• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬೆಳಕ ತೋರಿ ಹರಸುವವರು ಯಾರಿದ್ದಾರೆ ?

By Staff
|

ಅದೇಕೋ ಅವರ ಬಗ್ಗೆ ಬರೆಯಲು ಕೈ ಹೊರಡುತ್ತಲೆ ಇಲ್ಲ. ಅವರ ಬಗ್ಗೆ ಬರೆಯುವುದಕ್ಕಿಂತ, ಈ ರೀತಿ ಸಿನಿಮಾಗಳ ಬಗ್ಗೆ ಬರೆದು ಮುಗಿಸಿಬಿಡೋಣ ಅನ್ನಿಸುತ್ತದೆ. ಆದರೂ ಅವರು ಹೇಳಿದ ಮಾತುಗಳು ಬರೆಯದೆ ಮನಸ್ಸಿನಿಂದ ಇಳಿಯದಾಗಿದೆ. ಅವರ ಹೆಸರು ಸಾಗರ್‌, ನಮ್ಮೆಲ್ಲರ ಪ್ರೀತಿಯ ಸಾಗರ್‌ ಭಾಯಿ. ನಾನು ಆಫ್ರಿಕಾಗೆ ಬಂದ ದಿನದಿಂದ ಪರಿಚಯವಿರುವ ದಢೂತಿ ಮನುಷ್ಯ. ಅವರನ್ನು ನೋಡಿದಾಗ ಸಣ್ಣ ಆನೇ ಮರಿ ಅನ್ನುವ ಹಾಗೆ ಅನ್ನಿಸಿತ್ತು. ಸುಮಾರು ನೂರು ಕೇಜಿ ಇದ್ದಾರೆ ಅಂದುಕೊಂಡಿದ್ದೆ, ಅಮೇಲೆ ಅವರೇ ಹೇಳಿದರು- ನೂರ ಎಂಟು ಕೇಜಿ ಎಂದು.

ಸಾಗರ್‌ ನಾನು ಇದ್ದ ಮನೆಯ ಕೆಳಗೆ ಬ್ಯಾಡ್ಮಿಂಟನ್‌ ಆಡಲು ಅವರ ಮಗಳನ್ನು ಕರೆದುಕೊಂಡು ಬರುತ್ತಿದ್ದರು. ದಿನಾ ನಾನು ಅವರು ಒಟ್ಟಿಗೆ ಕುಳಿತು ಮಾತನಾಡುತ್ತಿದ್ದೆವು. ನನಗೆ ಇಲ್ಲಿಗೆ ಬಂದ ಹೊಸದರಲ್ಲಿ ಅತ್ಮೀಯವಾಗಿ ಯಾರಾದರೂ ಮಾತನಾಡಿಸಿದರೆ ಸಾಕು ಎಂದು ಅನ್ನಿಸುತ್ತಿತ್ತು. ಆ ಸಮಯದಲ್ಲಿ ಒಳ್ಳೆ ಸ್ನೇಹಿತನಂತೆ ನನ್ನನ್ನು ಮಾತನಾಡಿಸುತ್ತಿದ್ದರು. ನನ್ನನ್ನು ಒಂಟಿತನದಿಂದ ಹೊರಗೆ ತರುತ್ತಿದ್ದ ಏಕೈಕ ವ್ಯಕ್ತಿ ಅವರಾಗಿದ್ದರು. ಸಾಗರ್‌ ಭಾಯಿ ಎಂದು ನಾನು ಅವರನ್ನು ಕರೆಯುತ್ತಿದ್ದೆ. ಏಕೆಂದರೆ ಎಲ್ಲರೂ ಅವರನ್ನು ಹಾಗೆ ಕರೆಯುತ್ತಿದ್ದರು. ನನ್ನನ್ನು ಅವರು ಪಕ್ಕದಲ್ಲಿ ಕೂರಿಸಿಕೊಂಡು ನನಗೆ ಸಂತೋಷವಾಗಿರುವುದು ಹೇಗೆ ಎಂದು ಹೇಳುತ್ತಿದ್ದರು. ನನಗಿಂತ ದೊಡ್ಡವರಾಗಿದ್ದರೂ ನನ್ನನ್ನು ಒಬ್ಬ ಸ್ನೇಹಿತನಂತೆ ಕಾಣುತ್ತಿದ್ದರು. ನನ್ನ ಬೇಸರದ ಮುಖವನ್ನು ನೋಡಿ ಹೇಳುತ್ತಿದ್ದರು- ‘ನೀನು ಎಲ್ಲರನ್ನು ಬಿಟ್ಟು ಇಲ್ಲಿಗೆ ಬಂದಿದ್ದೀಯ, ನಿನಗೆ ಒಬ್ಬ ಸ್ನೇಹಿತೆ ಬೇಕು, ಆಗ ನೀನು ನಿನ್ನ ಮನಸ್ಸಿನ ತುಮುಲಗಳನ್ನೆಲ್ಲಾ ನಿವಾರಿಸಿಕೊಳ್ಳಬಹುದು. ಹಾಗಾಗಿ ಯಾವುದಾದರೂ ಒಂದು ಹುಡುಗಿಯನ್ನು ಪರಿಚಯ ಮಾಡಿಕೋ’ ಎಂದು ಹೇಳುತ್ತಿದ್ದರು. ಎಲ್ಲಾ ಮಕ್ಕಳಿಗೂ ಅವರನ್ನು ಕಂಡರೆ ಬಹಳ ಪ್ರೀತಿ, ಏಕೆಂದರೆ ಅವರಿಗೆ ಮಕ್ಕಳೊಡನೆ ಮಕ್ಕಳಾಗಿ ಮಾತಾಡಲು ಗೊತ್ತಿತ್ತು, ಹದಿಹರೆಯದವರೊಡನೆ ಹಸಿಹಸಿ ಯಾಗಿ ಮಾತನಾಡಲು ಗೊತ್ತಿತ್ತು , ಮಧ್ಯ ವಯಸ್ಕರೊಡನೆ ಮಾಧ್ಯಮದಲ್ಲಿ ಮಾತನಾಡುವ ಕಲೆ ಇತ್ತು. ಹಿರೀಕರೊಡನೆ ಹಿರಿತನದ ಮಾತುಗಳು ತಿಳಿದಿತ್ತು. ಗುಂಪಿನಲ್ಲಿ ಸಾಗರ್‌ ಭಾಯಿ ಬಂದರೆಂದರೆ ಗುಂಪಿಗೆ ಗುಂಪೇ ರಂಗೇರುತ್ತಿತ್ತು.

