಗಳನ್ನು ಗಂಜಲದಿಂದ ಕಲಸಿ, ವೃತ್ತಾಕಾರವಾಗಿ ನಿಲ್ಲಿಸಿದ ಮರದ ರಂಬೆಗಳಿಗೆ ಬಳಿಯುತ್ತಾರೆ. ಮೇಲ್ಬಾಗಕ್ಕೆ ಮತ್ತೆ ಮರದ ರಂಬೆಗಳನ್ನು ಗೋಪುರದಾಕಾರದಲ್ಲಿ ಇಟ್ಟು ಅದಕ್ಕೂ ಸಗಣಿ ಬಳಿಯುತ್ತಾರೆ. ಸಗಣಿಯನ್ನು, ಹುಲ್ಲು ಮತ್ತು ಒಣಗಿದ ಎಲೆಯ ಜೊತೆಗೆ ಗಂಜಲದಿಂದ ಕಲಿಸುವುದರಿಂದ ವಾಸನೆ ಬರುವುದಿಲ್ಲ. ಈ ತರಹದ ಮನೆಗಳಿಗೆ ಒಂದೆ ಬಾಗಿಲು, ಮೇಲ್ಚಾವಣಿಯಲ್ಲಿ ಒಂದು ಸಣ್ಣದಾದ ಕಿಂಡಿ, ಮನೆಯ ಒಳಗಿನ ಹೊಗೆ ಹೋಗಲು ಅನುಕೂಲವಾಗಲಿ ಎಂದು. ಕೆಲವು ಮನೆಗಳಲ್ಲಿ ಬಗ್ಗಿ ಹೋಗಿ ಬಗ್ಗಿಯೆ ನಿಲ್ಲ ಬೇಕು, ಏಕೆಂದರೆ ಅವರು ಆ ಮನೆಗಳಿಗೆ ಕೇವಲ ಮಲಗಲು ಮಾತ್ರ ಹೋಗುತ್ತಾರೆ. ಈ ರೀತಿ, ಮನೆ ಕಟ್ಟುವ ಕೆಲಸ ಹೆಂಗಸರದ್ದು. ಇದೆ ರೀತಿ ಜಾನುವಾರುಗಳು ಮಲಗುವ ಜಾಗಕ್ಕೆ ಬೇಲಿ ಕಟ್ಟುವುದೂ ಹೆಂಗಸರ ಕೆಲಸ. ನಾವುಗಳು ಹಾಕುವ ತಂತಿ ಬೇಲಿಗಿಂತ ಗಟ್ಟಿ ಹಾಗು ಸುರಕ್ಷಿತ ಅವರು ಕಟ್ಟುವ ಬೇಲಿ. ನಮ್ಮಲ್ಲಿ ಸಿಗುವ ಜಾಲಿ ಮುಳ್ಳಿಗಿಂತ ಉದ್ದವಾಗಿರುವ ಮುಳ್ಳಿನ ಬೇಲಿಯನ್ನು ತಂದು ಜೋಡಿಸಿ ಪ್ರಾಣಿಗಳನ್ನು ರಕ್ಷಿಸುತ್ತಾರೆ. ಬೇಲಿಯ ಮುಳ್ಳುಗಳು ಸುಮಾರು ನಾಲ್ಕು ಇಂಚಿನಿಂದ ಆರು ಇಂಚಿನ ವರೆಗೆ ಉದ್ದವಾಗಿರುತ್ತವೆ. ಈ ತರಹದ ಬೇಲಿಯ ಹತ್ತಿರಕ್ಕೆ ಬರಲು ತೋಳ, ಸಿಂಹ ಹಾಗು ಆನೆಗಳು ಹೆದರುತ್ತವೆ. ಹೀಗೆ ಕಲಾತ್ಮಕವಾಗಿ ಮನೆ ಕಟ್ಟುವುದು ಹಾಗು ಪ್ರಾಣಿಗಳ ರಕ್ಷಣೆಗಾಗಿ ಬೇಲಿ ಕಟ್ಟುವುದು ಮನೆಯ ಹೆಂಗಸರ ಕೆಲಸವಗಿರುತ್ತದೆ.

