• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸ್ವಾತಂತ್ರ್ಯ-ಮದುವೆ ಮತ್ತು ನವ್ಯ ಜೀವನ ಶೈಲಿ

By Staff
|
  • ಎಂ. ವಿಜಯಾನಂದ್‌

ಟುಸ್ಸಾನ್‌, ಅರಿಜೋನ, ಯು.ಎಸ್‌.ಎ.

vijay@iatrogenix.com

M Vijayanand, Tucson, Arizonaನಮಗೆ ಬೇಕೆನಿಸಿದ ವಸ್ತುಗಳನ್ನು ಕೊಂಡುಕೊಳ್ಳುವಲ್ಲಿ ನಾವು ಎಷ್ಟು ಚಾಣಾಕ್ಷರಿರುತ್ತೀವಿ, ಹಾಗೆಯೆ ಪ್ರಿಯವೆನಿಸಿದ ಯಾವುದೇ ವಸ್ತುಗಳ ಮೇಲೆ ಎಷ್ಟು ಕಾಳಜಿ ವಹಿಸುತ್ತೇವೆ, ಅದರ ಜೀವನ ಇರುವವರೆಗೊ ನಮ್ಮೊಂದಿಗೆ ಇಟ್ಟುಕೊಂಡು ಜೊತೆಗಿನ ಒಂದೊಂದು ಕ್ಷಣವನ್ನೂ ಸವಿಯಲು ಬಯಸುತ್ತೇವೆ. ಉದಾಹರಣೆಗೆ ನಮ್ಮಪ್ಪ ತಂದ ನಮ್ಮ ರೇಡಿಯೋನೆ ತೆಗೆದುಕೊಳ್ಳಿ- ಅವರು ತಮ್ಮ ಸಂಸಾರ ಜೀವನದ ಮೊದಲ ದಿನಗಳಲ್ಲಿ ಬೆಂಗಳೂರಿನಲ್ಲಿ ಹಲವಾರು ಕಡೆ ಹುಡುಕಿ ತಂದ ಬುಶ್‌ ಕಂಪನಿಯ ಆ ದೊಡ್ಡ ರೇಡಿಯೋವನ್ನು ನಾವು ಸವಿದ ರೀತಿಗಳೇ ಬೇರೆ.

ನಾನು ಹುಟ್ಟಿ ಕೇಳುವ ವಯಸ್ಸಿಗಾಗಲೆ ಈ ರೇಡಿಯೋಗೆ 12 ವರ್ಷವಾಗಿತ್ತು . ಆದರೂ ನಾಲ್ಕಾರು ಮನೆ, ರಸ್ತೆ ದಾಟಿ ಸಣ್ಣ ಮೈದಾನದಲ್ಲಿ ಗೋಲಿ ಆಡುತ್ತಿದ್ದ ನಮಗೆ ಸಂಜೆಯ ಚಲನ ಚಿತ್ರಗೀತೆಗಳನ್ನು ಕೇಳಲು ಮನೆಗೆ ಹೊಗಬೇಕಿರಲಿಲ್ಲ. ಈಗಲೂ ಹೆಮ್ಮೆಯಿಂದಲೇ ಹಲವು ರೇಡಿಯೋ ಕೇಂದ್ರಗಳನ್ನು ಆಲಿಸುತ್ತೇವೆ. ದೂರದರ್ಶನ ಬಂದು ಎಷ್ಟೊ ವರ್ಷಗಳು ಕಳೆದರೂ ರೇಡಿಯೋ ಮೇಲಿನ ಪ್ರೀತಿಯನ್ನ ಕಡಿಮೆಮಾಡಿಕೊಂಡಿಲ್ಲ . 42 ವರ್ಷ ಕಳೆದರೂ ಹಾಡುತ್ತಿರುವ ಈ ರೇಡಿಯೋವನ್ನ ಕಾಪಾಡಿಕೊಂಡು ಬಂದ ರೀತಿಯೇ ಇದಕ್ಕೆ ಸಾಕ್ಷಿ. ಕೆಲವೊಮ್ಮೆ ನಮ್ಮ ಮನೆಯವರೆಲ್ಲರೂ ಇಟ್ಟುಕೊಂಡಿರುವ ಇದರ ಮೇಲಿನ ಪ್ರೀತಿಯನ್ನ ನೋಡಿದರೆ ನಮ್ಮ ನಮ್ಮಲ್ಲಿಯೇ ಆ ಪ್ರೀತಿ ಇದೆಯೋ ಇಲ್ಲವೋ ಎನಿಸುತ್ತದೆ.

