• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶ್ರೀನಿವಾಸಭಟ್ಟರು ಭಾರತದಲ್ಲಿ ಏನೇನು ಕಂಡರು?

By Staff
|
  • ಕುಂಭಾಸಿ ಶ್ರೀನಿವಾಸ ಭಟ್‌, ಟ್ರಾಯ್‌, ಮಿಶಿಗನ್‌

srinivasa.k.bhat@gm.com

My Karnataka Diary-2004 by K. Srinivasa Bhatಪ್ರತೀವರ್ಷದಂತೆ ಈ ಬಾರಿಯೂ ನನ್ನ ಭಾರತ ಪ್ರವಾಸ ಮುಗಿಸಿ ಈಗತಾನೇ ಅಮೆರಿಕಾಗೆ ಹಿಂದಿರುಗಿದೆ. ನನ್ನ ಭಾರತ ಪ್ರವಾಸದ ಮುಖ್ಯ ಉದ್ದೇಶ, ವಯಸ್ಸಾದ, ಅನಾರೋಗ್ಯದಿಂದ ಬಳಲುತ್ತಿರುವ ತಂದೆ, ತಾಯಿಯವರನ್ನು ಕಣ್ಣಾರೆ ಕಂಡು ಎರಡು ಸಾಂತ್ವನದ ಮಾತುಗಳನ್ನಾಡಿ, ಅವರ ಜತೆ ಕೆಲವು ದಿನಗಳನ್ನು ಕಳೆಯುವುದು. ಈ ಬಾರಿಯೂ ನನ್ನ ಹುಟ್ಟೂರಾದ ಕುಂಭಾಶಿಗೆ ಮೊದಲನೆಯ ಭೇಟಿ. ಅಲ್ಲಿ ನಮ್ಮ ಅಜ್ಜನ ಮನೆ, ಮಾರ್ಕೋಡಿನಲ್ಲಿ ಸೋದರಮಾವನವರ ಕುಟುಂಬದ ಸಂದರ್ಶನ. ಹಾಗೇ ಅನಾರೋಗ್ಯದಲ್ಲಿರುವ ಇನ್ನೊಬ್ಬ ಹಿರಿಯರಿಗೆ ಸಾಂತ್ವನದ ನುಡಿಗಳು, ನಮ್ಮ ಸಂಸ್ಥೆ, ‘ಸತ್ಕಾರ್ಯ’ದ ಕಾರ್ಯಕ್ರಮಗಳ ನಿಯೋಜಕರೊಂದಿಗೆ ಈ ವರುಷದ ‘ಸತ್ಕಾರ್ಯ’ ವಿದ್ಯಾರ್ಥಿ ವೇತನಗಳನ್ನು ಹಂಚುವ ಬಗ್ಗೆ ಮತ್ತು ಇತರ ಯೋಜನೆಗಳ ಬಗ್ಗೆ ಮಾತುಕತೆ, ನಮ್ಮೂರ ದೇವಸ್ಥಾನಕ್ಕೆ ಭೇಟಿ, ಇತ್ಯಾದಿ ನನ್ನ ಮಾಮೂಲು ಚಟುವಟಿಕೆಗಳನ್ನು ಮುಗಿಸಿ ನನ್ನ ತಾಯಿತಂದೆಯರ ಜತೆಗೆ ಬೆಂಗಳೂರಿಗೆ ಬಂದು ನನ್ನ ತಂಗಿಯ ಮಗನ ಮದುವೆ ಹಾಗೂ ತುಮಕೂರಿನಲ್ಲಿ ತಮ್ಮನ ಮಗಳ ಮದುವೆ ಮುಗಿಸಿ ತಿರುಗಿ ಅಮೇರಿಕಾಗೆ ವಾಪಾಸು ಬಂದೆ.

