ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುಖಪುರುಷನ ನಾಲ್ಕು ಸೂತ್ರಗಳು

By Staff
|
Google Oneindia Kannada News
Malli Sannappanavarನಾನು ಆಫೀಸಿನಿಂದ ಮನೆಗೆ ಬರುವುದನ್ನೇ ಕಾಯುತ್ತಾ ಇರುತ್ತಾನೆ ನನ್ನ ಚೈನೀಸ್‌ ರೂಮ್ಮೇಟ್‌. ಅವನ ಹೆಸರು ‘ಮೀಂಗ್‌ ಚಾ’. ‘ಪೀಟರ್‌’ ಅನ್ನೋದೂ ಅವನ ಹೆಸರೇ. ಅವನ್ಯಾಕೆ ಎರಡು ಹೆಸರು ಇಟ್ಟುಕೊಂಡ್ಡಿದ್ದಾನೆ ಎಂದು ನೀವು ಕೇಳಬಹುದು. ಚೈನಾದಿಂದ ಅಮೆರಿಕಾಗೆ ಬರುವ ಬಹಳಷ್ಟು ಮಂದಿ ಹೆಸರನ್ನು ಬದಲಾಯಿಸುವುದು ರೂಢಿ. ಕಾರಣ- ಅಮೆರಿಕಾದವರಿಗೆ ಇವರ ಹೆಸರನ್ನು ಉಚ್ಚಾರ ಮಾಡುವುದು ಸ್ವಲ್ಪ ಕಷ್ಟ ಎಂಬುದು ಇವರ ವಾದ.

ಅವರಷ್ಟೇ ಏಕೆ ? ನಮ್ಮ ದೇಶಿಯರೇನು ಕಮ್ಮಿ ಇಲ್ಲ, ನಮ್ಮ ‘ಜೈಕಿಶನ್‌’ ಇಲ್ಲಿಗೆ ಬಂದು ‘ಜಾಕ್ಸನ್‌’ ಆಗುತ್ತಾನೆ, ‘ಹರೀಶ’ ‘ಹ್ಯಾರಿ’ ಆಗುತ್ತಾನೆ, ಅಷ್ಟೇ ಏಕೆ ಬಸಪ್ಪ ಇಲ್ಲಿ bus ಆಗುವುದೂ ಉಂಟು! ಕೆಲವು ಸನ್ನಿವೇಶಗಳಲ್ಲಿ ಇದು ವಿಪರೀತಕ್ಕೆ ಹೋಗುತ್ತದೆ. ಉದಾಹರಣೆಗೆ ನನ್ನ ಒಬ್ಬ ಸಹಪಾಠಿಯ ಹೆಸರು ‘ವಿಶ್ವನಾಥ್‌’. ಆದರೆ ಇಲ್ಲಿಗೆ ಬಂದ ಮೇಲೆ ಅವನು ಹೆಸರನ್ನು ‘ವಿಷ್‌’ ಅಂತ ಬದಲಿಸಿಕೊಂಡಿದ್ದಾನೆ. ಇದನ್ನು ಹಿಂದಿಗೆ ಅನುವಾದಿಸಿದಾಗ ಇದರ ಅರ್ಥ ‘ವಿಷ’ ಎಂದಾಗುವುದು ತುಂಬಾ ವಿಷಾದದ ಸಂಗತಿ. ಈ ಹೆಸರುಗಳ ಗೊಂದಲ ಬಿಟ್ಟು ನಮ್ಮ ಮೂಲ ವಿಷಯಕ್ಕೆ ಬರೋಣ.

