• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಿಂಗಪುರದಲ್ಲೊಂದು ‘ಬಯಾನಾ’ ಹಗರಣ

By Staff
|

ಜೂನ್‌ ತಿಂಗಳಿನಲ್ಲಿ ಗೋವಾದ ಬಯಾನ್‌ ಬೀಚಿನಲ್ಲಿ ಸುಮಾರು 700 ಗುಡಿಸಲುಗಳಲ್ಲಿ ವಾಸವಾಗಿದ್ದ ನೂರಾರು ಕನ್ನಡಿಗರು ನೆಲೆ ಕಳೆದುಕೊಂಡಿದ್ದಾರೆ ಎಂಬ ಸುದ್ದಿ ಅಂತರ್ಜಾಲದಲ್ಲಿ ಓದಿ ಬೇಸರವಾಗಿತ್ತು. ನಮ್ಮ ಸರಕಾರದವರು ಗಮನಿಸಿದ್ದಾರಾ? ಎಂದು ರವಿ ಬೆಳಗೆರೆಯವರು ತಮ್ಮ ಅಂಕಣದಲ್ಲಿ ಸರಕಾರಕ್ಕೇ ಪ್ರಶ್ನೆ ಹಾಕಿದಾಗ ಅಬ್ಬಾ ಒಬ್ಬರಾದರೂ ಕೇಳಿದರಲ್ಲಾ ಎಂದು ಸಮಾಧಾನವೂ ಆಗಿತ್ತು.

ನಿರಾಶ್ರಿರಿಗೆ ಆಶ್ರಯ, ಅನುಕಂಪ, ಸಹಾಯ ಸಿಕ್ಕಿತೋ ಇಲ್ಲವೋ ಎಂದು ಯೋಚಿಸುತ್ತಿದ್ದ ನನಗೆ ಸಿಂಗಪುರದಲ್ಲಿ ಕಟ್ಟಡ ನಿರ್ಮಾಣ ಕೆಲಸದಲ್ಲಿ ತೊಡಗಿದ್ದ ವಾನ್‌ ಸೂನ್‌ ಕಂಪನಿಯ 413 ಜನ ಭಾರತೀಯರು 6 ತಿಂಗಳ ಸಂಬಳವಿಲ್ಲದೆ ನಿರಾಶ್ರಿತರಾಗಿದ್ದಾರೆ ಎಂದು ಓದಿ ‘ಪಾಪಿ ಸಮುದ್ರಕ್ಕೆ ಹೋದರೂ ಮೊಣಕಾಲುದ್ದ ನೀರು’ ಎನ್ನುವಂತೆ ಇಲ್ಲಿ ಕೂಡ ನಮ್ಮವರಿಗೆ ಇದೇ ಕಥೆಯೇ ಎಂದು ಬೇಸರವಾಯಿತು.

We lost our jobs, what next....? Indian workers in Sporeನಿರಾಶ್ರಿತರು, ಅದೂ ಸಿಂಗಪುರದಲ್ಲಿ , ಎಂದು ಕೇಳಿ ಆಶ್ಚರ್ಯವಾಗುವುದೇ? ಇದು ಗೋವಾದ ಕಥೆಯ ತರಹ ಅಲ್ಲ , ಸ್ವಲ್ಪ ಬೇರೆ. ಉದರ ಪೋಷಣೆಗಾಗಿ ಬಂದ ಕೆಲಸಗಾರರಿಗೆ ‘ದೂರದ ಬೆಟ್ಟ ನುಣ್ಣಗೆ’ ಎಂಬಂತೆ ಸಿಂಗಪುರದ ಬೆಟ್ಟದ ಬಳಿ ಬಂದಾಗ ಆದ ಅನುಭವ ಕಥನ.

