ಮನೆಯಲ್ಲಿ ಕನ್ನಡ ಬಳಸಲು ಎನ್‌ಆರ್‌ಐಗಳಿಗೆ ಕರೆ
ಪುಣೆ : ಕನ್ನಡ ನಾಡನ್ನು ತೊರೆದು ಹೊರ ನಾಡಿನಲ್ಲಿ ನೆಲೆಸಿರುವ ಎಲ್ಲ ಕನ್ನಡಿಗರೂ ಕನ್ನಡವನ್ನು ಉಳಿಸಿ, ಬೆಳೆಸಲು ತಮ್ಮ ಮನೆಗಳಲ್ಲಿ ಕಡ್ಡಾಯವಾಗಿ ಕನ್ನಡದಲ್ಲೇ ಮಾತನಾಡುವಂತೆ ಮರಾಠಿ - ಕನ್ನಡ ಸ್ನೇಹ ಸಂವರ್ಧನ ಕೇಂದ್ರದ ಕಾರ್ಯದರ್ಶಿ ಕೃ.ಶಿ. ಹೆಗಡೆ ಕರೆ ನೀಡಿದ್ದಾರೆ.
ಹೊರ ನಾಡಿನಲ್ಲಿ ನೆಲೆಸಿರುವ ನಾವು ಕನ್ನಡಿಗರು ಸಿಕ್ಕಾಗ ಕನ್ನಡದಲ್ಲೇ ವ್ಯವಹರಿಸುವುದರಿಂದ ಹಾಗೂ ಮನೆಯಲ್ಲಿ ಮಕ್ಕಳೊಂದಿಗೆ ಕನ್ನಡದಲ್ಲೇ ಮಾತನಾಡುವುದರಿಂದ ನಮ್ಮ ಭಾಷೆ - ಸಂಸ್ಕೃತಿಯ ಪುನರುಜ್ಜೀವನ ಆಗುತ್ತದೆ. ನಾವು ಯಾವುದೇ ಕಾರಣಕ್ಕೂ ನಮ್ಮ ಭಾಷೆಯ ಬಾಂಧವ್ಯ ಕಡಿದುಕೊಳ್ಳಬಾರದು ಎಂದು ಅವರು ಹೇಳಿದರು.
ಇಲ್ಲಿನ ಪಿಂಪ್ರಿಯ ಭೋಸರಿಯಲ್ಲಿ ಕನ್ನಡ ಕಲಿಕಾ ವರ್ಗ ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ಪುಣೆ, ಮುಂಬೈ ಹಾಗೂ ಮಹಾರಾಷ್ಟ್ರದ ಗಡಿ ಭಾಗಗಳಲ್ಲಿ ಕಟ್ಟಡ ನಿರ್ಮಾಣ ಕೆಲಸ ಮಾಡುವವರಲ್ಲಿ ಬಹುತೇಕ ಮಂದಿ ಕನ್ನಡಿಗರು. ಇವರಿಗೆ ತಮ್ಮ ಮಕ್ಕಳನ್ನು ಕನ್ನಡ ಶಾಲೆಯಲ್ಲಿ ಓದಿಸುವ ಹಂಬಲ ಇದೆ. ಆದರೆ ಅದಕ್ಕೆ ಅವಕಾಶ ಇಲ್ಲ.
ಇಂತಹ ಸ್ಥಳ ಗುರುತಿಸಿ ಕನ್ನಡ ಶಾಲೆ ತೆರೆಯಲು ಕರ್ನಾಟಕ ಸರಕಾರ ಮಹಾರಾಷ್ಟ್ರ ಸರಕಾರದೊಂದಿಗೆ ಮಾತುಕತೆ ನಡೆಸಬೇಕು ಎಂದು ಆಗ್ರಹಿಸಿದರು. ಕಾರ್ಯಕ್ರಮದಲ್ಲಿ ರೇಣುಕಾ ಪ್ರಸಾದ್ ಜಾದವ್ ಮಾತನಾಡಿದರು.
ಮುಖಪುಟ / ಸಾಹಿತ್ಯ ಸೊಗಡು











Click it and Unblock the Notifications