ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಂಬಿಗೆ ಕಟ್ಟಿದ ನಮ್ಮ ಹಣ !

By Staff
|
Google Oneindia Kannada News
  • ಎಚ್‌. ಆರ್‌. ಸತೀಶ್‌ಕುಮಾರ್‌, ಅಲೆಕ್ಸಾಂಡ್ರಿಯಾ
    E-mail : [email protected]
H.R.Satish Kumar, The Authorಕೊನೆಗೂ ಅಮೇರಿಕಾ ತನ್ನ ಹಟವನ್ನು ಸಾಧಿಸಿ ಕೊಳ್ಳುತ್ತಿದೆ - ಇತ್ತ ತಮ್ಮ ತಮ್ಮ ಹಗೆತನವನ್ನೂ, ನಿಶ್ಶಕ್ತಿಯನ್ನೂ ಬದಿಗೊತ್ತಿ ಒಂದುಗೂಡಲಾರದ ದೇಶಗಳು ಒಂದೆಡೆಯಾದರೆ ಅತ್ತ ವಿಶ್ವದ ಬಲಿಷ್ಟ ರಾಷ್ಟ್ರಗಳು, ಅವುಗಳ ಜೊತೆಗೆ ಗೆದ್ದೆತ್ತಿನ ಬಾಲ ಹಿಡಿದು ಓಡುವ ಬಾಲಂಗೋಚಿಗಳೂ ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ ಬೀಸುವ ಹವಣಿಕೆಯಲ್ಲಿದ್ದಾರೆ. ಯಾವ ದೇಶಗಳನ್ನು ಸಮಯ ಸಾಧಕರು, ನಯ ವಂಚಕರು ಎಂದು ಯಾರು ದೂರುತ್ತಿದ್ದಾರೋ, ಹೀಗೆ ಹೇಳುವುದರ ಮೂಲಕ ಅವರು ತಮ್ಮನ್ನು ತಾವೇ ವರ್ಣಿಸಿಕೊಳ್ಳುತ್ತಿರುವಂತಿದೆ ಎಂದು ಯಾರಿಗೂ ಅನ್ನಿಸುತ್ತಲೇ ಇಲ್ಲ !

ಹೈಸ್ಕೂಲಿನ ಚರ್ಚಾಸ್ಪರ್ಧೆಯಲ್ಲಿ ಬಂದು ಹೋಗುವ ಪದಗಳಂತೆ ವಿಶ್ವಸಂಸ್ಥೆ, ವಿಶ್ವ ಮಾನವ ಸಂಘಟನೆಗಳೆಲ್ಲವೂ ದಿನ ನಿತ್ಯ ಸುದ್ದಿ ಮಾಡುತ್ತಿದ್ದರೂ, ಮುಂಬರುವ ಅನಾಹುತವನ್ನು ತಪ್ಪಿಸುವಲ್ಲಿ ವಿಫಲವಾಗಿವೆ. ಸರಿ ಇನ್ನೇನು ಶುರುವಾಗೇ ಬಿಟ್ಟಿತು ಯುದ್ಧ ! ಯುದ್ಧ ಎನ್ನದೇ ಆಕಾಶದಲ್ಲಿ ಬಾಣ-ಬಿರುಸಿನ ರಂಗು, ತಮ್ಮ-ತಮ್ಮ ಆಟಿಕೆಗಳನ್ನು ಪ್ರದರ್ಶಿಸುವ, ಪರೀಕ್ಷಿಸುವ ಸಮಯವೆಂದರೆ ಸರಿಯಾಗಬಹುದೇನೋ!

