• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಸಂತೋತ್ಸವ - ಅಮೃತದಂತಹ ಒಂದು ನೆನಪು!

By Super
|

ಮೇ ತಿಂಗಳಿನ ಇಪ್ಪತ್ತೊಂಭತ್ತರಂದು ಫಿಲಿಡೆಲ್ಫಿಯಾದಲ್ಲಿ ನಡೆದ ವಸಂತೋತ್ಸವ, ಆ ಕಾರ್ಯಕ್ರಮದಲ್ಲಿ ಭಾಗವಹಿಸಿದವರ ಮನಸ್ಸಿನಲ್ಲಿ ಅನೇಕ ಕಾಲ ಉಳಿಯಬಹುದಾದಂತಹ ಒಂದು ಶಾಶ್ವತ ಸಿಹಿನೆನಪು! ಈ ಕಾರ್ಯಕ್ರಮದ ಸುದೀರ್ಘವಾದ ಪಟ್ಟಿಯನ್ನು ನೋಡಿ ಇತರರಿಗೆ ಹೇಗನ್ನಿಸಿತೋ ಏನೋ, ನನಗಂತೂ ಗಾಬರಿಯಾಗಿದ್ದು ನಿಜ. ಏಕೆಂದರೆ ಒಂದೇ ಜಾಗದಲ್ಲಿ ಐದು ನಿಮಿಷ ಕೂಡ ಗಂಭೀರವಾಗಿ ಕುಳಿತುಕೊಳ್ಳಲಾರದ ನನ್ನಂತಹ ಚಂಚಲ ಮನಸ್ಕರಿಗೆ ಘಂಟೆಗಟ್ಟಲೆ ಇದ್ದ ಮುಖ್ಯ ಅತಿಥಿಗಳ ಭಾಷಣದ ಒಂದೇ ಕಾರ್ಯಕ್ರಮವೇ ಸಾಕಾಗಿತ್ತು - ಬೆದರಿಸಿ ಮೂರ್ಛೆ ಬರಿಸಲು! ಇಷ್ಟು ಸಾಲದೆಂಬಂತೆ ಅದರ ಜೊತೆಗೆ, ಮೊದಲೇ ಹೆದರಿದವರ ಮೇಲೆ ಹಲ್ಲಿ ತಂದು ಎಸೆದಂತೆ ಇಂತದ್ದೇ ಚಿಕ್ಕ-ಪುಟ್ಟ ಹಲವಾರು ಭೀಷಣ ಭಾಷಣಗಳು! ಅದರೆ ನನ್ನ ಭಯ ನಿಷ್ಕಾರಣವಾಗಿತ್ತೆಂದು ನನಗೆ ತಿಳಿದಿದ್ದು ಅನಂತರವೇ.

ಈ ಕಾರ್ಯಕ್ರಮಕ್ಕಾಗಿ ಕರ್ನಾಟಕದಿಂದ ಆಗಮಿಸಿದ್ದ ಕುವೆಂಪುರವರ ಪ್ರಿಯ ಶಿಷ್ಯ ಡಾ. ಪ್ರಭುಶಂಕರರ ಭಾಷಣ ಅಂದಿನ ಶ್ರೋತೃಗಳೆಲ್ಲರ ಪಾಲಿಗೆ ಸಾಹಿತ್ಯದ ರಸಯಾತ್ರೆಯೇ ಸರಿ. ತಿಳಿಹಾಸ್ಯದೊಡನೆ ಕೂಡಿದ, ಸರಳ, ಸುಂದರವಾದ ನುಡಿಗಳಲ್ಲಿದ್ದು ಪಂಡಿತ-ಪಾಮರರೆಲ್ಲರಿಗೂ ಹಿತವಾಗುವಂತಿತ್ತು - ಸವಿಜೇನಿನೊರತೆಯ ಆ ಭಾಷಣ. ಕೇಳುತ್ತಿದ್ದವರಿಗೆ ಸಮಯ ಸರಿದಿದ್ದೇ ತಿಳಿಯಲಿಲ್ಲ. ಅವರು ಮತ್ತೂ ಒಂದು ತಾಸು ಮಾತಾಡಿದರೂ ತಾಳ್ಮೆಯಿಂದ ಕುಳಿತು ಕೇಳಲು ಸಭಿಕರು ತಯಾರಿದ್ದರೂ - ವಲ್ಲೀಶ ಶಾಸ್ತ್ರಿಯವರಿಂದ ‘ಘಂಟಾನಾಯಕ' ಎಂದು ಬಿರುದಾಂಕಿತರಾದ ಶ್ರೀ ಜಯರಾಮ ಉಡುಪರು ‘ಕಾಲದ ಹಕ್ಕಿ ಹಾರುತಿದೆ ನೋಡಿದಿರಾ?' ಎನ್ನುತ್ತಾ ‘ಕಾಲನ ಗಂಟೆ' ಯನ್ನು ಬಾರಿಸಿಯೇಬಿಟ್ಟಿದ್ದರು!

