ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತ್ರಿವೇಣಿ ಗೌರಿಗಣೇಶ ‘ಯಕ್ಷ ಸಂಭ್ರಮ’

By Staff
|
Google Oneindia Kannada News
Creative writer can be a reporter too!! Dr. H.Y. Rajgopal on festival moods in TriStatesಗೌರಿ ಗಣೇಶ ಬರುವುದೆಂದರೆ ಒಬ್ಬ ಪ್ರೀತಿಯ ಚಿಕ್ಕಮ್ಮನೋ, ಸೋದರತ್ತೆಯೋ ತನ್ನ ಮಗನೊಡನೆ ಮನೆಗೆ ಬಂದಂತೆ. ಅವರು ತಪ್ಪದೆ ವರ್ಷೇ ವರ್ಷೇ ಬರುವರು. ಬಂದು ನಾಲ್ಕು ದಿನವಿದ್ದು ನಮ್ಮ ಸತ್ಕಾರ ಒಪ್ಪಿಸಿಕೊಂಡು ನಮ್ಮ ಮನೆ ಬೆಳಗಿ ಮನ ತಣಿಸಿ ಮುಂದಿನ ಶುಭೋದಯದ ಆಶ್ವಾಸನೆ ಕೊಟ್ಟುಹೋಗುವರು. ಈ ರೀತಿ ತಾಯಿ-ಮಗ ಒಟ್ಟಿಗೆ ಬರುವುದು ನಮ್ಮಲ್ಲಿ ಇವರಿಬ್ಬರೇ.

ಗೌರಿ-ಗಣೇಶ ಈ ಸಲವೂ ನಮ್ಮ ಎರಡನೇ ಮನೆಯೇ ಎನಿಸಿದ ತ್ರಿವೇಣಿಗೆ ಬಂದುಹೋದರು. ಕಳೆದ ಸೆಪ್ಟೆಂಬರ್‌ 25 ರಂದು ಬೋರ್ಡೆನ್‌ಟೌನ್‌ ರೀಜನಲ್‌ ಹೈಸ್ಕೂಲಿನಲ್ಲಿ ಬೆಳಿಗ್ಗೆ 10:30 ರಿಂದ ಸಂಜೆ 5:30 ರ ವರೆಗೆ ನಡೆದ ಉತ್ಸವಕ್ಕೆ ಸುಮಾರು 150ಕ್ಕೂ ಹೆಚ್ಚಿನ ಮಂದಿ ಬಂದು ಸಂತಸದಿಂದ ಭಾಗವಹಿಸಿದರು. ಎಂದಿನ ಹಬ್ಬದ ಸಡಗರ, ರೇಶಿಮೆ ಪತ್ತಲಗಳ ಸರಸರ ಶಬ್ದ, ಹೂವು ಹಣ್ಣಿನ ಗಂಧ, ಸದಸ್ಯವರ್ಗದಿಂದ, ಮಕ್ಕಳಿಂದ ಮನರಂಜನೆಯ ಕಾರ್ಯಕ್ರಮ, ರಸದೂಟಗಳ ಜೊತೆಗೆ, ಈ ಸಲದ ವೈಶಿಷ್ಟ್ಯವೆಂದರೆ ಅತ್ಯುತ್ತಮ ಯಕ್ಷಗಾನ ಪ್ರದರ್ಶನ.

ತ್ರಿವೇಣಿಯ ಹಿಂದಿನ ಅಧ್ಯಕ್ಷರಾದ ಉಮೇಶ್‌ ಜೋಯಿಸರ ನೇತೃತ್ವದಲ್ಲಿ ಗೌರಿ ಗಣೇಶರ ಪೂಜೆ ಸಾಂಗವಾಗಿ ನೆರವೇರಿತು. ಅವರು ಮಂತ್ರದಲ್ಲಿ ಹೇಳಿದ ‘ನೃತ್ಯಂ ಸಮರ್ಪಯಾಮಿ, ಗೀತಂ ಸಮರ್ಪಯಾಮಿ’ ಮುಂದೆ ಸಾರ್ಥಕವಾಗಿ ಸಂದಿತು. ಪೂಜೆಯಾದಮೇಲೆ ಸಂಘದ ಪಾಕಕಲಾನಿಪುಣೆಯರಿಂದ ತಯಾರಾದ ಹಬ್ಬದೂಟ. ಬರಲಿರುವ ಯಕ್ಷಗಾನದ ಮುನ್ಸೂಚನೆಯಂತೆ ದಕ್ಷಿಣ ಕನ್ನಡದ ಗಣೇಶನ ಗುಡಿಯ ಪ್ರಸಾದ ಅರಳು, ಎಳ್ಳು, ಕಬ್ಬು ಸೇರಿದ ಪಂಚಕಜ್ಜಾಯ ಊಟಕ್ಕೆ ಒಂದು ಹೊಸ ರುಚಿ ಕೊಟ್ಟಿತು.