ಈಗಿನ ಕಾಲವಂತೂ ಇನ್ನೂ ವಿಚಿತ್ರ. ಟಿವಿ, ಫ್ರಿಜ್ಜು , ಡಿವಿಡಿ ಪ್ಲೇಯರ್‌, ಬಟ್ಟೆ ಹೀಗೆ ಯಾವುದೇ ವಸ್ತುವನ್ನ ಕೊಂಡುಕೊಳ್ಳಲು ಹತ್ತಾರು ಕಡೆ ನೋಡಿ ಕೇಳುತ್ತಾರೆ. ಒಂದು ಸಣ್ಣ ಅಸಮಾಧಾನ ಬಂದರೂ ಅದೇ ಕ್ಷಣ ಹಿಂತಿರುಗಿಸಿ ಬೇರೆ ತರುತ್ತಾರೆ. ಕೆಲವೊಮ್ಮೆ ಅಸಮಾಧಾನದ ಎಲ್ಲೆ ಮೀರಿ ಬೇರೆ ಯಾವುದೋ ವಸ್ತುವನ್ನ ತಂದ ಉದಾಹರಣೆಗಳೂ ಇವೆ. ಈಗಿನ ವ್ಯಾಪಾರದ ಗುಟ್ಟಾದ ‘ಒಂದು ಕೊಂಡರೆ ಮತ್ತೊಂದು ಉಚಿತ’ ಪ್ರಯೋಗಗಳಿಗೆ ಮಾರುಹೋದವರು ಎಷ್ಟೋ ಮಂದಿ ಇದ್ದಾರೆ. ತಮ್ಮ ಇಚ್ಛೆಯ ಯಾವ ಒಂದು ವಸ್ತುವನ್ನ ಕೊಂಡು ಕೊಳ್ಳಲು (ನಿರ್ಧರಿಸಿದ ನಂತರ) ಯಾವುದೇ ದೇಶದ ಮಾನವನಲ್ಲಿ ಸ್ವತಂತ್ರವಿದೆ ಅಲ್ಲವೆ. ಇದೇ ತರದ ಸ್ವಾತಂತ್ರ್ಯವನ್ನ ಸಂಗಾತಿ ಆರಿಸಲು ಕೊಟ್ಟರೆ ಹೇಗಿರುತ್ತದೆ ?