*

ನಮ್ಮ ಫೈನಾನ್ಷಿಯಲ್‌ ಅಡ್ವೈಸರ್‌ ಹೇಳುತ್ತಿದ್ದ, ‘‘ಅನಲಿಸ್ಟ್‌ಗಳು ಪ್ರಿಡಿಕ್ಟ್‌ ಮಾಡಿದ್ದಾರೆ - ಇದು ತುಂಬಾ ಸಣ್ಣ ಯುದ್ಧವಾಗುತ್ತದೆ ಅಂತಲೂ, ಹಣವಿನಿಯೋಗಿಸಿ ಹೆಚ್ಚು ಹಣ ಮಾಡಲು ಇದೆ ಸರಿಯಾದ ಸಮಯವೆಂತಲೂ, ಮಾರುಕಟ್ಟೆ ಮೇಲೇರುತ್ತದೆಂತಲೂ, ಇತ್ಯಾದಿಯಾಗಿ. ನಾನು ಕೇಳಬೇಕಂತಿದ್ದೆ, ಒಂದು ಕಂಪನಿ, ನಾಳಿನ ಹಣಕಾಸಿನ ಸ್ಥಿತಿಗತಿಯನ್ನು ನಿಖರವಾಗಿ ಹೇಳದ ಈ ಮೂರು ಕಾಸಿನ ಅನಲಿಸ್ಟುಗಳು, ಒಂದು ದೇಶದ ಮೇಲಿನ ಯುದ್ಧ ಇಂತಿಷ್ಟೇ ದಿನಗಳಲ್ಲಿ ನಡೆಯುತ್ತದೆ ಎಂತಲೂ, ಸದ್ದಾಮನನ್ನು ಹುಡುಕಿ ಕೊಲ್ಲುತ್ತಾರೆಂತಲೂ ಇಷ್ಟೊಂದು ಖಚಿತವಾಗಿ ಅದು ಹೇಗೆ ಹೇಳಬಲ್ಲರು? ಇವರು ಈ ಯುದ್ಧವನ್ನು ಅಷ್ಟೊಂದು ಚೆನ್ನಾಗಿ ಬಲ್ಲರೋ ಇಲ್ಲಾ ಇವರ ತಲೆಯಲ್ಲಿ ಯಾರಾದರೂ ಈ ರೀತಿ ಹೇಳುವಂತೆ ತುಂಬಿದ್ದಾರೋ ಅಂತ. ಎಂಥ ಯಃ ಕಶ್ಚಿತ್‌ ಜನ ನೋಡಿ, ಯಾರದೋ ಮನೆಗೆ ಬೆಂಕಿ ಬಿದ್ದರೆ, ಅದರಲ್ಲಿ ತಮ್ಮ ಬೇಳೆ ಬೇಯಿಕೊಳ್ಳುವಂತಹವರು.

ಉಸಾಮನನ್ನು ಹುಡುಕಿ ಬಗ್ಗು ಬಡಿಯುತ್ತೇವೆ ಅಂತ ವರ್ಷಗಳಿಂದ ಹೇಳಿಕೊಂಡಿದ್ದಾಯ್ತು, ಇನ್ನು ಇವರೆಲ್ಲರ ವಕ್ರ ದೃಷ್ಟಿ ಸದ್ದಾಮನ ಮೇಲೆ ತಿರುಗಿದೆ. ಸದ್ದಾಮನ ಶಕ್ತಿ ಕುಂದಿರ ಬಹುದು, ಆದರೆ ಒಬ್ಬ ಸೇನಾ ನಾಯಕನಾಗಿ ಇವರ ಕೂಗಿಗೆ ಹೆದರಿ 24 ರಿಂದ 48 ಘಂಟೆಗಳಲ್ಲಿ ಕಂಬಿ ಕೀಳುವುದಿಲ್ಲ ಎಂಬ ಸಣ್ಣ ಸತ್ಯ ಇವರಿಗೆ ಯಾಕೆ ಹೊಳೆಯುವುದಿಲ್ಲವೋ? ಹೊಳೆದಿದ್ದರೂ ಹೀಗೆ ಹೇಳುವುದೇ ಇವರ ಉಪಾಯವೋ?