‘ಮೀಂಗ್‌ ಚಾ’ ನನ್ನನ್ನು ಇಷ್ಟು ಕಾತರದಿಂದ ಏಕೆ ಕಾಯುತ್ತಾ ಇರುತ್ತಾನೆ ? ಎಂದು ನೀವು ನಿಮ್ಮ ಉಹಾಪೋಹದ ಹಕ್ಕಿಯ ಗರಿ ಬಿಚ್ಚುವ ಮುಂಚೆ ನಾನೇ ಹೇಳಿ ಬಿಡುತ್ತೇನೆ. ಇವನಿಗೆ ಭಾರತದ ಇತಿಹಾಸ-ಜಾತಿ-ರಾಜಕೀಯ-ಸಿನಿಮಾ ಹೀಗೆ ಎಲ್ಲದ್ದರ ಬಗ್ಗೆ ವಿವರವಾಗಿ ತಿಳಿದುಕೊಳ್ಳುವ ಒತ್ತಾಸೆ. ಒಂದು ಕೆಮಿಕಲ್‌ ಕಂಪನಿಯಲ್ಲಿ ಈತ ಒಬ್ಬ ಕೆಮಿಸ್ಟ್‌. ನಮ್ಮ ಸಾಫ್ಟ್‌ ವೇರ್‌ ಕಂಪನಿ ಕೆಲಸದ ಥರ ಅಷ್ಟೊಂದು ಒತ್ತಡ ಅವನಿಗೆ ಇರುವುದಿಲ್ಲ. ಆದ್ದರಿಂದ ಸಂಜೆ 6 ಗಂಟೆಗೆ ಸರಿಯಾಗಿ ಅವ ಮನೆಗೆ ಹಾಜರ್‌. ನಮ್ಮ ಕಲ್ಚರಲ್‌ ಎಕ್ಸ್‌ಚೇಂಚ್‌ ಚರ್ಚೆಗಳು ಬಹುತೇಕ ಸುಗಮ ಹಾಗೂ ಶಾಂತಿಯುತವಾಗಿ ಇರುತ್ತವೆ. ಆದರೆ ಕೆಲವೊಮ್ಮೆ ಟಿಬೆಟ್‌, ದಲಾಯಿ ಲಾಮ, ಪಾಕ್‌-ಚೈನಾ ನಿಗೂಢ ವಹಿವಾಟು ಮುಂತಾದ ವಿಷಯಗಳು ಬಂದಾಗ ಚರ್ಚೆ ವಿಕಾರ ಸ್ವರೂಪಕ್ಕೆ ಹೋಗುವುದುಂಟು. ಹೀಗೆ ನಮ್ಮ ಚರ್ಚೆಯಲ್ಲಿ ಕಿರಿಕ್ಕು ಬಂದಾಗ ಮಾತ್ರ ನನ್ನ ಇನ್ನೊಬ್ಬ ಅಮೆರಿಕನ್‌ ರೂಮ್ಮೇಟ್‌ ‘ಮಾರ್ವಿನ್‌’ನ ಅಗತ್ಯ ಬೀಳುತ್ತದೆ. ಮಾರ್ವಿನ್‌ ವಯಸ್ಸು 22, ಲಾ ಓದುತ್ತಿರುವ ವಿದ್ಯಾರ್ಥಿ. ಇವನು ಕಿರಿಕ್ಕು ಬಗೆಹರಿಸುವುದಕ್ಕೂ ಮುಂಚೆ, ಅದರಿಂದ ಅಮೆರಿಕಾಕ್ಕೆ ಆಗುವ ಲಾಭ-ನಷ್ಟದ ಬಗ್ಗೆ ನೂರು ಬಾರಿ ಯೋಚಿಸುತ್ತಾನೆ. ಅದು ಅವನ ರಕ್ತದೋಷವೆಂಬುದು ನಮ್ಮ (ಹಿಂದಿ-ಚೀನೀ ಭಾಯಿ ಭಾಯಿ) ಅಂತಿಮ ತೀರ್ಮಾನ.

