ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರ ಕ್ಯಾಲಿಫೋರ್ನಿಯಾದಲ್ಲಿ ಕನ್ನಡ ಒಂದನೆ ಪಾಠಾ..!

By Staff
|
Google Oneindia Kannada News
Sreevathsa Duglapura *ಶ್ರೀವತ್ಸ ದುಗ್ಲಾಪುರ, ಸನ್ನಿವೇಲ್‌, ಕ್ಯಾಲಿಫೋರ್ನಿಯಾ
[email protected]

ಓರಣವಾಗಿ ಒಂದರ ಮೇಲೊಂದರಂತೆ ಪೇರಿಸಿಟ್ಟ ಚಪ್ಪಟೆ ಕಲ್ಲುಗಳನ್ನು ನೋಡುತ್ತಿದ್ದಂತೆಯೇ ಮಗನ ಹೊಳಪುಗಣ್ಣುಗಳಲ್ಲಿ ಅದೇನೋ ಕುತೂಹಲ ಇಣುಕುತ್ತದೆ. ‘ಅಪ್ಪಾ, ಲಗೋರಿ ಅಂದ್ರೆ ಇದೇನಾ?’ ಎಂದು ತನ್ನ ಅಮೇರಿಕನ್‌ ಇಂಗ್ಲೀಷಿನಲ್ಲಿ ಅಪ್ಪನನ್ನು ವಿಚಾರಿಸುತ್ತಾನೆ. ಏರುತ್ತಿದ್ದ ಮಧ್ಯಾಹ್ನದ ಬಿಸಿಲಿನ ಝಳಕ್ಕೆ ತನ್ನ ಸನ್‌ಗ್ಲಾಸನ್ನು ಸರಿಪಡಿಸಿಕೊಳ್ಳುತ್ತಾ ಅಪ್ಪ ಆಟವನ್ನು ವಿವರಿಸುತ್ತಾನೆ. ಲಗೋರಿಯ ಜೊತೆಗೆ, ‘ನಾನು ನಿನ್ನಷ್ಟು ಚಿಕ್ಕವನಾಗಿದ್ದಾಗ ನಮ್ಮ ಊರಿನಲ್ಲಿ, ...’ ಎಂದು ತಾನಾಡಿದ್ದ ಮರಕೋತಿ, ಬುಗುರಿ, ಚಿಣ್ಣಿದಾಂಡು, ಗೋಲಿಯಾಟಗಳನ್ನು ವಿವರಿಸತೊಡಗಿದಾಗ ಇನ್ನಷ್ಟು ಬೆರಗುಗಣ್ಣುಗಳು ಅವನ ಸುತ್ತಲೂ ಗುಂಪುಗೂಡುತ್ತವೆ. ಬೇಸ್‌ಬಾಲ್‌, ಬಾಸ್ಕೆಟ್‌ಬಾಲ್‌, ವಿಡಿಯೋ ಗೇಮ್‌ಗಳಿಗೆ ಒಗ್ಗಿಕೊಂಡಿರುವ ಸಿಲಿಕಾನ್‌ ಕಣಿವೆಯ ಕನ್ನಡದ ಚಿಣ್ಣರಿಗೆ ವಿಶಿಷ್ಟ ಲೋಕವೊಂದು ತೆರೆದುಕೊಳ್ಳುತ್ತಿರುವಂತಾಗಿ, ‘ಹೌ ಕೂಲ್‌!’ ಎಂದು ಸಂಭ್ರಮಪಡುತ್ತಾರೆ.

