ಕಾವೇರಿಯಲ್ಲಿ ಚೌತಿ ಹಬ್ಬಕ್ಕೆ ಕನ್ನಡ ಚಿತ್ರರಂಗದ ನಕ್ಷತ್ರಗಳು !

ನಮ್ಮವರೆಲ್ಲ ಒಟ್ಟಿಗೆ ಸೇರುವುದಕ್ಕೆ ನೆಪವೊಂದು ಸಿಕ್ಕದರೆ ಸಾಕು. ಪ್ರತಿ ನೆಪವೂ ಹಬ್ಬವೇ ಅಲ್ಲವೇ ? ಕನ್ನಡ ಸಮ್ಮೇಳನ ಎಂಬ ಮಹಾ ಮೇಳದ ಅನುಭವ ಮೊಗೆದುಕೊಂಡು ರಿಲ್ಯಾಕ್ಸ್ ಮಾಡಿಕೊಳ್ಳುವ ಹಾಗಿಲ್ಲ. ಬೆನ್ನಿಗೇ ಬಂದಿದೆಯಲ್ಲ ಗಣೇಶ ಹಬ್ಬ... ! ಡೆಟ್ರಾಯಿಟ್ ಸಮ್ಮೇಳನಕ್ಕೆ ಬರುವ ಅತಿಥಿಗಳೂ ಈ ಹಬ್ಬದಲ್ಲಿ ಭಾಗವಹಿಸುತ್ತಿರುವುದು ಇನ್ನೊಂದು ವಿಶೇಷ.
ಸೆಪ್ಟೆಂಬರ್ 7ರಂದು ಕಾವೇರಿ ಕನ್ನಡ ಸಂಘದಲ್ಲಿ ಗಣೇಶ ಹಬ್ಬದ ಖುಷಿಯನ್ನು ಹಂಚಿಕೊಳ್ಳಲು ಬರುವ ಅತಿಥಿಗಳು ಯಾರು ಗೊತ್ತೆ? ಕನ್ನಡ ಚಿತ್ರರಂಗದ ಜೀವದ ಗೆಳೆಯರು ಸಪತ್ನೀಕರಾಗಿ ಕಾವೇರಿ ಕನ್ನಡ ಸಂಘದ ಗಜಾನನನ ಮುಂದೆ ನಿಲ್ಲಲಿದ್ದಾರೆ. ಅಂಬರೀಷ್- ಸುಮಲತಾ ಹಾಗೂ ವಿಷ್ಣುವರ್ಧನ್-ಭಾರತಿ ದಂಪತಿಗಳು ಆದಿ ಪ್ರೇಕ್ಷಕನಿಗೆ ಪೂಜೆ ಮಾಡಲಿರುವ ಅತಿಥಿಗಳು. ವಿಶ್ವ ಕನ್ನಡ ಸಮ್ಮೇಳನದ ಆಹ್ವಾನಿತರ ಯಾದಿಯಲ್ಲಿ ಇವರ ಹೆಸರಿರುವುದು ಈಗ ಜಗಜ್ಜಾಹೀರು. ಗಣೇಶನ ಪೂಜೆಗೆ ತಾರಾ ದಂಪತಿಗಳು ಬರುವುದನ್ನು ಖರೆ ಮಾಡಿದ ಮೇಲೆ ಡೆಟ್ರಾಯಿಟ್ ಸಮ್ಮೇಳನಕ್ಕೂ ಇವರ ಹಾಜರಾತಿ ಗ್ಯಾರಂಟಿ ಎಂದಂತಾಯಿತು.
ಗಣೇಶ ಹಬ್ಬದ ಕಾರ್ಯಕ್ರಮಗಳು ಹೇಗೆ ನಡೆಯಬೇಕು ಎಂಬ ಬಗ್ಗೆ ಇನ್ನೂ ರೂಪು ರೇಷೆಗಳು ಸಿದ್ಧವಾಗಬೇಕು. ತಯಾರಿಯ ನಡುವೆಯೇ ಆ ಶುಭದಿನದಂದು ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಛಿಸುವವರಿಗೆ ಕಾವೇರಿ ಮುನ್ನಾ ಸ್ವಾಗತ ಕೋರಿದೆ. ನಾಟಕ, ಸ್ಕಿಟ್, ಹಾಡು, ನೃತ್ಯ ಕಾರ್ಯಕ್ರಮಗಳನ್ನು ನೀಡಲು ಆಸಕ್ತಿ ಇರುವವರಿಗೆ ಇದೊಂದು ಸದವಕಾಶ. ವೇದಿಕೆಯಲ್ಲಿ ಹಾಡು ಹಾಡಿ ಪ್ರತಿಭೆ ಮೆರೆಯಲಿಕ್ಕೆ, ಪ್ರಹಸನದಿಂದ ಸಭಿಕರನ್ನು ನಗಿಸಲಿಕ್ಕೆ ಇದೊಂದು ಸುವರ್ಣಾವಕಾಶ ಅಲ್ಲವೇ.. ? ಕಾರ್ಯಕ್ರಮ ನೀಡಲು ಬಯಸುವ ಸ್ವಯಂ ಸೇವಕರು ಈಗಲೇ ಸಂಘವನ್ನು ಸಂಪರ್ಕಿಸಬೇಕು. ಸಂಪರ್ಕ : ರವಿ ಡಂಕಣಿಕೋಟೆ-(703) 818-2560 ಅಥವಾ ಹರೀಶ್ ಹೀರೇಮಠ್(301) 360-951.
ಪೊಂ ಪೊಂ ಬಸ್ಸು ಕ್ಯಾನ್ಸಲ್ !
'ಕಾವೇರಿ"ಯಿಂದ ಡೆಟ್ರಾಯಿಟ್ ಕನ್ನಡ ಸಮ್ಮೇಳನಕ್ಕೆ ಪ್ರತಿನಿಧಿಗಳನ್ನು ಕರೆದೊಯ್ಯಬೇಕಿದ್ದ ಬಸ್ ರದ್ದಾಗಿದೆ. ಅತೀ ಕಡಿಮೆ ಜನರ ಸಕಾರಾತ್ಮಕ ಪ್ರತಿಕ್ರಿಯೆಯಿಂದಾಗಿ ಬಸ್ಸನ್ನು ಕ್ಯಾನ್ಸಲ್ ಮಾಡಬೇಕಾಗಿ ಬಂದಿದೆ. ಈಗಾಗಲೇ ಬಸ್ಸಿಗಾಗಿ ಹೆಸರು ನೋಂದಾಯಿಸಿದವರಿಗೆ ಚೆಕ್ ವಾಪಸ್ಸು ಮಾಡಲಾಗುತ್ತದೆ. ಚೆಕ್ ವಾಪಸ್ಸಾಯಿತು ಅಂತ ಸಮ್ಮೇಳನಕ್ಕೆ ಹೋಗುವ ಯೋಚನೆಯನ್ನೇ ಕೈ ಬಿಡಬೇಡಿ. ಸಮ್ಮೇಳನದ ಸೊಬಗನ್ನು ಮಿಸ್ ಮಾಡಿಕೊಳ್ಳುತ್ತೀರಿ. ಸೋ, ಹಾಗಾಗದಿರಲಿ... ಹೇಗಾದರೂ ಹೋಗಿ, ಶುಭ ಪ್ರಯಾಣ ನಿಮ್ಮದಾಗಲಿ ಎಂಬುದು ನಮ್ಮ ಹಾರೈಕೆ !











Click it and Unblock the Notifications