ನಾನು chop sticks ಉಪಯೋಗಿಸುವುದನ್ನು ಮೊದಲು ಕಲಿತದ್ದು ಮಿಂಗ್‌ ಚಾ ಸಹಾಯದಿಂದ. ಮೊದಲು ಕಷ್ಟವೆನಿಸಿದರೊ ಈಗ ಅನ್ನದ ಒಂದೊಂದು ಅಗಳನ್ನು ಕೊಡಾ ಪ್ಲೇಟ್‌ನಲ್ಲಿ ಬಿಡದಂತೆ ಭಕ್ಷಿಸಬಲ್ಲೆ. chop sticks ಉಪಯೋಗಿಸಿ ಮಾಡುವ ಊಟ ಕೊಡುವ ತೃಪ್ತಿ ಅಪರೂಪದ್ದು. ಹಾಗೆಯೇ ಮೀಂಗ್‌ ಚಾ ಗೆ ಜೇಸುದಾಸ್‌ ಅಂದ್ರೆ ತುಂಬಾ ಇಷ್ಟ ಅನ್ನುವುದೂ ಅಪರೂಪದ ಸಂಗತಿ. ಅವನು ಜೇಸುದಾಸ್‌ನ ‘ಗೋರಿ ತೇರಾ ಗಾಂವ್‌ ಬಡಾ ಪ್ಯಾರಾ...’ ಹಾಡನ್ನು ಚೈನಿಸ್‌ ಲಿಪಿಯಲ್ಲಿ ಬರೆದುಕೊಂಡು ಗುನುಗುತಿರುತ್ತಾನೆ. ಮಾರ್ವಿನ್‌ಗೆ ಇಡ್ಲಿ ಎಂದರೆ ಪಂಚಪ್ರಾಣ. ಈಗ ಅವನು ಸ್ವತಂತ್ರವಾಗಿ ಇಡ್ಲಿಯನ್ನು ತಯಾರಿಸಬಲ್ಲ. ಇಂಡಿಯನ್‌ ಸ್ಟೋರ್‌ನಿಂದ ಇಡ್ಲಿ ಸ್ಟ್ಯಾಂಡ್‌ ಕೂಡಾ ಕೊಂಡು ತಂದಿದ್ದಾನೆ ! ಆದರೆ ಅವನು ಚಟ್ನಿ ಅಥವಾ ಸಾಂಬಾರ್‌ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಏಕೆಂದರೆ ಆತ ಇಡ್ಲಿಯನ್ನು ತಿನ್ನುವ ರೀತಿಯೇ ವಿಚಿತ್ರ. ಎರಡು ಇಡ್ಲಿಗಳ ನಡುವೆ ಚಿಕನ್‌ ಇಟ್ಟುಕೊಂಡು ಸ್ಯಾಂಡ್‌ವಿಚ್‌ ರೀತಿಯಲ್ಲಿ ಅವನು ತಿನ್ನುತ್ತಾನೆ.

ನನ್ನ ಈ ಸಲದ ಭಾರತ ಭೇಟಿ ಕುರಿತು ನನ್ನ ರೂಮ್ಮೇಟ್‌ಗಳಿಗೆ ಎಲ್ಲಿಲ್ಲದ ಕುತೂಹಲ. ಏಕೆಂದರೆ ಈ ಸಲ ಹುಡುಗಿ ನೋಡಿ, ಸಾಧ್ಯವಾದರೆ ಮದುವೆ ಮಾಡಿಕೊಂಡು ಬರುವೆ ಎಂದು ತಿಳಿಸಿದ್ದೇನೆ. ಇಬ್ಬರಿಗೊ ಇದು ಅರ್ಥವಾಗದ ವಿಚಾರ. ಅವರ ಪ್ರಕಾರ ಒಂದೇ ತಿಂಗಳಲ್ಲಿ ಹುಡುಗಿಯನ್ನು ಒಂದು ಸಾರಿ ನೋಡಿ- ಭೇಟಿಮಾಡಿ ಮದುವೆಯಾಗುವುದು ಮೂರ್ಖತನ. ಆದರೆ ಭಾರತೀಯ ವಿವಾಹಗಳಲ್ಲಿ ಕಂಡು ಬರುವ ಹೆಚ್ಚಿನ ಸ್ಥಿರತೆ ಗಮನಿಸಿದಾಗ ಇವರಿಗೆ ಪರಮಾಶ್ಚರ್ಯ. ನಾನು ಇವರಿಗೆ ಆಗಾಗ ಹೇಳುತ್ತಿರುತ್ತೇನೆ (ಎಲ್ಲೋ ಓದಿದ್ದ ನೆನಪು), ‘ಒಬ್ಬ ಗಂಡಸು ಸುಖವಾಗಿರಲು ನಾಲ್ಕು ಅಂಶ ಮುಖ್ಯ. ಒಂದು- ಇರಲು ಬೆಚ್ಚನೆಯ ಗೂಡು, ಅರ್ಥಾತ್‌ ಮನೆ. ಎರಡು- ವೆಚ್ಚಕ್ಕೆ ಹೊನ್ನು, ಅರ್ಥಾತ್‌ ಕೈ ತುಂಬಾ ಸಂಬಳ. ಮೂರು- ಬಾಯಲ್ಲಿ ನೀರೂರಿಸುವ ರುಚಿಕಟ್ಟಾದ ಊಟ. ಕೊನೆಯದಾಗಿ- ಮನೆ-ಮನ ತುಂಬುವಂಥಾ ‘ಮಡದಿ’.