ಸಾಗರ್‌ ಭಾಯಿ ಬಹಳ ಶ್ರೀಮಂತರಲ್ಲ. ಆದರೆ ಬಡತನವಿರಲಿಲ್ಲ. ಅವರ ವಿಶಾಲ ಹೃದಯದಲ್ಲಿ ಯಾರಿಗೂ ನೋಯಿಸುವ ಸುಳಿವಿರಲಿಲ್ಲ. ಗೊತ್ತು ಗುರಿ ಇಲ್ಲದ ನನ್ನಂತವನ ಮೇಲೆ ಅವರಿಗೆ ಅಷ್ಟೊಂದು ಕಾಳಜಿ ಇತ್ತೆಂದರೆ ಇನ್ನು ಗೊತ್ತಿರುವರ ಬಗ್ಗೆ ಎಷ್ಟಿರಬೇಕು. ಯಾರಿಗೂ ನೋಯಿಸದ, ಯಾರಿಗೂ ಬೇಸರಿಸದ, ಯಾರಬಗ್ಗೆಯೂ ಅಸೂಯೆ ಪಡದ, ಎಲ್ಲರೊಂದಿಗೆ ನಗು ನಗುತ್ತಾ ಇರುತ್ತಿದ್ದ ಸಾಗರ್‌ ಭಾಯಿ, ಹೆಸರಿಗೆ ತಕ್ಕಂತೆ ಸಾಗರ.

