ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂತರ್ಮುಖಿ ಕವಿಯೂ ಜೀವನ್ಮುಖಿ ಕಾವ್ಯವೂ

By Staff
|
Google Oneindia Kannada News

ನಾನು ನಮ್ಮ ಬದುಕನ್ನು ಎರಡು ರೀತಿಯಿಂದ ನೋಡಲು ಸಾಧ್ಯವಿದೆ. ಒಂದು ಆಸೆಯಿಂದ, ಇನ್ನೊಂದು ನಿರಾಸೆಯಿಂದ. ಜೀವನದ ಪ್ರತಿಕ್ಷಣವನ್ನೂ ಉತ್ಕಟವಾಗಿ ಅನುಭವಿಸಿ, ಪ್ರತಿದಿನವನ್ನೂ ಕೂಡ ಹೊಸ ಹುರುಪಿನಿಂದ ಆರಂಭಿಸುವವನು ಆಶಾವಾದಿಯಾದರೆ, ಪ್ರಪಂಚದ ದುಃಖವನ್ನೆಲ್ಲಾ ತನ್ನ ಮೇಲೆಯೇ ಆವಾಹಿಸಿಕೊಂಡು ನೋವು, ಹತಾಶೆಗಳ ಜೊತೆಯಲ್ಲಿ ನಿಸ್ಸಹಾಯಕನಾಗಿ ಬದುಕುವವನು ನಿರಾಶಾವಾದಿ. ಅನುದಿನವನ್ನೂ ಅನುಮಾನಿಸುತ್ತಾ ನಿರುತ್ಸಾಹದಿಂದ ಬಾಳುವ ನಿರಾಶಾವಾದಿಗೆ ಜಡವಾಗಿ ಬಿದ್ದಿರುವ ಹಗ್ಗ ಕೂಡ ಹಾವಿನಂತೆ ಕಂಡರೆ, ಎಲ್ಲದರಲ್ಲೂ ಒಳಿತನ್ನೇ ಕಂಡು, ಎಲ್ಲರಿಗೂ ಒಳಿತನೇ ಬಯಸುವ ಆಶಾವಾದಿಗೋ ವಿಷದ ಹಾವೂ ಕೂಡ ನಗುವ ಹೂವು!

ಸಾಹಿತ್ಯ ಬದುಕಿನ ಕೈಗನ್ನಡಿಯಾಗಿರುವುದರಿಂದ ಅದೂ ಕೂಡ ನಮ್ಮ ಈ ಮನೋಭಾವವನ್ನೇ ಪ್ರತಿಬಿಂಬಿಸುತ್ತದೆ. ಒಂದು ಚೆಲುವು, ಒಲವುಗಳಿಂದ ಕೂಡಿದ ಬದುಕನ್ನು ಮೋಹಕವಾಗಿ ಬಣ್ಣಿಸಿ, ಬಾಳಿನ ಬಗೆಗೆ ಪ್ರೀತಿ, ಆಸಕ್ತಿಗಳನ್ನು ಬೆಳೆಸಿದರೆ, ಇನ್ನೊಂದು ಜೀವನದ ಕಷ್ಟ ಕಾರ್ಪಣ್ಯ, ಕೆಡುಕುಗಳನ್ನು ಮಾತ್ರ ತೆರೆದಿಟ್ಟು, ಬದುಕಿನ ಬಗೆಗೆ ಜಿಗುಪ್ಸೆಯನ್ನು ಹುಟ್ಟಿಸುವಂತಹುದು. ನಮ್ಮ ಹಿಂದಿನ ಸಾಹಿತ್ಯ ಚರಿತ್ರೆಯನ್ನೊಮ್ಮೆ ಅವಲೋಕಿಸಿದಾಗ ಅವುಗಳಲ್ಲಿ ಬದುಕು ನಶ್ವರ, ಅರ್ಥಹೀನ, ಯಾವೊಂದು ಮನುಷ್ಯ ಸಂಬಂಧಗಳೂ ನಂಬಿಕೆಗೆ ಅರ್ಹವಲ್ಲವೆಂದು ಚಿತ್ರಿಸಿರುವುದೇ ಅಧಿಕ. ಮನುಷ್ಯ ದೇಹವನ್ನಂತೂ ವಿಧ ವಿಧವಾದ ಉಪಮಾನಗಳನ್ನು ಕೊಟ್ಟು ಹೀಗಳೆಯಲಾಗಿದೆ. ಅದರಲ್ಲೂ ಬಹಳ ಕಡೆ ಮಣ್ಣು, ಹೊನ್ನುಗಳ ಜೊತೆಗೆ ಹೆಣ್ಣನ್ನೂ ಕೂಡ ಮಾಯೆ ಎಂದು ಖಳನಾಯಕಿಯಂತೆ ಚಿತ್ರಿಸಲಾಗಿದೆ.