ಊಟದ ವಿರಾಮದ ನಂತರ ಮೊದಲ ಮನರಂಜನೆಯ ಕಾರ್ಯಕ್ರಮ ಅನುಪಮ ಕಲಾವಿದರು ಅರ್ಪಿಸಿದ ಭಕ್ತಿಗೀತೆಗಳು. ಗಾಯನದ ಜೊತೆಗೆ ಮಕ್ಕಳಿಂದ ಆ ಗೀತೆಗಳ ಅಭಿನಯವೂ ಸೇರಿ, ಅದೊಂದು ಹೊಸ ರೀತಿಯ ಕಾರ್ಯಕ್ರಮವಾಯಿತು. ಲತಾ ನಟರಾಜ್‌ ಮತ್ತು ಸಿ.ನಟರಾಜ್‌ ಸಿದ್ಧಪಡಿಸಿದ ಈ ಕಾರ್ಯಕ್ರಮದಲ್ಲಿ ಪಾಲುಗೊಂಡವರು: ಲತಾ ನಟರಾಜ್‌ ಮತ್ತು ಶ್ರೀಧರ್‌ ಸುಬ್ಬರಾವ್‌ (ಹಾಡಿಕೆ), ಹರೀಶ್‌ ಬೇವಿನಹಳ್ಳಿ (ಕೊಳಲು), ಗಂಗಾ ಆನಂದ್‌ (ವೀಣೆ) ಮತ್ತು ಬಾಲು ನಾಡಿಗ್‌ (ತಬಲ). ಅಭಿನಯಿಸಿದ ಮಕ್ಕಳು: ಚಿರಾಗ್‌ ಮತ್ತು ನೇಹ ನಟರಾಜ್‌, ಮತ್ತು ರೋಚಿತ ನಾಥನ್‌. ಮಕ್ಕಳು ಸ್ವಚ್ಛವಾಗಿ ನುಡಿದ ಕನ್ನಡ ಮಾತನ್ನು ಕೇಳಿ ಎಲ್ಲರಿಗೂ ಸಂತೋಷವಾಯಿತು. ವಿವೇಕ್‌ ಪ್ರಸಾದರೂ ಮಕ್ಕಳೊಂದಿಗೆ ಅಭಿನಯದಲ್ಲಿ ಭಾಗವಹಿಸಿದರು. ರಮಾ ನಾಥನ್‌ ಮತ್ತು ರಂಗ ನಾಥನ್‌ ರಂಗಸಜ್ಜಿಕೆ ಮತ್ತು ಧ್ವನಿನಿಯಂತ್ರಣದಲ್ಲಿ ಸಹಾಯ ಮಾಡಿದರು.

ಅಂದಿನ ಮುಖ್ಯ ಪ್ರದರ್ಶನ ಯಕ್ಷಗಾನ ಕಲಾರಂಗ ಮತ್ತು ಸಮೂಹದವರು ಶ್ರೀ ಉದ್ಯಾವರ ಮಾಧವ ಆಚಾರ್ಯರ ನೇತೃತ್ವದಲ್ಲಿ ಅರ್ಪಿಸಿದ ಎರಡು ಪ್ರಸಂಗಗಳು: ಪಾಂಚಾಲಿ ಮತ್ತು ಸ್ಯಮಂತಕೋಪಾಖ್ಯಾನ. ಈ ಎರಡು ಪ್ರಕರಣಗಳೂ ನೋಟಕರ ಮನಸ್ಸನ್ನು ಸೆರೆಹಿಡಿದುವು. ಅವುಗಳ ಬಗ್ಗೆ ನಿಮ್ಮೊಂದಿಗೆ ನನ್ನ ಕೆಲವು ಅನಿಸಿಕೆಗಳನ್ನು ಹಂಚಿಕೊಳ್ಳಬಯಸುತ್ತೇನೆ.

