‘ಬೆರಳ್ಗೆ ಕೊರಳ್’ ನಾಟಕ ನೋಟ
- ವಲ್ಲೀಶ ಶಾಸ್ತ್ರಿ ; ಲಾಸ್‌ಏಂಜಲಿಸ್.
[email protected]
ಕಾವೇರಿ ಕನ್ನಡ ಸಂಘದ ಸದಸ್ಯರಿಂದ ಯಶಸ್ವಿಯಾಗಿ ಪ್ರದರ್ಶಿಸಲ್ಪಟ್ಟ ಬೆರಳ್ಗೆ ಕೊರಳ್ ನಾಟಕ ಅದ್ಭುತವಾಗಿತ್ತು . ಈ ನಾಟಕದ ಮೂಲಕ ನಾಟಕ ತಂಡ ರಸಋಷಿ ಕುವೆಂಪುವಿಗೆ ನಮನಗಳನ್ನು ಅರ್ಪಿಸಿತು. ಇಷ್ಟು ಮಾತ್ರವಲ್ಲ , ಇಂಥದೊಂದು ಸಂಕೀರ್ಣ ನಾಟಕವನ್ನು ಆಸ್ವಾದಿಸಿ ಪ್ರಶಂಸಿಸಿದ ಪ್ರೇಕ್ಷಕ ಪ್ರಭುಗಳಿಗೂ ಅಭಿನಂದನೆಗಳು ಸಲ್ಲಬೇಕು.
ಕಳೆದ 25 ವರ್ಷಗಳಿಂದ ಅನಿವಾಸಿ ಕನ್ನಡಿಗರಲ್ಲಿ ದಕ್ಷ ನಿರ್ದೇಶಕರೆಂದೇ ಹೆಸರು ಮಾಡಿರುವ ತಾವರೆಕೆರೆ ಶ್ರೀಕಂಠಯ್ಯನವರ ನಿರ್ದೇಶನದಲ್ಲಿ ವಸಂತ ಸಾಹಿತ್ಯೋತ್ಸವದಲ್ಲಿ ಪ್ರದರ್ಶಿತವಾದ ಬೆರಳ್ಗೆ ಕೊರಳ್ ನಾಟಕ ಅರ್ಥಮಾಡಿಕೊಳ್ಳುದು ಕ್ಲಿಷ್ಟವೆಂದೇ ಕುಳಿತ ಪ್ರೇಕ್ಷಕರ ನಿರೀಕ್ಷೆಗೂ ಮೀರಿ ಎಲ್ಲರಿಗೂ ಅರ್ಥವಾಗುವಂತೆ ನಾಟಕ ಮೂಡಿಬಂತು. ನುರಿತ ನಟರು ಹಾಗೂ ದಕ್ಷ ನಿರ್ದೇಶನದಿಂದ ಈ ಯಶಸ್ಸು ಸಾಧ್ಯವಾಯಿತು.
ಏಕಲವ್ಯನ ಪಾತ್ರದಲ್ಲಿ, ಅಪ್ಪಟ ಹುಬ್ಬಳ್ಳಿ-ಧಾರವಾಡ ಭಾಷೆ ವರಸೆಯ ರವಿ ಹರಪನಹಳ್ಳಿಯವರಿಂದ ಸುಲಲಿತವಾಗಿ ಹೊರಟ ಹಳೆಗನ್ನಡ ಎಲ್ಲರನ್ನೂ ಚಕಿತರನ್ನಾಗಿಸಿತ್ತು. ಏಕಲವ್ಯನ ಪಾತ್ರದಲ್ಲಿ ರವಿ ಮಿಂಚಿದರು. ಅಬ್ಬೆಯಾಂದಿಗೆ ಒಬ್ಬ ನಮ್ರತೆಯ ಮಗನಾಗಿ, ಅರ್ಜುನನೊಂದಿಗೆ ಒಬ್ಬ ವೀರನಾಗಿ ಮತ್ತು ದ್ರೋಣಾಚಾರ್ಯನೊಂದಿಗೆ ಒಬ್ಬ ಭಕ್ತ ಶಿಷ್ಯನಾಗಿ ತಮ್ಮ ಶ್ರೇಷ್ಠ ನಟನೆಯ ಪ್ರದರ್ಶನವಿತ್ತರು ರವಿ.