Masai wedding girlಮಸಾಯಿಗಳಾಗಲು ಕೆಲವು ನಿಯಮಗಳು ಇವೆ. ಹುಟ್ಟಿ, ಬೆಳೆದು ಓಡಾಡುವ ತನಕ ತಾಯಿಯ ಆಸರೆ. ಹೆಣ್ಣಾದರೆ ಅವಳು ತಾಯಿಯ ಹತ್ತಿರವೆ ಉಳಿಯುತ್ತಾಳೆ, ಅವಳಿಗೆ ಬುದ್ದಿ ಬಂದ ಮೇಲೆ ಅವಳಿಷ್ಟ. ಎಲ್ಲಿ ಬೇಕಾದರೂ ಹೋಗಬಹುದು, ಯಾವುದೇ ಮಸಾಯಿ ಜೊತೆಗೆ ಬೇಕಾದರೂ ಮದುವೆ ಆಗಬಹುದು. ಗಂಡಾದರೆ, ಅವನಿಗೆ ನಾಲ್ಕೈದು ವರ್ಷವಾಗುತ್ತಿದ್ದಂತೆ ಅವನ ಸಹಪಾಟಿಗಳ ಜೊತೆಗೆ ಬೇರೆ ಬೋಮದಲ್ಲಿ ವಾಸಿಸಬೇಕಾಗುತ್ತದೆ. ಅಲ್ಲಿ ಸುಮಾರು ಹತ್ತು ಜನರ ಒಂದು ಗುಂಪು ಮಸಾಯಿಯಾಗಲು ತರಬೇತಿ ನೆಡೆಯುತ್ತದೆ. ಆ ಗುಂಪು, ಕಾಡಿನಲ್ಲಿ ಸಣ್ಣ ಪುಟ್ಟ ಬೇಟೆ ಮಾಡಿ ಅದರ ಮಾಂಸ ತಿಂದು, ಕಾಡಿನಲ್ಲಿರುವ ಗೆಡ್ಡೆ-ಗೆಣಸು ತಿಂದು ಜೀವನ ನೆಡೆಸುತ್ತಾರೆ. ಆ ಹತ್ತು ಜನ ಎಲ್ಲೇ ಹೊದರೂ ಜೊತೆ-ಜೊತೆಗೆ ಹೋಗಬೇಕು. ಅವರಿಗೆ ಹದಿನೈದು ವರ್ಷ ಆಗುವುದರೊಳಗೆ ಅವರು ಒಂದು ಸಿಂಹವನ್ನು ಸಾಯಿಸಿ ಅವರ ಬೋಮಾಗೆ ತಂದು ಅದರ ರಕ್ತವನ್ನು ಮೈಗೆ ಹಚ್ಚಿಸಿಕೊಳ್ಳಬೇಕು. ರಕ್ತವನ್ನು ಮೈಗೆ ಹಚ್ಚುವ ಕೆಲಸವನ್ನು ಅವರಿಗೆ ತರಬೇತಿ ಕೊಟ್ಟ ಗುರು ಮಾಡುತ್ತಾನೆ. ಆಗ ಅವರು ಮಸಾಯಿಗಳಾಗುತ್ತಾರೆ. ಆ ನಂತರ ಅವರು ಮದುವೆ ಆಗಬಹುದು. ಮಸಾಯಿ ತರಹ ಬಟ್ಟೆ ಹಾಕಬಹುದು. ಮಸಾಯಿ ಆಗುವ ತನಕ ಅವರು ಕೇವಲ ಕೆಳಉಡುಪನ್ನು ಮಾತ್ರ ಹಾಕುತ್ತಾರೆ. ಮುಖದಮೇಲೆ ರಂಗೋಲಿಯ ತರಹ ಬಿಳಿಯ ಚುಕ್ಕೆ ಚುಕ್ಕೆಗಳನ್ನು ಹಚ್ಚಿಕೊಂಡಿರುತ್ತಾರೆ. ಹದಿನೈದು ವರ್ಷ ಆಗುವುದರೊಳಗೆ ಅವರು ಸಿಂಹವನ್ನು ಭೇಟೆಯಾಡಲೆ ಬೇಕಾಗಿರುವುದರಿಂದ ಬಹಳ ಬೇಗನೆ ಭೇಟೆಗೆ ಸಿದ್ದವಾಗುತ್ತಾರೆ. ಬಹಳಷ್ಟು ಜನ ಸಿಂಹವನ್ನು ಸಾಯಿಸುವಾಗಲೆ ಸತ್ತು ಹೋಗುತ್ತಾರೆ. ಸಿಂಹವನ್ನು ಸಾಯಿಸಲು ಅವರು ಬಳಸುವುದು ಭರ್ಜಿ ಹಾಗು ಬಿಲ್ಲು-ಬಾಣ. ಕೆಲವರು ತಮ್ಮ ಕೈಲಿದ್ದ ಚಾಕುವಿನಿಂದ ಸಿಂಹವನ್ನು ಸಾಯಿಸುತ್ತಾರೆ. ಕೀನ್ಯದಲ್ಲಿ ಸಿಂಹವನ್ನು ಸಾಯಿಸುವುದು ನಿಷೇದಿಸಿದ್ದರೂ ಮಸಾಯಿಗಳು ತಮ್ಮ ಸಾಂಪ್ರದಾಯವನ್ನು ಬಿಟ್ಟಿಲ್ಲ. ಅವರನ್ನು ತಡೆಯುವ ಧೈರ್ಯ ಅಲ್ಲಿನ ಸರ್ಕಾರಕ್ಕು ಇಲ್ಲ.