ಪಾಂಚಾಲಿ

ಪಾಂಚಾಲಿಯೆಂದೊಡನೆ ನಮಗೆ ಅನ್ನಿಸುವುದು ಅವಳೊಬ್ಬ ಕೆಚ್ಚಿನ, ಛಲದ ಹೆಂಗಸು ಎಂಬುದು. ಆದರೆ ಅವಳು ಅದಷ್ಟೇ ಅಲ್ಲ. ದ್ರೌಪದಿ ಹೆಣ್ಣಾದಳೇ ಅಥವ ಹೆಣ್ಣು ದ್ರೌಪದಿಯಾದಳೇ ಎಂದು ಸೋಜಿಗವುಕ್ಕಿಸುವ ವ್ಯಕ್ತಿ ಅವಳು. ಅನುಪಮ ಸೌಂದರ್ಯವುಳ್ಳವಳು. ಅವಳಲ್ಲೂ ಮಾರ್ದವತೆ ಇದೆ. ಹೊಂಗನಸುಗಳನ್ನು ಕಾಣುವ ಮುಗ್ಧಚಾಪಲ್ಯವಿದೆ. ತನ್ನ ಸ್ವಯಂವರಕ್ಕೆ ಪಾರ್ಥ ಬರುವನೆ ಎಂಬ ಹಗಲುಗನಸು ಕಾಣುತ್ತಿರುತ್ತಾಳೆ. ಆದರೆ ಆ ದಿನ ಅಲ್ಲಿ ಪಾರ್ಥ ಕಾಣಲೊಲ್ಲ. ಬ್ರಾಹ್ಮಣ ವೇಷದಲ್ಲಿದ್ದವನೊಬ್ಬ ಬಂದು ಮತ್ಸ್ಯಯಂತ್ರವನ್ನು ಭೇದಿಸಿ ಅವಳ ಕೈಹಿಡಿಯುತ್ತಾನೆ. ಅವನು ಪಾರ್ಥನೇ ಎಂದು ತಿಳಿದು ಸಂತಸವಾದರೂ, ಅವಳ ಪಾಲಿಗೆ ಬಂದದ್ದು ಬೇರೆಯೆ. ಒಬ್ಬ ಗೆದ್ದರೂ ಅವಳು ಐವರಿಗೆ ಪತ್ನಿಯಾಗಬೇಕಾಯಿತು. ಹೇಗೆ ಹಂಚಿಕೊಡಲಿ ತನ್ನ ಹೃದಯಮಂಚವನ್ನು ಐವರಿಗೆ ಎಂದು ತೊಳಲಾಡಿದರೂ, ಕೊನೆಗೆ ಒಪ್ಪಿಕೊಳ್ಳುತ್ತಾಳೆ. ಮುಂದೆ ಹಸ್ತಿನಾವತಿಯಲ್ಲಿ ಸಾಮ್ರಾಜ್ಞಿ. ಆಮೇಲೆ ಧರ್ಮಜನಿಗೆ ದುರ್ಯೋಧನನಿಂದ ದ್ಯೂತಕ್ಕೆ ಆಹ್ವಾನ, ಸೋಲು, ಅಪಮಾನ. ರಾಣಿ ಇರಲಿ, ಯಾವ ಗೌರವಸ್ಥ ಸ್ತ್ರೀಯೂ ಅನುಭವಿಸದಂಥ ಅಪಮಾನ ಸಹಿಸಬೇಕಾಯಿತು. ಗಂಡಂದಿರು, ಅತ್ತೆ ಮಾವಂದಿರು, ಭೀಷ್ಮ ವಿದುರರಂಥ ಧರ್ಮ ಬಲ್ಲವರು - ಯಾರಿಂದಲೂ ಸಹಾಯವಿಲ್ಲ. ಕೃಷ್ಣನೊಬ್ಬನೇ ಅವಳ ಮೊರೆಗೆ ನೆರವಾಗಿ ಬಂದು ಅವಳನ್ನು ರಕ್ಷಿಸಿದವನು. ತುಂಬಿದ ಸಭೆಯಲ್ಲಿ ಅವಳನ್ನು ಹೀನಾಯವಾಗಿ ಎಳೆದಾಡಿದಾಗ ಮುಡಿಗೆದರಿದ ಪಾಂಚಾಲಿ ಕೌರವಕುಲ ನಾಶವಾಗುವವರೆಗೂ ಮುಡಿಕಟ್ಟೆನೆಂದು ಪಣತೊಟ್ಟಳು. ಯಜ್ಞಕುಂಡದಿಂದ ಎದ್ದುಬಂದ ದ್ರೌಪದಿ ಕೌರವ ಕುಲಕ್ಕೆ ಅಗ್ನಿಕನ್ಯೆಯೇ ಆದಳು.

ಮುಂದೆ ವನವಾಸ, ಅಜ್ಞಾತವಾಸ. ಸ್ವತಃ ರಾಣಿಯಾಗಿದ್ದವಳು, ತನ್ನ ಕಾರ್ಯ ಸಿದ್ಧಿಸುವವರೆಗೆ ಕುರುಳು ಕಟ್ಟೆನೆಂದು ಪಣ ತೊಟ್ಟವಳು, ಈಗ ಮತ್ತೊಬ್ಬ ರಾಣಿಗೆ ಕೇಶಶೃಂಗಾರ ಮಾಡುವ ಸೈರಂಧ್ರಿ. ಆ ಕಾಲವೂ ಮುಗಿದಮೇಲೆ ಮತ್ತೆ ಕೌರವರೊಂದಿಗೆ ರಾಜ್ಯದ ಬಗ್ಗೆ ಮಾತುಕತೆ. ಸಂಧಾನವಲ್ಲ , ಸಂಗ್ರಾಮವೇ ದಾರಿ ಎಂದು ಅವಳ ನಿಲುವು. ಯುದ್ಧ ಅನಿವಾರ್ಯವಾಯಿತು. ಅದರ ಹಿಂಸಾಚಕ್ರ ಪೂರ್ತಿ ಉರುಳಿತು. ಕೌರವಕುಲ ನಾಶವಾಯಿತು ಮಾತ್ರವಲ್ಲ, ದ್ರೌಪದಿಯ ಐವರು ಮಕ್ಕಳೂ ಅಶ್ವತ್ಥಾಮನ ಉಗ್ರಕೋಪಕ್ಕೆ ಬಲಿಯಾದರು. ದ್ರೌಪದಿಯೆನೋ ಮತ್ತೆ ಹೆರಳು ಕಟ್ಟಿಕೊಂಡಳು, ಆದರೆ ಅವಳ ಕರುಳು ಬರಿದಾಯಿತು.

ಎಷ್ಟೆಲ್ಲ ದಾರುಣಗಳನ್ನು ಅನುಭವಿಸಿಯೂ ಪಾಂಚಾಲಿ ಎಂದೂ ಹತಾಶಳಾಗದ ಧೀರೆ. ಅವಳೊಂದು ಜೀವನದಿ. ತನ್ನನ್ನು ಒಂದು ಅಕ್ಷಯಪಾತ್ರೆ ಎಂದೇ ಗಣಿಸುತ್ತಾಳೆ. ಎಂಥ ಕಷ್ಟಗಳು ಅಡರಿದರೂ ಅವಳ ಕನಸುಗಳು ಹಿಂಗಿಲ್ಲ. ಅವು ಎಂದಿಗೂ ಜೀವಂತ. ಅಗ್ನಿಕುಂಡದಲ್ಲಿ ಹುಟ್ಟಿದವಳು ಕಡೆಯಲ್ಲಿ ಹಿಮದಲ್ಲಿ ಕರಗಿಹೋಗುತ್ತಾಳೆ. ಸ್ತ್ರೀತ್ವದ ಉಜ್ವಲ ಪ್ರತೀಕವಾಗಿ ಕಂಗೊಳಿಸುತ್ತಾಳೆ.