*

George W. Bushಜಗತ್ತಿನ ಅತ್ಯಂತ ಬುದ್ಧಿವಂತರ ದೇಶವೆಂದೋ ಅಥವಾ ಮಂಕುದಿಣ್ಣೆಗಳ ಬೀಡೆಂದೋ ಅಂಕಿ-ಅಂಶಗಳ ಸಹಾಯದಿಂದ ಹೇಗೆ ಬೇಕೋ ಹಾಗೆ ವಾದಿಸಬಹುದಾದರೂ ಜಗತ್ತಿನೆಲ್ಲರ ಬುದ್ಧಿವಂತರಿಗೆ ಹೊಳೆಯದ್ದು, ಇಲ್ಲಿನವರಿಗೆ ತಿಳಿದಿದೆ ಎಂದು ಆಶ್ಚರ್ಯ ಹುಟ್ಟುತ್ತದೆ. ಇಲ್ಲಿನ ಯಾವುದೇ ಪತ್ರಿಕೆಯನ್ನೋ, ರೇಡಿಯೋ-ಟಿ.ವಿ. ಸುದ್ದಿ ಸಮಾಚಾರವನ್ನು ನೋಡಿ-ಕೇಳಿದವರು ನನ್ನ ಮಾತನ್ನು ಅನುಮೋದಿಸಬಹುದು. ಇನ್ನೂ ಅಧಿಕೃತವಾಗಿ ಯುದ್ಧ ಶುರುವಾಗುವ ಮೊದಲೇ ಇಲ್ಲಿನ ಸುದ್ದಿ ಸಮಾಚಾರಗಳಲ್ಲಿ ಯುದ್ಧ ಆರಂಭವಾಗಿಯಾಗಿತ್ತು ! ಯಾರ್ಯಾರ ಮೇಲೆ ಏನೇನು ಆಪಾದನೆಗಳು, ಏನೇನು ದೂರುಗಳು - ಎಷ್ಟು ಸುಳ್ಳೋ, ಎಷ್ಟರಲ್ಲಿ ಹುರುಳಿದೆಯೋ ಯಾರಿಗೆ ಗೊತ್ತು ? ಏನೇ ಇರಲಿ, ತಮ್ಮ ದೇಶವನ್ನು ಒಮ್ಮತದಿಂದ ಪ್ರತಿನಿಧಿಸುವ ಬಗೆಯೆಂದರೆ ಹೀಗಿರಬೇಕು, ಸ್ವಾಯುತ್ತತೆ ಪಡೆದ ಮಾಧ್ಯಮಗಳಲ್ಲಿ ಸುಳ್ಳಿನ ಕಂತೆಗಳು! ವಿಶ್ವದ ಆರು ಬಿಲಿಯನ್‌ ಜನರಲ್ಲಿ ಕೇವಲ ಐನೂರು ಮಿಲಿಯನ್‌ ಜನರಿಗೆ ಮಾತ್ರ ಯುದ್ಧ ಬೇಕಿದೆ, ಹೇಗಿದೆ ನೋಡಿ!

ನೆಟ್ಟಗೆ ತಮ್ಮ-ತಮ್ಮ ಕ್ಲೈಂಟುಗಳ ಫೋರ್ಟುಪೋಲಿಯೋವನ್ನು ನಡೆಸಿಕೊಂಡು ಹೋಗಲು ಬರದಿದ್ದರೂ ಮುಂಬರುವ ಯುದ್ಧ ಕೇವಲ ಕೆಲವೇ ದಿನಗಳಲ್ಲಿ ಮುಗಿಯುತ್ತದೆ ಅನ್ನುವ ಒಂದು ರೀತಿಯ pseudo-optimism ನಲ್ಲಿ ಮಾರ್ಕೆಟ್ಟನ್ನು ಮುನ್ನಡೆಸುವ ನಮ್ಮ ಅನಲಿಸ್ಟುಗಳಿಗೆ ಒಂದು ಪ್ರಶ್ನೆ - 1991 ರ ಇರಾಕ್‌ ಯುದ್ಧ 42 ದಿನಗಳೂ, 1995 ರ ಬೋಸ್ನಿಯಾ ಯುದ್ಧ 17 ದಿನಗಳೂ, 1998 ರ ಕೊಸೊವೋ ಕದನ 78 ದಿನಗಳು ನಡೆದು, ಹೋಗಲಿ ಬರೀ ಗುಡ್ಡ-ಗವಿ-ಬೆಟ್ಟಗಳನ್ನು ಒಡೆದು ಪುಡಿಮಾಡಿದ ಅಫ್‌ಘಾನಿಸ್ತಾನದ ಯುದ್ಧವೇ 76 ದಿನಗಳ ಕಾಲ ನಡೆದಿರಬೇಕಾದರೆ - ಇನ್ನು ಈ ಹೊಸ ಯುದ್ಧ ಕನಿಷ್ಠ 25 ದಿನಗಳ ಕಾಲವೂ ನಡೆಯುವುದಿಲ್ಲವೆಂದು ಹೇಗೆ ಹೇಳ ಬಲ್ಲಿರಿ? ದಿನಕ್ಕೆ ಮಿಲಿಯನ್ನು ಗಟ್ಟಲೆ ಖರ್ಚಾಗುವ ಯುದ್ಧದ ಕುರಿತು ಎಲ್ಲಾದರೂ ಹೇಳುತ್ತಾರಾ ಎಂದು ಹುಡುಕಿ, ಊಹೂ ಸಿಗದು, ಎಷ್ಟು ಜನ ಮಕ್ಕಳು-ಮರಿ ಸಾಯುತ್ತಾರೆ ಎಂದು ಕೆದಕಿ ನೋಡಿ, ಆ ಬಗೆಗೆ ಮಾತನಾಡರು - ಆದರೆ ಇವರ ಫೋಕಸ್‌ ಎಲ್ಲಾ ಒಬ್ಬನ ಮೇಲೆ, ಧಾಳಿ ಮಾತ್ರ ದೇಶದ ಮೇಲೆ !