ಸುಮಾರು 413 ಜನ ಭಾರತೀಯರು (ಚೆನ್ನೈ, ಆಂಧ್ರ ದಿಂದ) ಇಲ್ಲಿನ ಒಂದು ದೊಡ್ಡ ಕಂಪನಿಯಾದ ವಾನ್‌ ಸೂನ್‌ ಎಂಬ ಕಟ್ಟಡ ನಿರ್ಮಾಣ ಕಂಪನಿಯಲ್ಲಿ ಕೂಲಿಯಾಳುಗಳಾಗಿ ಕೆಲಸಕ್ಕೆ ಸೇರಿದ್ದರು. 250 ರಿಂದ 500(ರೂ. 5100 ರಿಂದ ರೂ. 12500) ಡಾಲರ್‌ ಸಂಬಳ ಪಡೆದು ಊರಿಗೂ ಹಣ ಕಳುಹಿಸುತ್ತಿದ್ದರು. ಹೆಂಡತಿ, ಮಕ್ಕಳು, ಬಂಧು ಬಳಗದವರನ್ನು ಬಿಟ್ಟು ಬಂದ ಕೊರಗಿದ್ದರೂ ತಾವು ದುಡಿದು ಕಳುಹುತ್ತಿದ್ದ ಹಣದಿಂದ ಊರಿನಲ್ಲಿ ಮನೆ ಮಂದಿಗೆ ಊಟಕ್ಕೆ, ಬಟ್ಟೆಗೆ ಕೊರತೆಯಿಲ್ಲ ಎಂಬ ನೆಮ್ಮದಿ ಇತ್ತು. ಹೊರದೇಶದಲ್ಲಿ ಸಿಗುವ ಕೆಲಸ, ಸಂಬಳಕ್ಕಾಗಿ ಚೆನ್ನೈನಲ್ಲಿ ಟ್ರೆೃನಿಂಗ್‌ ಸೆಂಟರ್‌ನಲ್ಲಿ ಕಲಿತು, ಇಲ್ಲಿ ಸಿಗುವ ಸಂಬಳಕ್ಕಾಗಿ ಏಜೆಂಟ್‌ಗಳಿಗೆ ದುಡ್ಡು ಕೊಟ್ಟು, ಮನೆ, ಭೂಮಿ ಒತ್ತೆ ಇಟ್ಟು ಬಂದವರೂ ಹಲವರು.

ಕೈಯಲ್ಲಿ ಕೆಲಸ, ಬರುವ ಸಂಬಳದಲ್ಲಿ ಅಲ್ಪ ಸ್ವಲ್ಪ ಹಣ ಕೂಡಿಸಿ ನಾಲ್ಕು ವರುಷಗಳ ನಂತರ ಭಾರತಕ್ಕೆ ಹಿಂದಿರುಗಬಹುದು (ವರ್ಕ್‌ ಪರ್ಮಿಟ್‌ ನಾಲ್ಕು ವರುಷ ಮಾತ್ರ) ಎಂಬ ಆಸೆಯಿಂದ ಕೆಲಸ ಮಾಡುತ್ತಿದ್ದ ಇವರಿಗೆ ವಾನ್‌ ಸೂನ್‌ ಕಂಪನಿಯ ಮಾಲೀಕರು ಎರಡು ತಿಂಗಳ ಸಂಬಳ ಕೊಡದೆ ಇದ್ದಾಗ ಏನಪ್ಪಾ , ಹೀಗೇಕೆ ಎಂಬ ಚಿಂತೆ, ಹೆದರಿಕೆ ಶುರುವಾಯಿತು. ಇಂದಲ್ಲಾ ನಾಳೆ ಎಂದು ಆರು ತಿಂಗಳು ಹೀಗೆಯೇ ಕಳೆಯಿತು. ಕಂಪನಿ ದಿವಾಳಿ ಎದ್ದಿದೆ, ಸಂಬಳ ಕೊಡಲಾಗುವುದಿಲ್ಲ ಎಂದು ತಿಳಿದಾಗ ದಿಕ್ಕು ತೋಚಲಿಲ್ಲ. ನಿಂತ ನೆಲವೂ ಕುಸಿದಂತೆ. 6 ತಿಂಗಳು ಕೆಲಸ ಮಾಡಿದ ಸಂಬಳವಾದರೂ ಸಿಗುತ್ತದೆ, ಭಾರತಕ್ಕೆ ಹಿಂದಿರುಗಬಹುದು ಎಂಬ ಭರವಸೆಯೂ ಪೊಳ್ಳಾಯಿತು. ಭಾರತಕ್ಕೆ ಹಿಂದಿರುಗಲು ವಿಮಾನ ದರಕ್ಕೂ ಹಣ ಬೇಕಲ್ಲವೇ? ಹೊಟ್ಟೆಗೇ ಕುತ್ತು ಬಂದಿರುವಾಗ ಇನ್ನು ವಿಮಾನ ದರ? ದಿನ ಕಳೆದಂತೆ ಕೈಯಲ್ಲಿ ಇದ್ದ ಹಣ ಸಾಲದಾಯಿತು. ಇಲ್ಲಿ ನೆಲೆ, ಊಟಕ್ಕೆ ಚಿಂತೆ ಆಲ್ಲದೆ ಊರಲ್ಲಿ ಇವರನ್ನೇ ನಂಬಿದವರ ಬಗ್ಗೆ ಮತ್ತೊಂದು ಚಿಂತೆ.