ಈ ಅಸಾಧಾರಣ, ಸಂಕೀರ್ಣ ವ್ಯಕ್ತಿತ್ವ ಚಿತ್ರಣವನ್ನು ಪ್ರೇಕ್ಷಕರ ಮನಮುಟ್ಟುವಂತೆ ರಂಗದ ಮೇಲೆ ರೂಪಿಸಿದವರು ನರ್ತಕಿ-ಅಭಿನೇತ್ರಿ ಭ್ರಮರಿ ಶಿವಪ್ರಕಾಶ್‌. ತಂಡದ ನಾಯಕರೂ, ಸ್ವತಃ ಶ್ರೇಷ್ಠ ಕಲಾವಿದರೂ, ಉತ್ತಮ ಲೇಖಕರೂ ವಾಗ್ಮಿಗಳೂ ಆದ ಉದ್ಯಾವರ ಮಾಧವ ಅಚಾರ್ಯರ ಸುಪುತ್ರಿಯಾದ ಈಕೆ, ತಮ್ಮ ತಂದೆಯವರೇ ರಚಿಸಿದ ಈ ಪ್ರಕರಣದಲ್ಲಿ ಹೃದಯಂಗಮವಾಗಿ ನರ್ತಿಸಿ ಅಭಿನಯಿಸಿದರು. ಪಾಂಚಾಲಿಯ ಜೀವಿತದಲ್ಲಿ ಬಂದುಹೋಗುವ ಹಲವಾರು ಮುಖ್ಯ ವ್ಯಕ್ತಿಗಳ ಪಾತ್ರಗಳನ್ನು ಲೀಲಾಜಾಲವಾಗಿ ಅಭಿನಯಿಸುತ್ತ, ಸಂಗೀತಕಲಾವಿದರು ನಾನಾ ಸ್ತರಗಳಲ್ಲಿ ಸಂಚಾರಗಳಲ್ಲಿ ಏರಿ ಇಳಿದು ಮತ್ತೆ ಮತ್ತೆ ಆಧಾರ ಷಡ್ಜಕ್ಕೆ ಬರುವಂತೆ, ಆಕೆ ಮತ್ತೆ ದ್ರೌಪದಿಯಲ್ಲಿ ಬಂದು ಸೇರಿಕೊಳ್ಳುತ್ತಿದ್ದ ಚಾತುರ್ಯ ಬೆರಗುಗೊಳಿಸುವಂತಿತ್ತು. ಕಂಗೊಳಿಸುವ ರೂಪಸೌಂದರ್ಯ, ಕಲಾವಂತಿಕೆ, ನರ್ತನ ಕೌಶಲಗಳಿಂದ, ಎಂಥ ಸೂಕ್ಷ್ಮ ಭಾವನೆಗಳಿಗೂ ಅಭಿವ್ಯಕ್ತಿಕೊಡುವಂಥ ಸಹಜ ಅಭಿನಯಗಳಿಂದ ಭ್ರಮರಿಯವರು ನಮ್ಮನ್ನು ಪಾಂಚಾಲಿಯ ಅಂತರಂಗಕ್ಕೆ ಒಯ್ದರು.

ಈ ಪ್ರಸಂಗದ ಒಂದು ಗಮನಾರ್ಹ ವಿಷಯವೆಂದರೆ ಅದು ಭರತ ನಾಟ್ಯ ಯಕ್ಷಗಾನಗಳ ಒಂದು ಅಪೂರ್ವ ಸಮ್ಮಿಳನ. ಉದ್ಯಾವರರು ರಚಿಸಿದ ಈ ಪ್ರಸಂಗಕ್ಕೆ ಭರತ ನಾಟ್ಯದ ಅಡವುಗಳನ್ನು ಹೊಂದಿಸಿ ಈ ಭರತ-ಯಕ್ಷಗಾನ ನೃತ್ಯಶಿಲ್ಪವನ್ನು ನಿಯೋಜಿಸಿದವರು ಮೈಸೂರಿನ ನೃತ್ಯಕಲಾ ಪ್ರವೀಣೆ ವಸುಂಧರಾ ದೊರೆಸ್ವಾಮಿಯವರು. ಸಾಧಾರಣವಾಗಿ ಭರತ ನಾಟ್ಯದವರು ಇಂಥ ಪ್ರಯೋಗಗಳಿಗೆ ಹಿಂಜರಿಯುವವರು. ಆದ್ದರಿಂದ ಇದೊಂದು ಮಹತ್ವದ ಪ್ರಯೋಗ. ಎರಡು ಸಿದ್ಧಶೈಲಿಗಳನ್ನು ಹೊಂದಿಸುವಾಗ ತೊಡಕುಗಳು ಕಾಣುವುದುಂಟು. ಅಂಥ ಒಂದು ಸಂದಿಗ್ಧವೂ ಕಾಣದೆ ನೃತ್ಯಸಂಯೋಜನೆ ರೂಪುತಾಳಿತ್ತು. ಉದ್ಯಾವರರ ಮಾತು, ಹಿಮ್ಮೇಳ ಗಾಯನ, ವಾದನ, ಎಲ್ಲವೂ ಸೇರಿ ನಾವೊಂದು ಬೇರೆ ಲೋಕವನ್ನೇ ಹೊಕ್ಕು ಬಂದಂತೆ ಅನ್ನಿಸಿತು. ಆಕೆಯ ನೃತ್ಯ ಮುಗಿದಾಗ ಪ್ರೇಕ್ಷಕರಲ್ಲಿ ಹನಿಗೂಡದ ಒಂದು ಕಣ್ಣಿರಲಿಲ್ಲ ಎನ್ನಬಹುದು.