Saddam Husseinಬುಷ್‌ ಹೇಳಲಿಲ್ಲವೇ ಇತ್ತೀಚೆಗೆ - ಈ ‘ಸುಲಿಗೆಗಾರ’, ‘ಕೊಲೆಗಡುಕ’ನನ್ನು ನಾವು ಎದುರಿಸುತ್ತಿದ್ದೇವೆ, ಇರಾಕಿನ ಜನರನ್ನಲ್ಲ ಎಂದು - ಒಂದು ದೇಶದ ಮುಖಂಡ ಮತ್ತೊಂದು ದೇಶದ ಮುಖಂಡನ ಮೇಲೆ ಬಳಸುವ ಭಾಷೆ ನೋಡಿ (ಯಾರು ಬರೆದುಕೊಟ್ಟರೋ ಈ ಭಾಷಣವನ್ನ ?) - ಮೊದಲು ನಿಮ್ಮ ಬದುಕನ್ನು ರೌರವ ನರಕವನ್ನಾಗಿ ಮಾಡುತ್ತೇವೆ, ಅನಂತರ ನಿಮ್ಮ ಬದುಕು, ನೆರೆ-ಹೊರೆಯನ್ನು ನಂದನವನವನ್ನಾಗಿ ಮಾಡಬಲ್ಲೆವು ಎಂದು. ಅದು ಸರಿಯೇ, ಈ ಹಿಂದೆ ಯುಗೋಸ್ಲಾವಿಯಾದಲ್ಲಿ ಮುರಿದ ಸೇತುವೆಗಳು, ಕುಸಿದ ಕಟ್ಟಡಗಳಿಗೆ ಲೆಕ್ಕವಿದೆ - ಅಲ್ಲಿ ಆಸ್ಫೋಟಿಸಿದ ಬಾಂಬುಗಳ ಲೆಕ್ಕವಿರುವುದರಿಂದ - ಆದರೆ ಅಲ್ಲಿ ಚಿಗುರಿದ ಮರಗಳೆಷ್ಟೋ, ಕೊರಗಿದ ಕುಟುಂಬಗಳೆಷ್ಟೋ, ಅಮೇರಿಕನ್ನರಲ್ಲದವರನ್ನು ಎಣಿಸುವವರು ಯಾರು, ಪರಿಗಣಿಸುವವರು ಯಾರು? ಸತ್ತವರನ್ನು ಬದುಕಿಸುವ ಶಕ್ತಿ ಡಾಲರಿಗೆ ಇಲ್ಲದಿದ್ದರೂ (ನಮ್ಮ ಪುಣ್ಯ !), ಬದುಕಿದವರನ್ನು ಬದುಕದಂತೆ ಮಾಡುವ ಶಕ್ತಿಯಂತೂ ಖಂಡಿತ ಇದೆ.

