• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪರವೂರಲ್ಲಿ ಕೈಹಿಡಿದ ರಾಜರತ್ನಂ ಗೀತೆಗಳೆಂಬ ‘ಪ್ರೇಮಗೋಲು’

By ಪ್ರಶಾಂತ್ ಬಿ.ಸಿ.
|

ಕವಿಗಳ ಪಾಲಿಗಂತೂ ಪ್ರೇಮ ಹಾಗೂ ಪ್ರೇಮಕ್ಕೆ ಸಂಬಂಧಿಸಿದ ಪರಿಕಲ್ಪನೆಗಳು ಸ್ಫೂರ್ತಿಯ ಸೆಲೆಯನ್ನುಕ್ಕಿಸುವ ಕಾಮಧೇನುಗಳು. ಆದರೆ ತಮಾಷೆ ನೋಡಿ. ಅನೇಕ ಕವಿಗಳು ಪ್ರೀತಿಯ ಬಗ್ಗೆ, ಪ್ರೇಮದ ಬಗ್ಗೆ, ಕಾಮದ ಬಗ್ಗೆ ಬರೆದರೂ- ಅವರೆಲ್ಲರೂ ಅದನ್ನು ಪ್ರಿಯತಮೆಗೆ, ಪ್ರಿಯಕರನಿಗೆ ಮುಡಿಪಾಗಿಟ್ಟಿರುತ್ತಾರೆ.

ಗಂಡ ಹೆಂಡತಿಯರ ಪ್ರೀತಿ, ಪ್ರೇಮ, ಸರಸದ ಬಗ್ಗೆ ಬರೆದವರು, ಬರೆದು ಸೈ ಅನ್ನಿಸಿಕೊಂಡವರು ಕಡಿಮೆ. ಅಂತಹವರಲ್ಲಿ ಮೊಟ್ಟಮೊದಲಿಗೆ ನೆನಪಾಗುವುದು ನಮ್ಮ ಮಲ್ಲಿಗೆ ಕವಿ ಕೆ. ಎಸ್‌. ನರಸಿಂಹ ಸ್ವಾಮಿ. ಅವರ ಹಿಂದೆಯೇ ಸಾಲುಗಟ್ಟಿರುವ ನಲ್ಮೆಯ ಕವಿಗಳಲ್ಲಿ - ಪ್ರೇಮದ ಬಗ್ಗೆ ಬೆಣ್ಣೆಯಲ್ಲಿ ಕೂದಲು ತೆಗೆದಷ್ಟು ಸುಲಲಿತವಾಗಿ ಅರ್ಥೈಸುವ ಲಕ್ಷ್ಮೀ ನಾರಾಯಣಭಟ್ಟ, ಮಳೆಯನ್ನು ಧರೆಗಿಳಿಸಿದ ಭಗೀರಥನಂತೆ ಪ್ರೇಮವನ್ನು ಮನಸ್ಸಿಗಿಳಿಸುವ ಬೇಂದ್ರೆತಾತ, ಕೈ ಹಿಡಿದು ಕರೆದುಕೊಂಡು ಹೋಗಿ ಮತ್ತೊಂದು ಪ್ರೇಮದೂರಿಗೆ ಬಿಡುವ ಎಚ್ಚೆಸ್‌.ವೆಂಕಟೇಶ ಮೂರ್ತಿ ಪ್ರಮುಖರು.

ಪ್ರೇಮವನ್ನು ಮುಟ್ಟಿಯೂ ಮುಟ್ಟದಂತಿರುವ ಜ್ಞಾನಪೀಠಿಗಳನ್ನೂ ಇಲ್ಲಿ ಮರೆಯುವಂತಿಲ್ಲ. ಇವರೆಲ್ಲರ ನಡುವೆ ಹೆಂಡ, ಹೆಂಡ್ತಿ, ಕನ್ನಡ ಪದ್ಗೋಳ್‌ ಅಂತ ನಮ್ಮನ್ನು ಈ ಮೂರರ ಪ್ರೀತಿಯ ಕಡೆ ಕೊಂಡೊಯ್ಯುವರು ಜಿ. ಪಿ. ರಾಜರತ್ನಂ.