ಈ ಭರತ ನಾಟ್ಯ-ಯಕ್ಷಗಾನ ಪ್ರಯೋಗ ಸಫಲವಾಯಿತು ನಿಜ. ಆದರೆ ಈ ಪ್ರಯೋಗಕ್ಕೆ ಮುಖ್ಯ ಪ್ರೇರಣೆ ಏನು ಎಂಬುದನ್ನು ಕುರಿತ ಚಿಂತನೆ, ಚರ್ಚೆ ಮುಖ್ಯ. ಇದು ಕೇವಲ ನವೀನತೆ, ಪ್ರಯೋಗಶೀಲತೆಯೆ, ಅಥವ ಒಂದು ಶೈಲಿಯ ಅಭಾವಗಳನ್ನು ಇನ್ನೊಂದು ಶೈಲಿಯಿಂದ ತಂದು ತುಂಬಿಸುವ ಪ್ರಯತ್ನವೇ? ಯಕ್ಷಗಾನ ಸಮೂಹ ನೃತ್ಯನಾಟಕ. ಕಥಾನಿರೂಪಣೆ ಅದರ ಮುಖ್ಯ ಪ್ರವೃತ್ತಿ. ಏಕಪಾತ್ರಾಭಿನಯಕ್ಕೆ ಅದರಲ್ಲಿ ತಾವಿಲ್ಲ. ಭರತ ನಾಟ್ಯದಲ್ಲಾದರೋ, ಅದು ಮುಖ್ಯವಾಗಿ ಒಬ್ಬ ನೃತ್ಯಗಾತಿಯ ಪ್ರದರ್ಶನ, ರುಕ್ಮಿಣಿ ದೇವಿಯಂಥವರು ಆ ಶೈಲಿಯಲ್ಲಿ ಅನೇಕ ನೃತ್ಯನಾಟಕಗಳನ್ನು ಸಂಯೋಜಿಸಿದ್ದಾರೆ ಎನ್ನುವುದು ನಿಜವಾದರೂ. (ಶಾಸ್ತ್ರ ಪ್ರಕಾರ ನಾಟ್ಯ ಎಂದರೆ ಒಂದು ಕಥೆಯನ್ನು ನಿರೂಪಿಸುವ, ಹಲವಾರು ನೃತ್ಯಗಾರರನ್ನೊಳಗೊಂಡ ಪ್ರದರ್ಶನ ಎಂದು ತೋರುತ್ತದೆ. ಎಂತಲೆ, ನಾವು ಸಾಧಾರಣವಾಗಿ ಯಾವುದನ್ನು ಭರತ ನಾಟ್ಯ ಎನ್ನುತ್ತೇವೊ ಅದನ್ನು ಭರತ ನೃತ್ಯ ಎನ್ನುವುದು ಹೆಚ್ಚು ಸೂಕ್ತ ಎಂದು ಖ್ಯಾತ ನೃತ್ಯಪ್ರವೀಣೆ ಪದ್ಮಾ ಸುಬ್ರಹ್ಮಣ್ಯಂ ಹೇಳುತ್ತಾರೆ.) ಆದ್ದರಿಂದ ಮುಖ್ಯವಾಗಿ ಆಂತರಿಕವಾದ ಮನೋಸಂಚಾರಕ್ಕೆ ಭರತ ನಾಟ್ಯ ಒಂದು ಉತ್ತಮ ಸೌಲಭ್ಯ ಒದಗಿಸುತ್ತದೆ. ಆದರೆ, ಅದರಲ್ಲಿ ಸಂಗೀತ ಒಂದು ಅವಿಭಾಜ್ಯ ಅಂಗವಾದರೂ, ಮಾತಿನ ಮೂಲಕ ನಿರೂಪಣೆಯಿಲ್ಲ , ಕೂಚಿಪುಡಿ ನೃತ್ಯನಾಟಕಗಳಲ್ಲಿದ್ದಂತೆ. ಇಲ್ಲಿ ನೃತ್ಯ, ಸಂಗೀತ, ಕಥಾನಿರೂಪಣೆ ಎಲ್ಲವು ಹದವಾಗಿ ಸೇರಿದ್ದು ಅದನ್ನು ಒಂದು ಯಶಸ್ವಿ ಪ್ರಯೋಗವನ್ನಾಗಿಸಿದುವು. ಈ ಪ್ರಯೋಗಕ್ಕೆ ಹಿನ್ನೆಲೆಯಲ್ಲಿರುವ ಕಾರಣಗಳನ್ನು ಕುರಿತು ಉದ್ಯಾವರರೊಂದಿಗೆ ಮಾತನಾಡುವ ಅವಕಾಶ ಆಗಲಿಲ್ಲ. ಅವರಾಗಲೀ, ನಮ್ಮ ನೃತ್ಯಸಂಪ್ರದಾಯಗಳನ್ನು ಬಲ್ಲ ಇತರರಾಗಲೀ ಇಂಥ ಪ್ರಯೋಗಗಳ ಬಗ್ಗೆ ಹೆಚ್ಚಿನ ತಿಳುವಳಿಕೆ ಕೊಟ್ಟರೆ ಕೃತಜ್ಞ.