ಮನೆಗಳ ವಿಷಯಕ್ಕೆ ಬಂದಾಗ ಅತ್ಯುತ್ತಮವಾದ ಮನೆಗಳು ಎಂದರೆ ಬ್ರೀಟಿಷರ ಮನೆಗಳು. ಸಂಬಳದ ವಿಷಯಕ್ಕೆ ಬಂದಾಗ ಹೆಚ್ಚಿನವರು ಬಯಸುವುದು ಅಮೆರಿಕಾದ ಡಾಲರ್‌ ಸಂಬಳ. ಇನ್ನು ಊಟದ ವಿಚಾರಕ್ಕೆ ಬಂದರೆ, ವಿಶ್ವದ ಎಲ್ಲ ಭಾಗಗಳಲ್ಲಿ ಪ್ರಸಿದ್ಧ ಬೋಜನವೆಂದರೆ ಚೈನೀಸ್‌ ಫುಡ್‌. ಕೊನೆಯ ಹಾಗು ಮುಖ್ಯವಾದದ್ದು ಹೆಂಡತಿ. ನಿಮ್ಮೊಂದಿಗೆ ಇದ್ದರೆ ಭಾರತೀಯ ನಾರಿ ಅದೇ ಸ್ವರ್ಗಕ್ಕೆ ದಾರಿ. ಎಲ್ಲರಿಗೂ ಇವೆಲ್ಲಾ ಒಟ್ಟೊಟ್ಟಿಗೆ ಸಿಗುವುದು ಕಷ್ಟ. ಆದರೆ ಶ್ರಮಪಟ್ಟರೆ ಕೈತುಂಬಾ ಸಂಬಳ ಪಡೆಯಬಹುದು. ಇದಾದ ನಂತರ ಚೆಂದದ ಮನೆ ಕಟ್ಟುವುದೂ ಕಷ್ಟವೇನಲ್ಲ ಬಿಡಿ. ನಳಕುಲದ ನಮ್ಮಂಥವರಿಗೆ ಚೈನೀಸ್‌ ಫುಡ್‌ ತಯಾರಿಸುವುದೂ ತ್ರಾಸಿನ ಮಾತೇನಲ್ಲ. ಆದರೆ ಭಾರತೀಯ ಹೆಂಡತಿ ಸಿಗಬೇಕೆಂದರೆ ಅದೃಷ್ಟ ಒದ್ದುಕೊಂಡು ಬರಬೇಕು !

ಇಷ್ಟೆಲ್ಲವನ್ನೂ ಕಷ್ಟ ಪಟ್ಟು ವಿವರಿಸಿದಾಗ ಮಾತ್ರ ಅಮೆರಿಕನ್‌ ಲಾಯರ್‌ ಹಾಗೂ ಚೈನೀಸ್‌ ಚಿಂಗು (ದೇಶೀಯರು ಚೈನೀಸ್‌ಗಳಿಗೆ ಇಟ್ಟಿರುವ ಕೋಡ್‌ವರ್ಡ್‌) ಗಳನ್ನು ಸುಮ್ಮನೆ ಕೂರಿಸಲು ಸಾಧ್ಯ.

ನನ್ನ ಈ ವಾದ ಸರಿಯೇ ? ನಿಜವಾಗಿಯೂ ಭಾರತೀಯ ಹೆಂಡತಿ ಪಡೆದವನು ಅದೃಷ್ಟವಂತನೇ? ಯಾವುದಕ್ಕೂ ನಿಮ್ಮ ಅನಿಸಿಕೆಯನ್ನು ಗುಟ್ಟಾಗಿ ನನಗೆ ತಿಳಿಸಿ. ನೆನಪಿರಲಿ, ಈ ಪ್ರಶ್ನೆಗಳು ಗಂಡಸರಿಗೆ ಮಾತ್ರ!

Worst Combination: Chinese Home, British food, Indian salary, American wife !

ಮುಖಪುಟ / ಎನ್‌ಆರ್‌ಐ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X