ದೇವರಲ್ಲವರಿಗೆ ಇನ್ನಿಲ್ಲದ ಭಕ್ತಿ. ಅವರ ಕೆಲಸ ಅಡುಗೆ ಮಾಡುವುದು. ಎಲ್ಲಾ ಸಭೆ ಸಮಾರಂಭಗಳಿಗೆ ಅಡುಗೆ ಮಾಡುವ ಕೆಲಸ ಅವರದು. ಆ ವೃತ್ತಿಯಲ್ಲೇ ಅವರ ಚಿಕ್ಕ ಸಂಸಾರಕ್ಕೆ ಆಗಿ ಸ್ವಲ್ಪ ಮಿಕ್ಕುವ ಹಾಗೆ ಸಂಪಾದನೆ. ದೇವರ ಕೆಲಸಕ್ಕೆ ಹಣ ತಗೆದುಕೊಳ್ಳದೆ ಅಡುಗೆ ಮಾಡುತ್ತಿದ್ದರು. ಅವರ ಸಂಸಾರ ಚಿಕ್ಕದು. ಗಂಡ ಹೆಂಡತಿ ಹಾಗು ಒಬ್ಬಳೇ ಮಗಳು. ನನ್ನ ಜೀವನವೇ ನನ್ನ ಮಗಳು ಎಂದು ಎಲ್ಲವನ್ನು ಮಗಳಿಗೆ ಧಾರೆ ಎರೆಯುತ್ತಿದ್ದರು. ಅವರ ಜೀವನದ ಕೆಲವು ಅಂಶಗಳನ್ನು ನನ್ನ ಹತ್ತಿರ ಹೇಳುತ್ತಿದ್ದರು. ಅವರೇ ಹೇಳುವ ರೀತಿ, ಮದುವೆಗೆ ಮುಂಚೆ ಬಹಳ ಕುಡಿಯುತ್ತಿದ್ದರಂತೆ, ಸಿಗರೇಟು ಎನ್ನುವುದು ಸಾರಸಗಟಾಗಿ ಕೇವಲ ಸಂಜೆಗೆ ಪೂರ್ತಿ ಎರಡು ಪ್ಯಾಕ್‌. ಹೀಗೆ ಅವರ ಜೀವನ. ಮದುವೆ ಆದಮೇಲೆ ಕುಡಿಯುವುದು ಸ್ವಲ್ಪ ಕಡಿಮೆಯಾದರೂ ದಿನಕ್ಕೆ ಒಮ್ಮೆಯಾದರೂ ಕುಡಿತಕ್ಕೆ ಕೂರಲೇ ಬೇಕಾಗಿತ್ತು. ಆಗ ಹುಟ್ಟೇ ಬಿಟ್ಟಳು ಇವಳು, ಹೆಸರು ಕಿಮ್ತಿ. ಆಗಿಂದ ಆಯಿತು ಕುಡಿತಕ್ಕೆ ಕಮ್ತಿ. ಕಡಿಮೆ ಮಾಡಿದರೂ ಬಿಡಲಾಗಲಿಲ್ಲ. ದುಡಿಮೆಯ ಅರ್ಧ ಕುಡಿತಕ್ಕೆ ಹೋಗುತ್ತಿತ್ತು. ದುಡಿಮೆ ಚೆನ್ನಾಗಿದ್ದಿದ್ದರಿಂದ, ಕುಡಿತಕ್ಕೆ ಹೋಗುತ್ತಿದ್ದ ಹಣದ ಬಗ್ಗೆ ಚಿಂತೆ ಇರಲಿಲ್ಲ. ಮಗಳು ದೊಡ್ಡವಳಾಗುತ್ತಾ ಬಂದಳು, ಅವಳ ಖರ್ಚು ಇವರ ಕುಡಿತಕ್ಕೆ ಸಮವಾಗುತ್ತಾ ಬಂದಿತು. ಒಂದು ದಿನ ಬಂತು, ಅಲ್ಲಿ ಕುಡಿತ ಇರಬೇಕು ಇಲ್ಲ ಮಗಳು ಇರಬೇಕು. ಕೊನೆಗೆ ಇವತ್ತಿನಿಂದ ಕುಡಿತ ಇರಬಾರದು ಎಂದು ಮಗಳ ಪ್ರೀತಿಗೆ ಒರಗಿದರು. ಅವತ್ತಿನಿಂದ ಇವತ್ತಿನವರೆಗೆ ಕುಡಿತದ ಬಗ್ಗೆ ಆಸೆ ಪಟ್ಟೂ ಇಲ್ಲ. ಸುಮಾರು ಹನ್ನೆರಡು ವರ್ಷ ಆಯಿತು ಎಂದರು ಸಾಗರ್‌ ಭಾಯಿ.