ಹೆಣ್ಣನ್ನು ಮಾಯೆ ಎಂದು ಹೀನಾಯವಾಗಿ ಜರೆಯುವ ಇವರೆಲ್ಲಾ ಅದೇ ಹೆಣ್ಣಿನ ಮೈಮಾಟ, ಕುಡಿನೋಟಕ್ಕಾಗಿ ಹಂಬಲಿಸಿ ಹುಚ್ಚರಾದವರೇ. ಅವಳ ತುದಿಬೆರಳ ಸ್ಪರ್ಶ ಮಾತ್ರದಿಂದ ಪುಳಕಿತರಾದವರೇ. ಹೆಣ್ಣಿನ ಅಂಗಾಂಗಳ ತಂಪಿನಲ್ಲಿ, ಅವಳ ಅನುರಾಗದ ಕಂಪಿನಲ್ಲಿ ಮನಸಾರೆ ಮಿಂದು ಪುನೀತರಾಗಿ ಹೋದವರೇ! ಆದರೂ ಬರೀ ಬಾಯಿಮಾತಿನಲ್ಲಿ ಹುಸಿ ವೈರಾಗ್ಯವನ್ನು ಪ್ರಕಟಿಸುತ್ತಾ ಜೀವನವನ್ನು ಹಳಿಯುವ, ಹೆಣ್ಣು, ಮಣ್ಣುಗಳನ್ನು ಹಾಳೆಂದು ತೆಗಳುವ ಇಂತಹ ಸಾಹಿತ್ಯವನ್ನು ನೋಡಿದಾಗ ಇದೆಲ್ಲವೂ ಬರಿಯ ಬೂಟಾಟಿಕೆ ಅನ್ನಿಸುತ್ತದೆ ನನಗೆ. ಇಂತಹ ಮುಖವಾಡಗಳನ್ನು ತೊಟ್ಟರಿಯದ ಸಂಸ್ಕೃತದ ಸಹೃದಯ ಕವಿಯಾಬ್ಬ ‘ಅಸಾರೇ ಖಲು ಸಂಸಾರೇ ಸಾರಮ್‌ ಸಾರಂಗಲೋಚನಾ’ ಎಂದು ತನಗನಿಸಿದ್ದನ್ನು ಅನ್ನಿಸಿದ ಹಾಗೆಯೇ ಪ್ರಾಮಾಣಿಕವಾಗಿ ಹೇಳಿಕೊಂಡುಬಿಟ್ಟಿದ್ದಾನೆ. ನಿಸ್ಸಾರವಾದ ಈ ಜಗತ್ತಿನಲ್ಲಿ ಏನಾದರೂ ಸಾರವೆಂಬುದು ಇದ್ದರೆ ಅದು ಮನಸೂರೆಗೊಂಡ ಚೆಲುವೆಯ ಒಲವಿನಲ್ಲಿ ಮಾತ್ರ ಎಂದು ಅವನಿಗೆ ಅನ್ನಿಸಿದ್ದರೆ ಅದರಲ್ಲಿ ಆಶ್ಚರ್ಯವಾದರೂ ಏನಿದೆ ?

ಇದೇ ರೀತಿ ಅನೇಕ ಕವಿಗಳು ಗೊಡ್ಡು ವೇದಾಂತದ ಸಿನಿಕತನವನ್ನು ಬದಿಗೆ ಸರಿಸಿ, ಬದುಕಿನ ವಿಸ್ಮಯ, ವಿಸ್ತಾರಗಳ ಬಗೆಗೆ ಮೋಹ ಮೂಡಿಸುವಂತೆ ಬರೆದಿದ್ದಾರೆ. ಮೊಟ್ಟಮೊದಲಿಗೆ ವಚನಸಾಹಿತ್ಯದಲ್ಲಿ ‘ಹೊನ್ನು ಮಾಯೆಯೆಂಬರು ಹೊನ್ನು ಮಾಯೆಯಲ್ಲ, ಮಣ್ಣು ಮಾಯೆಯೆಂಬರು ಮಣ್ಣು ಮಾಯೆಯಲ್ಲ, ಹೆಣ್ಣು ಮಾಯೆಯೆಂಬರು ಹೆಣ್ಣು ಮಾಯೆಯಲ್ಲ, ಮನದ ಮುಂದಣ ಮೋಹವೇ ಮಾಯೆಯಯ್ಯಾ’ ಎಂದು ಹೆಣ್ಣನ್ನು ಮಾಯೆ ಎಂದು ಗುರುತಿಸುವುದರ ವಿರುದ್ಧ ದನಿ ಎತ್ತಲಾಯಿತು. ವಚನಕಾರರಂತೆ ನಮ್ಮ ದಾಸರುಗಳು ಕೂಡ ಜೀವನಪ್ರೀತಿ ಮೆರೆಯುವಲ್ಲಿ ಹಿಂದೆ ಬಿದ್ದಿಲ್ಲ. ಮಾನವ ಬದುಕಿನ ಎಲ್ಲಾ ಜಂಜಾಟಗಳನ್ನು ಎಳೆ ಎಳೆಯಾಗಿ ವರ್ಣಿಸಿಯೂ ‘ಸಂಸಾರವೆಂಬಂತ ಸೌಭಾಗ್ಯವೆನಗಿರಲಿ’ ಎಂದು ಸೂಜಿಗಲ್ಲಿನಂತೆ ಸೆಳೆಯುವ ಪ್ರೀತಿಯ ಸಂಸಾರವನ್ನು ಒಪ್ಪಿ ಅಪ್ಪಿಕೊಂಡ ಸುಖಸಂಸಾರಿಗಳಲ್ಲವೇ ಅವರು!

ಅವರವರ ಮನೋಭಾವಕ್ಕೆ ತಕ್ಕಂತೆ ಅವರವರಿಗೆ ದೊರಕುವ ಅನುಭವಗಳಿರುತ್ತವೆ. ಜೀವನವನ್ನು ವೇದಾಂತಿ ತನ್ನ ನಿಸ್ತೇಜವಾದ ನೀರಸ ದೃಷ್ಟಿಯಿಂದ ನೋಡಿದಾಗ ಅವನಿಗೆ ದೊರಕುವ ಚಿತ್ರವೇ ಬೇರೆ. ಜೀವನೋತ್ಸಾಹ ತುಂಬಿ ತುಳುಕುವ ಕವಿಗೆ ಬದುಕು ಕಟ್ಟಿಕೊಡುವ ರಸಾನುಭವವೇ ಬೇರೆ. ಆಧ್ಯಾತ್ಮದ ಹಾದಿಯಲ್ಲಿ ನಡೆವ ವೇದಾಂತಿಯಾಬ್ಬನಿಗೆ ಹೆಣ್ಣು ತನ್ನ ಸಾಧನೆಯ ದಾರಿಯಲ್ಲಿ ಕಾಲ್ತೊಡಕಾಗುವ ಮಾಯೆಯಂತೆ ಕಂಡುಬಂದರೆ, ಬೆಚ್ಚನೆಯ ಭಾವನೆಗಳ ಕೋಮಲ ಹೃದಯದ ಕವಿ ಶಿವರುದ್ರಪ್ಪನವರಿಗೆ ಅನ್ನಿಸುವುದು ಹೀಗೆ - ‘ಓ, ಇವಳೇ ಚೆಲುವೆ, ಇವಳ ಜೊತೆಯಲ್ಲಿ ನಾನು ಸ್ವರ್ಗವನೇ ಗೆಲ್ಲುವೆ’ ಎಂದು! ಎಂತಹ ದೊಡ್ಡ ವ್ಯತ್ಯಾಸ! ಒಬ್ಬನ ಕಣ್ಣುಗಳಿಗೆ ಹೆಮ್ಮಾರಿಯಂತೆ ಕಂಡ ಹೆಣ್ಣು ಇನ್ನೊಬ್ಬನ ಹೃದಯದ ಚೈತನ್ಯದ ಸೆಲೆಯೆನಿಸಿದ್ದು ಹೇಗದು?