ಸಂಗಾತಿಯ ಆಯ್ಕೆಯ ವಿಷಯ ಕೆಲವರಿಗೆ ಆಶ್ಚರ್ಯ ತರಲಾರದೇನೊ! ಅನೇಕ ಮಂದಿಗೆ ಮಾತ್ರ ಇದು ಕೇಳುವುದಕ್ಕೂ ಅಸಹ್ಯವಾಗಿರುತ್ತದೆ. ಇದನ್ನು ನಿಜವಾಗಿಸಿಕೊಂಡ ನಮ್ಮೂರಿನ ಕೇಶವನನ್ನೇ ತೆಗೆದುಕೊಳ್ಳಿ. ಮದುವೆಯಾಗಿ ಹೆಂಡತಿಯನ್ನ ಬಾಣಂತನಕ್ಕಾಗಿ ತವರಿಗೆ ಕಳಿಸಿ, ಹೆಂಡತಿಯನ್ನ ನೋಡುವ ನೆವದಲ್ಲಿ ನಾದಿನಿಯನ್ನ ಬುಟ್ಟಿಗೆ ಬೀಳಿಸಿಕೊಂಡದ್ದು ನಮ್ಮೂರಿನ ಯಾರಿಗೆ ಗೊತ್ತಿಲ್ಲ. ಒಂದು ಕೊಂಡು ಮತ್ತೊಂದನ್ನು ಉಚಿತವಾಗಿ ಗಿಟ್ಟಿಸಿದ ಕೇಶವನ ಜೊತೆ ಜೀವನ ನಡೆಸಿದ ಬಗೆಯನ್ನ ಈ ಸೋದರಿಯರಿಗೇ ಕೇಳಬೇಕು. ಇನ್ನು ಡೈವರ್ಸ್‌ ಮಾಡಿಕೊಂಡೋ ಅಥವಾ ಸಂಗಾತಿಯಾಂದಿಗೆ ದೂರವಾಗಿ, ಸಮಾಜಕ್ಕೆ ಎದುರಾದರೂ ಮತ್ತೊಂದು ಸಂಗಾತಿಯಾಂದಿಗೆ ತಮ್ಮ ಜೀವನವನ್ನ ಸಾಧಿಸಿ ತೋರಿಕೊಟ್ಟವರೂ ಇದ್ದಾರೆ. ಆದರೆ ನಿಜವಾಗಿ ಈ ಸ್ವಾತಂತ್ರ್ಯದ ಅಗತ್ಯ ಇರುವುದು ಮುಸ್ಲಿಮ್‌ ಹುಡುಗನೊಬ್ಬನ ಪ್ರೀತಿಸಿ ಸಮಾಜಕ್ಕೆ ಎದುರು ನಿಲ್ಲಲಾಗದೆ ನೇಣು ಹಾಕಿಕೊಂಡ ನಮ್ಮ ಸಾವಿತ್ರಿಯಂತವರಿಗೆ, ಅಥವಾ ವಲ್ಲದ ಹೆಂಡತಿಯನ್ನ ಕಟ್ಟಿಕೊಂಡು ಕುಡಿತಕ್ಕೆ ಪ್ರಾಣವನ್ನೇ ತೆತ್ತ ನಮ್ಮ ಶಂಕರನಂತವರಿಗೆ.

ನಮ್ಮಲ್ಲಿ ಪ್ರೇಮಿಸುವವರ ಸಂಖ್ಯೆ ಹೆಚ್ಚಿದ್ದರೂ ಅದನ್ನು ಸತ್ಯವಾಗಿ ಫಲಿಸಿಕೊಂಡವರು ತುಂಬಾ ಕಡಿಮೆ. ಈ ಥರದ ಪ್ರೀತಿಗಳು ಹೆಚ್ಚಾಗಿ ಅಪ್ರಾಪ್ತ ಯುವಕ ಯುವತಿಯರಲ್ಲಿ ನಡೆಯುವುದರಿಂದ ಕೆಲವೊಮ್ಮೆ ಅದಕ್ಕೆ ಧ್ಯೇಯವೇ ಇರುವುದಿಲ್ಲ. ಸುಂದರ ಹುಡುಗಿಯ ಕಂಡು ಹಲವು ಹುಡುಗರು ಹಿಂದೆ ಬೀಳುವುದು ಸಾಮಾನ್ಯ, ಆದರೆ ತಮಗೆ ತಕ್ಕ ಜೀವನ ಸಂಗಾತಿಯನ್ನು ಆರಿಸಿ ಪ್ರೀತಿಸುವವರು ತುಂಬಾ ವಿರಳ. ಅದೇ ಕಾರಣಕ್ಕೆ ನಮ್ಮಲ್ಲಿ ಎಷ್ಟೋ ಪ್ರೀತಿ ಪ್ರೇಮಗಳಿಗೆ ಸಾರ್ಥಕತೆಯೇ ಇರುವುದಿಲ್ಲ. ಅಲ್ಲದೆ ಇವೆಲ್ಲವೂ ಹೆಚ್ಚಾಗಿ ಮದುವೆಗೆ ಮುನ್ನವಷ್ಟೇ ಸೀಮಿತವಾಗಿರುತ್ತವೆ, ಮದುವೆ ಇವೆಲ್ಲಕ್ಕೆ ಕಡಿವಾಣವಾಗಿರುತ್ತದೆ, ಮದುವೆಯ ನಂತರ ಮಾಡಿದ ಎಲ್ಲ ಪ್ರೀತಿ ಪ್ರೇಮಗಳು ನಮ್ಮ ಸಮಾಜಕ್ಕೆ ತದ್ವಿರುದ್ದ. 65ರ ವಯಸ್ಸಿನ ಮುದುಕನಿಗೋ ಅಥವಾ ಬಾಳಿನಲ್ಲಿ ಸಂಗಾತಿಯನ್ನ ಕಳಕೊಂಡ ಒಂದು ಹೆಣ್ಣಿಗೊ ತಮ್ಮ ಸಂಗಾತಿಗಾಗಿ ಹುಡುಕುವ ಸ್ವಾತಂತ್ರ್ಯ ಇದೆ ಎಂದರೆ, ಊಹಿಸಲು ಕಠಿಣವೆನಿಸುತ್ತದೆ.