ಸ್ಯಮಂತಕೋಪಾಖ್ಯಾನ

ಭ್ರಮರಿಯವರ ಪಾಂಚಾಲಿ ತೆರೆಮರೆಗೆ ಸರಿಯುತ್ತಿದ್ದಂತೆಯೇ ಮುಂದಿನ ಪ್ರಸಂಗ ಸ್ಯಮಂತಕೋಪಾಖ್ಯಾನದ ಪಾತ್ರಧಾರಿಗಳು ಕೃಷ್ಣ, ಬಲಭದ್ರ ರಂಗದ ಮೇಲೆ ಕಾಣಿಸಿಕೊಂಡರು. (ಇವೆರಡರ ಮಧ್ಯೆ ಒಂದು ಐದು ನಿಮಿಷ ವಿರಾಮವಿದ್ದಿದ್ದರೆ ಚೆನ್ನಾಗಿತ್ತು ಎನ್ನಿಸಿತು. ಭ್ರಮರಿಯವರ ನೃತ್ಯಪ್ರದರ್ಶನವನ್ನು ಮೆಚ್ಚಿ ಎದ್ದುನಿಂತು ಕರತಾಡನ ಮಾಡಿದ ಸಭಿಕರ ಮುಂದೆ ಬಂದು ಅವರ ಗೌರವವನ್ನು ಸ್ವೀಕರಿಸುವ ಅವಕಾಶವು ಇಲ್ಲದಾಯಿತು.) ಈ ಪ್ರಸಂಗ ಸಂಪೂರ್ಣವಾಗಿ ಯಕ್ಷಗಾನದ ಶೈಲಿಯಲ್ಲಿ ಸಿದ್ಧಗೊಂಡಿತ್ತು. ಪಾಂಚಾಲಿಯ ಗಂಭೀರತೆಗೆ ಎದುರಾಗಿ ಇಲ್ಲಿ ಕೃಷ್ಣ ಬಲಭದ್ರರ, ಕೃಷ್ಣ ಜಾಂಬವರ ಸಂವಾದದಲ್ಲಿ ಹಾಸ್ಯ ತುಳುಕಾಡುತ್ತಿತ್ತು. ಗಣೇಶಚೌತಿಯ ದಿನ ಚಂದ್ರನನ್ನು ಕಂಡು ಅದರಿಂದಾಗಿ ಸ್ಯಮಂತಕಮಣಿಯನ್ನು ಕದ್ದನೆಂಬ ಅಪವಾದಕ್ಕೀಡಾಗಿ, ತಾನು ತಪ್ಪಿತಸ್ಥನಲ್ಲವೆಂದು ರುಜುವಾತು ಪಡಿಸಲು ಕೃಷ್ಣ ಆ ಮಣಿಯನ್ನರಸಿಹೋಗಿ, ಜಾಂಬವಂತನೊಡನೆ ಹೋರಾಡಿ ಅವನಿಗೆ ತಾನು ಹಿಂದಿನ ಯುಗದ ಶ್ರೀರಾಮನೇ ಎಂದು ತೋರಿಸಿ, ಅವನಿಂದ ಸ್ಯಮಂತಕಮಣಿಯನ್ನು ಮಾತ್ರವಲ್ಲದೆ ಜಾಂಬವತಿಯೆಂಬ ಕನ್ಯಾಮಣಿಯನ್ನೂ ಪಡೆದುಬಂದದ್ದು ಕಥಾವಸ್ತು. ಪರಿಚಿತ ಕಥೆ, ನೇರ ನಿರೂಪಣೆಯಾದರೂ ಮಾತು, ಅಭಿನಯ ಸ್ವಾರಸ್ಯವಾಗಿತ್ತು. ಕನ್ಯಾಮಣಿಗಳಿಗಾಗಿಯೇ ಕಣ್ಣುಹಾಯಿಸುತ್ತಿರುವ ಕೃಷ್ಣ, ಕೃಷ್ಣನಂಥ ತಮ್ಮನನ್ನು ಹದ್ದುಬಸ್ತಿನಲ್ಲಿಟ್ಟುಕೊಳ್ಳಲು ಹೆಣಗುತ್ತಿರುವ ಬಲರಾಮ, ತಾನು ಬ್ರಹ್ಮ ಆಕಳಿಸಿದಾಗ ಹುಟ್ಟಿದವನು ತನ್ನೊಡನೆ ಹೋರಾಡಲು ಬರುವ ಈ ಕೃಷ್ಣ ಯಾವ ಲೆಕ್ಕಕ್ಕೆ ಎಂಬ ಧೋರಣೆ ತಾಳಿ ಆಮೇಲೆ ಅವನಿಗೇ ಶರಣಾಗುವ ಜಾಂಬವ, ಅವನ ಮುಗ್ಧ ಕನ್ಯೆ ಜಾಂಬವತಿ - ಎಲ್ಲ ಪಾತ್ರಗಳೂ ರಂಗದ ಮೇಲೆ ಶೋಭಿಸಿದುವು.