*

ಹೀಗೇ ಯೋಚಿಸಿಕೊಂಡು ಮನೆ ಬಂದು ಮುಟ್ಟಿದ್ನಾ, ದಿನ ನಿತ್ಯ ಟಿ.ವಿ. ನೋಡಿ, ಇಂಟರ್‌ನೆಟ್‌ ನೋಡಿ ಪ್ರಭಾವಿತನಾದ ಸುಬ್ಬ ಈ ರೀತಿ ಅಂದ: ‘‘ಯಾರು ಏನೇ ಅನ್ಲಿ ಬಿಡು, ನಿಜವಾದ ಗಂಡು ದೇಶ ಅಂದ್ರೆ ಕೆನಡಾ ಕಣೋ! ಕೆನಡಾ ಪ್ರೈಂ ಮಿನಿಷ್ಟ್ರು ಹೇಳ್‌ಲಿಲ್ವಾ - ಯಾರು ಏನಾದ್ರೂ ಮಾಡ್ಲಿ, ವಿಶ್ವ ಸಂಸ್ಥೆ ಪ್ರತಿನಿಧಿಸದ ಯುದ್ಧಕ್ಕೂ ನಮಗೂ ಸಂಬಂಧಾನೇ ಇಲ್ಲಾ ಅಂತ. ಅಮೇರಿಕದೋರಿಗೆ ಸಕತ್ತಾಗಿ ಉರಿ ಹತಗಂಡಿರಬೋದು ಅಂತೀನಿ. ಅದೇ ಮಾರ್ಚು ಬಂತು, ಟ್ಯಾಕ್ಸೂ-ಗೀಕ್ಸೂ ಅಂತ ಹೊಡಕೊಂತಿದ್ದೆಯಲ್ಲಾ, ಈಗ ನೋಡೋ, ಇರಾಕ್‌ ಮೇಲೆ ಬೀಳೋ ಪ್ರತಿ ಬಾಂಬಿನ ಮೇಲೂ ನಿನ್ನ ಹೆಸರೂ ಐತಿ, ಅಲ್ಲಿ ಏನಾದ್ರೂ ನೀನು ಈಕ್ವಲೀ ಹೊಣೆಗಾರ ನೋಡು...’’

ನನಗೆ ಬಾಯಿ ಹಾಕಲೂ ಬಿಡದೇ, ಉಸುರೆಳೆದುಕೊಂಡು - ‘‘ಅಲ್ಲಾ, 15 ವರ್ಷದಿಂದ ಉಪಯೋಗಿಸದೇ ಇರೋ ಆಯುಧಗಳನ್ನ ಈಗ ಬಳಸ್ತಾನೆ ಅಂತಾ ಕಂಪ್ಲೇಂಟ್‌ ಮಾಡ್ತಿದಾರೋ ಅಥ್ವಾ ಅವನಿಗೆ ಚುಚ್ಚೀ-ಚುಚ್ಚೀ ಅವನು ಏನು ಸಾಧ್ಯವೋ ಎಲ್ಲಾ ಬಳಸೋ ಹಂಗೆ ಮಾಡಿ ಕೊನಿಗೆ ಒಂದಿಷ್ಟು ಜನ ಸತ್ತ ಮ್ಯಾಲೆ - ಇವರಪ್ಪನ ಮನಿ ಗಂಟೇನು ಹೋತು ಬಿಡು - ‘ನೋಡಿ, ನಾವು ಮೊದಲೇ ಹೇಳ್ಲಿಲ್ವಾ ಇವನು ಡೇಂಜರ್‌ ಮನುಷ್ಯಾ ಅಂತ’ ಅಂತ ಪುಂಗಿ ಊದ್‌ತಾರೋ ಏನೋ - ಇವರಿಗೆ ಗತಿ ಇಲ್ಲ , ಅವರಿಗೆ ಮತಿ ಇಲ್ಲ - ಗೂಬೆ ನನ ಮಕ್ಳು....ಅಂತ ಇನ್ನೂ ಏನೇನೋ ಹೇಳ್ತಾನೇ ಇದ್ದ !

ಹೇ ಯುದ್ಧ !

ಸೆ.11- ಮರೆಯಲಾಗದ ನನ್ನ ಅನುಭವ
ಸದ್ದಾಮನ ನಿಶ್ಶಸ್ತ್ರೀಕರಣ

ಪೂರಕ ಓದಿಗೆ...

ಶಾಪ್ಪಿಂಗ್‌ ಕಾಂಪ್ಲೆಕ್ಸ್‌ನ ಅಡ್ನ್ಯಾಡೀ ಬಾಗಿಲು !
ಎಲ್ಲಾ Flushing ಗಣೇಶನ ಮಹಿಮೆ !
ಅಲ್ಲಿ ಹಾಲಿವುಡ್‌ ಆದರೆ ಇಲ್ಲಿ ಸ್ಯಾಂಡಲ್‌ವುಡ್‌ ಯಾಕೆ ?
ನೀರಿಗೆ ಬೆಂಕಿ ಬಿದ್ದಿದೆ ಬನ್ನಿ !

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X