ಅಮೇರಿಕನ್ನರ ಈ ಜೀವನ ಶೈಲಿಯ ಬಗ್ಗೆ ಅಸಹ್ಯ ತೋರಿದ ನಮ್ಮ ಎಷ್ಟೋ ಜನರನ್ನ ಚಿಕ್ಕಂದಿನಿಂದ ನೋಡಿದ್ದೆ, ನಾನಿಲ್ಲಿಗೆ ಬರುವ ಮುನ್ನ ತಿಳಿದುಕೊಂಡದ್ದು, ಓದಿದ್ದು, ಕೇಳಿದ್ದರಲ್ಲಿ ಎಷ್ಟೋ ವಿಷಯಗಳು ಹುಸಿಯಾದದ್ದು, ನಮ್ಮ ಸಾವಿತ್ರಿ ಅಥವ ಶಂಕರನ ಜೀವನಗಳನ್ನ ಹೋಲಿಸಿ ನೋಡಿದಾಗಲೆ. ಇಲ್ಲಿ ಒಂದು ವಸ್ತುವನ್ನ ಕೊಳ್ಳಲು ನಮಗೆ ಹೇಗೆ ಸ್ವಾತಂತ್ರ್ಯವಿದೆಯೋ ಅಷ್ಟೇ ಸ್ವಾತಂತ್ರ್ಯ ಸಂಗಾತಿಯನ್ನು ಆರಿಸಲೂ ಇದೆ. ತಮ್ಮ ಪ್ರೀತಿಗೆ ಒತ್ತುಕೊಡುವ, ಹೃದಯಕ್ಕೆ ಹತ್ತಿರವಾದ, ಜೀವನವನ್ನ ಹಂಚಿಕೊಳ್ಳುವ ಸಂಗಾತಿಯನ್ನು ಹುಡುಕುವುದೇ ಈ ಜೀವನ ಶೈಲಿಗೆ ಒಂದು ಮುಖ್ಯ ಕಾರಣ. ಈ ಪ್ರಯತ್ನಗಳು ಎಲ್ಲ ಯುವಕ ಯುವತಿಯರಿಗೂ ತಾವು ಪ್ರಾಪ್ತ ವಯಸ್ಕರಾದಾಗಿನಿಂದ ನಡೆಯುತ್ತದೆ, ಕೆಲವೊಮ್ಮೆ ತಮ್ಮ ಕೊನೆಯ ಉಸಿರೆಳೆವವರೆಗೂ ನಡೆಯುತ್ತದೆಯೆಂದರೆ ಆಶ್ಚರ್ಯವಲ್ಲವೆ? ವೈಮನಸ್ಸು ಬಂದ ಕ್ಷಣವೇ ದೂರವಾಗಿ ಬೇರೊಂದು ಸಂಗಾತಿಯನ್ನ ಹುಡುಕುವ ಸ್ವಾತಂತ್ರ್ಯ ಹೆಣ್ಣಿಗಾಗಲಿ ಗಂಡಿಗಾಗಲಿ ಸಮನಾಗಿ ಇದೆ. ಹಾಗೆಂದಾಕ್ಷಣ ಎಲ್ಲರಿಗೂ ಇದೇ ಜೀವನ ಎಂದು ಅರ್ಥವಲ್ಲ , ಪ್ರೀತಿಯಿಂದಲೇ 30-40 ವರ್ಷಗಳೇ ಅಲ್ಲದೆ ಜೀವನವಿಡೀ ಜೊತೆಯಲ್ಲಿ ಸಂಸಾರ ಮಾಡುವವರೂ ಇಲ್ಲಿ ಇದ್ದಾರೆ.