‘ಮಾನವ ಮೂಳೆಮಾಂಸದ ತಡಿಕೆ
ಇದರ ಮೇಲಿದೆ ತೊಗಲಿನ ಹೊದಿಕೆ
ತುಂಬಿದೆ ಒಳಗೆ ಕಾಮಾದಿ ಬಯಕೆ’

- ಎಂದು ತಾವು ಹಗಲಿರುಳು ಹೊತ್ತು ತಿರುಗುವ ತಮ್ಮ ಶರೀರವನ್ನೇ ನಿಷ್ಕರುಣಿಯಿಂದ ಹೀಯಾಳಿಸುವ ಮಂದಿಗೆ ನಮ್ಮ ಕನ್ನಡದ ತುಂಟಕವಿ ಬಿ.ಆರ್‌. ಲಕ್ಷ್ಮಣರಾಯರು ‘ದೇಹವನು ಹೀಗಳೆಯಬೇಡ, ಗೆಳೆಯಾ’ ಎಂದು ಚುರುಕು ಮುಟ್ಟಿಸುವುದು ಹೇಗೆ ಗೊತ್ತೆ ? ಇಲ್ಲಿ ನೋಡಿ-

ಮೂಳೆಮಾಂಸದ ತಡಿಕೆ ಇದು ಪಂಜರ
ಎಂದು ನೀನೆಂದರೂ ಇದು ಸುಂದರ!
ಭವದೆಲ್ಲ ಅನುಭವ ಇದರ ಕೊಡುಗೆ
ಅನುಭಾವಕೂ ಇದೇ ಚಿಮ್ಮುಹಲಗೆ!

‘ಶರೀರ ಮಾಧ್ಯಮಮ್‌ ಖಲು ಧರ್ಮ ಸಾಧನಮ್‌’ ಎಂದರೂ ಇದೇ ತಾನೇ ? ‘ಸಾಧನ ಶರೀರವಿದು ನೀ ದಯದಿ ಕೊಟ್ಟಿದ್ದು, ಸಾಧಾರಣವಲ್ಲ, ಸಾಧುಪ್ರಿಯ’ ಎಂದು ನಮ್ಮ ಹರಿದಾಸರುಗಳು ತಿಳಿಗನ್ನಡದಲ್ಲಿ ತಿಳಿಯಹೇಳಿದ್ದೂ ಇದನ್ನೇ ತಾನೇ ? ‘ದೇಹವಿದು ನೀನಿರುವ ಗುಡಿಯೆಂದು ತಿಳಿದು ಗುಡಿಸುವೆನು ದಿನದಿನವೂ ದೇವದೇವಾ’ ಎಂದು ಕುವೆಂಪುರವರು ವಿನೀತವಾಗಿ ನುಡಿದಿದ್ದು ಕೂಡ ಇದನ್ನೇ! ಈ ದೇಹವೊಂದು ನಮ್ಮ ಜೊತೆಯಲ್ಲಿದ್ದರೆ - ಅದು ಮುರುಕು ಮಂದಿರವೋ, ಒಡಕು ಮಡಿಕೆಯೋ ಏನು ಬೇಕಾದರೂ ಆಗಿರಲಿ - ಓದಬಹುದು, ಬರೆಯಬಹುದು, ಪಾರಮಾರ್ಥಿಕ ಚರ್ಚೆಯಲ್ಲೂ ತೊಡಗಬಹುದು. ಚುಂಬನ, ಆಲಿಂಗನಗಳ ಹಗುರ ಮಾತಿರಲಿ, ಇಷ್ಟದೈವಕ್ಕೆ ಸಾಷ್ಟಾಂಗ ನಮಸ್ಕಾರವನ್ನಾದರೂ ಕೂಡ ಶರೀರದ ನೆರವಿಲ್ಲದೆ ಮಾಡಬಹುದೇ ? ಎಷ್ಟೇ ಉಜ್ವಲ ಪಾಂಡಿತ್ಯ, ಪ್ರಖರ ವಿಚಾರಶಕ್ತಿಗಳಿದ್ದರೂ ದೇಹದೊಂದಿಗೇ ಅವೂ ಕೂಡ ನಷ್ಟವಾಗುವುದಲ್ಲವೇ? ‘ದೇಹವನು ತೊರೆದು ನೀ ಪಾರದ ಬಳಿಕ ಏನಿದ್ದರೇನು ಎಲ್ಲಿ ಸಂಪರ್ಕ?’