ಪ್ರತೀ ಭೇಟಿಯಲ್ಲೂ ಭಾರತದಲ್ಲಾಗುತ್ತಿರುವ ಬದಲಾವಣೆಗಳನ್ನು ನೋಡಿದಾಗ ನನಗೆ ಸಂತೋಷ ಮತ್ತು ವ್ಯಥೆಗಳಾಗುತ್ತವೆ. ನಮ್ಮ ಹೊಸ ಜನಾಂಗವು ಸಂಪದ್ಭರಿತವಾಗಿ ಬೆಳೆಯುತ್ತಿರುವುದನ್ನು ನೋಡಿ ಸಂತೋಷವಾದರೆ, ಬಿರುಕಾಗಿ ಒಡೆದು, ಶಿಥಿಲವಾಗುತ್ತಿರುವ, ಕೌಟುಂಬಿಕ ವ್ಯವಸ್ಥೆಗಳನ್ನು ಪರಿಶೀಲಿಸಿದಾಗ ವ್ಯಥೆಯೂ ಆಗುತ್ತದೆ. ಬದಲಾವಣೆ ಪ್ರಕೃತಿಯ ಸಹಜ ಗುಣವಾದರೂ, ಇಲ್ಲಿನ (ಅಮೆರಿಕಾ ಸಂಸ್ಕೃತಿ) ಪರಿಸ್ಥಿತಿಗೆ ಮೆಲ್ಲಗೆ ಬರುತ್ತಿರುವ ಅಲ್ಲಿನ ಹೊಸಜನಾಂಗದ ಬಗ್ಗೆ ಸ್ವಲ್ಪ ಮನಸ್ಸಿನಲ್ಲಿ ಕಾಳಜಿ ಬರುತ್ತದೆ. ಭಾರತದಲ್ಲಿ ಈ ಬಾರಿ ನಾನೇನು ಕಂಡೆ? ಕೆಲವು ಅನಿಸಿಕೆಗಳನ್ನು ನಿಮ್ಮೊಡನೆ ಹಂಚಿಕೊಳ್ಳುವ ಉದ್ದೇಶದಿಂದ ಈ ಟಿಪ್ಪಣಿಗಳನ್ನು ನಿಮ್ಮ ಮುಂದಿಡುತ್ತಿದ್ದೇನೆ.

  • ಆರ್ಥಿಕ ಸ್ವಾವಲಂಬನೆಯ ಫಲಶ್ರುತಿಯೆಂದರೆ ವೈಚಾರಿಕ ಸ್ವಾತಂತ್ರ್ಯ ಹಾಗೂ ಇತರರ ಬಗ್ಗೆ ಇರುವ ತಾಳ್ಮೆ ಮತ್ತು ಸಹನೆಗಳು ಕಡಿಮೆ ಆಗುವುದು. ತಮ್ಮ ತಾಯಿತಂದೆಗಳ, ಮತ್ತು ಕುಟುಂಬದ ಇತರ ಸದಸ್ಯರ ಬಗ್ಗೆ ಇರುವ ಸದ್ಭಾವನೆಗಳು ಸ್ವಲ್ಪ, ಸ್ವಲ್ಪವಾಗಿ ಕಡಿಮೆ ಅಗುತ್ತಿದ್ದರೂ, ಮದುವೆಯಾಗಿ ಬಂದ ಹೊಸ ಸಂಗಾತಿಗೆ ಈ ಬಗ್ಗೆ ಸ್ವಲ್ಪವೂ ಸಹನೆ, ಗೌರವಗಳಿಲ್ಲದೇ, ತಾಳ್ಮೆಯ ಜಾಗದಲ್ಲಿ ದ್ವೇಷ, ಸಿಟ್ಟುಗಳು ಸೇರಿಕೊಂಡು ಕುಟುಂಬ ಒಡೆಯುವ ಪರಿಸ್ಥಿತಿ ಬರುತ್ತಿದೆ. ತಮ್ಮನ್ನು ಹುಟ್ಟಿನಿಂದ, ಬೆಳೆಯುವ ತನಕ ಪೋಷಿಸಿ, ವಿದ್ಯಾವಂತರನ್ನಾಗಿ ಮಾಡಿ, ಒಂದು ಮಟ್ಟಕ್ಕೆ ತಂದಿರಿಸಿದ ತಾಯಿತಂದೆಗಳಿಗಿಂತಲೂ, ಹೊಸದಾಗಿ ಸಂಬಂಧವಾದ ಬಾಳ ಜತೆಗಾರ/ಜತೆಗಾತಿ ಯರ ಅಭಿಪ್ರಾಯಕ್ಕೇ ಜಾಸ್ತಿ ಮನ್ನಣೆ ದೊರೆಯುತ್ತದೆ.