ಸಾಧಾರಣವಾಗಿ ಕವಿಗಳು ಎಂದರೆ ಕೇಳುಗರ ಕಿವಿಗಳನ್ನು ಕೊರೆಯುತ್ತಾರೆ ಎಂಬುದು ಜನಸಾಮಾನ್ಯರ ನಡುವೆ ಪ್ರಚಲಿತವಿರುವ ಒಂದು ಜೋಕು. ಅದಕ್ಕೆ ತಕ್ಕಂತೆ ಕವಿಗೋಷ್ಠಿಗಳು ಜನರೇ ಇಲ್ಲದೆ ನೊಣ ಹೊಡೆಯುವುದು ಜೋಕೇನಲ್ಲ ! ಆದರೆ ಈ ಮಾತಿಗೆ ಅಪವಾದದಂತಿತ್ತು - ಇಲ್ಲಿ ಮೈ.ಶ್ರೀ. ನಟರಾಜರ ಅಧ್ಯಕ್ಷತೆಯಲ್ಲಿ ನಡೆದ ಸಾಹಿತ್ಯ ಗೋಷ್ಠಿ. ಸಾಹಿತ್ಯಾಸಕ್ತ , ಉತ್ಸಾಹಿ ಶ್ರೋತೃಗಳು ತೋರಿಸುತ್ತಿದ್ದ ಉತ್ತೇಜಕ ಪ್ರತಿಕ್ರಿಯೆ, ಪ್ರಚಂಡ ಕರತಾಡನಗಳು ಉದಯೋನ್ಮುಖ ಕವಿ, ಕವಯಿತ್ರಿಯರನ್ನು ಹುರಿದುಂಬಿಸುವಂತಿತ್ತು. ಕನ್ನಡ ಜನಗಳು ಕೈಬಿಚ್ಚಿ ಚಪ್ಪಾಳೆ ಕೂಡ ಹೊಡೆಯದ ಕೃಪಣರು ಎನ್ನುವ ಮಾತೂ ಕೂಡ ಇಲ್ಲಿ ಹುಸಿಯಾಗಿಹೋಯಿತು! ನಂತರದ ವಿರಾಮ ಸಮಯದಲ್ಲಿಯೂ ಬರಹಗಾರರು ಅಭಿಮಾನಿಗಳ ಮೆಚ್ಚಿಗೆ, ಅಭಿನಂದನೆ, ಪ್ರಶಂಸೆಗಳ ಸುರಿಮಳೆಯಲ್ಲಿ ಮಿಂದು ಧನ್ಯರಾಗಿಹೋದರು!