ಕುಡಿತವೇನೋ ಬಿಟ್ಟರು ಆದರೆ ಸಿಗರೇಟು? ಅದು ಬಿಡಲಾಗುವುದೆ ? ಸಿಗರೇಟಿನ ಹೊಗೆ ಬಿಡಬಹುದು, ಆದರೆ ಸಿಗರೇಟು ಬಿಡುವುದು? ಕುಡಿತ ಬಿಟ್ಟಾಗೆ ಕಿಮ್ತಿಗೆ ಐದು ವರ್ಷ. ಅವರಿಗೆ ಮೂವತ್ತೈದು ವರ್ಷ. ಆಗಲೇ ಅವರ ಕುಡಿತಕ್ಕೆ ತುಂಬಿತ್ತು ಪೂರ್ತಿ ಹತ್ತು ವರ್ಷ. ಎಲ್ಲವೂ ಮುಗಿದಿತ್ತು , ಆದರೆ ಚಲಾವಣೆಯಲ್ಲಿದ್ದಿದ್ದು ಹನ್ನೆರಡು ವರ್ಷದಿಂದ ಇದ್ದ ಸಿಗರೇಟು. ಕುಡಿತವೇ ಬಿಟ್ಟವನಿಗೆ ಸಿಗರೇಟು ಬಿಡುವುದು ದೋಡ್ಡದೇನಲ್ಲ ಎನ್ನುತ್ತಿದ್ದರಾದರೂ ಬಿಡಲು ಆಗುತ್ತಿರಲಿಲ್ಲ. ಅದಾದ ಮೂರು ವರ್ಷಕ್ಕೆ ಒಂದು ದಿನ ರಾತ್ರಿ ಅವರಿಗೆ ಎದೆ ನೋವು ಬಂದಿದೆ. ಹೆಂಡತಿ ಹಾಗು ಮಗುವನ್ನು ಬಿಟ್ಟು ಗಾಳಿ ಬರಲಿ ಎಂದು ಮತ್ತೊಂದು ರೂಮಿಗೆ ಬಂದು ಮಲಗಿದ್ದಾರೆ, ಎದೆ ನೋವು ಜಾಸ್ತಿಯಾಗಿ ಅಲ್ಲಿಂದ ಏಳಲು ಆಗಿಲ್ಲ, ಹೆಂಡತಿಯನ್ನು ಕರೆಯಲು ಗಂಟಲಲ್ಲಿ ಶಕ್ತಿ ಇಲ್ಲ. ಇನ್ನೇನು ಜೀವ ಹೋಯಿತು ಎಂದು ತಿಳಿದು ಜೋರಾಗಿ ಒಮ್ಮೆ ಕೂಗಿದರೆ, ಗಂಟಲಿನಿಂದ ಶಬ್ದಯೇ ಬರುತ್ತಿಲ್ಲ. ಅವರ ಕುಸುರುವಿಕೆಗೆ ಅವರ ಹೆಂಡತಿ ಎದ್ದು, ಗಾಬರಿಯಾಗಿ ಅವರಿಗೆ ಸಾಧ್ಯವಾದವರನ್ನು ಕರೆದು, ಡಾಕ್ಟರ್‌ ಕರೆಸಿ ಎಲ್ಲಾ ಸಮ ಸ್ಥಿತಿಗೆ ಬಂದಿದ್ದಾರೆ. ಆ ದಿನದಿಂದ ಇಲ್ಲಿಯವರೆಗೆ ಸಿಗರೇಟು ಮುಟ್ಟಿಲ್ಲ.