ಜೀ. ಪಿ. ರಾಜರತ್ನಂ ಅವರ ಹೆಂಡ ಹಾಗು ಕನ್ನಡ ಪದ್ಗೊಳ್‌ನ್ನು ಪಕ್ಕಕ್ಕಿಟ್ಟು , ಸದ್ಯಕ್ಕವರ ಪ್ರೀತಿ, ಪ್ರೇಮ, ಸರಸಗಳ ಲೋಕದಲ್ಲೊಂದು ಸಲ ಇಣುಕುವ ; ತುಂಟತನದಿಂದ. ರಾಜರತ್ನಂ ವಿರಚಿತ, ಮೈಸೂರು ಅನಂತಸ್ವಾಮಿ ಜೀವಗಳಿಸಿರುವ ಗೀತೆಗಳಿಗೆ ಎಷ್ಟೊಂದು ಮಂದಿ ಮರುಳಾಗಿಲ್ಲ ; ಮುನಿಸಿಕೊಂಡ ದಂಪತಿಗಳು ಮತ್ತೆ ತೆಕ್ಕೆ ಹಾಕಿಕೊಂಡಿಲ್ಲ. ಕೆಲವು ಹಾಡು ಕೇಳಿದರೆ ಮೈ ಜಂ ಝುಂ! ನಾನೇ ನಿಂತು ನನ್ನ ಹೆಂಡತಿಗೆ ಹೇಳುತ್ತಿದ್ದೆನೇನೊ ಅನ್ನಿಸುವುದೂ ಉಂಟು. ರಾಜರತ್ನಂ ಹಾಡು ದೇವಲೋಕಕ್ಕೆ ಸಂಬಂಧಿಸಿದ ಪಾರಿಜಾತವಲ್ಲ. ಅದು ಈ ನಾಡಿನ, ಈ ಊರಿನ, ಈ ತೋಟದ ಚೆಂಗುಲಾಬಿ. ತೋಟದಲ್ಲಿ ಕೂಲಿ ಕೆಲಸ ಮಾಡುವ ಮಾಲಿಯಾದರೂ ಸೈ, ಈ ಗೀತೆಗಳ ನಾಯಕ, ಗೀತೆಯಲಿ ಒಂದಾಗುವ ರಸಿಕ- ಶ್ರೀಮಂತ. ಪ್ರಪಂಚವೆ ಕೀಲಿಕಳಚಿ ಬಿದ್ದರೂ ಮಡದಿಯಾಂದಿಗಿನ ಆತನ ಸರಸಕ್ಕೆ ಭಂಗವಿಲ್ಲ !

ಮೂಗ ಆದಂಗ್‌ ಆಗ್ತಿನ್‌ ನಾನು ನನ್‌ ಪುಟ್ನಂಜಿ ನಕ್ರೆ,

ಆಡ್ಬೇಕ್‌ ಅಂದ್ರೆ ಮಾತೆ ಸಿಕ್ದು ಉಕ್ಕ್‌ ಬರ್ತಿದ್ರೆ ಅಕ್ಕೆೃ’

ತನ್ನ ಹೆಂಡತಿ ನಕ್ರೆ ಏನೋ ಒಂಥರಾ ಸಂತೊಷ ಆಗುತ್ತೆ ಅನ್ನೋ ರೀತಿ ವಿವರಿಸೋವಾಗ ರಾಜರತ್ನಂ ಹೇಳ್ತಾರೆ-

ಅಳ್ತ ಒಳ್ತ ಕಣ್ಣಿನ್‌ ಬೆಳ್ಕು ನನ್‌ ಪುಟ್ನಂಜಿ ನಕ್ರೆ,

ಎಂಗಿರ್ತೈತೆ ಮಲ್ಗೆ ಹೋನ ತಿಂಗಳ್‌ಬೆಳ್ಕು ಹೋಕ್ರೆ.

