ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾವ್ಯದಲ್ಲಿ ರೂಪಾಂತರದ ಸವಾಲುಗಳು- ಭಾಗ2

By Staff
|
Google Oneindia Kannada News

*ಎಂ. ಆರ್‌. ದತ್ತಾತ್ರಿ, ಸನ್ನಿವೇಲ್‌, ಕ್ಯಾಲಿಫೋರ್ನಿಯಾ

ಪ್ರಸಿದ್ಧ ಇಂಗ್ಲಿಷ್‌ ಕವಿ ಎಝ್ರಾ ಪೌಂಡ್‌ (Ezra Pound) ವರ್ಗೀಕರಿಸುವಂತೆ ಕಾವ್ಯಭಾಷೆಯು ಮೂರು ಮೂಲಭೂತ ಸ್ವರೂಪಗಳನ್ನು ಹೊಂದಿದೆ.

ನಾದರೂಪ ( melopoeia)

  • ಚಿತ್ರರೂಪ ( phanopoeia)
    ವಸ್ತುರೂಪ (logopoeia)
  • ನಾದರೂಪ

    ಬೌದ್ಧಿಕ ಅವಕಾಶದಲ್ಲಿ ಯೋಚನೆಗಳ ತಂತುಗಳಾಗಿ ಅಲೆದಾಡುವ ಕವನ ಲೌಕಿಕ ಜಗತ್ತನ್ನು ಪ್ರವೇಶಿಸುವುದು ಭಾಷೆಯ ಶಬ್ದಗಳ ಮುಖಾಂತರವೇ. ಕವನದಲ್ಲಿನ ಶಬ್ದಗಳ ಗಣ, ವಸ್ತುವನ್ನು ಸೂಚಿಸುತ್ತದೆ. ಹಾಗೂ ಕಲ್ಪನೆಯನ್ನು ಕೆದಕಿ ಚಿತ್ರವನ್ನು ಮೂಡಿಸುತ್ತದೆ. ಕಾವ್ಯದ ಅನುಭವದಲ್ಲಿ ನಾದಕತೆಯ ಪಾತ್ರ ಬಹಳ ಹಿರಿಯದು. ಏಕೆಂದರೆ ಓದುಗನನ್ನು ವಿಶಿಷ್ಟವಾಗಿ ಮುಟ್ಟಿ ವಸ್ತುವಿಗೆ ಅಥವಾ ದೃಶ್ಯಕ್ಕೆ ಚಿತ್ರರೂಪ ಕೊಡುವಾಗಿನ ಸಂದರ್ಭದಲ್ಲಿ ನಾದವು ಓದುಗನ ಅನುಭವ ಮತ್ತು ಕಲ್ಪನಾ ಶಕ್ತಿಯನ್ನು ಹಿಡಿದು ನಂಟು ಹಾಕುವಲ್ಲಿಯೇ ಕಾವ್ಯದ ಯಶಸ್ಸು ಅಡಗಿದೆ. ಉದಾಹರಣೆಗೆ ಜಿ.ಎಸ್‌. ಶಿವರುದ್ರಪ್ಪನವರ ಈ ಸಾಲುಗಳನ್ನೇ ತೆಗೆದುಕೊಳ್ಳಿ.

    ಪ್ರಕೃತಿಯಂತೆ ಕವಿಯ ಮನಸು
    ವಿಪುಲ ರೂಪ ಧಾರಿಣಿ
    ಬ್ರಹ್ಮನೆದೆಯ ಕನಸಿನಂತೆ
    ಕೋಟಿ ಕಲ್ಪಗಾಮಿನಿ

