• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಮೆರಿಕದಲ್ಲಿನ ಕನ್ನಡಿಗರು ಮತ್ತು ಕನ್ನಡ

By Staff
|
  • ಡಾ. ಬಿ. ಸಿ. ರಾಮಚಂದ್ರ ಶರ್ಮ

bcrsharma@vsnl.net

ಇದೇ ವರ್ಷದ ಮೇ ತಿಂಗಳ 14ರಂದು ಬೆಂಗಳೂರಲ್ಲಿ ಏರ್ಪಾಡಾಗಿದ್ದ ಒಂದು ಸಭೆಯಲ್ಲಿ ಅಮೆರಿಕದಲ್ಲಿ ನೆಲೆಸಿರುವ ಕನ್ನಡಿಗರು ಹೇಗೆ ಕನ್ನಡವನ್ನು ಉಳಿಸಿ ಬೆಳೆಸುತ್ತಿದ್ದಾರೆ ಅನ್ನುವ ವಿಷಯದ ಬಗ್ಗೆ ಭಾಷಣ ಮಾಡಿದವರಲ್ಲಿ ನಾನೂ ಒಬ್ಬ . ನಾನಾಡಿದ ಮಾತುಗಳು ದಟ್ಸ್‌ಕನ್ನಡ.ಕಾಂನಲ್ಲಿ ವರದಿಯಾದವು. ಆ ವರದಿಗಳನ್ನು ಓದಿದ ಅಮೆರಿಕದಲ್ಲಿನ ಹಲವಾರು ಕನ್ನಡಿಗರು ಖಾರವಾಗಿ ಪ್ರತಿಕ್ರಿಯಿಸಿದ್ದು ಆಮೇಲೆ ತಿಳಿಯಿತು. ಅನೇಕ ವರ್ಷಗಳವರೆಗೆ ಅಮೇರಿಕದಲ್ಲಿದ್ದು ‘ಅಮೆರಿಕನ್ನಡ’ವನ್ನು ಸಂಪಾದಿಸಿ ಈಗ ಮೈಸೂರಲ್ಲಿ ನೆಲೆಸಿರುವ ಹರಿಹರೇಶ್ವರರೂ ಕ್ಯಾಲಿಫೋರ್ನಿಯಾದಲ್ಲಿರುವ ವಿಶ್ವನಾಥ ಹುಲಿಕಲ್‌ ಅವರೂ ನೆರವಾದದ್ದರಿಂದ ನನಗೆ ಆ ವರದಿಗಳನ್ನು ನೋಡುವುದು ಸಾಧ್ಯವಾಯಿತು. ಅದೇ ಹೊತ್ತಿಗೆ ದಟ್ಸ್‌ಕನ್ನಡ.ಕಾಂ ಹಾಗೂ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾದ ಅಮೆರಿಕಾದ ಇಲಿನಾಯ್‌ ನಿವಾಸಿ ತ್ರಿವೇಣಿ ಶ್ರೀನಿವಾಸರಾವ್‌ ಅವರ ‘ಬೆನ್ನು ತಟ್ಟಬೇಕಾದವರಿಂದಲೇ ಬೆನ್ನಿಗೆ ಬರೆ’ ಅನ್ನುವ ಲೇಖನವೂ ಕಣ್ಣಿಗೆ ಬಿತ್ತು . ಆ ಲೇಖನದಲ್ಲಿ ಅವೊತ್ತು ಮಾತಾಡಿದ ಅನಂತಮೂರ್ತಿ ಹಾಗೂ ನಾನು ಅನಿವಾಸಿ ಕನ್ನಡಿಗರ ಕನ್ನಡಾಭಿಮಾನವನ್ನು ಅನುಮಾನಿಸಿ ಮಾತಾಡಿದ್ದಾಗಿಯೂ, ಹರಿಹರೇಶ್ವರ ದಂಪತಿಗಳಾಗಲೀ, ದತ್ತಾತ್ರಿ, ನಟರಾಜ್‌ ಅಂತಹವರಾಗಲೀ ಮಾಡಿದ, ಮಾಡುತ್ತಿರುವ ಕೆಲಸವನ್ನು ಹೊಗಳದೇ ಅನ್ಯಾಯ ಮಾಡಿದ್ದಾಗಿಯೂ ಆಪಾದಿಸಿದ್ದಾರೆ.

