• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

‘ಸೀಳ್ಗವನಗಳು’-ಒಂದು ಅಪೂರ್ವ ಕವನ ಸಂಕಲನ :ಭಾಗ-3

By Staff
|

ಮಹಾಕವಿ ಪ್ರಗಾಥ ಕಥನ

ಇಂಥವರ ಸುತ್ತ ಮುತ್ತಣವರ ಬಗ್ಗೆ ಕವಿಗೆ ಅನುಕಂಪ. ನವಿರಾದ ಹಾಸ್ಯಕ್ಕೆ ವಸ್ತು ಮಾಡಿಕೊಂಡು ಒಂದು ಕಥನ ಕವನವನ್ನು ಸಹ ಹೆಣೆದಿದ್ದಾರೆ(ಶೀರ್ಷಿಕೆ ಈ ವಾಕ್ಯ- ಬೃಂದದ ಕೊನೆಗೆ ಇದೆ) : ಒಬ್ಬ ಮಹಾಕವಿ ಇದ್ದನಂತೆ. ಅವನು ‘ಹಾಡೆ, ಗಂಟಲು ಇಂಪು, ನೋಡೆ ಸುಂದರ ರೂಪ, ಮಾತನಾಡತೊಡಗಿದೊಡೆ, ಉಲಿದುಲಿವ ಸೊಂಪು !’ ಇಂತಹವರನ್ನು ಕಂಡರೆ ಕೆಲವರಿಗೆ ಸ್ನೇಹ, ಸಂಬಂಧ ಬೆಳೆಸುವ ಹಂಬಲ.

ಅವ ‘ಕಾವ್ಯ ಓದಿದ್ದೆಲ್ಲೋ , ಪಾಠ ಕಲಿತಿದ್ದೆಲ್ಲೋ, ಅವನ ಸರಕಿನ ಸೊತ್ತು ಬಂತು ಎಲ್ಲಿಂದೋ’. ಆದರೂ ತನ್ನ ಕೊರಳಿನ ಸವಿಯ ಎಲ್ಲ ಮುಗ್ಧರೂ ಸವಿಯುತ್ತಿದ್ದಾರೆಂದೇ ಅವನ ಬಲೂನು ತುಂಬಾ ಉಬ್ಬಿದೆ. ‘ಅತಿ ಸರ್ವತ್ರ ವರ್ಜಯೇತ್‌’ಅರಿಯದ ಈ ಹುಂಬನ ಕವನ ಕಾನನದ ಗಿಡಗಂಟೆಗಳ ಧ್ವಾನ ಅನುರಣನ ಅವನ ಅರ್ಧಾಂಗಿಗೂ ಪ್ರಾಣಸಂಕಟ ತಂದೊಡ್ಡುತ್ತದೆ. ಕೇಳಿಯೇ ಬಿಡುತ್ತಾಳೆ: ‘ಎಲ್ಲಿಂದ ಇಷ್ಟೆಲ್ಲ ಕವನ ಗಳಿಸಿದಿರಿ ?’ ನಮ್ಮ ಅಭಿಜಾತ ಸ್ವಾನುಭವೀ ಸ್ವೋಪಜ್ಞ ಕವಿಗೆ ಕೋಪವೋ ಕೋಪ. ಮುನಿದು, ಇಲ್ಲ ಸಿಟ್ಟು ಅಮರಿ, ‘ಏನು ತಿಳಿದೆಯೇ ನೀನು ? - ಇಂಥ ಪ್ರಶ್ನೆ ಕೇಳೆ ದಿಟ್ಟತನವೆಷ್ಟೇ ? । ಹುಟ್ಟು ಕವಿ ನಾನಿಹೆನು, ಕಳ್ಳ ಕವನಗಳಲ್ಲ । ಉದರದಿ ಜನಿಸೆ(ನಾ) ಗೈವೆ ವಮನ!’- ಎನ್ನುತ್ತಾರೆ. ಗಂಡನ ಮಾತನ್ನ ಕೇಳಿ ಗರ ಬಡಿದು, ಅವನ ಪ್ರಾಣ ಪ್ರಿಯೆ ‘ಚಿರ ಮೂಕಾಂಬಿಕೆ’ಯಾದಳಂತೆ !