ನಮ್ಮ ಮಾರ್ಕೆಟಿಂಗ್‌ ಮ್ಯಾನೆಜರ್‌ ಜಾನ್‌, ನಮ್ಮ ಸಂಗಾತಿ ಆಯ್ಕೆಯ ಬಗ್ಗೆ ವಿಸ್ಮಯಗೊಂಡವನಲ್ಲಿ ಒಬ್ಬ. ನನ್ನ ಭಾರತೀಯ ಸ್ನೇಹಿತ ತನ್ನೂರಿಗೆ ಹೋಗಿ ಕೇವಲ ಒಂದೇ ತಿಂಗಳಲ್ಲಿ 15 ಹುಡುಗಿಯರನ್ನ ನೋಡಿ, ಒಂದು ಹುಡುಗಿಯನ್ನ ಆರಿಸಿ, ಮದುವೆಯೂ ಆಗಿ ಬಂದ ಕತೆಯನ್ನು ಕೇಳಿ ಒಂದು ಕ್ಷಣ ಮೌನವಾಗಿದ್ದ. ಒಮ್ಮೆಯೂ ನೋಡದೆ, ಮಾತನ್ನೂ ಆಡದೆ, ಒಂದು ಹುಡುಗಿಯನ್ನ ಮದುವೆಯಾಗಲು ಸಾಧ್ಯವೆ? ಅಲ್ಲದೆ ನಿಮ್ಮ ಸಮಾಜದ ರೀತಿಯಂತೆ ಜೀವನವಿಡೀ ಸಂಸಾರ ಮಾಡಬಹುದೆ? ಎಂದು ನಂಬಲಾಗದಷ್ಟು ಆಶ್ಚರ್ಯ ಪಟ್ಟಿದ್ದ.