ಬದುಕು ಕ್ಷಣಿಕ, ನಿಗೂಢವಾಗಿರುವುದರಿಂದಲೇ ಅದರ ರೋಚಕತೆ ಇದುವರೆಗೂ ಮಾಯವಾಗದೆ ಉಳಿದಿರುವುದು. ಒಂದು ವೇಳೆ ಮನುಷ್ಯನ ಜೀವಿತಾವಧಿ ಈಗಿರುವುದಕ್ಕಿಂತ ಬಹು ಸುದೀರ್ಘವಾಗಿತ್ತು ಎಂದಿಟ್ಟುಕೊಳ್ಳೋಣ. ಆಗ ಬದುಕು ಬಹಳ ಬೇಗ ಬೋರ್‌ ಹೊಡೆಸಿ ವಿಜ್ಞಾನಿಗಳು ಈ ಅವಧಿಯನ್ನು ಮೊಟಕುಗೊಳಿಸುವುದು ಹೇಗೆಂಬುದರ ಕುರಿತು ಸಂಶೋಧನೆಗಳನ್ನು ಕೈಗೊಳ್ಳುತ್ತಿದ್ದರೇನೋ!

ಭೂಮಿಯ ಮೇಲಿನ ನಮ್ಮ ಬದುಕು ತನ್ನೆಲ್ಲಾ ನೋವು, ನರಳಾಟ, ಗೋಳು, ಗೊಣಗಾಟ, ಕ್ಷುದ್ರತೆಗಳ ನಡುವೆಯೂ ತನ್ನದೇ ಆದ ಮೋಹಕತೆಯಿಂದ ಕೂಡಿರುವುದನ್ನು ಅಲ್ಲಗಳೆಯುವಂತಿಲ್ಲ. ಬದುಕಿನ ಈ ಸಹಜ ಸುಂದರ ಚೆಲುವನ್ನು ನಮ್ಮ ಸಾಹಿತ್ಯ ಪ್ರತಿಫಲಿಸಬೇಕು. ಹಾಗಾದರೆ ಪ್ರಪಂಚದಲ್ಲಿ ಪ್ರತಿಯಾಂದೂ ಸಮೀಚಿನವಾಗಿದೆಯೇ? ಇಲ್ಲಿ ಎಲ್ಲೆಡೆಯೂ ಸಂತಸವೇ ತುಂಬಿದೆಯೇ? ಎಂದು ಕೊಂಕು ನುಡಿಯುವವರಿಗೆ ‘ನನ್ನೊಬ್ಬನ ಸಂತೋಷಕ್ಕಾಗಿ ನಾನು ಕವಿತೆ ಕಟ್ಟುತ್ತಿಲ್ಲ’ ಎಂದು ಹೇಳುತ್ತಾ ಓದಿದವರಿಗೆಲ್ಲಾ ಸಂತೋಷ ಕೊಡುವಂತಹ ಕಾವ್ಯ ರಚಿಸಿದ ಕೆ.ಎಸ್‌.ನರಸಿಂಹಸ್ವಾಮಿಯವರ ಸಮಾಧಾನದ ಉತ್ತರ-

‘ಬದುಕಿಗೂ ಸಾವಿಗೂ ನಡುವೆ ನಿಂದು
ಈ ಭೂಮಿ, ಈ ಚೆಲುವು ನಮ್ಮದೆಂದು
ಹೊತ್ತ ಹೊರೆ ಬಲು ಹಗುರವೆನ್ನದವ ಕವಿಯೇ?’

