• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದಂತದಗೊಂಬೆಯನ್ನು ದಂತಚೋರ ಕದ್ದೊಯ್ದಾಗ...

By Staff
|

ಪ್ರೀತಿಯ ಚಿನ್ನಾ,

ತುಂಬಾ ದಿವಸಗಳಿಂದ ನಿನಗೆ ಪ್ರೇಮಪತ್ರ ಬರೆಯಬೇಕು ಎಂದು ಮನಸ್ಸಲ್ಲೇ ಅಂದು ಕೊಳ್ಳುತ್ತಾ ಇದ್ದೆ. ನಾನು ಪ್ರೇಮಪತ್ರವನ್ನಷ್ಟೇ ಅಲ್ಲಾ, ಯಾರಿಗಾದರೂ ಸರಳ ಉಭಯಕುಶಲೋಪಹಾರಿ ಪತ್ರ ಬರೆದು ಎಷ್ಟೋ ದಿವಸಗಳು ಸಂದಿವೆ.

ನಮ್ಮೂರ ಶಾಲೆ ಮುಗಿಸಿ ಹೊಸದಾಗಿ ಪಟ್ಟಣದ ಹೈಸ್ಕೂಲ್‌ಗೆ ಸೇರಿದಾಗ ಬಸ್‌ಸ್ಟ್ಯಾಂಡ್‌ವರೆಗೂ ನನ್ನನ್ನು ಕಳಿಸಲು ಬರುತ್ತಿದ್ದ ನನ್ನ ಗೆಳೆಯರ ಹಿಂಡು, ನಾನು ಬಸ್ಸು ಹತ್ತಿ ಕುಳಿತಾಗ ಕಿಟಕಿಯಿಂದ ಕೈ ಬೀಸುತ್ತಾ ‘ಮುಟ್ಟಿದ ತಕ್ಷಣ ಟಪಾಲು ಹಾಕು’ ಎಂಬ ಮಾತಿಗೆ ಕಟ್ಟುಬಿದ್ದು, ಹದಿನೈದು ಪೈಸೆ ಕೊಟ್ಟು ಪೋಸ್ಟ್‌ಕಾರ್ಡ್‌ ಖರೀದಿಸಿ ಬರೆದು ಹಾಕುತ್ತಿದ್ದೆ. ಅದಾದ ಮೇಲೆ ಮತ್ತೆ ತಿರುಗಿ ಇಂದೇ ನಾನು ಪತ್ರ ಬರೆಯುವ ಸಾಹಸಕ್ಕೆ ಕೈಹಾಕುತ್ತಿದ್ದೇನೆ.

ಇಂದಿನ ಎಲ್ಲಾ ಮೇಲ್‌ಗಳು, ಫಿಮೇಲ್‌ಗಳಿಗೆ ಇ-ಮೇಲ್‌ ಬರೆಯುವ ಈ ಯುಗದಲ್ಲಿ, ಐತಿಹಾಸಿಕ ಭಾರತೀಯ ಅಂಚೆಯವರ ಆಕಾಶ ನೀಲಿ ಬಣ್ಣದ ಇನ್‌ಲ್ಯಾಂಡ್‌ ಕವರಿನ ಹೃದಯದ ಮೇಲೆ ದಟ್ಟ ನೀಲಿ ಬಣ್ಣವನ್ನು ನಿಯಮಿತವಾಗಿ ಉಗುಳುವ ಇಂಕ್‌ ಪೆನ್ನಿನಿಂದ ಕಚಗುಳಿ ಇಡುವಂತೆ ತಾಕಿಸುತ್ತಾ ಬರೆಯುವ ಆಸೆ ಏಕೆ ಬಂತೋ ನನಗೆ ಗೊತ್ತಿಲ್ಲ . ಆದರೆ ನಾನು ಈ ಪತ್ರ ಬರೆಯಲಿಕ್ಕೆ ಬಲವಾದ ಕಾರಣವಿದೆ ಚಿನ್ನಾ.

