ಎಲ್ಲರಿಗೂ ಬೇಕಾದ ಇಂದಿನ ‘ಸಮಯಾಚಾರ’ :

Clock‘ಕಾಲ’ಕ್ಕೆ ಮಹತ್ವ ಏಕೆ ಕೊಡಬೇಕು- ಎಂಬ ಪ್ರಶ್ನೆ ಕೇಳಿದರೆ, ಅದು ಮೂರ್ಖತನವೆಂದು ಯಾರೂ ಮೂಗು ಮುರಿದಾರು. ಆದರೆ, ಹಿಂದೆ, ಬಹಳ ದಿನಗಳ ಹಿಂದೆ, ‘ಮಳೆಗಾಲ’ದಿಂದ ‘ಮಳೆಗಾಲ’ಕ್ಕೆ ಇರುವ ಅವಧಿ ನಮಗೆ ‘ವರ್ಷ’ವಾದರೆ ಸಾಕಿತ್ತು. ನಮಗೆ ಸಾಕಷ್ಟು ವೇಳೆಯ ಶ್ರೀಮಂತಿಕೆ ಇತ್ತು; ವಿಳಂಬಿಸಿ ಕೆಲಸ ನಡೆಸಿದರೂ ತೊಂದರೆಯಿರಲಿಲ್ಲ; ‘ತದ್‌ ಏವ ಲಗ್ನಂ, ಸುದಿನಂ ತದ್‌ ಏವ ; ತಾರಾಬಲಂ ಚಂದ್ರಬಲಂ ತದ್‌ ಏವ; ವಿದ್ಯಾಬಲಂ ದೈವಬಲಂ ತದ್‌ ಏವ’- (‘ಅವನನ್ನು ನೆನೆಯಲು ಹೊತ್ತೇನು, ಗೊತ್ತೇನು?’) ಎಂಬುದು ಗೊತ್ತಿದ್ದರೂ, ‘ಒಳ್ಳೆಯ ಕಾಲ ಅಥವಾ ಮುಹೂರ್ತ ಬರುವವರೆಗೂ ಕಾದೇವು!’- ಎಂದು, ಕೆಲಸ ಮಾಡುವದನ್ನ ಮುಂದೂಡುತ್ತಿದ್ದ ಜನ ನಾವು. ‘ನಾಳೆ ಬರ್ಪುದು ನಮಗೆ ಇಂದೇ ಬರಲಿ ! ’ ಎಂದು ಹೇಳಿಕೊಳ್ಳುತ್ತಿದ್ದುದು ಕಡಿಮೆ. ‘ಹೊತ್ತು ಹೋಗದ ಮುನ್ನ ಅಘ್ಘವಣಿ ಪತ್ರೆಯ ತಂದು ಲಿಂಗವ ಪೂಜಿಸಲು’ ನಮಗೆ ಎಚ್ಚರಿಸುವವರು ಬೇಕಾಯಿತು. ‘ಸಮಯವನರಿತು... ಅರ್ಚನೆಯ ಮಾಡಿಸಿ, ಒಕ್ಕುದ ಕೊಂಡು, ಓಲಾಡುತ್ತಿಪ್ಪುದೇ ಭಕ್ತಿ ಎಂದು ತಿಳಿಸುವವರು ಬೇಕಾಯಿತು. ಹೇಳಿ, ಕೇಳಿ ನಿಧಾನಸ್ಥರು ನಾವು, ನಮ್ಮಲ್ಲಿ ಬಹಳ ಮಂದಿ ಗಡಿಯಾರದ ಬದಲು ಕ್ಯಾಲೆಂಡರನ್ನು ಪ್ರೀತಿಸುವವರು, ಆಶ್ರಯಿಸುವವರು’.

ಇಂಥ ನಾವು, ಧಿಡೀರನೆ ‘ಸಮಯಾಚಾರ ತತ್ಪರ’ರಾಗಬೇಕಿದೆ. ಸಮಯಕ್ಕೆ ಸರಿಯಾಗಿ ಹೋಗುವ, ಬರುವ, ತಲುಪುವ, ಉಳಿಯುವ, ಉಣ್ಣುವ, ವಿಶ್ರಮಿಸುವ, ಮಲಗುವ, ಏಳುವ, ಬಾಳಿನೊಡನೆ ಒಡನಾಡುವ- ಪರಿಪಾಠವನ್ನು ಬೆಳೆಸಿಕೊಳ್ಳದೆ ವಿಧಿಯಿಲ್ಲ. ’ಸಮಯ- ಪ್ರಜ್ಞೆ’ಯಿಲ್ಲದವನ/ಳ ಬಾಳು ಬಲು ಗೋಳು ! ಇಂಥವರನ್ನು ನಂಬಿ ನಡೆಸುವ ಕಾರ್ಯಕ್ರಮಗಳಂತೂ ಅವ್ಯವಸ್ಥೆಯ ಹಳಸಿದ ತಂಗಳ ಕೂಳು ! ಹುಳುಗಳು ಮುಕ್ಕಿ ಉಳಿಸಿದ ಜೊಳ್ಳು, ಮುರಿದು ಒಳಗೆ ಉಳಿದ ಮುಳ್ಳು !