    ಇಲ್ಲಿ ಶಬ್ದ ರೂಪಿಸುವ ನಾದ ಎಂತಹ ಅಮೋಘ ಕೆಲಸ ಮಾಡಿದೆ ಎಂದರೆ ಪ್ರಾಸವನ್ನು ಬದಲಿಸಿಯೋ ಅಥವಾ ಶಬ್ದವನ್ನು ಬದಲಿಸಿಯೋ ಈ ರೀತಿಯ " impact ನ್ನು ಉಳಿಸಿಕೊಳ್ಳಲು ಸಾಧ್ಯವೇ ಇಲ್ಲ. ನಾದವು ವಸ್ತು ಮತ್ತು ಕಲ್ಪನೆಗಳನ್ನು ಅದ್ಭುತವಾಗಿ ಮೂಡಿಸಿ ಅರ್ಥವನ್ನು ಹೊಚ್ಚಗೊಳಿಸುವ ಅತ್ಯುತ್ತಮ ಕವಿತೆಗಳಲ್ಲಿ ಒಂದು ಇದು.

    ಸಾಮಾನ್ಯ ಭಾಷೆಯಿಂದ ಕಾವ್ಯವು ಬೇರೆಯಾಗಿ ನಿಲ್ಲುವುದು ತನ್ನ ಲಯಬದ್ಧತೆಯಲ್ಲಿ. ಲಯವು ಪ್ರಾಸ ಮತ್ತು ಛಂದಸ್ಸಿಗೆ ಮಾತ್ರ ಸೀಮಿತಗೊಳ್ಳದೆ ಮುಕ್ತ ಛಂದಸ್ಸಿನಂತಹ ಪ್ರಾಸ ಮತ್ತು ಛಂದಸ್ಸನ್ನು ಅಳವಡಿಸಿಕೊಳ್ಳದ ಕವಿತೆಗಳಲ್ಲೂ ಪದಪದಗಳ ನಡುವಿನ ಕೊಂಡಿಯಾಗಿ ಭಾಷೆಗೆ ಕಾವ್ಯತೆಯನ್ನು ತುಂಬುವ ಸಾಧನವಾಗುತ್ತದೆ.

    ಈ ರೀತಿಯ ವಿಶೇಷತೆಗಳ ನಾದವೇ ಒಮ್ಮೊಮ್ಮೆ ಅನುವಾದಕನಿಗೆ ಕಠಿಣ ಸಮಸ್ಯೆಗಳನ್ನು ಒಡ್ಡುವ ಪರೀಕ್ಷೆಯಾಗುತ್ತದೆ. ನಾದವು ಶಬ್ದಪೂರಿತವಾದದ್ದು. ಶಬ್ದವು ಭಾಷಾಜನಿಕವಾದದ್ದು.

    ಭಾಷೆಯ ಮೂಲಗಳು ಕಾಲ, ಸಮಾಜ ಮತ್ತು ಭೌಗೋಳಿಕತೆಗೆ ಅನುಗುಣವಾಗಿ ತಮ್ಮ ಗುಣಗಳನ್ನು ಪಡೆದು ಅನುವಾದಿಸಲು ಅಸಾಧ್ಯ ಎನ್ನಿಸುವಷ್ಟು ಏಕಸ್ಥವಾಗಿರುತ್ತವೆ. ಹಾಗಾಗಿ ನಾದರೂಪ, ವಸ್ತುರೂಪ ಹಾಗೂ ಚಿತ್ರರೂಪಗಳಲ್ಲಿ ನಾದದ ಮೇಲೆ ಹೆಚ್ಚು ವಾಲಿರುವ ಕಾವ್ಯವನ್ನು ಅನುವಾದಿಸುವುದು ಬಹಳ ದುರ್ಗಮವಾದ ಕಾರ್ಯ.