ನಮ್ಮ ಜೀವನದ ಬಗ್ಗೆ ಸದಾ ಕುತೂಹಲದಿಂದ ಕೇಳುತ್ತಿದ್ದ ಜಾನ್‌ ತನ್ನ ಸಂಗಾತಿಯ ಆಯ್ಕೆಯ ಬಗ್ಗೆ, ಆಗಿಂದಾಗ್ಗೆ ವಿವರಿಸುತ್ತಿದ್ದ. ಮೊದಮೊದಲು ಮೋಜಿಗಾಗಿ ಹಲವು ಹುಡುಗಿಯರ ಜೊತೆ ಡೇಟ್‌ ಮಾಡಿದ್ದು , ಅವರ ಜೊತೆ ಬ್ರೇಕಪ್‌ ಆದ ಕಾರಣಗಳನ್ನೂ ಹೇಳಿದ್ದ. ಆದರೆ ಅವನು ಡೇಟ್‌ ಮಾಡಿದ 20 ಮಂದಿ ಹುಡುಗಿಯರಲ್ಲಿ, ಅವನಿಗೆ ತುಂಬಾ ಹತ್ತಿರವಾದ 3-4 ಮಂದಿ ಬಗ್ಗೆ ಹೆಚ್ಚಾಗಿ ಹೇಳುತಿದ್ದ. ಬ್ರೇಕ್‌ ಆದ ಎಲ್ಲಕ್ಕು ತಮ್ಮ ವ್ಯತ್ಯಾಸಗಳೇ ಕಾರಣ ಎನ್ನುತ್ತಾನೆ, ಎಲ್ಲ ರೀತಿ ಆರು ತಿಂಗಳಿಂದ ಹೊಂದಿಕೊಂಡಿರುವ ಎರಿಕಾಳೇ ತನ್ನ ಸಂಗಾತಿಯೆಂದು ನಿಶ್ಚಯಿಸಿದ್ದಾನೆ, ತನ್ನ ತಂದೆತಾಯಿಯರಿಗೆಲ್ಲಾ ಮೆಚ್ಚುಗೆ ಪಡಿಸಿ ಮದುವೆ ಪ್ರೊಪೋಸಲ್ಗೆ ಕೂಡ ತಯಾರಿ ನಡೆಸಿದ್ದಾನೆ. ಆಶ್ಚರ್ಯವೆಂದರೆ, ಇವನ ಅಕ್ಕಂದಿರು, ಅಣ್ಣಂದಿರು ಮತ್ತು ತಂದೆ ತಾಯಿಗಳು ತಮಗೆ ಪರಿಚಯದ ಹುಡುಗಿಯರನ್ನ ಜಾನ್ಗೆ ಪರಿಚಯಿಸಿ ಡೇಟ್ಗಾಗಿ ಮುನ್ನೆಡೆಸಿದ್ದು. ಆತನಿಗೆ ಮನೆಯವರ ಎಲ್ಲಾ ಪ್ರೋತ್ಸಾಹವೂ ಸದಾ ಇತ್ತು. ಇವರು ತೋರುತ್ತಿದ್ದ ಪೋತ್ಸಾಹವನ್ನು ಕಂಡಾಗಲೆಲ್ಲಾ, ನಮ್ಮೂರಿನ ಸಾವಿತ್ರಿ ಹಾಗು ಅವಳ ರೀತಿಯ ಅನೇಕರು, ತಮ್ಮ ಸಂಗಾತಿಯ ಆಯ್ಕೆಯಲ್ಲಿ ಸೋತು ಅಂತ್ಯ ಕಂಡದ್ದು ನೆನಪಾಗದೆ ಇರುತ್ತಿರಲಿಲ್ಲ.