ವೆಬ್‌ಸೈಟ್‌ನಲ್ಲಿ ಪ್ರಕಟವಾದ ವರದಿಗಳನ್ನು ಆಧಾರವಾಗಿಟ್ಟುಕೊಂಡು ಅಮೆರಿಕದ ಕನ್ನಡಿಗರು ಖಾರವಾಗಿ ಪ್ರತಿಕ್ರಿಯಿಸಿದ್ದರಲ್ಲಿ ಅಥವಾ ಅಲ್ಲಿಯ ವರದಿಗಳನ್ನು ಆಧಾರವಾಗಿಟ್ಟುಕೊಂಡು ತ್ರಿವೇಣಿ ಅವರು ಸಿಟ್ಟು ಬೆರೆತ ವ್ಯಸನದಲ್ಲಿ ನನ್ನನ್ನು ಸಿನಿಕನೆಂದು ಕರೆದು ಲೇಖನ ಬರೆದದ್ದರಲ್ಲಿ ಆಶ್ಚರ್ಯವಿಲ್ಲ . ನಾನು ಆ ದಿನ ಮಾತಾಡಿದ್ದರ ಒಂದಂಶವನ್ನು ಮಾತ್ರ ವರದಿ ಮಾಡಿ, ಮುಂದೆ ನಾನು ಹೇಳಿದ್ದನ್ನು ಕಡೆಗಣಿಸಿದ್ದರಿಂದ ನನಗೆ ಅನ್ಯಾಯವಾಗಿರುವುದಲ್ಲದೇ ಅನಿವಾಸಿ ಕನ್ನಡಿಗರ ಮನಸ್ಸು ನನ್ನ ಬಗ್ಗೆ ಕಹಿಯಾಗುವುದಕ್ಕೂ ಕಾರಣವಾಗಿದೆ.

***

ಅವೊತ್ತಿನ ನನ್ನ ಭಾಷಣದ ತಳದಲ್ಲಿದ್ದದ್ದು ನನ್ನ ಬದುಕೇ ಆದ್ದರಿಂದ ಇಲ್ಲಿ ನಾನು ಕೆಲವು ಅಂಶಗಳನ್ನು ಹೇಳಲೇಬೇಕಾಗಿದೆ. ಭಾರತದ ಹೊರಗೆ ನಾನು ಕಳೆದದ್ದು 24 ವರ್ಷಗಳು. ಅದರಲ್ಲಿ ಅರ್ಧದಷ್ಟನ್ನು ಇಂಗ್ಲೆಂಡಿನಲ್ಲೂ ಎಂಟು ವರ್ಷಗಳನ್ನು ಜ್ಯಾಂಬಿಯಾದಲ್ಲೂ ಕಳೆದೆ. ಆ ಎಂಟು ವರ್ಷಗಳನ್ನು ನಾನು ಇವೊತ್ತೂ ಹೆಮ್ಮೆಯಿಂದ ಜ್ಞಾಪಿಸಿಕೊಳ್ಳುತ್ತಿರುತ್ತೇನೆ. ಅದಕ್ಕೆ ಕಾರಣ ನಾನು ಅಲ್ಲಿರುವತನಕವೂ ಕಾರ್ಯದರ್ಶಿಯಾಗಿದ್ದುಕೊಂಡು ಕೆಲಸ ಮಾಡಿದ ಕನ್ನಡ ಸಂಘ. ಆ ದೇಶದ ರಾಜಧಾನಿ ಲುಸಾಕಾದಲ್ಲಿ ಹಾಗೂ ಅಕ್ಕಪಕ್ಕದ ಊರುಗಳಲ್ಲಿದ್ದ ಸುಮಾರು ನಲವತ್ತು ಕನ್ನಡ ಸಂಸಾರಗಳನ್ನು ತಿಂಗಳಿಗೊಮ್ಮೆ ಯಾರದ್ದಾದರೂ ಮನೆಯಲ್ಲಿ ಕಲೆಹಾಕುತ್ತಿದ್ದ ಕನ್ನಡ ಸಂಘ ನಮ್ಮಲ್ಲಿನ ಕನ್ನಡವನ್ನೂ ಕನ್ನಡದ ಪ್ರೀತಿಯನ್ನೂ ಉಳಿಸಲು ಕಾರಣವಾಗಿತ್ತು . ಯಾರ ಮನೆಯಲ್ಲಿ ಸೇರುತ್ತಿದ್ದೆವೋ ಆ ಸಂಜೆ ಅಲ್ಲೇ ಊಟ. ಅದಕ್ಕೆ ಮುಂಚೆ ಎರಡು ಗಂಟೆಗಳ ಕಾಲ ಕನ್ನಡದ ಕನ್ನಡಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳು. ನನ್ನ ಆಸಕ್ತಿಯೇ ಕಾರಣವಾಗಿ ಆ ದಿನಗಳಲ್ಲಿ ಕನ್ನಡ ಸಾಹಿತ್ಯದಲ್ಲಿ ಏನು ನಡೆಯುತ್ತಿತ್ತು ಅನ್ನುವುದರ ಪರಿಚಯ ನಮ್ಮೆಲ್ಲರಿಗೂ ಇತ್ತು. ಹಾಡು ಕಲಿತವರೂ ನೃತ್ಯ ಬಲ್ಲವರೂ ನಮ್ಮ ಸಂಘದಲ್ಲಿದ್ದರಿಂದ ನಾವು ಹಮ್ಮಿಕೊಳ್ಳುತ್ತಿದ್ದ ಕಾರ್ಯಕ್ರಮಗಳಲ್ಲೂ ವೈವಿಧ್ಯವಿತ್ತು. ಟಾಗೂರರ ನಟಿರ್‌ ಪೂಜಾ ನಾಟಕದ ಕನ್ನಡ ಅನುವಾದವನ್ನೂ ಕನ್ನಡದ ನಾಟಕವೊಂದರ ಇಂಗ್ಲಿಷ್‌ ಅನುವಾದವನ್ನೂ ಸಾರ್ವಜನಿಕರ ಮುಂದೆ ಅಭಿನಯಿಸಿ ತೋರಿಸುವುದೂ ಸಾಧ್ಯವಾಯಿತು. ಎಲ್ಲಕ್ಕಿಂತ ಮುಖ್ಯವಾಗಿ ದಿವಂಗತ ನಳಿನಿ ಮೂರ್ತಿ ಹಾಗೂ ಈಚೆಗೆ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಪಡೆದ ಸುನಂದಾ ಬೆಳಗಂವಕರ್‌ ಅಂತಹವರು ತಮ್ಮಲ್ಲಿದ್ದ ಪ್ರತಿಭೆಗೆ ಬರಹದ ಮೂಲಕ ಅಭಿವ್ಯಕ್ತಿಯನ್ನು ಕೊಡುವುದೂ ಸಾಧ್ಯವಾಯಿತು. ಪ್ರತಿ ತಿಂಗಳೂ ನಮ್ಮ ಕಾರ್ಯಕ್ರಮಕ್ಕೆ ತಪ್ಪದ ಹಾಗೆ ಬರೆದು ತಂದು ಓದುತ್ತಿದ್ದ ಸುನಂದಾ ಅವರ ಪ್ರಬಂಧಗಳೇ ಮುಂದೊಂದು ದಿನ ‘ಕಜ್ಜಾಯ’ ಅನ್ನುವ ಹೆಸರಿನಲ್ಲಿ ಪ್ರಕಟವಾಗಿ ಅವರಿಗೆ ಹೆಸರು ತಂದಿತು.