We lost our jobs, what next....? Indian workers in Sporeವರ್ಕ್‌ ಪರ್ಮಿಟ್‌ ರದ್ದಾದಲ್ಲಿ , ಕಂಪನಿ ಮುಚ್ಚಿದಲ್ಲಿ ಅಥವಾ ಕೆಲಸದ ಅವಧಿ ಮುಗಿದಾಗ ಪರದೇಶಿಗಳಿಗೆ ಇಲ್ಲಿ ನೆಲೆಸಲು ಒಂದು ವಾರದ ಗಡುವು. ಬೇರೆಡೆ ಕೆಲಸಕ್ಕೆ ಅರ್ಜಿ ಹಾಕುವಂತೆಯೂ ಇಲ್ಲ. ಈ ಊರಿನಲ್ಲಿ ಚಳುವಳಿ, ಧಿಕ್ಕಾರ ಇವುಗಳಿಗೆ ಎಡೆ ಇಲ್ಲ. ಕೆಲಸಗಾರರ ಬಹಳಷ್ಟು ಸಂಘಗಳು, ನಾಯಕರೂ ಇದ್ದಾರೆ. ಶಾಂತಿ ಪ್ರಿಯ ಸಮುದಾಯ. ಎಲ್ಲವೂ ಶಾಂತಿಯುತವಾಗಿ ನಡೆಯಬೇಕು. ಇದನ್ನು ಮೀರಿದರೆ ಜೈಲು ವಾಸ.

ಇದ್ದ ಹಣ ಕರಗಿ, ಭರವಸೆ ಹುಸಿಯಾಗಿ, ಹೊಟ್ಟೆ , ಬಟ್ಟೆ , ವಸತಿಗೆ ಕುತ್ತು ಬಂದಾಗ ಇವರೆಲ್ಲಾ ಒಟ್ಟಾಗಿ ಸೇರಿ M.O.M (Ministry Of Manpower) ಗೆ ಮೊರೆ ಹೊಕ್ಕು ದೂರಿತ್ತರು. ಭಾರತ ರಾಯಭಾರಿ ಕಚೇರಿಯ ಮುಂದೆ ಧರಣಿ ಕೂತರು. ಸಿಂಗಪುರದ M.P ಗಳು ಇವರ ಪರಿಸ್ಥಿತಿ ಕಂಡು ಸಹಾಯ ಹಸ್ತ ನೀಡಲು ಮುಂದಾದರು. ದಿನ ಪತ್ರಿಕೆಯಲ್ಲಿ ಈ ಸುದ್ದಿ ಪ್ರಕಟವಾದಾಗ ಹಲವರು, ಸಂಘ ಸಂಸ್ಥೆಗಳು ಊಟದ ವ್ಯವಸ್ಥೆ ಮಾಡಿದರು. M.O.M (Ministry Of Manpower) ಇವರ ಸಮಸ್ಯೆಗೆ ಪರಿಹಾರ ದೊರಕುವ ತನಕ ಇಲ್ಲಿ ತಂಗಲು ಅನುಮತಿ ನೀಡಿತು.

M.O.M (Ministry Of Manpower) ನ ಮಧ್ಯಸ್ತಿಕೆಯಿಂದ ವಾನ್‌ ಸೂನ್‌ ಕಂಪನಿಯ ಮಾಲೀಕರು ಮತ್ತು ಕೆಲಸಗಾರರು ಸೇರಿ ಒಂದು ಒಪ್ಪಂದಕ್ಕೆ ಬಂದರು. ಕೂಲಿಗಾರರ 6 ತಿಂಗಳ ಸಂಬಳದಲ್ಲಿ ಶೇ. 35 ರಿಂದ ಶೇ. 65 ರಷ್ಟು ಸಂಬಳದ ಹಣವನ್ನು ವಾನ್‌ ಸೂನ್‌ ಕಂಪನಿ ಕೊಡಲು ನಿರ್ಧರಿಸಿತು. ಪ್ರತಿಯಾಬ್ಬ ಕೆಲಸಗಾರನಿಗೂ ವಿಮಾನ ದರ ಹಿಡಿದುಕೊಂಡು ಸುಮಾರು 1000- 1500 (ರೂ 25000-ರೂ 40000) ಡಾಲರ್‌ ಕೊಡಲು ನಿರ್ಧರಿಸಿ, ಈ ವಾರ ಇವರನ್ನು ಭಾರತಕ್ಕೆ ರವಾನೆ ಮಾಡುವ ಜವಾಬ್ದಾರಿಯನ್ನು ಕಂಪನಿ ಹೊತ್ತಿದೆ. ಅದೇ ಅಲ್ಲದೆ ಈ ಕೆಲಸಗಾರರಿಗೆ ಊಟ ಮತ್ತು ವಸತಿಯ ವ್ಯವಸ್ಥೆಯನ್ನೂ ಮಾಡಿದೆ. ಈ ಒಪ್ಪಂದವಾಗಲು ಸಹಾಯ ಮಾಡಿದ ಭಾರತ ರಾಯಭಾರಿ ಕಚೇರಿ, NTUC, Building Construction and Timber Industries Employees Union ಗಳಿಗೆ ಕೆಲಸಗಾರರು ಆಭಾರಿಯಾಗಿದ್ದಾರೆ. ಸಾಕಪ್ಪಾ ಈ ಪರದೇಶ ವಾಸ, ಅನುಭವ, ಪರದಾಟ- ಎಂದು ವಾನ್‌ ಸೂನ್‌ ಕಂಪನಿಯ ಕೆಲಸಗಾರರು ನೆಮ್ಮದಿಯ ನಿಟ್ಟುಸಿರು ಬಿಟ್ಟು ಗುಂಪು ಗುಂಪಾಗಿ ಭಾರತಕ್ಕೆ ಮರಳುತ್ತಿದ್ದಾರೆ.