ಮಸಾಯಿಗಳು ಓದುವುದಿಲ್ಲ ಎನ್ನುವ ಹಾಗಿಲ್ಲ. ಅವರುಗಳು ಸ್ಕೂಲಿಗೆ ಹೋಗುತ್ತಾರೆ. ಏಷ್ಟೋ ಜನ ಡಿಗ್ರೀ ಕೂಡ ಪಡೆದಿದ್ದಾರೆ, ಆದರೂ ಅವರು ಬದುಕುವುದು ಮಸಾಯಿಗಳಂತೆ. 1970 ರಲ್ಲಿ ಮೊದಲ ಮಸಾಯಿ ಹುಡುಗಿ ಯೂನಿವೆರ್ಸಿಟಿ ಆಫ್‌ ನೈರೊಬಿ ಇಂದ ಪದವಿ ಪಡೆದಳು, ಅವಳ ನಂತರ ನೂರಾರು ಮಸಾಯಿಗಳು ಪದವಿ ಪಡೆದುಕೊಂಡಿದ್ದಾರೆ. ಮಸಾಯಿಗಳಿಗಾಗಿ ಅನೇಕ ಸಂಸ್ಥೆಗಳು ವಿಧ್ಯಾಬ್ಯಾಸ ನೀಡಲು ಬಂದಿವೆ ಆದರೂ ಅವರಲ್ಲಿ ಶಾಲೆಗೆ ಹೋಗುವವರು ಕಡಿಮೆ. ಅಮೇರಿಕ, ಜರ್ಮನಿ, ಸ್ಪೇನ್‌ ಗಳಿಂದ ಅನೇಕನೇಕ ಸ್ವಯಂ ಸೇವಾ ಸಂಘಗಳು ಅವರಿಗಾಗಿ ದುಡಿಯುತ್ತಿವೆ. ಮಸಾಯಿಗಳನ್ನು ಉತ್ತಮ ರೀತಿಯಲ್ಲಿ ಮುಂದುವರೆಸಲು ಅನೇಕ ರೀತಿಯ ಕಾರ್ಯಕ್ರಮಗಳನ್ನು ಈ ಸಂಘಗಳು ಹಮ್ಮಿಕೊಂಡಿವೆ.

ಕಾಡಿನಲ್ಲಿರುವ ಮಸಾಯಿಗಳಿಗೆ ನಾಗರೀಕತೆ ಕಲಿಸಲು ಯಾರಿಂದಲೂ ಆಗುತ್ತಿಲ್ಲ. ಯಾವುದೇ ಸ್ವಯಂ ಸಂಘವು ಕಾಡಿಗೆ ಹೋಗುವ ಧೈರ್ಯ ಮಾಡುತ್ತಿಲ್ಲ. ಏಕೆಂದರೆ ಅದು ಬಹಳ ಅಪಾಯಕಾರಿ. ಮಸಾಯಿಗಳ ನಂಬಿಕೆಯಂತೆ ಅವರಿಗೆ ಶಕ್ತಿ ನೀಡುವುದು, ಮೇಕೆಯ ಹಾಲು ಹಾಗು ಹಸುವಿನ ಹಾಲು. ಹಾಲು ಅವರಿಗೆ ಕಡಿಮೆ ಅನ್ನಿಸಿದರೆ ಹಸುವಿನ ರಕ್ತವನ್ನು ತೆಗೆದು ಹಾಲಿನ ಜೊತೆಗೆ ಸೇರಿಸಿ ಕುಡಿಯುತ್ತಾರೆ. ರಕ್ತವನ್ನು ತೆಗೆಯಲು ಹಸುವನ್ನು ಸಾಯಿಸುವುದಿಲ್ಲ. ಹಸುವಿನ ಗಂಟಲಿಗೆ ಕಚ್ಚಿ ತಮ್ಮ ಬಾಯಿಂದ ರಕ್ತವನ್ನು ಹೀರುತ್ತಾರೆ. ಆಮೇಲೆ ಆ ಜಾಗಕ್ಕೆ ಸಗಣಿ ಹಾಗು ಸೊಪ್ಪನ್ನು ಕಟ್ಟಿ ಗಾಯವನ್ನು ವಾಸಿ ಮಾಡುತ್ತಾರೆ. ಅದೇ ಹಸುವಿನಿಂದ ಮತ್ತೆ ರಕ್ತ ತಗೆಯಲು 45 ದಿನ ಕಾಯುತ್ತಾರೆ. ಇದು ಸ್ವಲ್ಪ ನಾಗರೀಕರಾಗಿರುವ ಮಸಾಯಿಗಳು ಮಾಡೊ ಕೆಲಸ. ಕಾಡಿನಲ್ಲಿರುವ ಮಸಾಯಿಗಳು ರಕ್ತವನ್ನಲ್ಲದೆ ಬೇರೇನೂ ಕುಡಿಯುವುದಿಲ್ಲ. ಅವರಿಗೆ ಹಸುವಿನ ರಕ್ತ ಸಿಗದಿದ್ದರೆ, ಕಾಡು ಕೋಣದ ಕತ್ತಿಗೆ ಬಾಯಿ ಹಾಕಿ ಅದರ ರಕ್ತ ಹೀರುತ್ತಾರೆ. ಹಾಗೇನಾದರೂ ಕೋಣದ ಎಲ್ಲಾ ರಕ್ತ ಹೀರಿ ಅದು ಸತ್ತು ಹೋದರೆ ಅದರ ಮಾಂಸವನ್ನು ತಿನ್ನುತ್ತಾರೆ. ಬಹಳ ಕ್ರೂರಿಗಳಾದ ಕಾಡಿನ ಮಸಾಯಿಗಳಿಗೆ ಯಾವುದೆ ಹೆದರಿಕೆ ಇಲ್ಲ. ಸಿಂಹದಂತಹ ಸಿಂಹವೆ ಇವರನ್ನು ನೋಡಿ ದೂರಸರಿಯುವಾಗ ಇವರಿಗ್ಯಾವ ಭಯ. ಇವರನ್ನೂ ಹೆದರಿಸುವ ಇನ್ನೊಂದು ಜನಾಂಗ ಇದೆ ಅದು ಮಂಘ್ನಾಟಿ. ಇವರ ಪರಿಚಯ ಇರುವವರು ಸಿಗುವುದು ಕಡಿಮೆ. ಯಾಕೆಂದರೆ ಇವರನ್ನು ನೋಡಿ ಜೀವಂತವಾಗಿ ವಾಪಸ್ಸಾಗಿರುವ ನಾಗರೀಕ ಮನುಷ್ಯರು ಕಡಿಮೆ. ಮಂಘ್ನಾಟಿ ಜನಾಂಗ ಮನುಷ್ಯರನ್ನೆ ತಿನ್ನುವವರು. ಅವರಿಗೆ ಮನುಷ್ಯರ ಮಾಂಸ ಎಂದರೆ ಬಹಳ ರುಚಿ. ಅವರು ಬಟ್ಟೆ ಹಾಕುವುದಿಲ್ಲ, ಒಬ್ಬಂಟಿಯಾಗಿ ವಾಸಿಸುವುದಿಲ್ಲ, ಬೇರೆ ಮನುಷ್ಯರನ್ನು ಹತ್ತಿರಕ್ಕೂ ಸೇರಿಸುವುದಿಲ್ಲ. ಕಾಡಿನ ಮಧ್ಯಬಾಗದಲ್ಲಿ ಮಾತ್ರ ಅವರ ವಾಸ.

ಇನ್ನು ಮಸಾಯಿಗಳ ಕೆಲವು ನೈಜ ಘಟನೆಗಳನ್ನು ಮತ್ತೊಮ್ಮೆ ಬರೆಯುತ್ತೇನೆ. ಮಸಾಯಿಗಳಾ ಶಕ್ತಿಗೆ ಕೆಲವು ಉದಾಹರಣೆಗಳು ಹಾಗು ಅವರ ಅಥಿತಿ ಸತ್ಕಾರದ ಬಗ್ಗೆ ತಿಳಿಸುತ್ತೇನೆ.

ಮುಖಪುಟ / ಎನ್‌ಆರ್‌ಐ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X