ಕಾರಂತರು ಬಹುಶ್ರುತರು. ಅವರ ಬರವಣಿಗೆಯಲ್ಲಿ ಗದ್ಯರಚನೆಗಳಲ್ಲಿ ಇದ್ದಂತೆಯೇ, ಇಲ್ಲೂ ಅರ್ಥಪೋಷಣೆಗಾಗಿ ಸಂಸ್ಕೃತದ ನುಡಿಗಟ್ಟುಗಳನ್ನ, ನಾಣ್ಣುಡಿಗಳನ್ನ, ನ್ಯಾಯಗಳನ್ನ, ಇತರ ಭಾಷೆಯ ಪದವಿಶೇಷಗಳನ್ನ ಸಹಜವಾಗಿ ಅನಾಯಾಸವಾಗಿ ಬಳಸಿಕೊಳ್ಳುವುದುಂಟು. ಈ ಉಲ್ಲೇಖಗಳು ಪುಂಖಾನುಪುಂಖವಾಗಿ ಅಲ್ಲದಿದ್ದರೂ ಅಲ್ಲಲ್ಲಿ ಬಂದಾಗ ಅವುಗಳ ಮೂಲ ಸನ್ನಿವೇಶ, ಅಂತರಾರ್ಥದ ಪರಿಚಯವಿಲ್ಲದಿದ್ದರೆ, ಅರ್ಥವಾಗದ ಭಾಷೆಯ ಸುಮಧುರ ಸಂಗೀತವೊಂದನ್ನ ಕೇಳಿದಂತೆ ಅಲ್ಪತೃಪ್ತಿಯ ಅತೃಪ್ತಿಯ ಯೋಗ-ಭಂಗವಾದೀತು!’ ‘ತೇಜೋ ಬಲಂ ಬಲಂ ’, ‘ಅಹಂ ಬ್ರಹ್ಮಾಸ್ಮಿ’ , ‘ಪದ್ಮ-ಪತ್ರಂ ಇವ ಅಂಭಸಿ’ (‘ಬಿಜ್ಜೆವಳರು’(ತ್ಭ)=ವಿದ್ವಾಂಸರು (ತ್ಸ) ಕವನ) ಇತ್ಯಾದಿ. ಪರಿಹಾರ ? ಸಂದರ್ಭ ಸೂಚಿಯ ಮಾದರಿ ಒಂದು ಕೈಗನ್ನಡಿ.

ಪದ್ಯಗಳು ನವ್ಯ ಶೈಲಿಯ, ಮುಕ್ತ ಛಂದಸ್ಸಿನಲ್ಲಿ ಬಹಳವಿದ್ದರೂ ಕಾರಂತರು ಮನಸ್ಸು ಮಾಡಿದರೆ ಛಂದೋಬದ್ಧವಾಗಿ ಬರೆಯ ಬಲ್ಲರು. ನಿದರ್ಶನಕ್ಕೆ, ಎರಡು ಪದ್ಯಗಳನ್ನು ನೋಡಿ : ‘‘ಗಂಡು ಹೆಣ್ಣು ’’ವಿ ನಲ್ಲಿ

ಸ್ನೇಹ । ಮುಗ್ಧ । ಬಾಳಿ ।ನಲ್ಲಿ ।
ಗಂಡು ।ಹೆಣ್ಣು। ಒಂದ।ನೊಂದು।
ಅಂಟಿ।ಕೊಂಬ।ಲೀಲೆ ।ಯಾಳಗೆ।
ಯಾಕೆ।ಸಂಶಯ ?।।


ಇಲ್ಲಿ ಮೂರು ಮಾತ್ರೆಗಳ ನಾಲ್ಕು ಗಣಗಳ ಪಂಕ್ತಿಗಳ ಬಂಧವಿದೆ. ಹಾಗೆಯೇ, ‘ ಹೆಬ್ಭಾರತ ಗೀತೆ’ಯಲ್ಲಿ -