ಇಂಗ್ಲೆಂಡಿನಲ್ಲಿ ಹಲವು ಕನ್ನಡ ಸಂಸಾರಗಳಿದ್ದರೂ ದೂರ ದೂರದ ಜಾಗಗಳಲ್ಲಿ ಹಂಚಿ ಹೋಗಿರುವುದರಿಂದ ಇಂತಹ ಕನ್ನಡ ಸಂಘಗಳು ನಾನಿದ್ದಾಗಲಂತೂ ಅಸ್ತಿತ್ವದಲ್ಲಿರಲಿಲ್ಲ. ಅಮೆರಿಕಾದಲ್ಲಿ ಕನ್ನಡ ಸಂಘಗಳು ಹಲವಾರು ಕಡೆ ಇರುವುದೂ ಕೆಲವೊಂದು ಕಡೆ ಆಗಾಗ ಸಾಹಿತ್ಯ ಗೋಷ್ಠಿಗಳು ಒಂದು ಜಾಗದಲ್ಲಿ ಕೂಡಿ ಸಾಹಿತ್ಯಕವಾದ ಕಾರ್ಯಕ್ರಮಗಳನ್ನು ಹಾಕಿಕೊಳ್ಳುವುದೂ ನನಗೆ ಗೊತ್ತು . ಅಂತಹ ಸಂಘ ಸಂಸ್ಥೆಗಳು ಕನ್ನಡಕ್ಕೆ ಸಂಬಂಧಿಸಿದ ಹಾಗೆ ಮಾಡುತ್ತಿರುವ ಕೆಲಸವನ್ನು ನಾನು ಹೃತ್ಪೂರ್ವಕವಾಗಿ ಮೆಚ್ಚಿಕೊಂಡಿದ್ದೇನೆ. ಅಮೆರಿಕಾದಲ್ಲಿದ್ದುಕೊಂಡು ಕನ್ನಡದಲ್ಲಿ ಬರೆದು ಪ್ರಕಟಿಸಿರುವ ಕೆಲವು ಪುಸ್ತಕಗಳು ಅತ್ಯುತ್ತಮ ಮಟ್ಟದವು ಅನ್ನುವುದರಲ್ಲಿ ಅನುಮಾನವೇ ಇಲ್ಲ. ಕನ್ನಡ ಭಾಷೆಯಿಂದ ಸಾವಿರಾರು ಮೈಲಿ ದೂರದಲ್ಲಿದ್ದು ತಮ್ಮೊಳಗಿನ ಸೃಜನ ಶೀಲತೆಗೆ ಕನ್ನಡದ ಮೂಲಕವೇ ಅಭಿವ್ಯಕ್ತಿ ಕೊಡುತ್ತಿರುವ ಈ ಲೇಖಕರನ್ನು ಇಂಗ್ಲೆಂಡಿನಲ್ಲಿದ್ದಾಗ ಇಂಗ್ಲಿಷಿನಲ್ಲಿ ಬರೆಯುವ ಮೋಹ ಕಾಡಿದಾಗಲೂ ಕನ್ನಡದಲ್ಲೇ ಬರೆಯುವ ವ್ರತ ತೊಟ್ಟು ಪಾಲಿಸಿಕೊಂಡು ಬಂದ ನಾನೂ ಮೆಚ್ಚದೇ ಹೋದರೆ ಹೇಗೆ ? ನಾನು ಅವರ ಪ್ರಯತ್ನವನ್ನು ಕಡೆಗಣಿಸುವುದಾದರೆ ನನ್ನ ಬಗೆಗೇ ನನ್ನಲ್ಲಿ ತಿರಸ್ಕಾರವಿದ್ದ ಹಾಗೆ.