    ನಾದವು ಒಡ್ಡುವ ಈ ಸಮಸ್ಯೆಗಳು ವಸ್ತು ಮತ್ತು ಚಿತ್ರರೂಪ ಪ್ರಬಲ ಕಾವ್ಯದಲ್ಲಿ ಕಾಣಲಾಗದು ಎಂಬುದು ಇದರ ಅರ್ಥವಲ್ಲ. ನಾದ ಪ್ರಬಲವೋ, ದುರ್ಬಲವೋ ಒಟ್ಟಿನಲ್ಲಿ ಅದು ವರ್ಗರಹಿತ. ಒಂದು ಶಬ್ದವು ಅರ್ಥದ ನಿಟ್ಟಿನಿಂದ ಬೇರೆ ಭಾಷೆಗಳಲ್ಲಿ ತನ್ನ ಸಮಾನಾಂತರಗಳನ್ನು ಹೊಂದಿದ್ದರೂ, ಮೂಲಕವನದಲ್ಲಿ ಜಾಗೃತಪಡಿಸಿದ ಅರ್ಥ ಮತ್ತು ಕಲ್ಪನೆಗಳನ್ನು ಅನುವಾದಿತ ಭಾಷೆಯಲ್ಲಿ ಮೂಡಿಸುತ್ತದೆಯೇ ಎಂಬುದು ಯಾವತ್ತೂ ಅನುಮಾನಾಸ್ಪದ. ಅನುವಾದಕನ ಅತಿಮುಖ್ಯ ಜವಾಬ್ದಾರಿಯಾದ ಮೂಲ ಕಾವ್ಯದ ವಸ್ತುವನ್ನು ಉಳಿಸುವುದು ಮುಖ್ಯವಾಗಿ ತೋರ್ಪಡೆಯಾಗುವುದು ಈ ಸಂದರ್ಭದಲ್ಲೇ. ಕವಿ ಕನೋಲಿ ( Connoley) ಹೇಳಿದಂತೆ " poetry translation has been called the art of compromise and its success will always be a question of degree .

    ಕನ್ನಡದ ಶ್ರೇಷ್ಠ ಕವಿ ಮತ್ತು ಹೆಸರಾಂತ ಅನುವಾದಕರಾದ ಡಾ. ರಾಮಚಂದ್ರಶರ್ಮರು ತಮ್ಮ ಅನುವಾದದಲ್ಲಿ ಗುರುತಿಸುವಂತೆ ಅನುವಾದದಯಲ್ಲಿಯ ಮತ್ತೊಂದು ಗುರುತರ ಸವಾಲು ಎಂದರೆ, ಎರಡು ಭಾಷೆಗಳ ನಡುವೆ ಇರಬಹುದಾದ ಧ್ವನಿಮಟ್ಟುಗಳ ಅಂತರ. ಭಾರತೀಯ ಭಾಷೆಗಳ ನಡುವೆ ಅನುವಾದ ಮಾಡುವಾಗ ಭಾಷೆಗಳ ಮೂಲವು ಒಂದೇ ಆಗಿ ನಿಲ್ಲುವುದರಿಂದ (ಸಂಸ್ಕೃತ)ಧ್ವನಿಯಂತರ ಅಷ್ಟು ಶ್ರವಣವಲ್ಲದಿದ್ದರೂ, ಭಾರತೀಯ ಭಾಷೆ ಮತ್ತು ಪಾಶ್ಚಿಮಾತ್ಯ ಭಾಷೆಯ ನಡುವೆ ಅನುವಾದಿಸುವಾಗ ಇದು ವಿಸ್ತುತ ರೂಪ ಪಡೆಯುತ್ತದೆ. ಕನ್ನಡ ಗಟ್ಟಿ ಭಾಷೆ. ಎತ್ತರದ ಧಾಟಿ ಇದರ ಸಹಜ ಸ್ವರೂಪ. ಇಂಗ್ಲಿಷ್‌ ಹಾಗಲ್ಲ. ಪಾಶ್ಚಿಮಾತ್ಯರ ಮೆಲುದನಿಗೆ ಸೇರಿದ್ದು. ಅನೇಕ ಹೆಸರಾಂತ ಕವಿಗಳ ಕನ್ನಡ ಗೀತೆಗಳು ಇಂಗ್ಲಿಷ್‌ನಲ್ಲಿ ಬಹಳ ಅಬ್ಬರ ಎನಿಸಿ ಸೋಲುವುದು ಮತ್ತು ಹೆಸರಾಂತ ಇಂಗ್ಲಿಷ್‌ ಗೀತೆಗಳು ಕನ್ನಡದಲ್ಲಿ ಮಂಕಾಗಿ ಕಾಣುವುದು ಈದೃಷ್ಠಿಯಿಂದಲೇ . ಅನುವಾದಕನು ಕಾವ್ಯದ ಧ್ವನಿಯ ಏರಿಳಿತವನ್ನು ಭಾಷೆಗೆ ತಕ್ಕಂತೆ ಬದಲಿಸಬೇಕಾಗುತ್ತದೆ.