ಭಂಡರು। ಲಂಡರು। ಆಳಲು। ನಿಂದಿರೆ।
ಚಿಂತೆಯ।ದೇಕೆ।ನಿಮಗೇನ್‌। ತೊಂದ(ರೆ?)।
ಆದರೆ। ಹೋದರೆ। ಹತ್ತಿಯು। ಬೆಳೆದರೆ।
ಅಜ್ಜಿಗೆ। ಒಂದು।ಪಟ್ಟೆಯ ।ಸೀರೆ !।।


ಇಲ್ಲಿ, ಐದು ಮಾತ್ರೆಗಳ ನಾಲ್ಕು ಗಣಗಳುಳ್ಳ ಮೊದಲನೆಯ, ಮೂರನೆಯ ಪಂಕ್ತಿ ಮತ್ತು ಐದು, ಮೂರು, ಐದು , ಮೂರು ಮಾತ್ರೆಗಳ ಎರಡನೆಯ ನಾಲ್ಕನೆಯ ಸಾಲುಗಳಿವೆ. ಹಾಗೆ ಛಂದೋಬದ್ಧವಾಗಿ ಬರೆಯ ಬೇಕೆಂಬ ಕಟ್ಟು ಪಾಡಿಗೆ ಒಳಗಾಗುವ ಮನಸ್ಸು ಕಾರಂತರದು ಅಲ್ಲವೆಂಬ ಮಾತು ಎಲ್ಲರಿಗೂ ಗೊತ್ತಿದ್ದೇ.

ಏನೂ ಕಟ್ಟು ಪಾಡಿಗೆ ಒಳಗಾಗದೇ , ಬೇಕಾ ಬಿಟ್ಟಿಯಾಗಿರುವ ಪುಂಡರನ್ನ ಕಂಡರೆ ಕಾರಂತರಿಗೆ ಎಲ್ಲಿಲ್ಲದ ಕೋಪ. ಎಲ್ಲೋ ಅಲ್ಲೊಬ್ಬ, ಇಲ್ಲೊಬ್ಬ ನಿಸ್ವಾರ್ಥ ಮುತ್ಸದ್ದಿಯನ್ನ ಬಿಟ್ಟರೆ ಉಳಿದೆಲ್ಲ ನಾಯಕರ ಅಥವಾ ಮುಂದಾಳುಗಳ ಕೈಯಲ್ಲಿ ಸಿಕ್ಕು ನಮ್ಮ ಭಾರತ ದೇಶ ನರಳುತ್ತಿರುವುದನ್ನು ಕಂಡು ‘ ಅಯ್ಯೋ ಭಾರತವೇ’ ಎಂದು ಕಂಬನಿದುಂಬಿ ಆಕ್ರೋಶಿಸಿದ್ದಾರೆ.

‘ವಂದೇಮಾತರಂ ಗೀತ ಹಾಡ್ತಾರ । ಕೊಂದು ಬಿಟ್ಟಾರ ಆ ಅಮ್ಮನ ಅನಕರ ।। ಕಾಣಬಾರದೇನ್‌ ನಮ್ಮ ಸರಕಾರ । ಸೊಕ್ಕಿ ಮಿಕ್ಕಿ ನಡೀತದೆ ಅದರ ದರಬಾರ । ಸೇರ್ಕೊಂಡವರೌ ಒಳಗೆ ಕಳ್ಳ ಕಾಕರ । ಹಗಲು ದರೋಡೆ ಮಾಡೋಕೆ ಹೊಂಟಾರ । ಸತ್ಯನ್ನ ಸುಳ್ಳೆಂದು ವಾದ ಮಾಡ್ತಾರಾ। ಸುಳ್ಳೇ ಸತ್ಯ - ಎಂದು ಒದರಿ ಸಾರ್ತಾರಾ ।...’

- ಇಂಥ ದೇಶಕ್ಕೆ ದೇಶವನ್ನೇ ನುಂಗುವ ಈ ಸಮರ್ಥರನ್ನು ವಾಚಾಮಗೋಚರವಾಗಿ ಬೈಯುತ್ತ, ಶಾಲಿನೇಟುಗಳನ್ನು ಸಮರ್ಪಿಸುತ್ತಾ, ಕೊನೆಗೆ ‘ವಂದೇ ಮಾತರಂ ಗೀತ ಹಾಡಿಯೇ ಹಾಡ್ತಾರ,। ಅಮ್ಮನ ಕೊರಳ ಹಿಚುಕಿ ಹಿಚುಕಿ ರಾಗ ತೆಗೀತಾರ !’ ಎಂದು ಕವನವನ್ನು ಮುಗಿಸುತ್ತಾರೆ.