ಯಕ್ಷಗಾನದ ವಿಜೃಂಭಣೆಯ ಉಡಿಗೆ ತೊಡಿಗೆ, ಮುಂಡಾಸುಗಳು, ಭಾಗವತರ ಎತ್ತರದ ದನಿಯ ಸಂಪ್ರದಾಯಬದ್ಧ ಹಾಡಿಕೆ, ನಾಟಕೀಯವಾದ ಮಾತಿನ ವಿಶಿಷ್ಟ ವೈಖರಿ, ಕೇಳಿದಂತೆಲ್ಲ ನಮ್ಮನ್ನು ತನ್ನ ಗುಂಗಿನಲ್ಲಿ ಮತ್ತಷ್ಟು ಸಿಕ್ಕಿಸುವ ಚಂಡೆ ಮದ್ದಳೆಯ ನುಡಿತ - ಎಲ್ಲವೂ ಬೇರಾವ ರಂಗಸಜ್ಜಿಕೆ ಪರಿಕರಗಳಿಲ್ಲದಿದ್ದರೂ ನಮ್ಮನ್ನು ಪೂರ್ತಿಯಾಗಿ ವಶಪಡಿಸಿಕೊಂಡವು.

ತಂಡದ ಹಿರಿಯರಾದ ಉದ್ಯಾವರರು, ಜಾಂಬವತಿಯಾಗಿ ಭ್ರಮರಿ ಶಿವಪ್ರಕಾಶ್‌, ಕೃಷ್ಣನಾಗಿ ರಾಜೇಂದ್ರ ಕೆದ್ಲಾಯ, ಬಲಭದ್ರನಾಗಿ ಮುರಲಿ ಕಡೇಕರ್‌, ಜಾಂಬವನಾಗಿ ಮಹಾಬಲ ಶೆಟ್ಟಿ, ಭಾಗವತರಾಗಿ ಹಾಡಿದ ಕೆ.ಜೆ. ಗಣೇಶ್‌, ಚಂಡೆ-ಮದ್ದಳೆ-ಮೃದಂಗ ವಾದನಕಾರರಾಗಿ ಕೆ.ಜೆ.ಕೃಷ್ಣ - ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಬೆಂಗಳೂರಿಂದ ಬರುವ, ನಮ್ಮ ನೆಲದ ಸೊಗಡು ಸ್ವಲ್ಪವೂ ಇಲ್ಲದ, ಸಿನೆಮ ಟೀವಿಗಳ ಅನುಕರಣೆಯ ಸತ್ವಹೀನ ಕಾರ್ಯಕ್ರಮಗಳನ್ನು ನೋಡಿ ಬೇಸತ್ತವರಿಗೆ, ಈ ಕಾರ್ಯಕ್ರಮ ಒಂದು ಆಶಾಕಿರಣವಾಗಿ ಕಂಡಿತು.

ಪ್ರದರ್ಶನ ಮುಗಿದಮೇಲೆ

ರಂಗಪ್ರದರ್ಶನ ನೋಡುವುದು ಒಂದು ತೆರನಾದರೆ, ಪ್ರದರ್ಶನ ಮುಗಿದಮೇಲೆ ಕಲಾವಿದರೊಂದಿಗೆ ಮಾತನಾಡುವುದು ಇನ್ನೊಂದು ಬಗೆಯ ಆನಂದ. ಅಂದಿನ ಕಾರ್ಯಕ್ರಮ ಮುಗಿದಮೇಲೆ ತ್ರಿವೇಣಿಯ ಅಧ್ಯಕ್ಷ ಎಚ್‌. ರಾಮಮೂರ್ತಿಯವರ ಮನೆಯಲ್ಲಿ ಹೇಮಾ ರಾಮಮೂರ್ತಿಯವರ ಆದರದ ಸತ್ಕಾರದಲ್ಲಿ ಎಲ್ಲರೂ ವಿರಮಿಸಿದಾಗ ನಡೆದ ಮಾತುಕತೆಯಿಂದ ಕಲಾವಿದರೊಂದಿಗೆ ಮತ್ತಷ್ಟು ಸಂಪರ್ಕ ಬೆಳೆಸಿಕೊಳ್ಳುವ ಸದವಕಾಶ ಸಿಕ್ಕಿತು. ಉದ್ಯಾವರರು ತುಂಬ ತಿಳಿದ ವ್ಯಕ್ತಿ. ರಂಗಕಲೆಗಳಲ್ಲಿ ಅಪಾರ ಉತ್ಸಾಹ, ಅನುಭವ, ಪ್ರಯೋಗಶೀಲತೆ. ವೇದಿಕೆಯ ಮೇಲಾಗಲೀ, ಆರಾಮಕುರ್ಚಿಯಲ್ಲಿ ಕುಳಿತಾಗಲೀ ಉತ್ತಮವಾಗಿ ಮಾತನಾಡುವವರು. ಅರ್ಥಶಾಸ್ತ್ರ ಅಧ್ಯಾಪಕರಾಗಿ, ಕಾಲೇಜಿನ ಪ್ರಾಂಶುಪಾಲರಾಗಿ ದುಡಿದವರು. ಅವರು ಮಾತ್ರವಲ್ಲದೆ, ಅವರ ಜೊತೆಯ ಕಲಾವಿದರೂ ತಮ್ಮ ಕಲೆಯಲ್ಲಿ ತೋರಿದ ಶ್ರದ್ಧೆ, ಪ್ರೀತಿ, ಗೌರವ, ಕಲಾಪ್ರಜ್ಞೆ, ಪಾಂಡಿತ್ಯ, ಮೇಲಾಗಿ ಇವೆಲ್ಲವೂ ತೀರ ಸಹಜ ಎನಿಸುವ ಸರಳತೆ, ವಿನಯ - ಇವನ್ನು ಮರೆಯಲಾಗದು. ಆ ದೊಡ್ಡ ಮುಂಡಾಸುಗಳು ರಂಗದಮೇಲೆ ಮಾತ್ರವೇ. ತ್ರಿವೇಣಿಗೆ ಬಂದು ನಮಗೆ ಇಂಥ ಒಂದು ದೊಡ್ಡ ಕಲೆಯ ಸಂಪರ್ಕ ಕೊಟ್ಟುಹೋದ ಯಕ್ಷಗಾನ ಕಲಾರಂಗ ಮತ್ತು ಸಮೂಹದವರಿಗೆ ನಾವು ಕೃತಜ್ಞರು. ಇಂಥ ಕಲಾವಿದರನ್ನು ಆಹ್ವಾನಿಸಿ, ಸದಸ್ಯರ ಮನಸ್ಸಿನಲ್ಲಿ ನಿಲ್ಲುವಂಥ ಒಂದು ಸಾರ್ಥಕ ಕಾರ್ಯಕ್ರಮವನ್ನು ನಡೆಸಿದ ತ್ರಿವೇಣಿ ಪದಾಧಿಕಾರಿಗಳು ಅಭಿನಂದನಾರ್ಹರು.