ಲುಸಾಕಾದಲ್ಲಿ 72ರಿಂದ ಹತ್ತು ವರ್ಷಗಳ ವರೆಗೆ ಕನ್ನಡ ಸಂಘ ಅರ್ಥಪೂರ್ಣವಾಗಿ ಕೆಲಸ ಮಾಡಿದ್ದಕ್ಕೆ, ಅಮೆರಿಕಾದ ಕೆಲವು ಕಡೆಗಳಲ್ಲಿ ಇವೊತ್ತು ಕನ್ನಡ ಸಂಘಗಳು ಕ್ರಿಯಾಶೀಲವಾಗಿರುವುದಕ್ಕೆ ಮುಖ್ಯವಾಗಿ ಅಗತ್ಯವಾದದ್ದು ಕನ್ನಡ ಭಾಷೆ ಸಾಹಿತ್ಯಗಳಲ್ಲಿ ವೈಯಕ್ತಿಕವಾಗಿ ತೀವ್ರ ಆಸಕ್ತಿಯಿರುವ ಒಬ್ಬ ಕೇಂದ್ರ ವ್ಯಕ್ತಿಯ ಆಸುಪಾಸಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಕನ್ನಡ ಸಂಸಾರಗಳಿರುವುದು. ಲುಸಾಕಾದಲ್ಲಿದ್ದ ಕನ್ನಡಿಗರು ಅಮೆರಿಕದ ಕನ್ನಡಿಗರಿಗಿಂತ ಒಂದು ಮುಖ್ಯ ಅಂಶದಲ್ಲಿ ಭಿನ್ನರಾಗಿದ್ದನ್ನು ನಾವು ಮರೆಯಬಾರದು. ಅಲ್ಲಿದ್ದವರೆಲ್ಲ ಸರ್ಕಾರದಲ್ಲೋ ಅಥವಾ ಖಾಸಗೀ ಉದ್ಯಮಗಳಲ್ಲೋ ಎರಡು ಅಥವಾ ಮೂರು ವರ್ಷಗಳ ಕಾಂಟ್ರಾಕ್ಟ್‌ ಮೇಲೆ ಬಂದವರು. ಒಂದು ಕಾಂಟ್ರಾಕ್ಟ್‌ ಮುಗಿದ ಮೇಲೆ ಇನ್ನೊಂದು ಟರ್ಮ್‌ ಇದ್ದರೂ ಜ್ಯಾಂಬಿಯಾದಲ್ಲಿ ನೆಲಸುವ ಉದ್ದೇಶದಿಂದ ಅಲ್ಲಿಗೆ ಬಂದವರಲ್ಲ. ಹಾಗೆ ನೆಲಸಲು ಸಾಧ್ಯವೂ ಇರಲಿಲ್ಲ. ವಿದ್ಯಾರ್ಥಿಗಳಾಗಿ ಅಥವಾ ಕೆಲಸದ ಮೇಲೆ ಅಮೆರಿಕಾಕ್ಕೆ ಹೋಗುವ ಕನ್ನಡಿಗರಲ್ಲಿ ಅಲ್ಲಿ ನೆಲಸುವ ಉದ್ದೇಶವಿದ್ದು ಹಿಂದೆ ಬರುವವರು ಬೆರಳೆಣಿಕೆಯಷ್ಟಿಲ್ಲ ಅನ್ನುವುದು ಬರೀ ಕಲ್ಪನೆಯಲ್ಲ. ಅಮೆರಿಕಾಕ್ಕೆ ಹೋದ ಎರಡು ಮೂರು ವರ್ಷಗಳಲ್ಲೇ ಸ್ವತಃ ಮನೆಯನ್ನು ಕೊಳ್ಳುವುದೂ ಸರ್ವೇ ಸಾಮಾನ್ಯ. ಒಂದು ದೇಶದಲ್ಲಿ ಮನೆಯನ್ನು ಕೊಂಡರೆ ಅಲ್ಲಿ ಬೇರು ಬಿಟ್ಟ ಹಾಗೆ ಅನ್ನುವುದು ನನ್ನ ನಂಬಿಕೆಯಾದ್ದರಿಂದ ಹುಟ್ಟೆಲ್ಲೋ ಅಲ್ಲಿ ಸಾಯುವುದೇ ಸ್ವರ್ಗ ಅನ್ನುವ ಸಾಲನ್ನು ನನ್ನ ಎದೆಯಾಳದಿಂದ ಬರೆದಿದ್ದರಿಂದ ನಾನು ಇಂಗ್ಲೆಂಡ್‌ನಲ್ಲಿ ಮನೆ ಕೊಳ್ಳಲಿಲ್ಲ. ನಾನಿದನ್ನು ಹೆಚ್ಚುಗಾರಿಕೆಯ ಮಾತಾಗಿ ಹೇಳುತ್ತಿಲ್ಲ. ಲುಸಾಕಾದ ಕನ್ನಡ ಮಕ್ಕಳ ತಾಯಿನಾಡಿನ ಹಾಗೂ ಮಾತೃಭಾಷೆಯ ಸಂಬಂಧ ಒಂದಿಷ್ಟು ವರ್ಷಗಳವರೆಗೆ ತಾತ್ಕಾಲಿಕವಾಗಿ ತಳಕ್ಕೆ ಹೋಗಿದ್ದರೂ ಸದ್ಯದಲ್ಲೇ ದೇಶಕ್ಕೆ ಹಿಂತಿರುಗಿದ ಮೇಲೆ ಅನಿವಾರ್ಯವಾಗಿ ಬೆಳೆಯುವುದು ಅನ್ನುವುದು ಮುಖ್ಯವಾಗುತ್ತದೆ. ಮನೆ ಕೊಳ್ಳುವವರ ಮನಸ್ಸಲ್ಲಿ ತಮ್ಮ ಹಾಗೂ ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಯಾವ ಯೋಚನೆಗಳಿರಬಹುದು ಅನ್ನುವುದೇ ಇಲ್ಲಿರುವ ಪ್ರಶ್ನೆ. ಅಮೆರಿಕಾಕ್ಕೆ ಕೆಲಸದ ಮೇಲೆ ಹೋದವರು ತಮ್ಮ ಮಕ್ಕಳನ್ನು ಅಲ್ಲೇ ಬೆಳೆಸಿ ಅವಕ್ಕೆ ಅಲ್ಲಿಯ ಸ್ಕೂಲು ಕಾಲೇಜುಗಳಲ್ಲಿ ವಿದ್ಯಾಭ್ಯಾಸವನ್ನು ಕೊಡಿಸಬೇಕೆನ್ನುವ ಆಸೆಯನ್ನಿಟ್ಟುಕೊಂಡಿರುವುದು ಸಹಜ. ಇಂತಹ ಸಂದರ್ಭದಲ್ಲಿ ಕನ್ನಡಕ್ಕೆ ಎಷ್ಟು ಪ್ರಾಮುಖ್ಯ ಕೊಡಬೇಕು ಅನ್ನುವ ಪ್ರಶ್ನೆ ಏಳುತ್ತದೆ. ವಲಸೆ ಹೋಗುವ ಮೊದಲ ತಲೆಮಾರಿನವರಿಗೆ ಸ್ವದೇಶದಲ್ಲಿ ಬಿಟ್ಟು ಬಂದ ಅನುಭವ ರಾಶಿಯೇ ಕಾರಣವಾಗಿ ಅಲ್ಲಿಯ ಭಾಷೆ ಹಾಗೂ ಆಚರಣೆಗಳ ಬಗ್ಗೆ ಒಂದು ಹಳವಂಡ ಒಂದು ಭಾವುಕವಾದ ಸಂಬಂಧ ಬೆಳೆದುಳಿಯುವುದು ಸಹಜ. ಅಮೆರಿಕಾದಲ್ಲಿ ಹುಟ್ಟಿ ಅಲ್ಲೇ ಬೆಳೆಯುವ ಎರಡನೇ ತಲೆಮಾರಿನ ಮಕ್ಕಳಿಗೆ ಕನ್ನಡದ ಬಗ್ಗೆ ಅಷ್ಟೇ ಭಾವುಕವಾದ ಸಂಬಂಧ ಇರಬೇಕು ಅನ್ನುವುದು ಧರ್ಮವೇ ಅನ್ನುವ ಪ್ರಶ್ನೆಯನ್ನು ನಾನು ಆ ದಿನ ನನ್ನ ಭಾಷಣದಲ್ಲಿ ಎತ್ತಿದ್ದು ನೆನಪಿದೆ.