ಇನ್ನು ನಮ್ಮ ಐಟಿ ಮ್ಯಾನೇಜರ್‌ ಗ್ಯಾರಿಯದ್ದು ಇನ್ನೊಂದು ಭಿನ್ನವಾದ ಕಥೆ, ಸುಮಾರು 25 ವರ್ಷ ಜೊತೆಯಲ್ಲಿದ್ದು ತನ್ನ ಹೆಂಡತಿಯ ಜೊತೆ ಸಣ್ಣ ವೈಮನಸ್ಯ ಬಂದು, ಅವರು ಬೇರೆಯಾಗಿದ್ದು ಕೇವಲ 2 ವರ್ಷಗಳ ಹಿಂದಷ್ಟೆ. ಈಗ ಆತನಿಗೆ ಸುಮಾರು 52 ವರ್ಷ, ಮೆಡಿಕಲ್‌ ಸ್ಕೂಲು ಓದುತ್ತಿರುವ 23-24 ವಯಸ್ಸಿನ ಒಬ್ಬ ಮಗ ಮತ್ತು ಹೈಸ್ಕೂಲ್‌ ಓದುತ್ತಿರುವ ಒಬ್ಬ ಮಗನಿದ್ದಾನೆ. ಹೊಸ ಗಂಡ ಹಾಗೂ ಆತನ ಒಬ್ಬ ಮಗನ ಜೊತೆ ಇರುವ ತಾಯಿಯ ಜೊತೆ ಇರಲು ಮನಸ್ಸಾಗದ ಈ ಮಕ್ಕಳು ಗ್ಯಾರಿಯ ಜೊತೆಯಲ್ಲೇ ಇದ್ದಾರೆ, ವಾರಕ್ಕೊಮ್ಮೆ ಒಂದು ದಿನ ತಾಯಿಯ ಮನೆಯಲ್ಲಿ ಕಳೆಯುತ್ತಾರೆ. ಕಳೆದ ವಾರದಿಂದ ಗ್ಯಾರಿ ಮತ್ತು ನಮ್ಮ ಜನರಲ್‌ ಮ್ಯಾನೇಜರ್‌ ಮೇರಿ, ವೆಕೇಶನ್ನಲ್ಲಿ ಇದ್ದಾರೆಂದು ತಿಳಿದಿತ್ತು. ಆದರೆ ಇವರು ಮದುವೆಯಾಗುತ್ತಿರುವ ವಿಷಯ ಸ್ವಲ್ಪ ಆಶ್ಚರ್ಯವನ್ನೇ ತಂದಿತ್ತು, ಮೇರಿ ಮತ್ತು ಗ್ಯಾರಿ ಆತ್ಮ ಸ್ನೇಹಿತರೆಂದು ತಿಳಿದಿತ್ತು . ಆದರೆ ಆ ಸ್ನೇಹ ಐವತ್ತರ ಹರೆಯದ ಈ ಜೋಡಿಗಳಲ್ಲಿ ಪ್ರೇಮವಾಗಿ ಪರಿವರ್ತಿಸಿದೆಯೆಂದು ನನಗೆ ತಿಳಿದಿರಲಿಲ್ಲ. ಅವರ ಹಳೆಯ ಸ್ನೇಹ ನಮ್ಮ ಗ್ಯಾರಿಯನ್ನು ಮತ್ತೊಮ್ಮೆ ಗೃಹಸ್ಥನನ್ನಾಗಿಸಿತು. ಇಲ್ಲಿ ನಮ್ಮ ಶಂಕರನ ಕತೆ ನೆನಪಾಗುತ್ತದೆ. ಒಲ್ಲದ ಹೆಣ್ಣನ್ನ ಮನೆಯವರ ಒತ್ತಾಯಕ್ಕೆ ಕಟ್ಟಿಕೊಂಡು, ಜೀವನ ಮಾಡುವ ಮನಸ್ಸೂ ಮಾಡದೆ ಕುಡಿತಕ್ಕೆ ಬಲಿಯಾಗಿ, ತಾನೂ ಬದುಕದೆ ಹೆಂಡತಿ ಮಕ್ಕಳನ್ನೂ ತಬ್ಬಲಿ ಮಾಡಿದ. ಒಮ್ಮೊಮ್ಮೆ ಅವನಿಗೆ ಈ ಸ್ವಾತಂತ್ರ್ಯ ಇದ್ದಿದ್ದರೆ ಹೇಗಿರುತ್ತಿತ್ತು ಅನಿಸುತ್ತದೆ.

ಕಾಲಕಾಲಕ್ಕೆ ಬದಲಾಯಿಸಿಕೊಂಡು ಬಂದ ನಮ್ಮಲ್ಲಿ, ಪ್ರಪಂಚದ ಬೇರೊಂದು ಭಾಗದಲ್ಲಿರುವ ಸ್ವಾತಂತ್ರ್ಯವನ್ನು ಕಂಡಾದರೂ, ನಮ್ಮ ದೇಶದಲ್ಲಿ ವಿಧವೆ, ಗಂಡನನ್ನು ಬಿಟ್ಟವಳು, ವಿಧುರ ಎಂದೆಲ್ಲಾ ಪಟ್ಟಕಟ್ಟಿಕೊಂಡು ಮರುಗುತಿರುವ ಎಷ್ಟೋ ಮಂದಿಗೆ ಬಾಳು ಕೊಟ್ಟರೆ ಅಥವಾ ಅವರ ಬಾಳಿಗೆ ಪ್ರೋತ್ಸಾಹ ಕೊಡುವ ಒಂದು ಸಣ್ಣ ಬದಲಾವಣೆಯಾದರೆ, ಅದು ನಮ್ಮ ದೇಶಕ್ಕಾಗಲಿ ಮಾನವೀಯತೆಗಾಗಲಿ ಆಗುವ ಕೊಡುಗೆಯಲ್ಲವೆ?

ಮುಖಪುಟ / ಎನ್‌ಆರ್‌ಐ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more