  • ಅವಿಭಕ್ತ ಕುಟುಂಬಗಳು ಅಪರೂಪವಾಗುತ್ತಿವೆ. ಆರ್ಥಿಕವಾಗಿ ಹಿಂದುಳಿದವರಲ್ಲೂ, ಮದುವೆ ಆದೊಡನೆ ಬೇರೆ ಮನೆ ಮಾಡುವುದು ಬಹಳ ಸಾಮಾನ್ಯವಾಗಿದೆ. ಇದರಿಂದ ವಯಸ್ಸಾದವರನ್ನು ನೋಡಿಕೊಳ್ಳುವವರು ಇಲ್ಲವಾಗಿದೆ. ಹಿರಿಯ ನಾಗರೀಕರನ್ನು ನೋಡಿಕೊಳ್ಳುವ ಜವಾಬ್ದಾರಿಯ ವರ್ತನೆ ಸರಕಾರದ ವಲಯದಲ್ಲಿ ಕಾಣುತ್ತಿಲ್ಲ. ಇರುವ ಕೆಲ ಕಾರ್ಯಕ್ರಮಗಳು ಅನುಷ್ಠಾನಕ್ಕೆ ಬರುವ ಸಾಧ್ಯತೆ ಕಾಣುತ್ತಿಲ್ಲ. ಇದರಿಂದ ವಯಸ್ಸಾದವರು ಆರ್ಥಿಕವಾಗಿಯೂ, ಮಾನಸಿಕವಾಗಿಯೂ, ಸಮಾಜದಲ್ಲಿ ನೋವನ್ನು ಅನುಭವಿಸುತ್ತಿದ್ದಾರೆ. ಈ ಬಗ್ಗೆ ಒಬ್ಬ ಎಂ. ಎಲ್‌. ಎ. ಜತೆ ಚರ್ಚಿಸುವ ಅವಕಾಶ ಸಿಕ್ಕಿತು. ಆದರೆ ಅವರು ಈ ಸಮಸ್ಯೆ ಸರಕಾರದ ಸಮಸ್ಯೆ ಎಂದು ಒಪ್ಪಲಿಲ್ಲ!
  • ನನ್ನ ಮಿತ್ರನೊಬ್ಬನ ಮಕ್ಕಳು ತಮ್ಮನ್ನು ತಮ್ಮ ಜಮೀನಿನಲ್ಲಿ ಕೃಷಿ ಮಾಡುವುದರಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಆದಾಯವೇ ಇವರ ಜೀವನೋಪಾಯಕ್ಕೆ ದಾರಿ. ಗೋವಧೆಯನ್ನು ನಿಲ್ಲಿಸಲು ಭಜರಂಗದಳದವರ ಪ್ರಯತ್ನಗಳು ಸಫಲವಾದ ಬಳಿಕ, ಎತ್ತುಗಳನ್ನು, ಮತ್ತು ಹಾಲು ಕೊಡದ ಹಸುಗಳನ್ನು ಕೇಳುವವರಿಲ್ಲವಾಗಿದೆ. ಈಗ ಎತ್ತಿನ ಗಾಡಿಗಳು ಇಲ್ಲದ ಕಾರಣ, ಉಳುವ ಸಮಯ ಬಿಟ್ಟರೆ, ಎತ್ತುಗಳಿಗೆ ಕೆಲಸವಿಲ್ಲ. ಗೋ ಸಂರಕ್ಷಣಾಕೇಂದ್ರಗಳಲ್ಲಿ ಅವಕಾಶವಿಲ್ಲದ ಕಾರಣ, ದನಗಳನ್ನು, ಎತ್ತುಗಳನ್ನು ಬೇಕಾಬಿಟ್ಟಿಯಾಗಿ ಊರವರು ಬಿಟ್ಟಿದ್ದಾರೆ. ಈ ಅಲೆಮಾರಿ ಪ್ರಾಣಿಗಳು ಹಗಲು, ರಾತ್ರಿ ಎನ್ನದೆ ಹೊಲಗಳಿಗೆ ನುಗ್ಗಿ ಅವರ ಫಸಲನ್ನು ತಿಂದು ನಾಶ ಮಾಡುತ್ತಿವೆ. ಇದರಿಂದ ಕೃಷಿಕರಿಗೆ ಬಹಳ ತೊಂದರೆ ಆಗಿದೆ. ಈ ಸಮಸ್ಯೆಗೆ ಪರಿಹಾರವಿಲ್ಲ. ಇದರಿಂದ ನನ್ನ ಸ್ನೇಹಿತನ ಮಕ್ಕಳು ಕಂಗಾಲಾಗಿದ್ದಾರೆ.