ಮೊನ್ನೆ ರಾತ್ರಿ ನಿನ್ನ ನೆನಪಿನಲ್ಲಿ ಎಷ್ಟೋ ಹೊತ್ತಿನವರೆಗೆ ನಿದ್ದೆ ಬಾರದೆ ಹಾಸಿಗೆಯಲ್ಲಿ ಹೊರಳಾಡುತ್ತಾ ಬೆಳಗಿನಜಾವದ ಮಡಿಲಿಗೆ ಬಿದ್ದೆ, ಬೆಳಗಿನಜಾವದ ತಂಪಾದ ತಂಗಾಳಿಗೆ ಮೈಮರೆತ ಮನಸ್ಸು ನಿನ್ನ ನೆನಪಿನ ದೋಣಿಯಲ್ಲಿ ತೇಲಾಡುತ್ತಿದ್ದ ನನ್ನನ್ನು ಎತ್ತಿ ತಂದು ನಿದ್ರಾದೇವತೆ ಯ ತೆಕ್ಕೆಗೆ ಹಾಕಿತು. ಗಾಢನಿದ್ರೆಯಲ್ಲಿದ್ದ ನನಗೆ, ಬಿದ್ದಿತು ಒಂದು ಕೆಟ್ಟದಾದ ಕನಸು!.

ಚಿನ್ನಾ, ಆ ಕನಸಿನಲ್ಲಿ, ನಾನೆಂದೂ ಊಹಿಸಿಕೊಳ್ಳದಂತ ಒಂದು ದೊಡ್ಡ ದುರ್ಘಟನೆ ನಡೆದು ಹೋಗಿತ್ತು, ಜನವರಿ 14 2005ರಂದು ಕಾಡುಗಳ್ಳ ವೀರಪ್ಪನ್‌ ನಿನ್ನನ್ನು ಅಪಹರಿಸಿ ಬಿಟ್ಟಿದ್ದ, ನನ್ನನ್ನು ಜೀವಂತ ಶವವನ್ನಾಗಿ ಮಾಡಿದ್ದ. ಅಲ್ಲಿ ಕರ್ನಾಟಕ-ತಮಿಳುನಾಡು ಪೋಲೀಸರ ಕಾರ್ಯಾಚರಣೆಯಾಗಲಿ, ಎಸ್‌.ಟಿ.ಎಫ್‌ನವರ ಶೋಧದ ಸುಳಿವಾಗಲಿ ಇರಲಿಲ್ಲ.

ದೊಡ್ಡ ರಾಜಕಾರಣಿಗಳನ್ನು, ಜನಪ್ರಿಯ ನಟರುಗಳನ್ನು ಅಪಹರಿಸಿದಾಗ ಏನನ್ನು ಮಾಡಲಾಗದೆ ಕೈಕಟ್ಟಿ ಕುಳಿತ ನಮ್ಮ ಸರ್ಕಾರದವರು, ನಮ್ಮಂತಹ ಜನಸಾಮಾನ್ಯರಿಗೆ ಸಹಾಯ ಮಾಡುವುದೆಲ್ಲಿಂದ ಬಂತು ಹೇಳು. ಅದು ಗೊತ್ತಿದ್ದರೂ, ಒಂದು ತಿಂಗಳ ಕಾಲ ವಿಧಾನಸೌಧಕ್ಕೆ ನೂರಾರು ಬಾರಿ ಅಲೆದು ಸುಸ್ತಾಗಿ ಹೋಗಿದ್ದೆ. ಚಿನ್ನಾ, ನೋಡು ನೋಡುತ್ತಿದಂತೆ ನಿನ್ನ ಅಪಹರಣವಾಗಿ ಒಂದು ತಿಂಗಳು ಉರುಳಿ ಹೋಯಿತು.

