ಶಿಕಾಗೋ ದಾಸ ದಿನಾಚರಣೆಯಲ್ಲಿ ಕೀರ್ತನಾ ವಿಲಾಸ...
* ನಳಿನಿ ಮಯ್ಯ
ಶಿಕಾಗೋ : ಅಕ್ಟೋಬರ್ 13ರ ಶನಿವಾರ ಅಮೆರಿಕದ ಶಿಕಾಗೋ ನಗರದಲ್ಲಿ ಧಾರಾಕಾರ ಮಳೆ. ಅಂದು ಅಮೆರಿಕದಲ್ಲಿರುವ ಕನ್ನಡಿಗರು ಬಾಲಾಜಿ ದೇವಸ್ಥಾನದಲ್ಲಿ ಸೇರಿದ್ದರು. ಹೊರಗೆ ಮಳೆ ಸುರಿಯುತ್ತಿದ್ದರೆ, ದೇವಾಲಯದ ಸಭಾಂಗಣದಲ್ಲಿ ಸಂಗೀತದ ಹೊಳೆಯೇ ಹರಿದಿತ್ತು.
ವಿದ್ಯಾರಣ್ಯ ಕನ್ನಡ ಕೂಟದ ಆಶ್ರಯದಲ್ಲಿ ನಡೆದ ದಾಸ ದಿನಾಚರಣೆ ಅಂಗವಾಗಿ ಏರ್ಪಡಿಸಲಾಗಿದ್ದ ಸಂಗೀತ ಕಾರ್ಯಕ್ರಮದಲ್ಲಿ ಗಾನಸುಧೆಯನ್ನು ಸವಿಯಲು, ಸುರಿಯುವ ಮಳೆಯನ್ನೂ ಲೆಕ್ಕಿಸದೆ ನೂರಾರು ಸಂಖ್ಯೆಯಲ್ಲಿ ಸಂಗೀತಾಸಕ್ತರು ಆಗಮಿಸಿದ್ದರು.
ಬೆಳಗ್ಗೆ 11 ಗಂಟೆಗೆ ಆರಂಭವಾದ ಸಂಗೀತ ಕಾರ್ಯಕ್ರಮ ರಾತ್ರಿ 10 ಗಂಟೆಯವರೆಗೂ ನಿರಂತರವಾಗಿ ಸಾಗಿತು. ಬಾಲ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಮೊದಲು ಸ್ಥಳೀಯ ಮಕ್ಕಳಿಂದ ದಾಸರ ಕೀರ್ತನೆಗಳನ್ನು ಹಾಡಿಸಲಾಯಿತು. ಹವ್ಯಾಸಿ ಗಾಯಕರೂ ತಮ್ಮ ಪ್ರತಿಭೆಯ ಪ್ರದರ್ಶ ಮಾಡಿದರು.
ಸಂಜೆ ನಡೆದ ಸಂಗೀತ ಕಚೇರಿಯಲ್ಲಿ ರಾಜಲಕ್ಷ್ಮೀ ಕೃಷ್ಣನ್ ಅವರ ಕಂಠಸಿರಿಗೆ ಪ್ರಸಾದ್ ರಾಮಚಂದ್ರನ್ ಪಟೀಲು ಮತ್ತು ರವಿಶಂಕರ್ ಮೃದಂಗ ಮತ್ತಷ್ಟು ಮೆರುಗು ನೀಡಿತು. ಎರಡನೇ ಕಚೇರಿಯಲ್ಲಿ ರಾಜೇಶ್ವರಿ ಪರಿತಿ ಅವರ ವೀಣಾವಾದನ ಮತ್ತು ವಿನೋದ್ ಗೋಪಿನಾಥ್ ಅವರ ಮೃದಂಗ ಮುದ ನೀಡಿತು.
ಹೊರಗೆ ಸುರಿಯುತ್ತಿದ್ದ ಮಳೆಯಲ್ಲಿ ನೆನೆಯಬಾರದೆಂದು ಎಚ್ಚರಿಕೆ ವಹಿಸಿದವರು, ಒಳಗೆ ಗಾನಸುಧೆಯಲ್ಲಿ ಮಿಂದು ಆನಂದಿಸಿದರು. ಕಲ್ಯಾಣಿ ಪ್ರಸಾದ್ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.
(ಇನ್‌ಫೋ ವಾರ್ತೆ)
ಮುಖಪುಟ / ಸಾಹಿತ್ಯ ಸೊಗಡು











Click it and Unblock the Notifications