ಇಂಗ್ಲೆಂಡಿನ ಪ್ರೆೃಮರಿ ಹಾಗೂ ಹೈಸ್ಕೂಲು ಹಂತಗಳನ್ನು ಕಳೆದ ನನ್ನ ಮಕ್ಕಳ ಅನುಭವವನ್ನೂ ಮನಃಶಾಸ್ತ್ರ ನನಗೆ ಕಲಿಸಿದ್ದನ್ನು ಆಧರಿಸಿ ಹೇಳುವುದಾದರೆ, ಆ ವಯಸ್ಸಿನಲ್ಲಿ ಮಕ್ಕಳಿಗೆ ಮುಖ್ಯವಾದದ್ದು ಅವರ ಸಮವಯಸ್ಕರ ಒಪ್ಪಿಗೆ ಹಾಗೂ ಮಿಕ್ಕವರ ಕಣ್ಣಿಗೆ ಕಾಣುವ ಹಾಗೆ ಎದ್ದು ನಿಲ್ಲುವ ಯಾವುದಾದರೂ ಸಾಧನೆ. ಇವೆರಡಕ್ಕೂ ಬೇಕಾದದ್ದು ಅಲ್ಲಿಯ ಅನುದಿನದ ಭಾಷೆಯಾದ ಇಂಗ್ಲಿಷಿನ ಮೇಲೆ ಪ್ರಭುತ್ವ, ಕನ್ನಡದ ಪಾಂಡಿತ್ಯವಲ್ಲ. ಎಚ್ಚರವಾಗಿರುವ ಹೊತ್ತಲ್ಲಿ ಬಹು ಭಾಗವನ್ನು ಸ್ಕೂಲಲ್ಲಿ ಅಥವಾ ಆಟದ ಮೈದಾನದಲ್ಲಿ ಕಳೆಯುವ ಮಕ್ಕಳು ಕನ್ನಡವನ್ನು ಬಳಸುವುದಾದರೂ ರಾತ್ರಿ ಹೊತ್ತಲ್ಲಿ, ತಂದೆ ತಾಯಿಗಳ ಜೊತೆ. ಹೀಗಾಗಿ ಕನ್ನಡ ಕ್ರಮಕ್ರಮವಾಗಿ ವ್ಯವಹಾರದ ದೃಷ್ಟಿಯಿಂದ ಎರಡನೇ ಸ್ಥಾನಕ್ಕಿಳಿದರೆ ಆಶ್ಚರ್ಯವಿಲ್ಲ. ನನ್ನದೇ ಅನುಭವವನ್ನು ನಿರೂಪಿಸುವುದಾದರೆ, ಒಮ್ಮೆ teen ageನ ಮಗಳನ್ನು ಯಾವುದೋ ಕಾರಣಕ್ಕೆ, ನಿರರ್ಗಳವಾದ ಕನ್ನಡದಲ್ಲಿ ತರಾಟೆಗೆ ತೆಗೆದುಕೊಳ್ಳುತ್ತಿದ್ದಾಗ ಅವಳು ನನ್ನನ್ನು ತಡೆದು ಹೇಳಿದ್ದು : ನೀನು ಹೇಳುವುದನ್ನು ದಯವಿಟ್ಟು ಇಂಗ್ಲಿಷಿನಲ್ಲಿ ಹೇಳು. ನನಗೆ ತಕ್ಷಣ ಅರ್ಥವಾಗುತ್ತೆ. ಕನ್ನಡದಲ್ಲಿ ಹೇಳಿದ್ದನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಅದನ್ನು ಇಂಗ್ಲಿಷಿಗೆ ಅನುವಾದ ಮಾಡಿಕೊಳ್ಳಬೇಕಾದಾಗ ಮೊದಲನೇ ಭಾಷೆಯ ಮಣೆ ಹತ್ತಿರುವುದು ಕನ್ನಡವಲ್ಲ ಅನ್ನುವುದು ವೇದ್ಯ.