ದಿನವಿಡೀ ನಡೆದ ಕಾರ್ಯಕ್ರಮಗಳದ್ದೇ ಒಂದು ತೂಕವಾದರೆ, ‘ಕಾವೇರಿ' ಕನ್ನಡಕೂಟದ ಕಲಾವಿದರು ನಡೆಸಿಕೊಟ್ಟ ‘ಬೆರಳ್‌ಗೆ ಕೊರಳ್‌' ನಾಟಕದ್ದೇ ಇನ್ನೊಂದು ತೂಕ. ನಿರ್ದೇಶಕ ತಾವರೆಕೆರೆ ಶ್ರೀಕಂಠಯ್ಯನವರು ಅದೆಲ್ಲಿಂದ ಹುಡುಕಿ ತಂದರೋ? ಈ ಅಭಿಜಾತ ಅನರ್ಘ್ಯ ಪ್ರತಿಭೆಗಳನ್ನು! ಒಂದು ಮಗುವಿನ ತಂದೆಯಾಗಿದ್ದರೂ, ಎಳೆಯ ಬಾಲಕನೊಬ್ಬನ ಹಾಲು ಹಾಲು ಮುಗ್ಧತೆಯನ್ನು ಮುಖದ ಮೇಲೆ ಹಾಗೆಯೇ ಉಳಿಸಿಕೊಂಡಿರುವ, ಏಕಲವ್ಯನ ಪಾತ್ರಧಾರಿ - ರವಿ ಹರಪನಹಳ್ಳಿಯವರು ಅಬ್ಬೆ, ಅಬ್ಬೆ ಎಂದು ಲಲ್ಲೆಗರೆಯುತ್ತಿದ್ದರೆ, ಅಬ್ಬೆಯ ಪಾತ್ರಧಾರಿ ಸುಮಾ ಮುರಳಿಧರ್‌ ಅವರು ಬಚ್ಚಾ....ಬಚ್ಚಾ..... ಎಂದು ಹಲುಬುತ್ತಿದ್ದರೆ ನನ್ನ ಕರುಳಿನಲ್ಲಿ ಎಂತದೋ ಅಲ್ಲೋಲಕಲ್ಲೋಲ! ‘ಒಂದು ಬಿನ್ನಹ ಹುಲಿಯೇ ಕೇಳು, ಕಂದನಿರುವನು ದೊಡ್ಡಿಯಾಳಗೆ' - ಎನ್ನುತ್ತಾ ಚಂಡವ್ಯಾಘ್ರನ ಮುಂದೆ ಅಂಗಲಾಚುತ್ತಾ ನಿಂತ ಪುಣ್ಯಕೋಟಿಯಂತೆ ನನ್ನ ಮನಸ್ಸೆಲ್ಲಾ ದೂರದ ಶಿಕಾಗೋ ಮನೆಯಲ್ಲಿ ಬಿಟ್ಟುಬಂದಿದ್ದ ನನ್ನ ಚಿಕ್ಕ ಮಕ್ಕಳ ಹಿಂದೆ ಮುಂದೆ ಸುತ್ತಾಡತೊಡಗಿತು!