ಇಂಥ ಆಷಾಡಿಭೂತತನದ ಪುಡಾರಿಗಳನ್ನು ನೇರವಾಗಿಯೇ ತರಾಟೆಗೆ ತೆಗೆದುಕೊಳ್ಳುವ, ದೇಶದ ಕುಂದುಕೊರತೆಗಳನ್ನ ಒಪ್ಪಿಕೊಂಡು ಅವನ್ನು ಪರಿಹರಿಸುವ ಬಗ್ಗೆ ಯೋಚನೆಯ ಲಹರಿಗಳನ್ನ ಹರಿಬಿಡುವ ಹಲವು ಕವನಗಳು ‘ಸೀಳ್ಗವನಗಳ’ಲ್ಲಿವೆ. ‘ಭಾರತದಿ ಜನಿಸೆ’, ‘ನೀ ದೊಡ್ಡವನಾಗಲು’, ‘ಎಚ್ಚರಿಕೆ ನೋಡು ’, ‘ವಂದೇ ಮಾತರಂ’, ‘ಕಟ್ಟುವೆವು ಕುಟ್ಟುವೆವು’, ‘ಜನನೀ ಜನ್ಮ ಭೂಮಿಶ್ಚ’, ‘ಭಾರತವು ಭಾರತವೇ’ , ‘ಹೆಬ್ಭಾರತ ಗೀತೆ’ , ‘ಎಲ್ಲಿಂದೆಲ್ಲಿಗೆ ’ಮುಂತಾದವು ‘ಕಡಲ ತೀರದ ಭಾರ್ಗವ’ರು ನೈವೇದ್ಯಕ್ಕಿಟ್ಟ ಈ ಬಗೆಯ ಹಣ್ಣುಗಳು- ಕೆಲವು ದೋರೆಗಾಯಿಗಳು, ಕೆಲವು ಪಕ್ವವಾದವು. ಆದರೆ, ಎಲ್ಲವೂ ನ್ಯಾಯ- ಅನ್ಯಾಯಗಳ ಸಂಕೀರ್ಣತೆಯನ್ನ ಗಾಢವಾಗಿ ಅನುಭವಿಸಿದವರ ನೀತಿ ನಿಷ್ಠರ ಒಳತೋಟಿ ಇವು.

ಕಲಾವಿದ ಕೆ.ಕೆ. ಹೆಬ್ಬಾರರ ಒಂದು ಅಪೂರ್ವ ರೇಖಾಚಿತ್ರದಲ್ಲಿ ನರ್ತಕ ಭಂಗಿಯಲ್ಲಿ ಕಾರಂತರು ಇದ್ದಾರೆ. ಅವರ ಒಂದು ಕೈ ಚಂದ್ರನನ್ನು ಮುಟ್ಟಿದರೆ, ಇನ್ನೊಂದು ಕೈ (ಬರೆಯುವ ಸಾಧನವಾದ) ಹಕ್ಕಿಯ ಗರಿಯಾಂದನ್ನ ಹಿಡಿದಿರುವುದು ಅವರ ಮನೋಭಾವವನ್ನು ಚೆನ್ನಾಗಿ ಪ್ರತಿಬಿಂಬಿಸುತ್ತದೆ. ಪ್ರಸ್ತುತ ಇಲ್ಲಿ, ಕಾವ್ಯ ವಿಹಾರದಲ್ಲಿ ಕಾರಂತರು ‘ರಾಮಣೀಯಕವೆಂದು ಬಿಸುಸುಯ್ವದು ಅದು ಕವಿತೆ; ಭೂಮಿಗೆ ಅದನು ಎಟಕಿಸುವುದು ರಾಷ್ಟ್ರಕತೆ’ಎನ್ನುವುದನ್ನು ನೆನಪಿಸುತ್ತಾರೆ.

ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X