ನಾಟಕದ ನಿರ್ಮಾಣದ ಹೊಣೆಯನ್ನೂ ಹೊತ್ತು ಅಬ್ಬೆಯ ಪಾತ್ರದಲ್ಲಿ ಮಿಂಚಿದವರು ಸುಮಾ ಮುರಳೀಧರ್. ಏಕಲವ್ಯನೊಂದಿಗೆ ಪ್ರದರ್ಶಿಸಿದ ತಾಯಿಯ ವಾತ್ಸಲ್ಯ ಅವರ ನಟನಾಸಾಮರ್ಥ್ಯವನ್ನು ಎತ್ತಿ ತೋರಿಸುತ್ತಿತ್ತು. ನಾಟಕಕ್ಕೆಂದೇ ಮೀಸೆಯನ್ನು ಬೋಳಿಸಿಕೊಂಡಿದ್ದ ಮಹದೇವಪ್ಪ ಮಹೇಶ್, ಅಶ್ವತ್ಥಾಮನ ಪಾತ್ರದಲ್ಲಿ ತಮ್ಮ ಕಂಠದಿಂದ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು. ಯಯಾತಿ ನಾಟಕದಿಂದ ಖ್ಯಾತಿ ಪಡೆದ ನಟ ಸಂಜಯ್‌ರಾವ್ ದ್ರೋಣಾಚಾರ್ಯನಾಗಿ ಪ್ರೇಕ್ಷಕರ ಮುಂದೆ ಮತ್ತೊಮ್ಮೆ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದರು. ಅರ್ಜುನನಾಗಿ ತಮ್ಮ ಪಾತ್ರಕ್ಕೆ ಮೆರಗು ಕೊಟ್ಟವರು ರಾಂ ರಾವ್. ನಾಟಕದ ಯಶಸ್ಸಿಗೆ ವಸ್ತ್ರಾಲಂಕಾರ, ಪ್ರಸಾದನ ಹಾಗೂ ಬೆಳಕಿನ ವಿಭಾಗದವರೂ ಬಹಳಷ್ಟು ಕೆಲಸ ಮಾಡಿದ್ದಾರೆ. ಬೆಳಕಿನ ಹೊಣೆಯನ್ನು ಹೊತ್ತ ಸಚ್ಚಿದಾನಂದರವರು ಇದ್ದ ಇತಿಮಿತಿಯಲ್ಲೇ ತಮ್ಮ ಚಾಕಚಕ್ಯತೆಯನ್ನು ಪ್ರದರ್ಶಿಸಿದರು.
ಹಳೆಗನ್ನಡವನ್ನು ಸ್ಪಷ್ಟ ಉಚ್ಚಾರಣೆಯಿಂದ, ಉತ್ತಮ ನಟನೆಯಿಂದ ಎಲ್ಲರ ಮೆಚ್ಚುಗೆ ಗಳಿಸಿದ್ದು ನಟರಷ್ಟೇ ಅಲ್ಲ ದಕ್ಷ ನಿರ್ದೇಶಕರಾಗಿಯೂ ಸೈ ಅನ್ನಿಸಿಕೊಂಡ ಪಾತ್ರರಾದವರು ತಾವರೆಕೆರೆ ಶ್ರೀಕಂಠಯ್ಯನವರು. ಇವರು ಅಮೇರಿಕೆಯ ಪೂರ್ವ ಕರಾವಳಿಯಲ್ಲಿನ ಹವ್ಯಾಸಿ ರಂಗ ಚಟುವಟಿಕೆಯ ಹಿಂದಿನ ಒಂದು ದೊಡ್ಡ ಶಕ್ತಿ. ಹಿಂದಿ ನಾಟಕಗಳಿಗಾಗಿ ನಾಟ್ಯಭಾರತಿ ಎಂಬ ಸಂಘವನ್ನೂ, ಆಂಗ್ಲ ನಾಟಕಗಳಿಗಾಗಿ ಸಹಾರ ತಂಡವನ್ನೂ ಕಟ್ಟಿದ ರಂಗ ಸೇವಕ ಶ್ರೀಕಂಠಿ. ಕಾರ್ನಾಡರ ಹಯವದನ ನಾಟಕವನ್ನು ಅಮೇರಿಕೆಯ ಉದ್ದಗಲಕ್ಕೂ ಪ್ರದರ್ಶಿಸಿದ ಖ್ಯಾತಿ ಅವರಿಗೇ ಸೇರಿದ್ದು. ವೃತ್ತಿಯಲ್ಲಿ ಪ್ರಾಧ್ಯಾಪಕರಾಗಿ ಚಿಕಾಗೋದಲ್ಲಿ ಕೆಲಸ ಮಾಡಿಕೊಂಡು ವಾಷಿಂಗ್ಟನ್‌ನಲ್ಲಿ ಬಂದು ನಾಟಕವನ್ನು ನಿರ್ಮಿಸುವುದು ಸುಲಭದ ಮಾತಲ್ಲ. ಅವರ ಅವಿತರ ರಂಗ ಸೇವೆಗೆ Hats off.
ಪೂರಕ ಓದಿಗೆ-
ವಸಂತನ ರುಜುವಿನಲ್ಲಿ ಸಾಹಿತ್ಯೋತ್ಸವ ಫಿಲಡೆಲ್ಫಿಯಾದಲ್ಲಿ ಕನ್ನಡದ ವೈಭವ !
ಕುವೆಂಪು ಕೃತಿಗೆ ಪ್ರಭುಶಂಕರರ ಸಾಕ್ಷಿ
ವಸಂತ ಸಾಹಿತ್ಯೋತ್ಸವದ ಚಿತ್ರಗಳು













Click it and Unblock the Notifications