ಹಳ್ಳಂತೆಳ್ಳಿನ ಬೆಳ್ಕುಗ್ತೈತೆ ನನ್‌ ಪುಟ್ನಂಜಿ ನಕ್ರೆ,

ರೆಕ್ಕೆ ಬಿಳ್ಪಿನ್‌ ತೆಗ್ದೆರ್ದಂಗೆ ಸಾನ ಮಾಡಿದ್‌ ಕೊಕ್ರೆ

ಮಲ್ಲಿಗೆ ಹೂವಿನಲ್ಲಿ ತಿಂಗಳು ಬೆಳಕು ಸೇರುವ ಕಲ್ಪನೆಯೇ ಅದ್ಭುತ. ಹೀಗಿರುವಾಗ ಆ ತಿಂಗಳ ಮಲ್ಲಿಗೆಯನ್ನು ಹೆಂಡತಿಯ ನಗೆಗೆ ಹೋಲಿಸುವ ಪರಿ ಇದೆಯಲ್ಲ ... ಅದು ರಾಜ-ರತ್ನಂ !

ಇಂಗಿಂಗೆಂತ ಎಳೂಕಾಗ್ದು ನನ್‌ ಪುಟ್ನಂಜಿ ನಕ್ರೆ,

ಸೀ ಅನ್ನೋದು ಸಬ್ದ ಮಾತ್ರ ತಿನ್ನೋಡ್ಬೇಕು ಸಕ್ರೆ

ಪುಟ್ನಂಜಿಯ ರೂಪವನ್ನು ಹೇಳಲಿಕ್ಕೆ ಕವಿ ಮಾತುಗಳು ಸಿಕ್ಕದೆ ತೊದಲುತ್ತಾನೆ. ಉಹುಂ, ಅದು ಮಾತಿಗೆ ಸಿಲುಕದು. ಅನುಭವಿಸಿಯೇ ತೀರಬೇಕು ಎನ್ನುವುದು ಕವಿಯ ಮಾತು.

ಹೆಂಡತಿ ಎದುರಿಗಿದ್ದಾಗ ಮಾತ್ರ ರಾಜರತ್ನಂ ಪ್ರೇಮದಲ್ಲಿ ಮುಳುಗುವುದಿಲ್ಲ. ಹೆಂಡತಿಯ ಗೈರುಹಾಜರಲ್ಲೂ ಅವರು ಪ್ರೇಮ ನವಾಬರೇ. ಆ ವಿರಹ ಗೀತೆಗಳನ್ನು ಕೇಳುತ್ತಿದ್ದರೆ ಉಮ್ಮಳಿಸಿ ಒದ್ದೆಯಾಗದ ಹೃದಯ ಅದಾವುದು ?

ಐನೋರ್‌ ಒಲ್ದಲ್‌ ಚಾಕ್ರಿ ಮಾಡ್ತ ಸಂಜಿ ಆಯ್ತಂದ್ರೆ,

ಚಿಂತಿ ಮಾಡ್ತೀನ್‌ ಎಂಗಿರ್ತೈತೆ ನಂಜಿ ಎದ್ಬಂದ್ರೆ.

ನಾನೆಂಗೊಯ್ತಿನ್‌ ಅದೆ ಗೊತ್ತಿಲ್ದೇನೆ ನಿಂತಿದ್ದಂಗೆನೆ,

ನಡಿತ ನಿದ್ರೆ ಬತ್ತಿನ್‌ ನಾ ನಮ್‌ ಗುಡಿಸಿಲ್‌ತಾಕೆನೆ.

ಗುಡಿಸ್ಲ್‌ಬೀಗ ತುಕ್ಕಿಡ್‌ದೈತೆ ನಂಜಿ ಅಲ್ಲಿಲ್ಲ,

ಕಣ್ಣೀರ್‌ ತುಂಬ್ಕೋಂಡ್‌ ನೋಡ್ತೀನ್‌ ಆಗ ಮನೆಮೇಲ್‌ ಮಳೆಬಿಲ್ಲ.

ಗುಡಿಸಿಲ್‌ ಬಾಗಿಲ್‌ ಬೀಗ್ದಂಗೆನೆ ಮನ್ಸಿನ್‌ ರಾಗಾನೂ,

ನಂಜಿ ಇಲ್ಲದ್‌ ಮನೆಗ್ಯಾಕ್‌ ಬರ್ತಿ ಅಂತೈತ್‌ ಬೀಗಾನು.