  • ಮಾಮೂಲಿನಂತೆ, ಈ ಬಾರಿಯೂ ಉಡುಪಿಯ ಕೃಷ್ಣನ ದರ್ಶನಕ್ಕೆಂದು ಹೋದಾಗ ನನಗೆ ದೊಡ್ಡ ಅಚ್ಚರಿಯೇ ಕಾದಿತ್ತು. ಕೃಷ್ಣಮಠದ ಸುತ್ತ ಸಶಸ್ತ್ರ ಪೋಲೀಸರ ಕಾವಲು, ಎಲ್ಲೆಡೆಯೂ ಘೋಷಣೆಗಳನ್ನು ಕೂಗುವ ಜನಸ್ತೋಮ, ಭಿತ್ತಿಪತ್ರಗಳು, ಫಲಕಗಳು ಇತ್ಯಾದಿ ಕಾಣಬಂದುವು. ಕನಕನ ಕಿಂಡಿಯ ಜೀರ್ಣೋದ್ಧಾರದಲ್ಲಿ ತಮ್ಮ ಅಭಿಪ್ರಾಯವನ್ನು ಕೇಳಲಿಲ್ಲ, ತಮಗೆ ಕನಕನ ಪರವಾಗಿ ಮಠವೊಂದನ್ನು ಕೊಡಬೇಕು ಇತ್ಯಾದಿ ಬೇಡಿಕೆಗಳೊಂದಿಗೆ ಒಂದು ಕೋಮಿನವರು ಪ್ರದರ್ಶನ ಮಾಡುತ್ತಿದ್ದಾರೆ ಎಂದು ಪತ್ರಿಕೆಗಳಲ್ಲಿ ಓದಿದೆ. ಕನಕನೇ ಬದುಕಿದ್ದರೆ, ಅವನು ಈ ಬಗ್ಗೆ ಏನು ಹೇಳಬಹುದೆಂದು ಯೋಚಿಸುತ್ತ ಮನೆಗೆ ಬಂದೆ.
  • ಪ್ರತೀಸಾರಿ ಮಾಡುವಂತೆ, ಹೂವಿನಕೆರೆ ವಾದಿರಾಜರ ಮಠಕ್ಕೆ ದರ್ಶನಕ್ಕೆಂದು ಹೋದಾಗ ಇನ್ನೊಂದು ಆಶ್ಚರ್ಯ ಕಾದಿತ್ತು. ಯತಿ ವಾದಿರಾಜರು ಪೂಜಿಸುತ್ತಿದ್ದ ಹಯವದನ ದೇವರ ವಿಗ್ರಹವನ್ನು ವಿಗ್ರಹ ಚೋರರು, ಪೂಜೆ ಸಲ್ಲಿಸುವ ಭಕ್ತರಂತೆ ಬಂದು ಕಳ್ಳತನದಿಂದ ಅಪಹರಿಸಿದ್ದಾರೆಂದು ಪೂಜೆ ಮಾಡುವವರು ಹೇಳಿದಾಗ ಮನಸ್ಸಿಗೆ ಬಹಳ ನೋವಾಯಿತು. ಅದೇ ದಿನ ಈ ಚೋರರು ಹಲವಾರು ದೇವಾಲಯಗಳಿಂದ ವಿಗ್ರಹಗಳನ್ನು ಕದ್ದಿದ್ದಾರೆ ಎಂದಾಗ ನಮ್ಮ ಸಂಸ್ಕೃತಿಯ, ಕಲೆಯ ಒಂದು ಭಾಗವನ್ನು ಕಳೆದುಕೊಂಡ ವೇದನೆ ಆಯಿತು.
