• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಾವೇರಿಯಂ ಗಾಂಧೀನಗರದವರೆಗೆ !

By Staff
|

ಹೊಸ ಸರ್ಕಾರ ಬಂತೆ, ಶುರುವಾಯ್ತು ಸಂತೆ!

ಹೌದು. ಇನ್ನೇನು ಮನಮೋಹನ್‌ ಸಿಂಗ್‌ ಅಧಿಕಾರ ವಹಿಸಿಕೊಂಡು ‘ಉಸ್ಸಪ್ಪಾ’ ಅಂದಿದ್ದರೋ ಇಲ್ಲವೋ, ತಮಿಳುನಾಡಿನಿಂದ ನಲವತ್ತು ಜನರ ದೊಡ್ಡದೊಂದು ದಂಡೇ ರಾಜ್ಯಕ್ಕೆ ಬಂತು. ಇನ್ನು ಆಗೋದೇನು ಬಂತು, ಕೇಂದ್ರದಲ್ಲಿರುವ ಪ್ರಧಾನಿ ಸಿಂಗ್‌,ರಾಜ್ಯದ ಮುಖ್ಯಮಂತ್ರಿ ಸಿಂಗ್‌ಗೆ ‘ನೀರು ಬಿಡಿ’ ಎಂದರಂತೆ.

ಸದ್ಯ, ಬದುಕಿದೆವು. ವರುಣ ದೇವನ ಕೃಪೆಯಿಂದ ನಾವು ಬದುಕಿದ್ದೇವೆ. ಈ ಸಂಖ್ಯಾ ಬಲ ಪ್ರದರ್ಶಕರ ಬಗ್ಗೆ ಒಂದು ಮಾತು ಹೇಳಲೇ ಬೇಕು - ಮಳೆ ಬರಲಿ ಬಿಡಲಿ, ಅವರು ತಮ್ಮ ಕಾರ್ಯ ಯೋಜನೆಯಲ್ಲಿದ್ದಂತೆ ಮಾಡಿ ತೀರುತ್ತಾರೆ! ಇನ್ನು ನಮ್ಮವರದು ಯಾವಾಗಲೂ ರಿಯಾಕ್ಟೀವ್‌(ಅದರಲ್ಲೂ ನಿಧಾನದ) ವಿಧಾನ ಬಿಡಿ. ಅವರು ಅಲ್ಲಿ ಹೋಗಲಿ, ಅಲ್ಲಿಂದ ಆದೇಶ ಬರಲಿ, ಎಲ್ಲದರ ಪರಿಣಾಮ ಒಂದೇ - ನಮ್ಮ ಕಾವೇರಿ ನಿಲ್ಲುವವಳಲ್ಲ !

ಕರ್ನಾಟಕದ ಕಾವೇರಿ ಭೂ ಪ್ರದೇಶದಲ್ಲಿ ಯಥೇಚ್ಛ ಮಳೆಯಾದರೆ, ಕಾವೇರಿ ನದಿ ಪಾತ್ರದಲ್ಲಿನ ಭೂ ಪ್ರದೇಶದಲ್ಲಿ ಬರಗಾಲ ಹೇಗೆ ಸಾಧ್ಯ ಅಂತ ದೆಹಲಿಯಲ್ಲಿನ ಮಹಾ ಮೈಂಡುಗಳಿಗೆ ಹೊಳೆಯುವುದಿಲ್ಲ. ನಲವತ್ತು ಜನ ಹೋಗಿ ತಮಿಳು ನಾಡಿಗೆ ನೀರು ತಂದರು. ಕರ್ನಾಟಕದಿಂದಲೂ ಒಂದು ನಿಯೋಗ ಹೋಗಿತ್ತು. ಅದರಿಂದೇನಾಯ್ತೋ? ಕಾವೇರಿ ನೀರಿನ ವಾಲ್ವ್‌ ತಿರುಗಿಸೋದಕ್ಕೆ ದೆಹಲಿಗೆ ಹೋಗೋದು ಬ್ಯಾಡಾ ಸ್ವಾಮೀ ಅಂತ ಸುಮ್ಮನೇ ಬಂದಿರಬೇಕು! ಈ ಐಟಿ-ಬಿಟಿ ಯುಗದಲ್ಲಿ ಕಾವೇರಿ ನೀರಿನ ವಾಲ್ವ್‌ನ್ನು ದೆಹಲಿಯಲ್ಲೇ ಏಕೆ ಇಡಬಾರದು. ಆಗ ಯಾರೂ ಎಲ್ಲಿಗೂ ಹೋಗಬೇಕಾದ್ದೂ, ಹೇಳಬೇಕಾದ್ದೂ ಇಲ್ಲ. ದೆಹಲಿ ದೊರೆಗಳು ತಮ್ಮಿಷ್ಟದಂತೆ ವಾಲ್ವ್‌ ತಿರುಗಿಸಿಕೊಳ್ಳುತ್ತಿರಲಿ, ಕಾವೇರಿಯನ್ನು ಬೇಗನೇ ಸಮುದ್ರ ಸೇರಿಸಲಿ, ಜೈ ಕಾವೇರಿ!

