ಹಾಸ್ಯರಸದಲ್ಲಿ ಕುಮಾರವ್ಯಾಸನೆ ಮುಂದು

ವಿರಾಟಪರ್ವದ ಕಥಾನಕ ಕುಮಾರವ್ಯಾಸನಲ್ಲಿ ಹಾಸ್ಯದ ಹೊನಲಾಗಿದೆ. ಈ ಹೊನಲು ಪಂಪನಲ್ಲಿಲ್ಲ . ಕುಮಾರವ್ಯಾಸ ರಾಜಪುತ್ರ ಉತ್ತರನನ್ನು ಮುಂದಿರಿಸಿಕೊಂಡು ಹಾಸ್ಯ ಪ್ರಸಂಗವನ್ನು ಪ್ರಕರ್ಷಾವಸ್ಥೆಗೆ ತಂದಿದ್ದಾನೆ. ಅರಮನೆಯಲ್ಲಿ ಹೆಂಗಳೆಯರ ಮುಂದೆ ತಾನೇ ವೀರಾಧಿವೀರನೆಂದು ಬಡಾಯಿ ಕೊಚ್ಚಿಕೊಂಡ ಉತ್ತರ ಕುಮಾರ ಯುದ್ಧರಂಗದಲ್ಲಿ ಕುರುಸೇನೆಯನ್ನು ಕಂಡು ಹಸಿದ ಮಾರಿಯ ಮಂದೆಯಾಳ್‌ ನುಗ್ಗಿದ ಕುರಿಯಂತಾದೆನೆಂದು ಬಡಬಡಿಸಿ ಬೆಚ್ಚಿ ಬೆದರಿ ರಣಾಂಗಣದಿಂದ ಓಡುವ ದೃಶ್ಯಗಳೆಲ್ಲ ಮೂಲದಲ್ಲಿಲ್ಲದ ಕಲ್ಪನೆ, ಕುಮಾರವ್ಯಾಸನ ಹಾಸ್ಯರಸದ ಹೊನಲು. ಹಾಗೇ, ಪಂಪನಲ್ಲಿಲ್ಲದೆ ಗದುಗಿನ ಭಾರತದಲ್ಲಿ ಮಾತ್ರವೇ ಕಾಣುವಂಥಾದ್ದು ಕೃಷ್ಣ ದೌತ್ಯ ಪ್ರಸಂಗದಲ್ಲಿ ಒಂದು ಸನ್ನಿವೇಶ. ಕುರುಭವನವೆಲ್ಲ ಕಾದಿರಲು ಸುಯೋಧನನ ಆಶಯವನ್ನು ಹುಸಿಯಾಗಿಸಿ ಕೃಷ್ಣ ನೇರವಾಗಿ ಬಡ ವಿದುರನ ಮನೆಗೆ ಬಂದ ಸಂದರ್ಭ. ತಕ್ಕ ಆತಿಥ್ಯಕ್ಕೆ ಏನೂ ಇಲ್ಲದೆ ವಿದುರ ನೊಂದಾಗ ದೇವ ದೇವ ಒಕ್ಕುಡುತೆ ಹಾಲನ್ನೇ ಹೊಳೆಯಾಗಿ ಹರಿಸಿದ ಎಂಬ ಪವಾಡದ ಕಲ್ಪನಾಚಿತ್ರ ಭಕ್ತ ಕವಿಯ ಕೃತಿಯಲ್ಲಿ ಸಿಗುತ್ತದೆ. ಇದನ್ನೆಲ್ಲ ಪಂಪ ಒಂದೊಂದೇ ಮಾತಿನಲ್ಲಿ ಹೇಳಿಕೊಂಡು ಹೋಗುತ್ತಾನೆ. ಬಹಳ ವಿಶ್ಲೇಷಣೆಗೆ ಹೋಗುವುದಿಲ್ಲ. ’

ಕರ್ಣನೆಂದರೆ ಕೇವಲ ಕಲಿಯಲ್ಲ ಅಯ್ಯಗಳಿರಾ..

