ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಗನ್ನಾಟಕ ಸೂತ್ರಧಾರಿ ಜಗನ್ಮೋಹನ ಕೃಷ್ಣ ಬಂದಾನೊ

By Staff
|
Google Oneindia Kannada News

ಸಕಲ ಗುಣ ಸಂಪನ್ನ ರಾಮನಿಗಿಂತಲೂ ಅವನ ಅವತಾರವಾದ ಮೋಹನಾಂಗ ಕೃಷ್ಣ , ನಮ್ಮಿಂದ ಭಜಿಸಲ್ಪಟ್ಟು, ಪೂಜಿಸಲ್ಪಡುವುದಷ್ಟೇ ಅಲ್ಲದೆ ನಮ್ಮ ಪ್ರೀತಿಗೂ ಪಾತ್ರನಾಗುತ್ತಾನೆ. ಬದುಕಿನ ಎಲ್ಲ ಘಟ್ಟಗಳಲ್ಲೂ ಮನುಷ್ಯ ರಮಿಸಿ ಮುದ್ದಾಡುವ ದೈವ ಶ್ರೀ ಕೃಷ್ಣ. ಹಿಂದೂಗಳ ದೈವಿಕ ಸೆಲೆಯ ಪರಮೋತ್ಕೃಷ್ಟ ಸೃಷ್ಟಿ ಶ್ರೀ ಕೃಷ್ಣ ಪರಮಾತ್ಮ. ‘ಗುಡಿ ಚರ್ಚು ಮಸಜೀದುಗಳ ಬಿಟ್ಟು ಹೊರ ಬನ್ನಿ..’ ಎಂದ ಪ್ರಕಾಂಡ ವೈಚಾರಿಕ ಮನಸ್ಸಿಗೂ ಅಧ್ಯಾತ್ಮದ ಸಿರಿಯುಣಿಸಿದ ಅದ್ಭುತ ದೈವವೂ ಶ್ರೀ ಕೃಷ್ಣ . ರಸಋಷಿ ಕುವೆಂಪು ಅವರ ಪಂಪ ಭಾರತದ ವಿಮರ್ಶೆ ಓದುತ್ತಿದ್ದಂತೆ, ನನಗೆ ಅಚ್ಚರಿ ಹುಟ್ಟಿಸುವಷ್ಟು ಎದ್ದು ಕಾಣಿಸಿದ್ದು ಕುವೆಂಪುವಿನ ಅಧ್ಯಾತ್ಮಿಕತೆ ಮತ್ತು ಹರಿ ಭಕ್ತಿ. ಸೃಷ್ಟಿ ಶಕ್ತಿಯ ಅಗಾಧತೆಗೆ ದೇವರ ರೂಪ ಕೊಡುವ ಮನುಷ್ಯನ ಪರಿ ಹೊಸದಲ್ಲವೆನ್ನಿ. ಆದರೆ ಆ ಪರಿಕಲ್ಪನೆಯಲ್ಲಿ ನಳನಳಿಸಿ ಹೊಳೆಯುವ ಕಲ್ಲು, ಕೃಷ್ಣ. ಅಂತೆಯೇ, ಜನ್ಮಾಷ್ಟಮಿಯ ಸಂದರ್ಭದಲ್ಲಿ ನನ್ನ ಈ ಅನಿಸಿಕೆಗಳು. ಆಸ್ತಿಕರು ಕೋಪಗೊಳ್ಳದೆ ಇದೆಲ್ಲವೂ ಶ್ರೀಕೃಷ್ಣನದೇ ಮೋಹಜಾಲವೆಂಬುದನ್ನು ಮರೆಯದೆ ಓದುವಿರಂತೆ.