ಪ್ರೀತಿ ಹಣದಿಂದ ಸಾಧ್ಯವಾಗುವ ವಿಷಯವಲ್ಲ . ಅದಕ್ಕೆ ಮುಖ್ಯವಾದುದು, ಅದು ಸಾಧ್ಯವಾಗುವುದು ಮಾಗಿದ ಮನಸ್ಸಿನಿಂದ ಎನ್ನುವ ಕವಿಗೆ ಸಲಾಮು.

ಇನ್ನು ಪುಟ್ನಂಜಿಯ ರೂಪವನ್ನು ಎಷ್ಟುಬಾರಿ, ಹೇಗೆ ಹೊಗಳಿದರೂ ಕವಿಗೆ ತೃಪ್ತಿಯಿಲ್ಲ . ಹೆಂಡತಿಯ ರೂಪ ಬಣ್ಣಿಸಲು ಕಲಿತ ವಿದ್ಯೆಚಾತುರ್ಯವನ್ನೆಲ್ಲ ಬಳಸುತ್ತಾರೆ.

ಲೆ ಬ್ಯವರ್ಸಿ ನನ್ನ ಪುಟ್ನ್‌ಂಜಿನ ರೂಪನಾಡ್ತಿನ್‌ ಬಾಪ,

ನನ್ಗಾಗ್ಗಾಗೆ ಆಡಿಸ್ತೈತೆ ನನ್‌ ಪುಟ್ನಂಜಿ ರೂಪ.

ಆಲ್ನಲ್‌ ಕಮಲ್ದುವ್‌ ತೇಲ್ಬಿಟ್ಟಿ ಮೇಲೊಂದ್‌ ತೆಳ್ಳಿನ್‌ ಲೇಪ,

ಚಿನ್ನದ್‌ ನೀರ್ನಲ್‌ ಕೋಟ್ಟ್‌ಂಗೈತಿ ನನ್‌ ಪುಟ್ನಂಜಿ ರೂಪ.

ಆಮಾಸೆಲಿ ಅತ್ತಸ್ದಂಗೆ ಒಂದತ್ನೂರ್‌ ಮತಾಪ,

ಬೆಳಕಾಕ್‌ತೈತೆ ಕಂಡ್ರೆ ನನ್ಗೆ ನನ್‌ ಪುಟ್ನಂಜಿ ರೂಪ.

ಹಾಲಿನಲ್ಲಿ ಕಮಲದ ಹೂವು ತೇಲಿ ಬಿಟ್ಟು ಅದರ ಮೇಲೆ ಚಿನ್ನದ ತೆಳ್ಳನೆ ಲೇಪ ಕೊಟ್ಟರೆ ಹೇಗಿರುತ್ತದೋ ಹಾಗೆ ನನ್ನ ಹೆಂಡತಿಯ ರೂಪ. ಅಮವಾಸ್ಯೆಯಲ್ಲಿ ಒಂದು ಸಾವಿರ ಮತಾಪನ್ನು ಹಚ್ಚಿದಾಗ ಉಂಟಾಗುವ ಬೆಳಕು ಪುಟ್ನಂಜಿಯನ್ನು ಕಂಡಾಗ ಉಂಟಾಗುತ್ತದೆ ಎನ್ನುತ್ತಾರೆ ಕವಿ.

ಬಟ್ಟೆಗ್‌ ಕಪ್ಪಿನ್‌ ತೊಳ್ಯಾಕ್‌ ನಾವು ಎಂಗಾಗ್ತಿವಿ ಸೋಪ,

ಮನ್ಸಿನ್‌ ಕೆಟ್ಟ್‌ಬಾವ್ನೆ ಗಳ್ಗೊಂಗೆ ನನ್‌ ಪುಟ್ನಂಜಿ ರೂಪ.

ದೇವ್ರುತಾಕ್‌ ನಾನ್‌ ವಯಕ್ಕಿಲ್ಲ ಹಣ್ಣು ಕಾಯಿ ದೂಪ,

ದೇವ್ರುಗಣ್‌ಕಾು ದೂಪ ಎಲ್ಲ ನನ್‌ ಪುಟ್ನಂಜಿ ರೂಪ.