    ಉತ್ತಮ ಕಾವ್ಯದಲ್ಲಿ ಭಾಷೆಯ ಅನೇಕ ವಿಶೇಷತೆಗಳು ತಮ್ಮ ಛಾಯೆಯನ್ನು ಮೂಡಿಸಿರುತ್ತದೆ. ಭಾಷೆಯಲ್ಲಿ ಅನುಭವಿಯಾದ ಕವಿಯು ಸಹಜವಾಗಿಯೇ ತನ್ನ ಕಾವ್ಯದಲ್ಲಿ ಇಂತಹಾ ವಿಶೇಷತೆಗಳನ್ನು ಬರಮಾಡಿಕೊಂಡು ಅರ್ಥದ ಬಿಂದುವಿನಲ್ಲಿ ಕರಗುವಂತೆ ಮಾಡಿರುತ್ತಾನೆ. ಇಂತಹಾ ಭಾಷಾ ವಿಶೇಷತೆಯಿಂದ ಕಾವ್ಯ ಭಾಷೆಯನ್ನು ಬೇರ್ಪಡಿಸುವುದು ಅನುವಾದಕನ ಗುರುತರ ಕಾರ್ಯಗಳಲ್ಲಿ ಒಂದು. ಇಂಗ್ಲಿಷ್‌ ಹಾಗೂ ಇತರ ಪಾಶ್ಚಿಮಾತ್ಯ ಭಾಷೆಗಳಲ್ಲಿ ಕಾಣಿಸಿಕೊಳ್ಳದ ಮತ್ತು ಚೀಣೀ ಹಾಗೂ ಜಪಾನೀ ಭಾಷೆಗಳಲ್ಲಿ ಎದುರಾಗುವ ಮತ್ತೊಂದು ಸಮಸ್ಯೆ (pitch) ಶೃತಿಯದು. ಅಲ್ಲಿ ಒಂದೇ ಶಬ್ದ ಶೃತಿಯ ಮೇಲೆ ಬೇರೆ ಅರ್ಥ ಪಡೆಯುತ್ತದೆ ! ಅನುವಾದಿಸುವಾಗ ಇಂತಹವಕ್ಕೆ ಸಮಾನಾಂತರ ಪದಗಳನ್ನು ಹುಡುಕುವುದು ಕಷ್ಟ.

    ಛಂದಸ್ಸು ಕೂಡ ಅನುವಾದನೆಯಲ್ಲಿ ಗುರುತರ ಸವಾಲಾಗಿ ಪರಿಣಮಿಸುತ್ತದೆ. ಎರಡು ಭಾಷೆಗಳ ನಡುವೆ ಸಾಮ್ಯತೆಯಿರುವ ಛಂದಸ್ಸನ್ನು ಹುಡುಕುವುದು ಬಹಳ ಕಷ್ಟದ ಕೆಲಸ. ಇಂತಹ ಸಂದರ್ಭದಲ್ಲಿ ಅನುವಾದಕನು ತನ್ನ ಸಾಮಾನ್ಯ ಜ್ಞಾನವನ್ನು ಉಪಯೋಗಿಸಿ ತನ್ನ ಭಾಷೆಗೆ ಅನುಗುಣವಾಗಿ ಛಂದಸ್ಸನ್ನು ಬದಲಿಸುವುದರಿಂದ ಅರ್ಥ ಮತ್ತು ಭಾವಗಳನ್ನು ಉಳಿಸುವಲ್ಲಿಗೆ ಮಹತ್ವ ನೀಡಿದಂತಾಗುತ್ತದೆ.