ರಾಮೇಶ್ವರಕ್ಕೆ ಹೋದರೂ ಶನೇಶ್ವರ ಬಿಡ ಎಂಬಂತೆ ಎಲ್ಲಾ ದೇಶಗಳಲ್ಲೂ ಇದು ನಡೆಯುತ್ತದೆ. ನ್ಯಾಯ ಎಲ್ಲೆಡೆ ಸಿಗುತ್ತದೆಯೇ? ವಾನ್‌ ಸೂನ್‌ ಕಂಪನಿಯ ಕೆಲಸಗಾರರು ಅದೃಷ್ಟವಂತರು ಎಂದೇ ಹೇಳಬೇಕು. ಇನ್ನೂ ಇದೇ ತರಹದ ಸಮಸ್ಯೆ ಬಗೆ ಹರಿಯದೆ ಇಂದು ನಾಳೆ ಹಣ ಬರಬಹುದು ಎಂದು ಕಾದು ಕುಳಿತ ಕರ್ಮಚಾರಿಗಳು ಭಾರತದಲ್ಲೇ ಏನು, ಪ್ರಪಂಚದಾದ್ಯಂತ ಇದ್ದಾರೆ.

ಪರದೇಶದಲ್ಲಿ ನಿರಾಶ್ರಿತರಾದ ಭಾರತೀಯರಿಗೆ ಆಶ್ರಯ ಸಿಕ್ಕಿ, ಸಮಸ್ಯೆ ಬಗೆಹರಿದು ಅವರು ನಗುಮೊಗದಿ ಸ್ವದೇಶಕ್ಕೆ ಮರಳುತ್ತಿದ್ದಾರೆ ಎಂಬ ಸುದ್ದಿ ಓದಿ ಸಂತೋಷವಾಯಿತು. ಆಶ್ವಾಸನೆ-ಅಭಯ ‘ಹಸ್ತ’ ತೋರಿಸಿ ಕೇಂದ್ರ ಸರಕಾರದತ್ತ ಬೆಟ್ಟು ತೋರಿಸುವ ನಮ್ಮ ಸರಕಾರ ಗೋವಾ-ನಿರಾಶ್ರಿತರ ಕಣ್ಣೀರು ಒರೆಸಿ ಸಹಾಯ ನೀಡುವುದೇ ಎಂಬ ಪ್ರಶ್ನೆಯ ಉತ್ತರಕ್ಕಾಗಿ ಕಾಯುತ್ತಿದ್ದೇನೆ. ಸಿಂಗಪುರದ ಭಾರತೀಯ ನಿರಾಶ್ರಿತರ ಕಷ್ಟ ಪರಿಹಾರವಾದಂತೆ ಗೋವಾದ ನಿರಾಶ್ರಿತರಿಗೂ ಪರಿಹಾರ ಸಿಗಲಿ ಎಂದು ಹಾರೈಸುವೆ.

ಪೂರಕ ಓದಿಗೆ-

ಗೋವೆಯ ಬೀಚಿನಲ್ಲಿ ಕನ್ನಡದ ಕೂಲಿಕಾರ ಮತ್ತು ಮೈ ಕಸುಬಿನವಳು !

ಮುಖಪುಟ / ಎನ್‌ಆರ್‌ಐ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X