‘ಸಿಂಗ್‌’ಳೀಕರ ಕಾಲ : ಎಂಥಾ ಕಾಲ ಬಂತು ನೋಡಿ! ಕೇಂದ್ರದಲ್ಲಿ ಮನಮೋಹನ್‌ ಸಿಂಗ್‌, ಕರ್ನಾಟಕದಲ್ಲಿ ಧರಮ್‌ ಸಿಂಗ್‌. ಬೆಂಗಳೂರಿನಲ್ಲಿ ಪೋಲಿಸ್‌ ವರಿಷ್ಠಾಧಿಕಾರಿಯಾಗಿ ಎಂ. ಡಿ. ಸಿಂಗ್‌. ರಾಜ್ಯದ ಮುಖ್ಯ ಕಾರ್ಯದರ್ಶಿಗಳೂ ಚಿರಂಜೀವಿ ಸಿಂಗ್‌ ಅಂತೆ! ಯಾರಿಗೆ ಗೊತ್ತು. ನಿಮ್ಮ ಹೆಸರನ್ನೂ ‘ಸಿಂಗ್‌’ ಆಗಿ ಪರಿವರ್ತಿಸಿಕೊಂಡರೆ ನಿಮಗೂ ಸಿಗಬಹುದೊಂದು ಚಾನ್ಸು.

ನಮ್ಮಲ್ಲಿ ಮುಖ್ಯಮಂತ್ರಿಗಳ ಆಯ್ಕೆ ಆಗೋ ವಿಧಾನ ಬಹಳ ವಿಶೇಷವಾದದ್ದು ನೋಡಿ. ನಿಮಗೆ ಸಾಮರ್ಥ್ಯ ಇರಲಿ ಇಲ್ಲದಿರಲಿ, ಪಕ್ಷದಲ್ಲಿ ಮೂರ್ನಾಲ್ಕು ದಶಕಗಳ ಕಾಲ ನೆಲೆ ನಿಂತಿರೋ ನೀವೂ ಸಹ ಸಿ.ಎಮ್‌. ಆಗಬಹುದು. ಹಂಗಂತ ಧರಂ ಸಿಂಗರನ್ನು ತೇಜೋವಧೆ ಮಾಡ್ತಾ ಇಲ್ಲ. ಧರಂ ಸಿಂಗ್‌ ಕಾಲ್ಗುಣ ಚೆನ್ನಾಗಿದೆ ಅಂದೆ. ತುಂಬಲಾರದ ಕೆರೆಕಟ್ಟೆ ತುಂಬಿವೆ. ಇವರು ಬಂದ ಮೇಲೆ ಹಳೆ ಸರ್ಕಾರದ ಅನಾವೃಷ್ಟಿ ಪರಿಹಾರದ ಜೊತೆಯಲ್ಲಿ, ಈಗಿನ ಅತಿವೃಷ್ಟಿಯ ಪರಿಹಾರವನ್ನೂ ನಿಡ್ತಾ ಯಿದ್ದಾರೆ.