ಅಂದು ಫೆಬ್ರುವರಿ 14, ಪ್ರೇಮಿಗಳ ದಿನ. ಆ ಮಹತ್ವದ ದಿವಸಕ್ಕೆ ಎಷ್ಟೋ ದಿನಗಳಿಂದ ನಾನು ಕಾಯುತ್ತಾ ಇದ್ದೆ, ಈ ದಿನದಂದು ನಿನ್ನನ್ನು ಬೇಟಿಯಾಗಿ ನನ್ನ ಮನದ ಆಸೆ ಹೇಳಬೇಕೆಂದುಕೊಂಡಿದ್ದೆ, ಏನೇ ಆದರೂ ಸರಿ! ಅಂದು ನಿನ್ನನು ಭೇಟಿಮಾಡುವ ದೃಢ ನಿರ್ಧಾರ ಮನಸ್ಸಲ್ಲೇ ಮಾಡಿಕೊಂಡೆ.

ಅಂದು ಬೆಳಗ್ಗೆ ಎದ್ದು ನಡೆದುಕೊಂಡು ಬಂದು ಸಾಯಂಕಾಲಕ್ಕೆ ಮಲೆಮಾದೇಶ್ವರ ದಟ್ಟಕಾಡಿನ ಬೆಟ್ಟ ಸೇರಿದೆ. ಬೆಟ್ಟದ ತುದಿಯನ್ನು ಏರಿ ನಿಂತು ನೋಡಿದಾಗ ದೂರದಲ್ಲಿ ಹಸಿರು ಬಣ್ಣದ ಬೋರ್ಡ್‌ ಮೇಲೆ ಬಿಳಿ ಅಕ್ಷರಗಳಲ್ಲಿ ಬರೆದ ನಾಮಫಲಕ ಕಂಡಿತು, ಹತ್ತಿರ ಹೋಗಿ ನೋಡಿದೆ -‘ವೀರಪ್ಪನ್‌ ಅಡಗುತಾಣಕ್ಕೆ 3ಮೈಲುಗಳು’ ಎಂದು ಬರೆದಿತ್ತು.

ಅದೇ ದಿಕ್ಕಿನಲ್ಲಿ ಸುಮಾರು 2ಮೈಲು ದೂರ ಕಾಡು ದಾರಿಯಲ್ಲಿ ನಡೆದ ಮೇಲೆ ಮತ್ತೊಂದು ನಾಮಫಲಕ ಕಣ್ಣಿಗೆ ಬಿತ್ತು ಅದರಲ್ಲಿ -‘ಬಲಕ್ಕೆ ತಿರುಗಿ ಅಡಗುತಾಣ 1 ಮೈಲು’ ಎಂದಿತ್ತು. ತಕ್ಷಣ ನಿನ್ನ ಸೇರುವ ತವಕದಲ್ಲಿ ಬಲಕ್ಕೆ ತಿರುಗಿ ಒಂದು ಮೈಲಿ ಒಂದೇ ಸಮನೆ ಮಿಂಚಿನಂತೆ ಓಡಿದೆ, ಅಷ್ಟರಲ್ಲಿ ಸುತ್ತಲೂ ಕತ್ತಲು ಕವಿದಿತ್ತು, ದೂರದಲ್ಲಿ ವೀರಪ್ಪನ್‌ ಉಳಿದು ಕೊಂಡಿದ್ದ ಟೆಂಟು ಮತ್ತು ಅದರ ಮುಂದೆ ಹಾಕಿದ್ದ ಬೆಂಕಿ ಕಣ್ಣಿಗೆ ಬಿತ್ತು, ಮತ್ತೊಂದು ಹೆಜ್ಜೆ ಮುಂದೆ ಇಡುತ್ತಿದ್ದಂತೆ ವೀರಪ್ಪನ್‌ ಸಹಚರರು ನನ್ನ ತಲೆಗೆ ಬಂದೂಕ ಹಿಡಿದು ನನ್ನನ್ನು ಬಂಧಿಸಿ ಅವನ ಬಿಡಾರಕ್ಕೆ ಎಳೆದುಕೊಂಡು ಹೋದರು.