ವಿಪ್ರ ವಟುವಿನ ತೇಜಸ್ಸಿನಿಂದ ಬೆಳಗುತ್ತಿದ್ದ ಅಶ್ವತ್ಥಾಮ, ಶಿಷ್ಯನ ಕೈಬೆರಳನ್ನು ಪಡೆದೂ ಹರುಷ ಪಡದೆ, ಪಶ್ಚಾತ್ತಾಪದ ಬೆಂಕಿಯಲ್ಲಿ ಬೆಂದು ಹೋಗುತ್ತಿದ್ದ ದ್ರೋಣಾಚಾರ್ಯ, ಹೆಚ್ಚು ಮಾತಿಲ್ಲದೆ ಮುಖಭಾವದಲ್ಲೇ ಅಹಂಕಾರ, ಗರ್ವಗಳನ್ನು ಸಮರ್ಥವಾಗಿ ವ್ಯಕ್ತಪಡಿಸುತ್ತಿದ್ದ ಅರ್ಜುನ - ಪ್ರತಿಯಾಬ್ಬರೂ ಕೂಡ ಆ ಕ್ಷಣದಲ್ಲಿ ತಾವು ತಾವಾಗಿರದೆ, ತಾವು ವಹಿಸುತ್ತಿದ್ದ ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡಿಬಿಟ್ಟಿದ್ದಾರೇನೋ ಎಂದು ನನಗೆ ಅನ್ನಿಸುತ್ತಿತ್ತು. ನಾಟಕದ ಕೊನೆಯ ದೃಶ್ಯದಲ್ಲಿ ಏಕಲವ್ಯನ ಕತ್ತರಿಸಿದ ಹೆಬ್ಬೆರಳನ್ನು ಕಂಡು ಅವನ ಅಬ್ಬೆ ಮಾಡುವ ಕರುಳು ಕತ್ತರಿಸುವಂತಹ ಆಕ್ರಂದನಕ್ಕೆ ಮರುಗಿದ ಅದೆಷ್ಟೋ ಪ್ರೇಕ್ಷಕರ ಕಣ್ಣಾಲಿಗಳು ಕಂಬನಿಯಿಂದ ಹೊಳೆಯುತ್ತಿದ್ದುದನ್ನು ಆ ಕತ್ತಲಿನಲ್ಲಿಯೂ ನಾನು ಕಂಡುಬಿಟ್ಟೆ ! ಈ ನಾಟಕವನ್ನು ಮೆಚ್ಚಿ, ಯಾರಾದರೂ ಬಹುಮಾನ ಕೊಡುವುದಾದರೆ ಅದು ಒಂದೇ - ಮೊದಲನೆಯ ಬಹುಮಾನ. ಅದರಲ್ಲಿ ನಟ-ನಿರ್ದೇಶಕ-ತಂತ್ರಜ್ಞರಿಂದ ಹಿಡಿದು ನೋಡುಗರಿಗೂ ಸರಿಸಮ ಪಾಲು! ಎಲ್ಲರಿಗೂ ಪೀಸ್‌-ಪೀಸ್‌!

ನಾನು ಭಾವಜೀವಿ. ಎಂತಹ ಬರಡುನೆಲವನ್ನೂ ಬಿಡದೆ ಪ್ರೀತಿಯ ಪಸೆಗಾಗಿ ಕೆದರುವ ಅಶಾಜೀವಿ. ಸಹಜವಾಗಿಯೇ ನನ್ನಲ್ಲಿ ತವರಿನ ನೆನಪುಗಳು ತುಳುಕಾಡುವುದು ಹೆಚ್ಚು ! ಈಗಲೂ ಹಾಗೆಯೇ ಹೇಳಬೇಕೆಂದರೆ - ಬಹುದಿನಗಳ ನಂತರ ತವರಿಗೆ ಹೋದ ಹೆಣ್ಣುಮಗಳೊಬ್ಬಳು, ಅಣ್ಣ-ತಮ್ಮಂದಿರು ನೀಡಿದ ಉಡುಗೊರೆಗಳ ಭಾರಕ್ಕೆ ಹಿಗ್ಗಿ ಹೋಗುವಂತೆ ನಾನು ಕೂಡ ಈ ವಸಂತದ ಸಂಭ್ರಮದ ಹಬ್ಬದಲ್ಲಿ ಭಾಗವಹಿಸಿ, ಅಲ್ಲಿಯ ನಗು, ಹರಟೆ, ಕೀಟಲೆ, ತುಂಟಾಟದ ಮಧುರನೆನಪುಗಳಿಂದ ಭಾರವಾದ ಮನಸ್ಸು , ಗರಿಯಷ್ಟೇ ಹಗುರವಾದ ಹೃದಯ ಹೊತ್ತು ಮತ್ತೆ ನನ್ನೂರಿಗೆ, ನನ್ನವರಲ್ಲಿಗೆ ಹಿಂತಿರುಗಿದೆ!!

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Thank you for making my Day! Triveni Srinivasa Rao records her experiences of Sahithya Goshti held in Pensilvania organized as a part of Kannada Literature, A spring festival
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more