ಅವೊತ್ತು ನಾನು ಮಾತಾಡುವಾಗ ಮೊದಲನೇ ತಲೆಮಾರಿನ ನನ್ನಂಥವರ ಕನ್ನಡದ ಮೋಹವನ್ನು ತೆವಲು ಅಂತ ಕರೆದದ್ದೂ ನೆನಪಿದೆ. ಅಂಥ ತೆವಲಿದೆ ಅನ್ನುವ ಕಾರಣಕ್ಕಾಗಿ ಅಮೆರಿಕದಲ್ಲಿರುವ ಕನ್ನಡಿಗರು ನಾಚಬೇಕಾದ್ದಿಲ್ಲ. ನನ್ನನ್ನು ಅಂಥ ನಾಚಿಕೆ ಎಂದೂ ಕಾಡಲಿಲ್ಲ. ನಮ್ಮ ನೆಲದಿಂದ ನಾವು ವಲಸೆ ಹೋಗುವಾಗ ಒಯ್ಯುವ ಜೋಗುಳದ ಮಾತಿಗೆ ಒಂದು therapeutic ಗುಣವಿರುತ್ತದೆ. ಎಂದೇ, ಮೊದಲ ತಲೆಮಾರಿನ ವಲಸಿಗರಿಗೆ- ಎಲ್ಲರಿಗೂ ಅಲ್ಲದಿದ್ದರೂ ಕೆಲವರಿಗಾದರೂ- ಅದರ ಅಗತ್ಯವಿರುತ್ತದೆ. ಕೆಲವು ಸನ್ನಿವೇಶಗಳಲ್ಲಿ ಕಲಿತ ಮಾತು, ಇಂಗ್ಲಿಷ್‌, ಸಾಲದಾಗುತ್ತದೆ. ಇದನ್ನೇ ಇಂಗ್ಲೆಂಡಿನಲ್ಲಿದ್ದಾಗ ನಾನು ಬರೆದ ಒಂದು ಕವನದ ಕೊನೆಗೆ ಹೀಗೆ ಹೇಳಿದ್ದೇನೆ :