ಇದೆಲ್ಲಾ ನನ್ನ ಹತ್ತಿರ ಹೇಳುತ್ತಿದ್ದಾಗ ಅವರಿಗೆ ನಲವತ್ತನಾಲಕ್ಕು ವರ್ಷ. ಕಳೆದ ಹತ್ತು ವರ್ಷಗಳಿಂದ ಯಾವುದೇ ತೊಂದರೆ ಇಲ್ಲದೆ, ಸಂತೋಷವಾಗಿ, ಸುಖವಾಗಿ, ಮಗಳಿಗೆ ಏನು ಬೇಕೋ ಎಲ್ಲವನ್ನೂ ಕೊಡುತ್ತಾ, ಮಗಳನ್ನೆ ಸರ್ವಸ್ವ ಎಂದು ತಿಳಿದು ಬದುಕುತ್ತಾ ಬಂದಿದ್ದಾರೆ. ಅವರ ಮಗಳಿಗೆ ಅವರು ಯಾವತ್ತೂ ಒಬ್ಬ ಸ್ನೇಹಿತನಂತೆ ಇದ್ದಾರೆ, ಅವರ ಮಗಳ ಸ್ನೇಹಿತೆಯರ ಜೊತೆಗೆ ಇವರು ಕೂತು ಹರಟೆ ಹೊಡೆಯುತ್ತಾರೆ. ಕೀಮ್ತಿಯ ಸ್ನೇಹಿತೆಯರು, ಅವಳನ್ನು ಮಾತನಾಡಿಸುವುದಕ್ಕಿಂತ ಅವಳ ತಂದೆಯನ್ನು ಮಾತನಾಡಿಸುವುದರಲ್ಲೆ ಸಂತೋಷ ಪಡುತ್ತಾರೆ. ಅಪ್ಪ ಮಗಳು ಇಬ್ಬರು ಬೇಜಾರಾಗುವುದೇ ಇಲ್ಲ. ಮಗಳಿಗಾಗಿ ಅಪ್ಪ ಎಲ್ಲ ತ್ಯಾಗ ಮಾಡಿದರೂ, ಮಗಳಲ್ಲೇ ಎಲ್ಲಾ ಸಂತೋಷವನ್ನು ಕಂಡುಕೊಂಡಿದ್ದರು. ಮಗಳೂ ಹಾಗೆ, ಅಪ್ಪನಿಗೆ ಬೇಸರಿಸುವ ಹಾಗೆ ಎಲ್ಲೂ ನಡೆದುಕೊಳ್ಳುತ್ತಿರಲಿಲ್ಲ. ಇವರಿಬ್ಬರ ಸಂತೋಷವನ್ನು ತಾಯಿ ಕೂಡ ಹಂಚಿಕೊಳ್ಳುತ್ತಿದ್ದಳು. ಇವೆಲ್ಲದರ ಮಧ್ಯೆ ಕಾಣಿಸಿಕೊಂಡಿದ್ದು ಸಣ್ಣ ಹೊಟ್ಟೆ ನೋವು, ಸಾಗರ್‌ ಭಾಯಿಗೆ.

ತಾನ್ಜಾನಿಯಾದಲ್ಲಿ ಅವರ ಹೊಟ್ಟೆನೋವಿಗೆ ಸಿಕ್ಕಿದ್ದು ಸಣ್ಣ ಸಣ್ಣ ಮಾತ್ರೆ. ಗ್ಯಾಸ್‌ ಪ್ರೊಬ್ಲೆಮ್‌ ಎಂದು ಕೆಲವರು ಮಾತ್ರೆ ಕೊಟ್ಟರು, ಆದರೂ ಸರಿ ಹೋಗಲಿಲ್ಲ. ಒಂದುತಿಂಗಳಾದ ಮೇಲೆ ಕೀನ್ಯಕ್ಕೆ ಹೋದರು. ಅಲ್ಲಿ ಏನೆಲ್ಲಾ ಚೆಕ್‌ ಅಪ್‌ ಮಾಡಿದರೂ ಸರಿಯಾಗಿ ತಿಳಿಯಲಿಲ್ಲ. ಎಲ್ಲಾ ಸೇರಿ ಎರಡು ತಿಂಗಳಾಯಿತು. ಅಷ್ಟರೋಳಗೆ ಅವರಿಂದ ಜಾರಿದ್ದು ಸುಮಾರು ಒಂದುವರೆ ಲಕ್ಷ ರೂಪಾಯಿ. ಕೊನೆಗೆ ತೀರ್ಮಾನ, ಭಾರತಕ್ಕೆ ಹೋಗಿ ಚಿಕಿತ್ಸೆ ಪಡೆಯುವುದು. ಎಲ್ಲರೂ ಹೇಳಿ ಅವರನ್ನು ಭಾರತಕ್ಕೆ ಕಳಿಸಿದ್ದು ಆಯಿತು. ಸರಿಯಾಗಿ ಎರಡು ತಿಂಗಳಿಗೆ ವಾಪಸ್‌ ಬಂದರು. ಯಾರಿಗೂ ತಿಳಿದಿಲ್ಲ ಅವರ ವಿಚಾರ ಏನು ಎಂದು. ಅವರು ಬಂದ ದಿನ ಅವರನ್ನು ನೋಡಲು ಹೋದೆವು. ಹೋದರೆ ಅವರ ಮನೆಯಲ್ಲಿ ಸೂತಕದ ವಾತಾವರಣ.