ಮಕ್ಕಳು ಹಾಗೂ ಹಿರಿಯರು ಒಂದೇ ರೀತಿಯಲ್ಲಿ ಸಡಗರಪಡುವಂತೆ, ಮೇ 22ರ ಶನಿವಾರದ ಮುಂಜಾವಿನಲ್ಲೇ ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟದ ವಾರ್ಷಿಕ ‘ಕ್ರೀಡಾದಿನ’ದ ವ್ಯವಸ್ಥೆಗಳಿಗಾಗಿ ಸ್ಯಾನ್‌ ಹೋಸೆಯ ಮರ್ಡಾಕ್‌ ಪಾರ್ಕಿನಲ್ಲಿ ಸಿದ್ಧತೆಗಳನ್ನು ನಡೆಸಲು ಕಾರ್ಯನಿರತರಾಗಿದ್ದ ಸ್ವಯಂಸೇವಕರು ಹಾಗೂ ಕೂಟದ ಸಮಿತಿಯ ಸದಸ್ಯರಲ್ಲಿ ಮೂಡುತ್ತಿದ್ದ ಒಂದೇ ಆತಂಕವೆಂದರೆ, ಯಾವಾಗ ಹನಿಯುವುದೋ ಎಂಬಂತೆ ಗಪ್ಪೆಂದು ಮೋಡ ಕವಿದುಕೊಳ್ಳುತ್ತಿದ್ದ ವಾತಾವರಣ. ಉಚಿತ ಉಪಹಾರ ಮತ್ತು ಡೋನಟ್‌ ಆತಿಥ್ಯಗಳೊಂದಿಗೆ ಬೆಳಗಿನ 9:00ಕ್ಕೇ ಕ್ರೀಡೆಗಳು ಪ್ರಾರಂಭವೆಂದಿದ್ದರೂ, ಕೂಟ ಕಳೆಗಟ್ಟಲು ಪ್ರಾರಂಭವಾಗಿದ್ದು ಮೋಡ ಚದುರಿದ ಮೇಲೆಯೇ. ಮಧ್ಯಾಹ್ನದ ವೇಳೆಗೆ ಸುಮಾರು ಮುನ್ನೂರೈವತ್ತಕ್ಕೂ ಮೀರಿದ ಕೂಟದ ಸದಸ್ಯರು ಹಾಗೂ ಮಕ್ಕಳು, ತನು-ಮನಗಳಿಗೆ ಹಿಗ್ಗು ತರುವಂತಹ ದಿನವನ್ನು ಕಳೆಯುವುದರಲ್ಲಿ ಮಗ್ನರಾಗಿದ್ದರು.

ಈ ಬಾರಿ ವಯಸ್ಕರಿಗಾಗಿ ವಾಲಿಬಾಲ್‌, ಥ್ರೋಬಾಲ್‌, ಲಗೋರಿ, ಖೋ-ಖೋ ಹಾಗೂ ಕಬಡ್ಡಿ ಆಟಗಳನ್ನು ಏರ್ಪಡಿಸಲಾಗಿತ್ತು. ಮೊದಲು ನಾಲ್ಕು ಅಂಗಣಗಳಲ್ಲಿ ಏಕಕಾಲಿಕವಾಗಿ ಪ್ರಾರಂಭವಾದದ್ದು, ಸುಮಾರು ಹತ್ತು ತಂಡಗಳು ಭಾಗವಹಿಸಿದ್ದ ವಾಲಿಬಾಲ್‌ ಪಂದ್ಯಗಳು. ಪಂದ್ಯಾಳುಗಳ ಸಂಖ್ಯೆಯನ್ನು ಗಣನೆಗೆ ತೆಗೆದುಕೊಂಡರೆ, ಮೊದಲ ಬಾರಿಗೆ ‘ವಾಲೀ’ ಚೆಂಡಿಗೆ ಕೈ ಹಿಡಿದು, ಕೈ ‘ಚುರ್ರ್‌’ ಎನ್ನಿಸಿಕೊಂಡವರಿಂದ ಹಿಡಿದು, ಅದ್ಭುತ ಕ್ರೀಡಾ ನೈಪುಣ್ಯವನ್ನು ಪ್ರದರ್ಶಿಸುತ್ತಿದ್ದ ಪಂದ್ಯಾಳುಗಳವರೆಗೆ ಅತೀ ಹೆಚ್ಚಿನ ಭಾಗವಹಿಸುವಿಕೆಯನ್ನು ಕಂಡದ್ದು ವಾಲಿಬಾಲ್‌ ಪಂದ್ಯಗಳು. ‘ತಂಬುಳಿ,’ ‘ಕಿತ್ತೂರು ಪಡೆ,’ ‘ಮೈಸೂರು ಹುಲಿಗಳು,’ ‘ಪಂಟರು,’ ಇತ್ಯಾದಿಯಾಗಿದ್ದ ತಂಡದ ಹೆಸರುಗಳೂ ಕರ್ನಾಟಕವನ್ನು ಥಟ್ಟನೆ ನೆನಪಿಸುವಂತಿದ್ದವು. ಸ್ವಲ್ಪ ಸಮಯದ ನಂತರ ವಾಲಿಬಾಲ್‌ ಪಂದ್ಯಗಳ ಜೊತೆಗೇ, ಮಹಿಳೆಯರಿಗಾಗಿ ಥ್ರೋಬಾಲ್‌ ಪಂದ್ಯಗಳೂ ನಡೆದವು.