ಉತ್ತರ ಕರ್ನಾಟಕದವರ ಕಥೆ ಬಿಡಿ. ಗುಲ್ಬರ್ಗದವರ ವ್ಯಥೆ ಕೇಳಬೇಡಿ. ಜೇವರ್ಗಿಯವರ ಲಕ್‌ ನೋಡಿ ಸ್ವಾಮಿ. ಅವರ ಪ್ರಾಂತ್ಯದಲ್ಲಿ ಧರಂ ಬಂದೊಡನೆ ಲೋಕೋಪಯೋಗಿ ಇಲಾಖೆಯ, ಗರಂ ಆಗಿರೋ ರಸ್ತೆ ತಂಪಾಗಿಸುವ ಕೆಲಸವನ್ನು ಸ್ವತಃ ಮಳೆರಾಯನೇ ವಹಿಸಿಕೊಂಡನಂತೆ!

ದೇವರ ಶಾಪ : ಅದ್ಯಾವ ದೇವರ ಶಾಪವೋ ಕನ್ನಡಿಗರ ಮೇಲೆ ಗೊತ್ತಿಲ್ಲ! ಮತ್ತೆ ಇನ್ನೇನು, ನಮ್ಮ ರಾಜ್ಯದಲ್ಲಿ ಪರಭಾಷಾ ಚಲನಚಿತ್ರವನ್ನು ಬಿಡುಗಡೆ ಏಳು ವಾರಗಳ ಕಾಲ ನಿಧಾನವಾಗಲಿದೆ! ಕೊನೆಗೂ ನಮ್ಮ ಚಿತ್ರರಂಗ ಉಳಿಸಲು ಈ ಒಂದು ಮುಖ್ಯ ನಿರ್ಧಾರ ಅಗತ್ಯ. ಸರಿ ಕನ್ನಡ ಸಿನಿಮಾಗಳಿಗೆ ಥಿಯೇಟರ್‌ಗಳಿಗೆ ಬರುವಂತೆ ನಮ್ಮ ಜನರಿಗೆ ಏನಾದರೂ ಮೋಡಿ ಹಾಕೋದರ ಬಗ್ಗೆ ಯೋಚಿಸಿದ್ದೀರೋ ಇಲ್ಲವೋ?

ಇರೋ ಸಿನಿಮಾ ಮಂದಿರಗಳನ್ನು ಬೀಳಿಸಿ. ಷಾಪಿಂಗ್‌ ಕಾಂಪ್ಲೆಕ್ಸ್‌ ಮಾಡದಿರುವಂತೆ ತಡೆಯಲು ಯಾವುದಾದರೂ ಕಾನೂನಿದೆಯೇ? ಅಥವಾ ಅದನ್ನು ಜಾರಿಗೊಳಿಸಲು ಮತ್ತಷ್ಟು ಕಾನೂನುಗಳನ್ನು ಜಾರಿಗೊಳಿಸಬೇಕಾಗುತ್ತೇನೋ? ಸರಕಾರದ ಧೋರಣೆಯಿಂದ ನಮ್ಮ ಬೆಂಗಳೂರು ಸುತ್ತ ಮುತ್ತಲಿನಲ್ಲಿ, ಗಡಿ ಪ್ರದೇಶಗಳ ಚಿತ್ರ ಮಂದಿರಗಳಲ್ಲಿ ದೊಡ್ಡ ಕೋಲಾಹಲವೇ ಆಗಲಿದೆ.