ಹಗಲು ಹುಳಿ ಹಿಂಡಿ ಒಡೆದ ಮಾತೋ ಸಂಜೆ ಪಬ್ಬಿಗೆ ಸಾಕು.

ಸತ್ತವರ ಜೊತೆ ಸರಸಕ್ಕೆ ಸಾಕು, ಬೆಳೆದು ಭುಜಕ್ಕೆ ಬಂದು

ನಿಂತ ಮಕ್ಕಳ ಜೊತೆ ವಿರಸಕ್ಕು ಸಾಕು. ಆದರೂ,

ಕಾಮ ಕನಸು ಕನವರಿಕೆ ಪ್ರೀತಿಗೋ ಬೇಕೇಬೇಕು

ಅರೆಮರೆತ (ಕನ್ನಡದ ) ಜೋಗುಳದ ಮಾತು...

ಅವೊತ್ತು ಮಾತಾಡುವಾಗ ಮೇಲಿನ ಸಾಲುಗಳನ್ನು ನೆನಪು ಮಾಡಿಕೊಂಡು ವಲಸೆ ಹೋದವರ ಮಕ್ಕಳಲ್ಲಿ ಕನ್ನಡ ಉಳಿಯುವ ಪ್ರಶ್ನೆಯೆತ್ತಿದೆ. ಅಪ್ಪ ಅಮ್ಮಂದಿರ ಕನಸು ಮಕ್ಕಳ ಕನಸೂ ಆಗುವುದೆನ್ನುವ ಗ್ಯಾರಂಟಿ ಎಲ್ಲಿಯೂ ಯಾವತ್ತೂ ಇಲ್ಲ. ಮೊದಲ ತಲೆಮಾರಿನವರಿಗೆ ಭಾವುಕವಾಗಿ ಅಗತ್ಯವೆನಿಸುವ ಕನ್ನಡ ಮಕ್ಕಳಿಗೂ ಬೇಕು ಅಂದುಕೊಳ್ಳುವುದೇ ದೊಡ್ಡವರು ಮಾಡುವ ಮೊದಲ ತಪ್ಪು. ಭಾರತದಲ್ಲಿದ್ದಾಗ ತಂದೆತಾಯಿಗಳು ತಮ್ಮ ಭಗ್ನ ಕನಸುಗಳನ್ನು ಮಕ್ಕಳ ಮೇಲೆ ಹೇರುವ ಹಾಗೆ ವಲಸೆ ಹೋದಾಗಲೂ ಮಾಡಿದರೆ ಹೇಗೆ ಅನ್ನುವ ಪ್ರಶ್ನೆ ನನ್ನನ್ನು ಆ ಹೊತ್ತಿನಲ್ಲಿ ಕಾಡಿದ್ದು ದಿಟ.