ಯಕ್ಷಗಾನ ಕನ್ನಡ ನೆಲದಲ್ಲಿ ಹುಟ್ಟಿದ ಕಲೆ. ನಾನೂರು-ಐನೂರು ವರ್ಷಗಳಿಂದ ಬೆಳೆದು ಬಂದದ್ದು. ಅದರ ಭವಿಷ್ಯದ ಬಗ್ಗೆ ಆತಂಕ ಪಡುವ ಸ್ಥಿತಿ ಬಂದಿದೆ ಎನ್ನುತ್ತಿದ್ದಾರೆ ಆ ಕ್ಷೇತ್ರದಲ್ಲಿ ದುಡಿಯುತ್ತಿರುವವರು. ಮುಖ್ಯ ಕಾರಣಗಳು: ವೃತ್ತಿಪರ ಯಕ್ಷಗಾನ ಕಲಾವಿದರಿಗೆ ಸಾಕಷ್ಟು ಜೀವನ ಸೌಕರ್ಯ ಭದ್ರತೆ ಇಲ್ಲದಿರುವುದು ಮತ್ತು ಇತರ ಮನರಂಜನೆಯ ಮಾಧ್ಯಮಗಳ ಸವಾಲು. ಪರಕೀಯರು ನಮ್ಮ ದೇಶ ಆಳುತ್ತಿದ್ದಾಗ, ದಕ್ಷಿಣ ಕನ್ನಡ ಜಿಲ್ಲೆ ಹಿಂದಿನ ಮದರಾಸು ಪ್ರಾಂತದಲ್ಲಿದ್ದಾಗೆಲ್ಲ ಬೆಳೆದ ಕಲೆ ಈಗ ನಮ್ಮವರೇ ರಾಜ್ಯವಾಳುತ್ತಿರುವಾಗ, ಕನ್ನಡ ಏಕೀಕರಣ (ಬಹುಮಟ್ಟಿಗಾದರೂ) ಆಗಿರುವಾಗ, ಯಕ್ಷಗಾನದಂಥ ಕಲೆಯನ್ನು ನಶಿಸಲು ಬಿಡಬಾರದು. ಅದರ ಪೋಷಣೆ, ಅದರ ಕಲಾವಿದರ ಪೋಷಣೆ, ಉತ್ತೇಜನ ನಮ್ಮೆಲ್ಲರ ಕರ್ತವ್ಯ. ಈ ದಿಸೆಯಲ್ಲಿ ಈ ಕಲೆಗಾಗಿ, ಕಲಾವಿದರಿಗಾಗಿ ಯಕ್ಷಗಾನ ಕಲಾರಂಗ ಕೈಗೊಂಡಿರುವ ಕೆಲಸ ಬಹಳ ಮುಖ್ಯವಾದದ್ದು. ಅದನ್ನು ಮನಸ್ಸಿಗೆ ತಂದುಕೊಂಡು ತ್ರಿವೇಣಿಯೂ ಸೇರಿದಂತೆ ಇಲ್ಲಿನ ಕನ್ನಡ ಸಂಘಗಳು, ಕನ್ನಡ ಜನ ಅವರಿಗೆ ಉದಾರವಾಗಿ ಧನಸಹಾಯ ನೀಡಿದರೆ ಒಂದು ಸಾರ್ಥಕ ಕೆಲಸ ಮಾಡಿದಂತೆ.

ಮುಖಪುಟ / ಎನ್‌ಆರ್‌ಐ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X