    ಮೂಲದಿಂದ ಬದಲಿಸಬೇಕಾದರೆ ಭಾಷೆಯ ವಿಷಯದಲ್ಲಿ ಎಷ್ಟರ ಮಟ್ಟಿಗೆ ಸ್ವಾತಂತ್ರ್ಯವನ್ನು ವಹಿಸಬೇಕು ಎನ್ನುವುದು ಎಷ್ಟರ ಮಟ್ಟಿನ ಸ್ವಾತಂತ್ರ್ಯದಲ್ಲಿ ಅರ್ಥವನ್ನು ಪುನರ್‌ ರೂಪಿಸಲು ಸಾಧ್ಯ ಎಂಬಲ್ಲಿ ನಿಂತಿದೆ. ಈ ರೀತಿಯ ಸ್ವಾತಂತ್ರ್ಯ ವಿಷಯದಲ್ಲಿ ರಾಮಚಂದ್ರಶರ್ಮರು ತಮ್ಮ ‘ ಈ ಶತಮಾನದ ನೂರು ಇಂಗ್ಲಿಷ್‌ ಗೀತೆಗಳು’ ಮುನ್ನುಡಿಯಲ್ಲಿ ನೀಡುವ ಬಿ.ಎಂ. ಶ್ರೀಯವರ ಉದಾಹರಣೆಯು ಇಲ್ಲಿ ಮಾರ್ಗದರ್ಶಿಯಾಗಿದೆ.

    alas for the rarity
    of Christian charity
    under the sun!

    ಎನ್ನುವುದು.

    ಅಹ ! ಎಲ್ಲಡಗಿತೋ,
    ಆರ್ಯ ಧರ್ಮದ ಕರುಣ,
    ಆರ್ಯ ಜನಗಳ ಮರುಕ,
    ಉರಿಯುವವನೇ ಬಲ್ಲ !

    ಭಾವ ಮತ್ತು ಅರ್ಥಗಳು ಮಬ್ಬಾಗದೇ ಭಾಷೆಯು ಕಂಡ ಬದಲಾವಣೆಗೆ ಇದು ಒಳ್ಳೆಯ ಸಾಕ್ಷಿ.
    ಜೇಮ್ಸ್‌ ಕರ್ಕ್‌ಪ್‌ನ "good Friday ಯನ್ನು ಅನುವಾದಿಸುವಾಗ ರಾಮಚಂದ್ರಶರ್ಮರು,

    ಬಳ್ಳಿ ಹಿಡಿದು ಎಳೆ ಹುಡುಗಿಯರು
    ಬಡಿದಾಡಿದಾಗ ಕೆಲವು ಹುಡುಗರಿಗೆ
    ರಾಗೋದ್ರೇಕ ಮೂರ್ಛೆ
    ಇನ್ನು ಕೆಲವರಿಗೆ ತಾಯ ಸೆರಗೊಂದೆ ರಕ್ಷೆ

    ಎಂಬಲ್ಲಿ ಪದ್ಯವು ಅನುವಾದಕ್ಕಿಂತ ಮಿಗಿಲಾಗಿ ಕನ್ನಡದಲ್ಲೇ ಬರೆದ ಮೂಲ ಕವನ ಎನ್ನುವಷ್ಟರ ಮಟ್ಟಿಗೆ ನಮ್ಮಲ್ಲಿ ಒಂದಾಗುತ್ತದೆ. ಅನುವಾದನೆಯ ಯಶಸ್ಸು ಇಲ್ಲೇ ಅಡಗಿರುವುದು.


    ಮುಖಪುಟ / ಸಾಹಿತ್ಯ ಸೊಗಡು


    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X