ನಾನು ಅಮೆರಿಕಾಕ್ಕೆ ಹೋಗಿರುವುದು ಒಂದೇ ಸಲ- ಹದಿನೈದು ವರ್ಷಗಳ ಕೆಳಗೆ. ಹರಿಹರೇಶ್ವರ ಅವರ ವಿಶ್ವಾಸ ಅಭಿಮಾನಗಳೇ ಕಾರಣವಾಗಿ ಮಯಾಮಿಯಿಂದ ಕೆನಡಾದ ನಾಂಟ್ರೇಲ್‌ವರೆಗೆ, ನ್ಯೂಯಾರ್ಕ್‌ , ವಾಷಿಂಗ್ಟನ್‌, ಷಿಕಾಗೋ, ಸ್ಯಾನ್‌ಫ್ರಾನ್ಸಿಸ್‌ಕೋ ಇತ್ಯಾದಿ ಹದಿನೈದು ಜಾಗಗಳಲ್ಲಿ ಕನ್ನಡ ಕೂಟಗಳನ್ನು ಉದ್ದೇಶಿಸಿ ಭಾಷಣ ಮಾಡಿದೆ. ಒಂದು ಮನೆಯಲ್ಲಿ ಕುವೆಂಪು ಅವರ ರಾಮಾಯಣ ದರ್ಶನಂ ಗ್ರಂಥಕ್ಕೆ ಪ್ರತಿದಿನ ಬೆಳಗ್ಗೆ ಅರಿಶಿನ ಕುಂಕುಮಗಳ ಪೂಜೆಯನ್ನು ತಂದೆತಾಯಿಗಳು ಮಾಡುವುದರ ಜೊತೆಗೆ ತಮ್ಮ ಹದಿನೆಂಟು ಇಪ್ಪತ್ತು ವಯಸ್ಸಿನ ಮಕ್ಕಳಿಂದಲೂ ಪೂಜೆ ಮಾಡಿಸುತ್ತಿದ್ದದ್ದನ್ನು ಕಂಡು ದಿಗ್ಭ್ರಾಂತನಾದೆ. ಪೂಜೆ ರಾಮನಿಗೋ ಕನ್ನಡಕ್ಕೋ ಅನ್ನುವ ಪ್ರಶ್ನೆಗೆ ಉತ್ತರವಿಲ್ಲದೇ, ಅಂಥ ಪೂಜೆಯಿಂದ ಆ ಮಕ್ಕಳಲ್ಲಿ ಕನ್ನಡದ ಬಗ್ಗೆ ಪ್ರೇಮ ಉಕ್ಕಬಹುದೆಂಬುವುದನ್ನು ನಂಬಲಾರದೇ ಹೋದ ನನ್ನ ಪರಿಸ್ಥಿತಿಯನ್ನು ವಿವರಿಸಿದೆ. ಹಾಗೇ, ಷಿಕಾಗೋನಲ್ಲಿ ನಡೆದ ವೀರಶೈವರ ಒಂದು ಸಭೆಯಲ್ಲಿ ನನ್ನ ಜೊತೆಗೆ ಎ.ಕೆ.ರಾಮಾನುಜನ್‌ ಇದ್ದರು. ವಚನ ಸಾಹಿತ್ಯದ ಬಗ್ಗೆ ಅವರೂ ಕನ್ನಡ ಸಾಹಿತ್ಯದ ಅವೊತ್ತಿನ ಸ್ಥಿತಿಯ ಬಗ್ಗೆ ನಾನೂ ಮಾತಾಡಿದೆವು. ಅಮೆರಿಕಾದ ಅನೇಕ ಭಾಗಗಳಿಂದ ಅಲ್ಲಿದ್ದ ಬಹುಪಾಲು ಜನರು ತಮ್ಮ ವಯಸ್ಸಿಗೆ ಬಂದಿದ್ದ ಗಂಡು ಮಕ್ಕಳಿಗೆ ಜೋಡಿ ಹುಡುಕುವುದಕ್ಕೆ ಅಲ್ಲಿ ನೆರೆದಿದ್ದರು ಅನ್ನುವುದು ಆಮೇಲೆ ಮನವರಿಕೆಯಾದಾಗ ನಮಗಾದ ಖೇದವನ್ನು ನನ್ನ ಭಾಷಣದಲ್ಲಿ ಹೇಳಿದೆ.

ಕನ್ನಡದಲ್ಲಿ ಪುಸ್ತಕಗಳನ್ನು ಬರೆಯುವುದರ ಜೊತೆಗೆ ಕನ್ನಡದ ಈಚಿನ ಶ್ರೇಷ್ಠ ಕೃತಿಗಳನ್ನು ಇಂಗ್ಲಿಷಿಗೆ ಅನುವಾದ ಮಾಡಿ ಪ್ರಕಟಿಸುವುದರ ಮೂಲಕ ಕನ್ನಡವನ್ನು ಉಳಿಸಬಹುದೆನ್ನುವುದನ್ನು ಕೊನೆಯಲ್ಲಿ ಸೂಚಿಸಿದೆ. ಅಮೆರಿಕದ ಕೆಲವು ಕನ್ನಡಿಗರು ಮಾಡುತ್ತಿರುವ ಕೆಲಸದ ಬಗ್ಗೆ ಹೆಮ್ಮೆಯಿರುವ ನಾನು ಅವೊತ್ತು ಅವರ ಮನಸ್ಸನ್ನು ನೋಯಿಸುವ ಉದ್ದೇಶ ಹೊಂದಿರಲಿಲ್ಲ.

ಭವಿಷ್ಯದಲ್ಲಿ ಕನ್ನಡ ಬೆಳೆಯಬೇಕು, ಅಮೆರಿಕದಲ್ಲಿ ಕನ್ನಡ ಬಾವುಟ ಎಲ್ಲರ ಕಣ್ಣಿಗೆ ಕಾಣುವ ಹಾಗೆ ಹಾರಾಡುತ್ತಿರಬೇಕು ಅನ್ನುವ ಅವಾಸ್ತವ ಭ್ರಮೆಗಳನ್ನು ಬಿಟ್ಟುಕೊಟ್ಟು ತಮ್ಮ ಆತ್ಮತೃಪ್ತಿಗಾಗಿ ಕನ್ನಡವನ್ನು ಉಳಿಸಿಕೊಳ್ಳಲಿ.

ಮುಖಪುಟ / ಎನ್‌ಆರ್‌ಐ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more