ದೇವುಸ್ತನ್ದಾಗ್‌ ಎಂಗಿರ್ತೈತೆ ಚಿನ್ನದ್‌ ನಂದಾ ದೀಪ,

ಅಂಗ್‌ ನನ್‌ ಅಟ್ಟೀನ್‌ ಬೆಳ್ಗಿಸ್ತೈತೆ ನನ್‌ ಪುಟ್ನಂಜಿ ರೂಪ.

ಇದನ್ಕೇಳ್ದವ್ರ್‌ ಯಾರ್ಯಾರ್‌ ಐಯ್ಯಾ ಇವ್ನೊಬ್‌ ಹುಚ್ಚ ಪಾಪ,

ಅಂದವ್ರಿಗೆ ಅಯ್ಯೋ ಪಾಪ ಅಂತೈತೆ ನನ್‌ ಪುಟ್ನಂಜಿ ರೂಪ.

ತನ್ನ ಹೆಂಡತಿ ಬರಿ ಬಾಹ್ಯ ಸುಂದರಿಯಷ್ಟೇ ಅಲ್ಲ, ಗುಣವಂತೆ ಕೂಡ. ಅವಳು ಹತ್ತಿರ ಇದ್ದರೆ ಮನಸ್ಸಿನ ಕೆಟ್ಟ ಭಾವನೆಗಳೆಲ್ಲ ತೊಳೆದುಹೋಗುತ್ತವೆ ಎನ್ನುತ್ತಾರೆ ಕವಿ. ಇಂಥ ಮನೋಭಾವ ಎಷ್ಟು ಗಂಡಂದಿರಿಗಿರುತ್ತದೆ. ಪುಟ್ನಂಜಿ ನಿಜಕ್ಕೂ ಪುಣ್ಯವಂತೆ.

ಪುಟ್ನಂಜಿ ಹಾಗೂ ರತ್ನನ ಪ್ರೇಮಗೀತೆಗಳು ವಿವಾಹಿತರಿಗಷ್ಟೇ ಅಲ್ಲ , ಅವಿವಾಹಿತರಿಗೂ ಜೇನಿನಂತೆ. ವಿವಾಹಿತರ ಬಂಧ ಈ ಗೀತೆಗಳಿಂದ ಗಟ್ಟಿಯಾದರೆ, ಅವಿವಾಹಿತರಿಗೆ ಮದುವೆಯ ಬಗೆಗೆ ಆಕರ್ಷಣೆ ಬೆಳೆಯುತ್ತದೆ. ಹೆಂಡತಿ ಎನ್ನುವ ಬಂಧದ ಬಗೆಗೆ ಗೌರವ ಮೂಡುತ್ತದೆ.

ಪುಟ್ನಂಜಿಯ ಬಗೆಗಿನ ಪ್ರೀತಿಯಷ್ಟೇ ಅಲ್ಲ , ರಾಜರತ್ನಂರ ಕನ್ನಡ ಪ್ರೀತಿಯೂ ದೊಡ್ಡದು. ಕೆಲವೊಮ್ಮೆ ಕನ್ನಡಕ್ಕಾಗಿ ಪುಟ್ನಂಜಿಯನ್ನು ಮರೆಯಲೂ ಕವಿ ತಯಾರು. ಕನ್ನಡ ಸಿಗದ ಊರಿನಲ್ಲಿ ನನಗೆ ಕನ್ನಡದ ಜೊತೆಗೆ ಪ್ರೀತಿಯ ಆಸರೆ ತೋರಿಸಿದ್ದು , ಉಳಿಸಿದ್ದು ರಾಜರತ್ನಂರ ಗೀತೆಗಳು. ಆಫ್ರಿಕಾದಲ್ಲಿರುವ ನನಗೆ, ಜೊತೆಗಿರುವ ಕನ್ನಡ ಹಾಗೂ ಕನಸಿನಲ್ಲಿರುವ ಹೆಂಡತಿ ಬಗ್ಗೆ ಪ್ರೀತಿ, ಆದರ ಕವಿ ರಾಜರತ್ನಂ- ಗೀತಗಾರುಡಿಗ ಅನಂತಸ್ವಾಮಿ ಇಬ್ಬರಿಗೂ ನಮಸ್ಕಾರಗಳು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
G.P. Rajarathnam Poetry and Love, an essay by Prashanth B C , Tanzania.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more