ಈ ನಾಲ್ಕನೆಯ ಆಯಾಮದ ಹಿನ್ನೆಲೆಯಲ್ಲಿ, ನಾನು ಹಿಂದೆ ಬರೆದ ಒಂದು ಕವನವನ್ನು ನೆನೆಸಿಕೊಳ್ಳುತ್ತಿದ್ದೇನೆ :

ಕಾಲಲಕ್ಷ್ಮಿ !

ಚಿಲಿಪಿಲಿಯ ದನಿ ಕಣ್ಣ ಬಿಡಿಸಿತು, ಎದ್ದೆ;
‘ಎಂದೂ ನಿದ್ದೆ ಮಾಡದ ಹಕ್ಕಿ
ಎಲ್ಲಿವರೆಗೆ ಹಾರಿದೆ’, ನೋಡಿ,
ಅಭ್ಯಾಸ- ಬಲ, ‘ಅಂಗೈ ತುದಿಯಲ್ಲೇ ಇದ್ದಾಳೆ....’

ಗುನುಗುನಿಸುತ್ತಿದ್ದೆ;
ಆಗ ಹೊಳೆದದ್ದು ಇದು :

ಧನ ಲಕ್ಷ್ಮಿ, ವನ ಲಕ್ಷ್ಮಿ, ತೆನೆ ಲಕ್ಷ್ಮಿ, ಮನೆ ಲಕ್ಷ್ಮಿ,
ಹತ್ತಿ ಇಳಿಯುವ ಆನೆ ಕುದುರೆ ವಾಹನಗಳೆಲ್ಲವೂ
ಲಕ್ಷ್ಮಿ;
ಆಹಾ ! ಓ ಕಮಲೆ, ಎಷ್ಟೊಂದು ಹೆಸರೆ ನಿನಗೆ?
‘ಲಕ್ಷ್ಮೀ ಪದ್ಮಾಲಯ ಪದ್ಮಾ
ಕಮಲಾ ಶ್ರೀರ್‌ ಹರಿ- ಪ್ರಿಯಾ;
ಇಂದಿರಾ ಲೋಕಮಾತಾ ಮಾ
ರಮಾ ಮಂಗಳದೇವತಾ,
ಭಾರ್ಗವೀ ಲೋಕಜಜನೀ ಕ್ಷೀರಸಾಗರ- ಕನ್ಯಕಾ’
ಬೆಳಕು, ಚೆಲುವು, ಗೆಲುವು, ಹೂವು, ಹಾವೂ ಲಕ್ಷ್ಮಿ;
ಮಜ್ಜಿಗೆಯಾಳಗಣ ಬೆಣ್ಣೆಯ ಭಾಗ್ಯ ದಾಸರ ಲಕ್ಷ್ಮಿ;
‘ಜೊತೆಗಿರೆ ಎಂಟೆದೆ’- ಎಂದಿರಾ?
ಅದಕ್ಕೇ ಇರಬೇಕು, ಎಂಟು ಬಗೆ ಇಂದಿರಾ !
ಹೆಸರ ಮೊದಲಿಗೇ ಹಾರಿ, ಪದದ ಬಾಲವ ಸೇರಿ,
ಅವಳ ನೆನಪಿನ ಹಗ್ಗ ಜಗ್ಗಿ ಜಗ್ಗಿ ಶ್ರೀಮುದ್ರೆ
ಸವಕಲು- ನಾಣ್ಯಶ್ರೀಯಾಗಿ ಹೋಯ್ತಲ್ಲ, ಇರಲಿ,
ಆದರೂ, ನಮ್ಮವರಾರೂ ಕರೆದಿಲ್ಲ- ಕಾಲಲಕ್ಷ್ಮಿ !

ಅನ್ನ ನೆಮ್ಮದಿ ಸೌಖ್ಯ ಮನ್ನಣೆಯ ತಾವೇ ದುಡಿದು
ಗಳಿಸಲವಕಾಶವ ಅರಸಿ, ಹೊಸಿಲು ದಾಟಿದ ಜನಕ್ಕೆ
ಈ ನಾಲ್ಕನೆಯ ಆಯಾಮ, ಆರಾಧ್ಯಲಕ್ಷ್ಮಿ !

ಮುಖಪುಟ / ಸಾಹಿತ್ಯ ಸೊಗಡು
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+