ಬಿಡಾರದ ಒಳಗೆ ನಾವು ಹೋಗುತ್ತಿದಂತೆ ನನಗೆ ನಿನ್ನ ಮುಖ ಕಂಡಿತು, ಅಮಾವಾಸ್ಯೆ ರಾತ್ರಿಯ ಕಗ್ಗತ್ತಲಿನಲ್ಲಿ ಹುಣ್ಣಿಮೆಯ ಚಂದಿರನ ಬೆಳ್ಳನೆಯ ಬೆಳಕು ಕಂಡಂತೆ ಮನಸ್ಸಿಗೆ ನೆಮ್ಮದಿ ಎನಿಸಿತು ಚಿನ್ನಾ. ನಿನ್ನ ಮುಖ ಬಾಡಿರಲಿಲ್ಲಾ , ನೀನು ಸುಸ್ತಾದಂತೆ ಕಾಣಲಿಲ್ಲ, ನಿನ್ನ ಕಣ್ಣುಗಳಲ್ಲಿ ದುಃಖ ಕಂಡು ಬರಲಿಲ್ಲಾ. ‘ವೀರಪ್ಪನ್‌ ಎಲ್ಲಿ ?’ ಎಂದು ನಾನು ಕೂಗಿದೆ, ಅಲ್ಲೇ ನಿಂತಿದ್ದ ಸಣಕಲು ದೇಹದ ಎತ್ತರದ ಕಪ್ಪುಬಣ್ಣದ ವ್ಯಕ್ತಿ ‘ನಾನೇ ವೀರಪ್ಪನ್‌’ ಎಂದ, ಅವನ ಆ ಮಾತಿನ ದನಿಯಲ್ಲಿ ತುಂಬಾ ವಿನಯವಿತ್ತು, ನನಗೆ ನಂಬಲಾಗಲಿಲ್ಲ. ವೀರಪ್ಪನ್‌ ಮುಖದಲ್ಲಿ ಮೀಸೆಯೇ ಇರಲಿಲ್ಲ. ನಾನು ಅದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಲ್ಲಿಲ್ಲ, ಇದ್ದ ಧೈರ್ಯವನ್ನು ಒಟ್ಟು ಮಾಡಿಕೊಂಡು ‘ಅವಳನ್ನು ಬಿಟ್ಟು ಬಿಡು’ ಎಂದು ಚೀರಿದೆ.

ವೀರಪ್ಪನ್‌ ಸರಳವಾದ ದನಿಯಲ್ಲಿ ‘ಅವಳು ಬಂದರೆ ಕರೆದುಕೊಂಡು ಹೋಗಿ ಸ್ವಾಮೀ’ ಅಂದ. ಆಗ ನೀನು -‘ನಾನು ಬರುವುದಿಲ್ಲಾ, ದಯವಿಟ್ಟು ನೀನು ವಾಪಸ್ಸು ಹೋಗು ’ಎಂದೆ. ಆ ಕ್ಷಣ ನನಗೆ ನಾನು ನಿಂತ ಭೂಮಿಯೇ ಕುಸಿದಂತಾಯಿತು. ನಾನು ಕಂಡ ಕನಸುಗಳೆಲ್ಲಾ ಕ್ಷಣಾರ್ಧದಲ್ಲಿ ನುಚ್ಚುನೂರಾದವು. ಒಂದು ತಿಂಗಳಲ್ಲಿ ಏನೇನೋ ಮಾಯ-ಮಂತ್ರ-ಮಾಟ ಮಾಡಿಸಿ ನಿನ್ನ ಮನಸ್ಸು ಕೆಡಿಸಿದನೊ ಈ ಕುಖ್ಯಾತ ಮುಟ್ಠಾಳ? ಅಥವಾ ನನ್ನ ಜೀವಕ್ಕೆ ಅಪಾಯ ಬರಬಾರದೆಂದು ನೀನು ಹೀಗೆ ಹೇಳುತ್ತಿರುವೆಯಾ? ಒಂದೂ ತಿಳಿಯದೇ ನಾನು ದಿಗ್ಭ್ರಮೆ ಗೊಂಡೆ.