‘ಹೊಸೂರು ಪರಿಣಾಮ’ವನ್ನು ನೀವಿನ್ನೂ ಮರೆತಿಲ್ಲವಷ್ಟೇ? ಪರಭಾಷಾ ಚಿತ್ರಗಳು ಬೆಂಗಳೂರಿನಲ್ಲಿ ಬಿಡುಗಡೆಯಾಗ ದಿದ್ದರೇನಾಯ್ತು, ಹೊಸೂರಿನಲ್ಲಾಗಬಹುದಲ್ಲಾ ? ಬೆಂಗಳೂರಿಗರು ಹೊಸೂರಿಗೆ ಹೋದರಾಯ್ತು ಬಿಡಿ. ಇದೇ ಹಿನ್ನೆಲೆಯಲ್ಲಿ ಹೊಸೂರಿನಲ್ಲಿ ಚಿತ್ರೋದ್ಯಮಕ್ಕೆ, ಪ್ರವಾಸೋದ್ಯಮಕ್ಕೆ ಒಂದು ಒಳ್ಳೆ ಅವಕಾಶವೂ ಇದೆ. ತ್ವರೆ ಮಾಡಿ ಹಣಹಾಕಿ, ಅದು ಬೆಳೆಯುವುದನ್ನು ನೋಡಿ! ನಕಲಿ ವಿಡಿಯೋ ಕ್ಯಾಸೆಟ್ಟು, ವಿಸಿಡಿ ತಯಾರಕರೇ ನಿಮಗೆ ಅಮೃತ ಘಳಿಗೆ ಒಕ್ಕರಿಸಿಕೊಂಡು ಬಂದಿದೆ. ಸಿನಿಮಾಗಳನ್ನು ಒರಿಜಿನಲ್ಲಾಗಿ, ಥಿಯೇಟರ್‌ನಲ್ಲೇ ನೋಡಬೇಕು ಅಂತ ಜನ ಬಯಸೋ ಕಾಲ ಈಗಿಲ್ಲ.

ನಾವೆಲ್ಲ ಒಂದೇ : ನಾವು ಬಹಳ ಚೆನ್ನಾಗಿ ಒಂದಾಗಿ ಬಿಡುತ್ತೇವೆ. ದುರಂತ ಹಾಗೂ ಶೋಕದ ವಿಷಯದಲ್ಲಿ ನಾವೆಲ್ಲ ಒಂದೇ. ಭೂಕಂಪ ಸಂತ್ರಸ್ತರಿಗೆ, ನೆರೆ ಹಾವಳಿಯಲ್ಲಿ ನಲುಗಿದವರಿಗೆ ಎಲ್ಲೆಡೆಯಿಂದ ಪರಿಹಾರ ಹರಿದು ಬರುತ್ತದೆ. ಇತ್ತೀಚಿನ ಕುಂಭಕೋಣಂ ಘಟನೆಯಲ್ಲಿ ನೂರಾರು ಮಕ್ಕಳು ಬೆಂಕಿಯಲ್ಲಿ ಕರಕಲಾದದ್ದು ಮನ ಕರಗುವ ಸುದ್ದಿ. ಈ ಘಟನೆಯ ಹಿನ್ನೆಲೆಯಲ್ಲಿಯೇ ಮತ್ತೊಂದು ಸುದ್ದಿ ಬಂದದನ್ನು ಹೆಚ್ಚು ಜನ ಗಮನಿಸಿಲ್ಲ.

ಹೌದು. ಕೇಂದ್ರ ಸರ್ಕಾರದ ಒಂದು ಕೋಟಿ ರುಪಾಯಿಯನ್ನು ಪರಿಹಾರ ಕಾರ್ಯಗಳಿಗಾಗಿ ಸೋನಿಯಾ ಗಾಂಧಿ ವಿತರಿಸಿದ್ದಾರೆ. ಆ ಹಣ ಅವರ ಪಾರ್ಟಿ ಅಕೌಂಟಿನಿಂದ ಬಂದದ್ದೇನು? ದೇಶದ ಹಣವನ್ನು ವ್ಯಯಿಸಲು ಆಡಳಿತ ಪಕ್ಷದ ಅಧ್ಯಕ್ಷರಿಗೆ ಎಷ್ಟು ಹಕ್ಕಿದೆ? ಗುಜರಾತ್‌ ಸಂತ್ರಸ್ತರಿಗೆ ನೆರವಿಗೆ ಸಂಗ್ರಸಿದ ಹಣ, ಸಂತ್ರಸ್ತರ ಕೈ ಸೇರುವ ಬದಲು ಇನ್ಯಾರನ್ನೋ ಸೇರಿದೆ ಎಂದು ಓದಿದ ನೆನಪು. ಈ ವಿಚಾರಗಳನ್ನು ಗಟ್ಟಿಯಾಗಿ ಹೇಳಬೇಡಿ! ಯಾಕೆಂದರೆ, ಇದು ಸಿಂಗರ ಕಾಲ!

ಮುಖಪುಟ / ಎನ್‌ಆರ್‌ಐ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more