ನಾವು ಕಾಲಿಟ್ಟರೆ ಅಲ್ಲಿ ಎಲ್ಲಾ ಸುಮ್ಮನೆ ಕುಳಿತಿದ್ದಾರೆ. ಸುಸ್ತಾದ ತೆಳ್ಳಗಿನ ಮನುಷ್ಯ ಕಾಲನ್ನು ಚಾಚಿ ಕುಳಿತಿದ್ದಾರೆ, ನೋಡಲು ಸೇಮ್‌ ಸಾಗರ್‌ ಭಾಯಿ. ಆನೆ ಮರಿಯಂತಿದ್ದ ಸಾಗರ್‌ ಭಾಯಿ ಎಲ್ಲಿ ? ನಾಯಿಗೆ ಹೊಡೆಯುವ ಕೋಲಿನಂತಿರುವ ಸಣಕಲ ಈ ವ್ಯಕ್ತಿ ಎಲ್ಲಿ ? ನಮ್ಮನ್ನು ನೋಡುತ್ತಿದ್ದಂತೆ ಬನ್ನಿ ಬನ್ನಿ, ಎಂದು ಸಣ್ಣ ಸ್ವರದಲ್ಲಿ ಮಾತನಾಡಿದರು. ಆಗಲೇ ನಮಗೆ ತಿಳಿದಿದ್ದು ಇವರೆ ಸಾಗರ್‌ ಭಾಯಿ ಎಂದು. ಹೇಗಿದ್ದಿರಿ ಎಂದು ಎಲ್ಲರೂ ಕೇಳುತ್ತಿದ್ದರೆ, ಸುಮ್ಮನೆ ನಕ್ಕು ಪರವಾಗಿಲ್ಲ ಎಂದರು. ‘ಈಗ ಮಧ್ಯಾಹ್ನ ಬಂದೆ. ಗೊತ್ತಲ್ಲಾ ನನಗೆ ಏನು ಆಗಿದೆ ಎಂದು’ ಅಂದರು. ನಮಗೆ ಮಾತೇ ಸರಿಯಾಗೆ ಬರುತ್ತಿಲ್ಲ. ಏಕೆಂದರೆ ಕೆಲವರು ಹೇಳಿದ್ದರು ಸಾಗರ್‌ ಭಾಯಿಗೆ ಕ್ಯಾನ್ಸರ್‌ ಅಂತೆ ಎಂದು. ಆಗ ಸಾಗರ್‌ ಭಾಯಿ ಖುದ್ದಾಗಿ ಹೇಳಿದರು ನನಗೆ ಕ್ಯಾನ್ಸರ್‌. ಅದೂ ಕೊನೆಯ ಹಂತದಲ್ಲಿದೆ. ಭಾರತದಲ್ಲಿ ಡಾಕ್ಟರ್‌ ಎಂದರೆ ದೇವರುಗಳು. ಪಾಪ ನನ್ನನ್ನು ಚೆನ್ನಾಗೆ ನೋಡಿಕೊಂಡರು. ಅವರೆ ಬಂದು ಕೇಳಿದರು- ನನಗೆ ಕ್ಯಾನ್ಸರ್‌ ಬಗ್ಗೆ ಏನು ಗೊತ್ತು ಎಂದು. ನಾನು ಹೇಳಿದೆ. ಇನ್ನೇನು ಕೆಲವೇ ದಿನಗಳಲ್ಲಿ ಸಾಯುತ್ತೇನೆ, ಇದಕ್ಕೆ ಮದ್ದಿಲ್ಲ ಎಂದೆ. ಅದಕ್ಕೆ ಅವರು ಹೇಳಿದರು- ‘ಕ್ಯಾನ್ಸರ್‌ ಅಂದರೆ ಸಾಯುವುದಲ್ಲ. ಅದನ್ನು ತಡೆಗಟ್ಟ ಬಹುದು’ ಎಂದು. ಬಹಳ ಜನ ಸೋಶಿಯಲ್‌ ಸರ್ವೀಸ್‌ ಮಾಡುವರು ಬಂದು ನನ್ನನ್ನು ವಿಚಾರಿಸಿ ಧೈರ್ಯ ಹೇಳಿ ಹೋದರು. ಕೆಲವರು ಆಯುರ್ವೇದದ ಔಷಧಿಯನ್ನು ತಿಳಿಸಿ ಹೋದರು. ಇನ್ನೂ ಕೆಲವರು ಕೆಲವು ದೇವರ ವಿಷಯ ಹೇಳಿ ಹೋದರು. ಕೊನೆಗೆ ಅಲ್ಲಿಯ ವೈದ್ಯರು ಆರು ಸಲ ಮಾಡಿಸಿಕೊಳ್ಳಬೇಕಾದ ಒಂದು ಟೆಸ್ಟ್‌ ಹೇಳಿದರು. ಅದಕ್ಕೆ ತಗಲುವ ವೆಚ್ಚ ಒಂದು ಟೆಸ್ಟ್‌ ಗೆ ಹನ್ನೆರಡು ಸಾವಿರ ರೂಪಾಯಿ. ನಾವು ಮನೆಗೆ ಹೋಗಿ ಯೋಚಿಸಿದೆವು. ಈಗಾಗಲೆ ಸುಮಾರು ಮೂರು ಲಕ್ಷ ಖರ್ಚಾಗಿ ಹೋಗಿದೆ. ಮತ್ತೆ ಆರು ಟೆಸ್ಟ್‌ಗೆ ಎಲ್ಲಾ ಸೇರಿ ಎಪ್ಪತ್ತು ಸಾವಿರ ?. ಕೊನೆಗೆ ಒಂದು ಟೆಸ್ಟ್‌ ಮಾಡಿಸಲು ನಿರ್ಧಾರ ಮಾಡಿ, ಹದಿನೈದು ಸಾವಿರ ತೆಗೆದುಕೊಂಡು ಆಸ್ಪತ್ರೆಗೆ ಹೋದರೆ ಅಲ್ಲಿ ಎಲ್ಲವೂ ಬದಲಾಗಿದೆ. ಐದು ದಿನದ ಹಿಂದೆ ಹನ್ನೆರಡು ಸಾವಿರ ಇದ್ದ ಟೆಸ್ಟ್‌ ಗೆ ಇವತ್ತು ಅನಾಮತ್ತಾಗಿ ಎಪ್ಪತ್ತು ಸಾವಿರ ಆಗಿದೆ! ಆ ದೇವರೂ ಅನ್ನುವನು ಅಷ್ಟು ಕಠೋರವಾಗಬೇಕೆ ?