ಚಿನ್ನಾ, ಏನು ಹೇಳಲಿ ನಿನ್ನ ಸೆಳೆತವೇ ಅಂಥದ್ದು. ನಿನ್ನ ಮೋಹದ ಮೋಡಿಗೆ ಬಲಿಯಾಗಿ ವೀರಪ್ಪನ್‌ ಮೀಸೆ ಬೋಳಿಸಿಕೊಂಡು, ಮಜ್ನು ಆದದ್ದು ಅರ್ಥವಾಗಲು ನನಗೆ ಹೆಚ್ಚು ಸಮಯ ಬೇಕಾಗಲಿಲ್ಲ. ನಿನ್ನನ್ನು ಎಷ್ಟು ಪರಿಪರಿಯಾಗಿ ಅಂಗಲಾಚಿ ಬೇಡಿಕೊಂಡರೂ ನೀನು ಮರುಗದಾದೆ, ನನ್ನ ಪ್ರೀತಿಗೆ ಕರಗದಾದೆ. ಆಗ ನನಗೆ ಉಳಿದದ್ದು ಒಂದೇ ಒಂದು ದಾರಿ. ನನ್ನ ಎದುರಿಗೆ ನಿಂತಿದ್ದ ಪ್ರಖ್ಯಾತ ವೀರಪ್ಪನ್‌ಗಿಂತಲೂ ಬಲು ಕುಖ್ಯಾತನಾದ ನನ್ನೊಳಗಿನ ಕವಿ ಮಹಾಶಯ(?) ಆ ಕ್ಷಣಕ್ಕೆ ಜಾಗೃತನಾದ. ನನ್ನಿಂದ ಕವನ ಹರಿದು ಬಂತು....

ವೀರಪ್ಪನ್‌ ಒಬ್ಬ ಕಾಡುಗಳ್ಳ!

ನಾನು ನಿನ್ನ ಹೃದಯಕಳ್ಳ!!

ಅವನಿಗೆ ಬೇಕು ದಂತ ಇದ್ದ ಆನೆ!

ನನಗೆ ಬೇಕು ದಂತದಗೊಂಬೆ ನೀನೇ!!

ಅವನು ಕದ್ದದ್ದು ಕಾಡಿನ ಶ್ರೀಗಂಧ!

ನಾನು ಕದಿಯುವೆ ನಿನ್ನ ಅಂದ-ಚೆಂದ!!

ಅವನ ಬಳಿ ಇದೆ ಎ.ಕೆ. 47ಗನ್ನು!

ನನ್ನ ಬಳಿ ಇದೆ ಖಡ್ಗದಂತಹ ಪೆನ್ನು!!

ಅವನು ಬಳಸುವುದು ಗೋಪಾಲನ್‌ ಮೆಸ್ಸೆಂಜರ್‌!

ನಾನು ಬಳಸುವುದು Yahoo ಮೆಸ್ಸೆಂಜರ್‌!!

ಅವನ ಚಿಂತೆ ಪೋಲಿಸರ ಕಾರ್ಯಾಚರಣೆ!

ನನ್ನ ಚಿಂತೆ ನಿಮ್ಮಪ್ಪನ ವರಾನ್ವೇಷಣೆ!!

ಅವನ ಅಡ್ರೆಸ್ಸೇ ಮಲೆಮಾದೇಶ್ವರ ಬೆಟ್ಟ!

ನನ್ನ ಅಡ್ರೆಸ್ಸು ನಂ. 420ಬನ್ನೇರುಘಟ್ಟ !!