‘ಕೃಷ್ಣ - ಕರ್ಣರ ಭೇಟಿ ಇಬ್ಬರಲ್ಲೂ ಇದೆ, ತುಸು ಭಿನ್ನವಾಗಿದೆ. ಪಂಪನ ಕೃಷ್ಣ ಕರ್ಣನ ಜನ್ಮ ವೃತ್ತಾಂತವನ್ನು ಹೇಳುತ್ತಾ, ಸುಯೋಧನನಿಗೂ ಈ ಗುಟ್ಟು ಗೊತ್ತು ಎಂದು ವಿಶದಪಡಿಸುತ್ತಾನೆ. ಆ ಸಂದರ್ಭವನ್ನು ಹೇಳುತ್ತಾ ಕವಿ ಮತ್ತೊಂದು ಸುಂದರ ಪ್ರತಿಮೆ ನಿರ್ಮಿಸುತ್ತಾನೆ. ಹಿಂದೊಮ್ಮೆ ಕರ್ಣ- ಸುಯೋಧನರು ಬೇಟೆಗೆ ಹೋಗಿದ್ದ ಸಮಯದಲ್ಲಿ ಅವರಿಬ್ಬರೂ ಸತ್ಯಂತಪ ಮುನಿಗಳ ಆಶ್ರಮಕ್ಕೆ ಬಂದಾಗ ಋಷಿಗಳು ಒಂದೇ ಆಸನ ತರಿಸಿ ಕರ್ಣನನ್ನು ಕೂರಿಸಿದರು. ಇದರಿಂದ ಸಿಡಿದೆದ್ದ ಸುಯೋಧನ, ಆನಿರೆ ಮೀಂಗುಲಿಗಂಗೇಕೆ ದಯೆಗೈದಿರಿ..? ಎಂದು ಆರ್ಭಟಿಸಿದಾಗ ಮಹಾಮುನಿಗಳು ಕರ್ಣನನ್ನು ಆಚೆ ಕಳಿಸಿ ಸುಯೋಧನನೊಬ್ಬನಿಗೇ ಕರ್ಣ- ಜನ್ಮ ವೃತ್ತಾಂತವನ್ನು ತಿಳಿಸಿದರು ಅನ್ನುವ ಒಂದು ವಿವರಣೆ ಪಂಪನಲ್ಲಿ ಬರುತ್ತದೆ. ಇದಕ್ಕೆ ಉತ್ತರವಾಗಿ ಕರ್ಣ ಕೃಷ್ಣನಿಗೆ ತಮ್ಮಿಬ್ಬರ ಸ್ನೇಹದ ಗಾಢತೆಯ ಪರಿಚಯ ನೀಡುತ್ತಾನೆ. ನೆತ್ತಮನಾಡಿ ಭಾನುಮತಿಯಾಳ್‌... ಪದ್ಯದಲ್ಲಿ . ಇಲ್ಲಿ ಕರ್ಣ ಸುಯೋಧನ ಪತ್ನಿ ಭಾನುಮತಿಯಾಡನೆ ಪಗಡೆಯಾಟದಲ್ಲಿ ತಾನು ಗೆದ್ದುಕೊಂಡ ಮುತ್ತಿನಹಾರವನ್ನು ಆಕೆ ಕೊಡದಿದ್ದಾಗ ಕೊರಳಿಗೆ ಕೈ ಹಾಕಿ ಕಿತ್ತುಕೊಂಡ, ಹಾರ ಕಡಿದು ಮುತ್ತುಗಳು ಚೆಲ್ಲಾಡಿದವು, ಗಾಬರಿಯಾದ ಕರ್ಣ ಸ್ತಂಭಿತನಾಗಿ ನಿಂತಾಗ ಸುಯೋಧನ, ಆಯ್ದು ಕೊಡಲೇ ಕರ್ಣ.. ಎಂದು ಕೇಳುತ್ತಾನೆ. ಪರಪುರುಷರಿಗೆ ಪ್ರವೇಶವಿಲ್ಲದ ಅಂತಃಪುರದೊಳಗೆ ನಡೆದ ಈ ಘಟನೆ ತನ್ನ ಗೆಳೆಯನಿಗೆ ತನ್ನ ಮೇಲಿರುವ ವಿಶ್ವಾಸದ ಮೇರುವನ್ನು ತೋರುತ್ತದೆ. ಆದ್ದರಿಂದ ಆತನಿಗೆ ತಾನು ಘಾತಕತನ ತೋರಲಾರೆ ಎನ್ನುವ ಪರಮ ಮೈತ್ರಿಯ ಉತ್ತುಂಗ ಚಿತ್ರಣ ನಮಗಿಲ್ಲಿ ದೊರಕುತ್ತದೆ. ಇದು ಬಹುಶಃ ಅರಿಕೇಸರಿ ಪಂಪರ ನಡುವಿನ ಸ್ನೇಹದ ಪಡಿನೆಳಲೂ ಇರಬಹುದು. ಇಂಥ ಚಿತ್ರಣಗಳನ್ನು ಕುಮಾರವ್ಯಾಸ ಭಾರತದಲ್ಲಿ ಕಾಣಲಾರೆವು.

ಮಹಾನ್‌ ಕಥೆಗಾಗಿ ಮಹಾನ್‌ ರೂಪಕಗಳು

ಕುಮಾರವ್ಯಾಸನಲ್ಲಿ ಅಮೋಘ ರೂಪಕಗಳನ್ನು ನೋಡುತ್ತೇವೆ. ಕುಮಾರವ್ಯಾಸ ರೂಪಕ ಸಾಮ್ರಾಜ್ಯ ಚಕ್ರವರ್ತಿ. ಕೃಷ್ಣದೌತ್ಯ ಪ್ರಸಂಗದ ತುಂಬ ಆತನ ಭಕ್ತಿಯ ಛಾಯೆ ತುಂಬಿದೆಯಾದರೂ ಕರ್ಣನ ಭೇಟಿಯ ಪ್ರಸಂಗದಲ್ಲಿ ರೂಪಕ ಮಾಯೆ ಕಾಣುತ್ತೇವೆ. ತನ್ನ ಹುಟ್ಟಿನ ಗುಟ್ಟನ್ನು ರಟ್ಟು ಮಾಡಿದ ಮುರವೈರಿ ಹಾಗೆ ಮಾಡುವುದರಿಂದ ಕೌರವೇಂದ್ರನ ಕೊಂದೆ ಎಂದು ಕರ್ಣ ನೊಂದುಕೊಳ್ಳುತ್ತಾನೆ. ಇಲ್ಲಿನ ಈ ಕೌರವೇಂದ್ರನ ಕೊಂದೆ ನೀನ್‌ ಎಂದ ಮಾತು ಬಹು ಮಾರ್ಮಿಕವಾದ್ದು, ಅರ್ಥಗರ್ಭಿತವಾದ್ದು . ಅತ್ಯಂತ ಸುಂದರ ರೂಪಕ.’


ಮುಖಪುಟ / ಸಾಹಿತ್ಯ ಸೊಗಡು
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+