ಕೊನೆಗೆ ಎಪ್ಪತ್ತು ಸಾವಿರ ಕೊಟ್ಟು ಒಂದು ಟೆಸ್ಟ್‌ ಮಾಡಿಸಿಕೊಂಡು ಬಂದೆ. ಇನ್ನೇನು ಇವತ್ತು ಸಾಯುವವನು ಇನ್ನೊಂದು ತಿಂಗಳು ಬದುಕಬಹುದು. ಅದೆಲ್ಲ ಇರಲಿ, ಬ್ಯಾಡ್ಮಿಂಟನ್‌ ಆಡಲು ಯಾರು ಯಾರು ಬರುತ್ತಿದ್ದಾರೆ? ನಿನ್ನ ಆಫೀಸ್‌ ಕೆಲಸ ಹೇಗೆ ನಡಿಯುತ್ತಿದೆ. ಯಾರಾದರೂ ಹುಡುಗಿ ಸಿಕ್ಕಳಾ? ಎಂದು ಕೇಳಲು ಆರಂಭಿಸಿದರು.

ನನ್ನ ಜೊತೆ ಬಂದಿದ್ದ ಆರ್ಯ ಸಮಾಜದ ಶಾಸ್ತ್ರೀಜೀ ಅವರು ಆಯುರ್ವೇದ ವೈಧ್ಯರು. ಅವರು ಹೇಳಿದರು, ನಿಮ್ಮ ನಂಬಿಕೆ ಬಹಳ ಮುಖ್ಯ, ನೀವು ದಿನಾ ಗೋಧಿ ತೆನೆಯ ಹಾಲನ್ನು ಕುಡಿಯಿರಿ, ನಿಜವಾಗಿಯೂ ವಾಸಿಯಾಗುತ್ತದೆ. ಎಷ್ಟೋ ಜನರಿಗೆ ಇದರಿಂದ ವಾಸಿ ಆಗಿದೆ. ನನಗೆ ಖಂಡಿತಾ ಭರವಸೆ ಇದೆ. ನಿಮಗೆ ವಾಸಿಯಾಗುತ್ತದೆ.