  • ಜನಜೀವನದಲ್ಲಿ ಇನ್ನೊಂದು ದೊಡ್ಡ ಬದಲಾವಣೆ ಎಂದರೆ ಔಷಧ ಮತ್ತು ಮಾತ್ರೆಗಳ ಬಳಕೆ. ಸಾಮಾನ್ಯವಾಗಿ, ಐವತ್ತರ ಮೇಲೆ ವಯಸ್ಸಾದವರೆಲ್ಲರೂ ದಿನಕ್ಕೆ ಇಪ್ಪತ್ತು, ಮೂವತ್ತು ಮಾತ್ರೆಗಳನ್ನು ತೆಗೆದುಕೊಳ್ಳುವುದು ಸಾಮಾನ್ಯವಾಗಿದೆ. ಇದರಲ್ಲಿ ಹೆಚ್ಚಿನ ಮಾತ್ರೆಗಳು ಆರೋಗ್ಯವರ್ಧಕಗಳು (ವಿಟಮಿನ್‌, ಪ್ರೋಟೀನ್‌ ಇತ್ಯಾದಿ). ಉಳಿದವು ಡಯಾಬಿಟಿಸ್‌, ಬ್ಲಡ್‌ ಪ್ರೆಶರ್‌, ಇತ್ಯಾದಿ ಕಾಯಿಲೆಗಳ ನಿವರಣೆಗಾಗಿ ಇರುವ ಮಾತ್ರೆಗಳು. ಸುಮಾರು ಅರುವತ್ತು ವರುಷವಾದ ಜನರು, ಒಂದು ಔಷಧದ ಡಬ್ಬ ಅಥವಾ ಚೀಲವನ್ನು ಹಿಡಿದುಕೊಂಡು ತಿರುಗುವ ದೃಶ್ಯ ಸರ್ವೇಸಾಮಾನ್ಯವಾಗಿ ಕಾಣಿಸಿತು. ಇಲ್ಲಿನ ಜನಜೀವನಕ್ಕೂ ಅಲ್ಲಿಗೂ ಈ ವಿಷಯದಲ್ಲಿ ಅಂತಹ ವ್ಯತ್ಯಾಸ ಕಾಣಿಸಲಿಲ್ಲ. ಇನ್ನು ಕೃತಕ ಕಾಲ್ಗಂಟು ಮತ್ತು ಹಿಪ್ಸ್‌ ಜೋಡಣೆ ಇತ್ಯಾದಿ ಬಹಳ ಸಾಮಾನ್ಯವಾಗಿ ಬಳಕೆಗೆ ಬಂದಿದೆ. ಎಂ. ಆರ್‌. ಐ ಕೂಡಾ ಸಾಮಾನ್ಯವಾಗುತ್ತಿದೆ. ಆದರೆ ಇನ್‌ಶೂರೆನ್ಸ್‌ ಇಲ್ಲದ ಕಾರಣ ಬಡ ಜನರ ಜೀವನದಲ್ಲಿ ಈ ಅನುಕೂಲತೆಗಳು ಗಗನ ಕುಸುಮವಾಗಿವೆ.
  • ಜಾಗತೀಕರಣದಿಂದ ಉದ್ಭವಿಸುತ್ತಿರುವ ಹಲವರು ಸಮಸ್ಯೆಗಳಿಗೆ ಲಾಂಗ್‌ ಟರ್ಮ್‌ ಪ್ಲಾನಿಂಗ್‌ ಯಾರೂ ಮಾಡುವ ಹಾಗೆ ಕಾಣಲಿಲ್ಲ. ರಸ್ತೆಗಳು, ಸೇತುವೆಗಳು, ಪರಿಸರದ ಬಗ್ಗೆ ಸಾಮಾನ್ಯ ಜನತೆಗಿರುವ ಕಾಳಜಿ ಸರಕಾರಕ್ಕೆ ಇದ್ದಂತೆ ಕಾಣಲಿಲ್ಲ. ಜಾತೀಯತೆ, ಕೋಮುವಾರು ದ್ವೇಷ, ಲಂಚ, ಭ್ರಷ್ಟಾಚಾರ, ಗೂಂಡಾಗಿರಿಗಳನ್ನು ಕಡಿಮೆ ಮಾಡಿ ನೈತಿಕ ಹಾಗೂ ಬೌದ್ಧಿಕವಾಗಿ ಯೋಚನೆ ಮತ್ತು ಯೋಜನೆಗಳನ್ನು ಆವಿಷ್ಕರಿಸಿ, ಅಳವಡಿಸಿಕೊಳ್ಳುವ ದೂರದೃಷ್ಟಿಯಿರುವ ನೇತಾರರ ಕೊರತೆ ಕಾಣುತ್ತಿದೆ.

ಮುಖಪುಟ / ಎನ್‌ಆರ್‌ಐ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more