ನನ್ನ ಈ ಕವನ ಕೇಳಿದ ನೀನು ಏನೂ ತೋಚದೆ ಪಿಳಿ-ಪಿಳಿ ಕಣ್ಣುಗಳನ್ನು ಬಿಡುತ್ತಾ ನನ್ನನ್ನೇ ನೋಡುತ್ತಾ ನಿಂತುಕೊಂಡೆ. ನನ್ನ ಕವನದ ಮೇಲಿನ ಸಿಟ್ಟಿಗೋ? ನನ್ನ ಮೇಲಿನ ದ್ವೇಷಕ್ಕೊ? ಅಥವಾ ನಿನ್ನ ಮೇಲಿನ ಮೋಹಕ್ಕೊ? ವೀರಪ್ಪನ್‌ ಕೆಂಡಮಂಡಲವಾಗಿ ಕಿಡಿಕಾರುತ್ತಾ ನನ್ನ ತಲೆಗೆ ಬಂದೂಕನ್ನು ಇಟ್ಟ. ನಾನು ಭಯದಿಂದ ಥರ-ಥರನೇ ನಡುಗಲಾರಂಭಿಸಿದೆ. ನನ್ನತ್ತ ಕಿಡಿಕಾರುವ ಕಣ್ಣುಗಳಿಂದ ಕ್ರೂರವಾಗಿ ನೋಡುತ್ತಾ ವೀರಪ್ಪನ್‌ಬಂದೂಕಿನ ಟ್ರಿಗ್ಗರ್‌ಒತ್ತಿದ, ಗುಂಡಿನ ‘ಢಮ್‌!..... ಢಮ್‌ !!.... ಢಮ್‌!!!..’ ಎಂಬ ಭಯಂಕರ ಸದ್ದಿಗೆ ಹೌಹಾರಿ ತಟಕ್ಕನೆ ಎದ್ದು ಹಾಸಿಗೆಯ ಮೇಲೆ ಕುಳಿತೆ, ಕ್ಷಣಾರ್ಧದಲ್ಲಿ ವಾಸ್ತವಕ್ಕೆ ಮರಳಿದೆ....

ವಾಸ್ತವದಲ್ಲಿ ವೀರಪ್ಪನ್‌ STFನವರ ಗುಂಡಿಗೆ ತಲೆಕೊಟ್ಟು ಶವವಾಗಿದ್ದಾನೆ. ಅವನನ್ನು ಬೇಟೆಯಾಡುವ ಸರ್ಕಾರದ ಎಲ್ಲಾ ಕಾರ್ಯಾಚರಣೆಗಳು ಅಧಿಕೃತವಾಗಿ ಕೊನೆಗೊಂಡಿದ್ದವು, ಆದರೆ ವರ್ತಮಾನದಲ್ಲಿ ನಿನಗೆ ವರ ಹುಡುಕುವ ನಿಮ್ಮಪ್ಪನ ವರಾನ್ವೇಷಣೆ ಮುಂದುವರೆದಿತ್ತು...

ಚಿನ್ನಾ, ಕೊನೆಯದಾಗಿ ನಾನು ಹೇಳಬೇಕಾದುದು ಇಷ್ಟೇ, ಕರಾಳ ಕನಸಲ್ಲಿ ಕಳೆದುಕೊಂಡ ನಿನ್ನನು ನಿಜವಾಗಿ ಪಡೆಯುವ ಆಸೆ. ಯಾವುದಕ್ಕೂ ನಿನ್ನ ನಿರ್ಧಾರವನ್ನು ಗುಟ್ಟಾಗಿ ಪತ್ರದಲ್ಲಿ ಬರೆದು ನಿಮ್ಮ ಮನೆಯ ಮುಂದೆ ಇರುವ ಕೆಂಪು ಅಂಚೆಪೆಟ್ಟಿಗೆಯಲ್ಲಿ ಹಾಕು. ನಾನು ನಿನ್ನ ಪತ್ರದ ದಾರಿಯನ್ನೇ ಕಾಯುತ್ತಿರುತ್ತೇನೆ.

ತುಂಬಾ ಪ್ರೀತಿಯಾಂದಿಗೆ,

ಇಂತಿ ನಿನ್ನ

ಹೃದಯದ ಕಳ್ಳ

ಮುಖಪುಟ / ಎನ್‌ಆರ್‌ಐ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more