Hare Krishna Hare Krishna....ರಾಮನಿಗೆ ಬರೇ ಪಾನಕ ಕೋಸಂಬರಿ ಕೊಟ್ಟು , ಕೃಷ್ಣನಿಗೆ ಉಂಡೆ, ಚಕ್ಕುಲಿ, ಬೆಣ್ಣೆ, ಮೊಸರು, ಅವಲಕ್ಕಿಗಳ ಔತಣ ಕೊಡುವ ನಮ್ಮ ಭಕ್ತಿಯ ವರಸೆಯದೇ ಒಂದು ಚೆನ್ನು. ಬಾಲ್ಯದಲ್ಲಿ ಬೆಣ್ಣೆ ಕದ್ದವನನ್ನು ಪೂಜಿಸಿ ಹಸಿವಿಗೆ ರೊಟ್ಟಿ ಕದ್ದ ಮಗುವನ್ನು ಹೊಡೆವ ತಾಯಿಯರನ್ನು ನೋಡಿದ್ದೇವೆ. ರಾಧೆ, ಸತ್ಯೆ ರುಕ್ಮಿಣಿಯರಷ್ಟೆ ಸಾಲದೆ ನಮ್ಮ ಮೀರೆಯೂ ಅವನ ಹಿಂದೆ ಹೋದರೂ ಪೂಜಿಸುವ ಆಸ್ತಿಕರು ಕಲಿಯುಗದ ರಾಧೆಯರನ್ನು ಕಂಡರೆ ಕೆಂಡವಾಗುವುದನ್ನು ನೋಡಿದ್ದೀರಿ. ಅವನ ಪ್ರಣಯದಾಟಗಳನ್ನೆಲ್ಲ ಭಕ್ತಿಯಿಂದಲೇ ಪಠಿಸಿ ಪೂಜಿಸುವ ಸನ್ಯಾಸವನ್ನೂ ನೋಡಿದ್ದೀರಿ. ಫಲಾಫಲಗಳ ನಿರೀಕ್ಷೆಯಿಲ್ಲದೆ ಯುದ್ಧ ಸನ್ನದ್ಧನಾಗೆಂದವನು, ಗೆಲುವಿಗಾಗಿ ನಡೆಸುವ ನಾಟಕಗಳನ್ನು ಹಾಡಿ ಹೊಗಳಿದ ಆಸ್ತಿಕ ಸಮಾಜದಲ್ಲಿಯೇ ಜೀವಿಸುತ್ತಿದ್ದೇವೆ.

ಬದುಕು ಕಣ್ಣಿಗೆ ಕಂಡದ್ದಷ್ಟೇ ಅಲ್ಲ ಎಂಬುದಕ್ಕೆ ಸಾಕ್ಷಿಯಾಗಿ, ಪರಮಾತ್ಮ ಎಲ್ಲ ಜೀವಾತ್ಮರಿಂದ ಸಮ್ಮಿಳಿತವಾದ, ಎಲ್ಲರ ಬದುಕಿಗೂ ಎಟುಕುವ ಪೂರ್ಣತೆಯೆಂಬ ಪರಿಗೆ ಸರಿಯಾಗಿದ್ದಾನೆ ನಮ್ಮ ಕೃಷ್ಣ. ಅವನ ವ್ಯಕ್ತಿ ವೈಶಿಷ್ಟ್ಯದಿಂದ, ಎಲ್ಲ ಸಾಹಿತಿ ಮತ್ತು ಕಲಾವಿದರುಗಳಿಗೂ ಅವನ ಬದುಕೊಂದು ದೊಡ್ಡ ಸಿರಿಗಂಟು. ಸಾಮಾನ್ಯ ಮನುಷ್ಯರಿಗಂತೂ ದೈವತ್ವದಲ್ಲು ತಮ್ಮನ್ನು ಕಂಡುಕೊಳ್ಳಲೊಂದು ಕನಸಿನ ಸೊಗಸು ಶ್ರೀಕೃಷ್ಣ. ಅಂತೆಯೇ ನಾಸ್ತಿಕನಂತೆ ಕಪಟವೇಷಧಾರಿಯಾಗಿರುವ ಈ ಲೇಖನವೂ ಕೃಷ್ಣ ಸ್ತುತಿಯೆಂಬುದು ನನ್ನ ಸ್ನೇಹಿತನೊಬ್ಬನ ಕುಹಕ.

ನರನಾಟಕದ ಕಪಟ ಸೂತ್ರಧಾರಿಗೆ ನಮೋನಮಃ

ಬೆಣ್ಣೆ ಕದ್ದೂ ತಾಯ ಗೆದ್ದೆ
ಹೆಣ್ಣ ಕದ್ದೂ ಹೆಣ್ಣನ್ನೆ ಗೆದ್ದೆ
ನಾರಿಯಿದ್ದೂ ಪರ ನಾರಿಯರ ಗೆದ್ದೆ
ಧರ್ಮವೆಂದರೆ ಅ-ಧರ್ಮವಲ್ಲವೆಂದೆ
ಆರ್ಯಾವರ್ತಕ್ಕೇ ಆರ್ಯ ಧರ್ಮ ಕಲಿಸಿದೆ
ಕಪಟಸೂತ್ರಗಳ ಕಂತೆಯೆಂದವರೂ
ನಿನ್ನ ನಾಟಕದ ರಂಗಪೂಜೆ ಮಾಡುವವರೆ
ನಿನ್ನ ನೆಚ್ಚಿದ ಜನಕೆ ನೀ
ರಾಮನದೇ ಅವತಾರವಂತೆ