ಸಾರ್ಥಕ, ಸುಖಮಯ ಜೀವನಕ್ಕೆ ಸೋಪಾನ ಯಾವುದು? ಎಂದು ತಾವು ಪಟ್ಟಪಾಡನ್ನೆಲ್ಲಾ ಹುಟ್ಟುಹಾಡಾಗಿಸಿ ಹಾಡಿದ ಬೇಂದ್ರೆಯವರನ್ನು ಕೇಳಿದರೆ ಹೇಳುತ್ತಾರೆ -

‘ಅಂತಿರಲಿ ಇಂತಿರಲಿ
ನಿಂತಲ್ಲೇ ನಿಂತಿರಲಿ
ಸಂತೆಯ ಚಿಂತಿರಲಿ ಕುಣಿಯೋಣು ಬಾ.....
ಇದ್ದದ್ದು ಮರೆಯೋಣು
ಇಲ್ಲದ್ದು ತೆರೆಯೋಣು
ಹಾಲ್ಜೇನು ಸುರಿಯೋಣು ಕುಣಿಯೋಣು ಬಾ...... ’

ನಾವು ಓದುವ ಸಾಹಿತ್ಯ ಇಂತಹ ಜೀವನಪ್ರೀತಿಯನ್ನು ನಮ್ಮಲ್ಲಿ ಮೂಡಿಸುವಂತಾಗಬೇಕು. ಕವಿಯಾಬ್ಬನಲ್ಲಿ ದಾರ್ಶನಿಕನ ಮುನ್ನೋಟವಿರುವುದು ಹೌದಾದರೂ ಅವನಂತೆ ಇವನು ಬದುಕಿನ ಬಗೆಗೆ ನಿರ್ಲಿಪ್ತ , ನಿರಾಸಕ್ತನಲ್ಲ ! ಅರಳಿದ ಹೂವು, ಸುರಿಯುವ ಮಳೆ, ಹರಿಯುವ ನದಿ ಈ ಎಲ್ಲವುಗಳ ಚೆಲುವು ತನಗಾಗಿ ಇದೆಯೇನೋ ಎಂಬಂತೆ ಕವಿ ಅದನ್ನು ಮಮತೆಯಿಂದ ಆಸ್ವಾದಿಸಬಲ್ಲ. ಬದುಕಿನೆಡೆಗಿನ ನಲ್ಮೆಯನ್ನು ತನ್ನ ಕಾವ್ಯದಲ್ಲಿ ಸಮರ್ಥವಾಗಿ ಅಭಿವ್ಯಕ್ತಿಸಬಲ್ಲ ಕೂಡ. ಅವನು ತನ್ನ ಎದೆಯ ಹೊಲವನ್ನು ಬರಡು ಭಾವನೆಗಳಿಂದ ಬೀಳಾಗಿಸಿಕೊಳ್ಳುವವನಲ್ಲ. ಅಲ್ಲಿ ಜೀವನ ಪ್ರೀತಿ, ಮಾನವ ಪ್ರೇಮದ ಭಾವಗಂಗೆಗೆ ಎಂದಿಗೂ ಬರಗಾಲವಿಲ್ಲ. ಹಾಗಾಗಿ ಕವಿ ಅಂತರ್ಮುಖಿಯಾದರೂ ಅವನ ಕಾವ್ಯ ಮಾತ್ರ ಜೀವನ್ಮುಖಿ. ಇಂತಹ ಸಾಹಿತ್ಯ ಮಾತ್ರ ಬದುಕಿನ ಬಗೆಗೆ ನಮ್ಮಲ್ಲಿ ಹೊಸ ಬೆರಗು, ಅರಿವನ್ನು ಅರಳಿಸಬಲ್ಲದು!

ಮನಸ್ಸನ್ನು ತುಂಬಿರುವ ನೋವು ಮರೆತು ನಕ್ಕು ನಗಿಸಿದಾಗ ತಾನೇ ಈ ಬಾಳೊಂದು ಸುಂದರ ರಸಪಾಕ? ಸಾಹಿತ್ಯ ಮಾಡಬೇಕಾಗಿರುವುದೂ ಕೂಡ ಇದೇ - ಭರವಸೆ ತುಂಬುವ ನಿತ್ಯ ನಿರಂತರ ಕಾಯಕ!

ತ್ರಿವೇಣಿ ಅವರ ಅಭಿಪ್ರಾಯಗಳನ್ನು ಒಪ್ಪುವಿರಾ :Post Your Views


ಮುಖಪುಟ / ಎನ್‌ಆರ್‌ಐ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X