ಮಕ್ಕಳಿಗಾಗಿ, ಪಾರ್ಕಿನ ಇನ್ನೊಂದು ಬದಿಯಲ್ಲಿ ವೇಗದೋಟ, ಚೀಲದೋಟ, ಕಪ್ಪೆ ಜಿಗಿತದೋಟ, ಬಾಸ್ಕೆಟ್‌ಬಾಲ್‌ ಹಾಗೂ ಆಲೂಗೆಡ್ಡೆ ಓಟಗಳನ್ನು ಅಚ್ಚುಕಟ್ಟಾಗಿ ನಡೆಸಲಾಯಿತು. ಮಕ್ಕಳ ಸ್ಪರ್ಧೆಗಳನ್ನು 9 ವರ್ಷಕ್ಕೆ ಒಳಪಟ್ಟವರು ಹಾಗೂ ಇತರ ಮಕ್ಕಳು ಎಂಬ ಎರಡು ವಿಭಾಗಗಳಾಗಿ ವಿಂಗಡಿಸಲಾಗಿತ್ತು. ಪ್ರತಿ ಪಂದ್ಯದ ವೇಳೆಯಲ್ಲಿ ಮಕ್ಕಳಲ್ಲಿದ್ದಷ್ಟೇ ಉತ್ಸಾಹವನ್ನು, ಮಕ್ಕಳನ್ನು ಹುರಿದುಂಬಿಸುತ್ತಿದ್ದ ಪೋಷಕರು ಹಾಗೂ ಇತರ ಹಿರಿಯರಲ್ಲೂ ಕಾಣಬಹುದಿತ್ತು.

ಈ ಬಾರಿಯ ಕ್ರೀಡಾದಿನದ ಒಂದು ವಿಶೇಷತೆಯೆಂದರೆ ಸಂಜೆಯವರೆಗೂ ನಡೆದ ‘ಆಹಾರ ಮೇಳ’. ಕರಾವಳಿ, ಮಲೆನಾಡು, ಮೈಸೂರು, ಉತ್ತರ ಕರ್ನಾಟಕದ ಪ್ರಾಂತ್ಯಗಳ ಬಾಯಲ್ಲಿ ನೀರೂರಿಸುವ ತಿಂಡಿ ತಿನಿಸುಗಳನ್ನು ಒಂದೇ ಸ್ಥಳದಲ್ಲಿ ಸವಿಯುವ ಒಂದು ಅಪರೂಪದ ಅವಕಾಶ! ‘ಮಲ್ಪೆ ದರ್ಶಿನಿ’ಯವರು ಪತ್ರೊಡೆ, ಉಡುಪಿಯ ಗೊಜ್ಜಾಂಬೊಡೆ, ರಸಾಯನದ ಮಾರಾಟದ ಭರಾಟೆಯಲ್ಲಿದ್ದರೆ, ‘ಮೈಸೂರು ತಿಂಡಿ ಕಾರ್ನರ್‌’ನಿಂದ ಪುಳಿಯೋಗರೆ, ಮದ್ದೂರು ವಡೆ ಹಾಗೂ ಮೈಸೂರುಪಾಕಿನ ಆಮಿಷ. ‘ವರ್ಷವಿಡೀ ಡಯೆಟ್‌ ಮಾಡಿದ್ದು ಸಾಕು, ಒಂದೆರಡು ತುಂಡು ಮೈಸೂರುಪಾಕಿನ ರುಚಿ ನೋಡಿ’ ಎಂಬ ಪ್ರಲೋಭನೆಗೆ ಸಡ್ಡು ಹೊಡೆಯುವಂತಿದ್ದದ್ದು, ಮಲೆನಾಡಿನ ಕಡೆಯಿಂದ ಕಡುಬು, ಮಾವಿನಕಾಯಿ ಚಿತ್ರಾನ್ನ, ಉತ್ತರ ಕರ್ನಾಟಕದ ಶೇಂಗಾ ಹೋಳಿಗೆ ಹಾಗೂ ರೊಟ್ಟಿ. ಬಾಯಾರಿಕೆಯೇ? ನೀರು ಮಜ್ಜಿಗೆ, ಮಾವಿನಕಾಯಿ, ಸೌತೇಕಾಯಿ; ಸಂಜೆಯ ಹೊತ್ತಿಗೆ ಮಸಾಲೆ ಮಂಡಕ್ಕಿ. ಕೊನೆಗೆ ‘ಕಳ್ಳೇಕಾಯ್‌’ ಮಾರಾಟಗಾರನನ್ನೂ ಕಂಡದ್ದಾಯಿತು! ಈ ಆಹಾರ ಮೇಳದಿಂದ ಉತ್ಪತ್ತಿಯಾದ ಲಾಭಾಂಶವನ್ನು ಓಸಾಟ್‌ (OSAAT-One School At A Time) ಎಂಬ ಸಂಸ್ಥೆಗೆ ಒದಗಿಸಲಾಗುವುದು. ಭಾರತದ ಶಾಲೆಗಳ ಮೂಲಭೂತ ಸೌಲಭ್ಯಗಳ ಮಟ್ಟವನ್ನು ಹೆಚ್ಚಿಸಲು ಟೊಂಕ ಕಟ್ಟಿರುವ ಈ ಸಂಸ್ಥೆಯ ಬಗ್ಗೆ ಹೆಚ್ಚಿನ ವಿವರಗಳಿಗಾಗಿ www.osaat.org ಅನ್ನು ಸಂಪರ್ಕಿಸಬಹುದಾಗಿದೆ. ಇಷ್ಟೊಂದು ಬಗೆಯ ಆಹಾರಗಳನ್ನು ತಯಾರಿಸಿದ್ದ ಸ್ವಯಂಸೇವಕರು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರೆಂದು ಹೇಳಬೇಕಾದದ್ದಿಲ್ಲವಷ್ಟೇ?