ತನ್ನ ಮನಸಿನ ಜಾಲ ಜಂಗೆಲ್ಲ
ನರ ಕಂಡ ನಿನ್ನ ನಾಮದಂಚಿನಲ್ಲೆ
ನರ ಮಾತ್ರನಿಗೆ ದಕ್ಕದ್ದನ್ನೆಲ್ಲ
ನಾರಾಯಣನಿಗೆ ನರ ಇತ್ತಂದಿನಿಂದ
ಕೃಷ್ಣ ನೀ ಕದಿಯಬೇಕಾಗಿಲ್ಲ
ಅರ್ಥ ಪಾರಮಾರ್ಥವನ್ನೆಲ್ಲ
ಮನುಜ ನಿನಗಿತ್ತಿಹನಲ್ಲ

ಮೀರೆಯರ ಕನಸಿನಲ್ಲಿ ರೂಪುಗೊಂಡೆಯಾ ನೀನು
ರಾಧೆಯರ ಗುಂಗಿನಲ್ಲಿ ಗಚ್ಚಾಗಿ ಅಚ್ಚಾಗಿರುವೆ
ರುಕ್ಮಿಣೀ ಸತ್ಯೆಯರ ಕಲಹಗಳ ಸಖನಾದೆ
ಭಾರತದ ನಾರಿಗೋ ಅಪ್ರತಿಮ ಮೋಹನನಾದೆ

ನರನ ಸಖ್ಯ ಬಿಡಲಾರದ ನಾರಾಯಣನೊ ನೀನು
ನರಗೆ ಆರ್ಯಧರ್ಮ ಕಲಿಸಿದ ಅನಾರ್ಯ ಮೋಹನ ನೀನು
ಮೋಕ್ಷದ ಮೋಹ ಮುಕ್ಕಿರುವ ನರನಿಗೆ
ಜೀವದ ವಾಸನೆ ತಾಳಲಾರದವರಿಗೆ
ಧರ್ಮ ಕರ್ಮ ಸೂತ್ರ ಭೋದಿಸಿದೆ

ಇಹದ ಮೋಹ ಮೀರಲಾರದ ಮಿತ್ರ ಪಾರ್ಥ
ಪರ-ಧರ್ಮ ಮೋಹ ಪರವಶ ಧರ್ಮಜ
ಪರದ ಮೋಹ ಸತ್ಯವೆಂದು ಸಾರಿ
ಮೆರೆದೆ ನೀ ಇಹ ನಾಟಕ ಸೂತ್ರಧಾರಿ

ಭ್ರಾತೃ ಬಂಧುಗಳ ನಡುವೆ
ಕೆಳೆತನದಿ ಜಿದ್ದು ಗೆದ್ದೆ
ಧರ್ಮ ಕರ್ಮಗಳ ಸಮನ್ವಯದಲ್ಲಿ
ನಿಷ್ಕಾಮ ಕರ್ಮ ಭೋದಿಸಿದೆ.
ಇಹಪರಗಳ ಮೋಹಪಾಶದಲ್ಲಿ
ಸೃಷ್ಟಿ ಸೆಲೆಯ ಹರಿಯಿಸಿದೆ.

ನರನ ಮನದಿ ನಸೆನಸೆ ನಾರಾಯಣ
ನಾರಿಯರ ಮನದಿ ಕನಸಿನ ಮೋಹನ
ರಾಮ ಪೂಜಾರ್ಹನಷ್ಟೆ ಕೃಷ್ಣ ನೀನು ಪ್ರೀತಿಗೂ ಪಾತ್ರ
ರಾಮನೆಂದರೆ ಅತಿಮಾನವ ಏಕ ಪತ್ನಿಯ ವ್ರತ
ನರನಿಂದ ನಡತೆ ಕಲಿತ ನಾರಾಯಣನೆ ಕೃಷ್ಣ
ನರನಾಟಕದ ಕಪಟಸೂತ್ರಧಾರಿ
ಕೃಷ್ಣ ನಿನಗೆ ನಮೋನಮಃ


ಪೂರಕ ಗದ್ಯ :
ಬೃಂದಾವನದಲಿ ಆಡುವನಾರೇ?
ಕೃಷ್ಣ - ದೇವರುಗಳ ನಡುವಿನ ಮನುಷ್ಯ
ಪೂರಕ ಪದ್ಯ :
ಕೃಷ್ಣ ಜಯಂತಿ ದಿನ


ಮುಖಪುಟ / ಎನ್‌ಆರ್‌ಐ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X