ನೂರ ಎಂಟು ಕೇಜಿಯ ಮನುಷ್ಯ ಕೆಲವೇ ತಿಂಗಳಲ್ಲಿ ಅರವತ್ತೆರಡು ಕೇಜಿ ಅಗುತ್ತಾರೆಂದರೆ ಏನು? ಅವರು ಕುಡಿಯುತ್ತಿದ್ದಾಗ ಚೆನ್ನಾಗಿದ್ದವರು ಕುಡಿತ ಬಿಟ್ಟು ಹದಿನೈದು ವರ್ಷವಾದಮೇಲೆ ಹೀಗಾಗಬೇಕೆ? ದೇವರ ಕೆಲಸಕ್ಕೆ ಪುಕ್ಕಟೆ ಕೆಲಸ ಮಾಡಿದವರಿಗೆ ಹನ್ನೆರಡು ಸಾವಿರವಿದ್ದ ಚಿಕಿತ್ಸೆ ಎಪ್ಪತ್ತು ಸಾವಿರವಾಗಬೇಕೆ? ಯಾರಿಗೂ ನೋವು ಮಾಡದಿರುವರಿಗೆ ಇಷ್ಟೊಂದು ನೋವು ಆಗಬೇಕೆ?

ಗೋಧಿ ತೆನೆ ಹಾಲಿನಿಂದ ಬಹಳಷ್ಟು ರೋಗಗಳು ವಾಸಿಯಾಗಿವೆ, ಇವರ ಕ್ಯಾನ್ಸರ್‌ ಆಗುತ್ತದೆಯೆ? ಆಗಲಿ ಎನ್ನುವುದು ಎಲ್ಲರ ಆಸೆ. ಅವರ ಉಳಿದ ಐದು ಟೆಸ್ಟ್‌ ಮಾಡಿಸಲು ಬಹಳಷ್ಟು ಜನ ದುಡ್ಡು ಕೊಡಲು ಮುಂದೆ ಬಂದಿದ್ದಾರೆ. ಆದರೆ ಅವರ ದೇಹಕ್ಕೆ ಆ ತರಹದ ಇನ್ನೊಂದು ಟೆಸ್ಟ್‌ ತಡೆದುಕೊಳ್ಳುವ ಶಕ್ತಿ ಇಲ್ಲ. ಕೂತಲ್ಲಿಂದ ಮೇಲೇಳಲೂ ಆಗುತ್ತಿಲ್ಲ. ಎಲ್ಲರೂ ಅವರಿಗೆ ಧೈರ್ಯ ಹೇಳುತ್ತೇವೆ. ಎಲ್ಲಕ್ಕಿಂಥ ಸಾವಿನ ಅರಿವಿದ್ದರೂ ಅದನ್ನು ಅಂಜದೆ ಅಳುಕದೆ ಎದುರಿಸುತ್ತಿದ್ದಾರೆ. ದೇವರು ಇರುವುದೇ ಆದರೆ, ಹೀಗೆಲ್ಲಾ ಏಕೆ ಅಗುತ್ತದೆ. ನಮ್ಮೆಲ್ಲರ ಅಜ್ಜ ಮೂರ್ತಿರಾಯರು ಹೇಳುವಂತೆ, ‘ದೇವರು ಎನ್ನುವವನು ಬೇಕು, ವಿಪರ್ಯಾಸ ಎಂದರೆ ಅವನಿಲ್ಲ’.

ಸಾವು ಎನ್ನುವುದು ಸುತ್ತುವರೆದಿರುವರ ಮುಂದೆ ಸಾಂತ್ವನ ಹೇಳುವುದು ಹೇಗೆ? ಸಾಗರ್‌ ಭಾಯಿ ಮೊದಲಿನಂತಾಗಲಿ, ಕ್ಯಾನ್ಸರ್‌ ಅವರನ್ನು ತಿನ್ನದಿರಲಿ ಎಂದು ಯಾರಲ್ಲಿ ಪ್ರಾರ್ಥಿಸಲಿ?

ಮುಖಪುಟ / ಎನ್‌ಆರ್‌ಐ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more