ಸ್ವಲ್ಪ ವಿರಾಮದ ನಂತರ ಲಗೋರಿ ಹಾಗೂ ಖೋ-ಖೋ ಪಂದ್ಯಾವಳಿಗಳು ನಡೆದವು. ಲಗೋರಿಯಲ್ಲಿ ಹೆಚ್ಚೂ ಕಡಿಮೆ ಹಿರಿಯರಷ್ಟೇ ಸಂಖ್ಯೆಯಲ್ಲಿ ಪುಟಾಣಿಗಳೂ ಭಾಗವಹಿಸಿ, ಸಾಂಪ್ರದಾಯಿಕವಾದ ಆಟಗಳಲ್ಲಿ ತಮಗಿರುವ ಆಸಕ್ತಿಯನ್ನು ಪ್ರದರ್ಶಿಸಿದರು. ಖೋ-ಖೋ ಪಂದ್ಯಗಳಲ್ಲಿ ಮಹಿಳೆಯರ ಸಂಖ್ಯೆ ಗಮನಾರ್ಹವಾಗಿತ್ತು. ಹಿರಿಯ ನಾಗರಿಕರಿಗಾಗಿ ’ಸಂಗೀತ ಕುರ್ಚಿ’ ಹಾಗೂ ಚೌಕಾಬಾರ ಸ್ಪರ್ಧೆಗಳು ನಡೆದವು. ಸಮಯದ ಅಭಾವದಿಂದಾಗಿ ಕಬಡ್ಡಿ ಪಂದ್ಯಗಳನ್ನು ಆಡಿಸಲಾಗಲಿಲ್ಲ.

ಕ್ರೀಡಾದಿನದ ಕೊನೆಯ ಸ್ಪರ್ಧೆಯಾಗಿ ವಾಲಿಬಾಲ್‌ನ ಅಂತಿಮ ಪಂದ್ಯವನ್ನು ಆಡಿಸಲಾಯಿತು. ನಂತರ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟದ ಆಹಾರ ಮತ್ತು ಕ್ರೀಡಾ ಸಮಿತಿಯ ಸದಸ್ಯರು, ಕ್ರೀಡಾದಿನವನ್ನು ಯಶಸ್ವಿಯಾಗಿ ನಡೆಸಲು ಸಹಾಯ ಮಾಡಿದ ಎಲ್ಲ ಸ್ವಯಂಸೇವಕರಿಗೂ ಕೃತಜ್ಞತೆಗಳನ್ನು ಅರ್ಪಿಸುವುದರ ಮೂಲಕ ಕ್ರೀಡಾದಿನ ಹಾಗು ‘ ಆಹಾರ ಮೇಳ ’ದ ಮುಕ್ತಾಯವನ್ನು ಘೋಷಿಸಿದರು.

ಮುಖಪುಟ / ಎನ್‌ಆರ್‌ಐ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X