ಡಾಲರ್‌ಗಳ ಗುಣಾಕಾರಸಹಬಾಳ್ವೆಯ ಭಾಗಾಕಾರ!
*ಲಕ್ಷ್ಮಿಕಾಂತ್, ಫ್ರೀಮಾಂಟ್, ಕ್ಯಾಲಿಪೋರ್ನಿಯಾ
ಡಾಲರ್‌ಗಳ ಗುಣಾಕಾರ ಲೆಕ್ಕದಲ್ಲಿ ನಿಪುಣರಾದ ಕೆಲವರಲ್ಲಿನ ಲೋಭತನ ಇನ್ನಷ್ಟು ಇನ್ನಷ್ಟು ಹೆಚ್ಚುತ್ತಲೇ ಇರುವಂಥದ್ದು . ಹಣ, ಅದರಲ್ಲೂ ಅಮೆರಿಕಾ ಹಣ- ಡಾಲರ್ ಎಂದರೆ ಬಾಯಿ ಬಿಡುವ ನನ್ನ ಕೆಲವು ಗೆಳೆಯರ ನಡವಳಿಕೆಯೇ ಈ ಲೇಖನಕ್ಕೆ ಹೂರಣ.
ನನಗೊಬ್ಬ ಗೆಳೆಯನಿದ್ದಾನೆ, ಎರಡು ವರ್ಷಗಳ ಹಿಂದಷ್ಟೇ ಅಮೆರಿಕಾಗೆ ಬಂದವ. ತಾಯ್ನೆಲ ಭಾರತದಲ್ಲಿ ಆತ ಸ್ಥಿತಿವಂತನಾಗಿರುವುದು ಮಾತ್ರವಲ್ಲದೆ ಅಮೆರಿಕಾದಲ್ಲೂ ಒಳ್ಳೆಯ ಸಂಪಾದನೆ (ಆರಂಕಿಗಳಲ್ಲಿ) ಹೊಂದಿದ್ದಾನೆ. ಮೂರು ವಾರಗಳ ಹಿಂದೆ, ಯಾವುದಾದರೂ ಕನ್ನಡ ಸಂಘದ ಕಾರ್ಯಕ್ರಮ ಇದೆಯಾ ಎಂದು ಆತ ನನ್ನನ್ನು ವಿಚಾರಿಸಿದ. ಪಾಲೊ ಆಲ್ಟೊದಲ್ಲಿ ಕನ್ನಡ ಫಿಲ್ಮ್ ಮ್ಯೂಸಿಕ್ ಆರ್ಕೇಸ್ಟ್ರಾ ಇರುವುದನ್ನು ಆತನ ಗಮನಕ್ಕೆ ತಂದೆ. ವಿಶ್ವ ವ್ಯಾಪಾರ ಕೇಂದ್ರದ ಮೇಲೆ ನಡೆದ ದಾಳಿಯ ಸಂತ್ರಸ್ತರಿಗೆ ನೆರವು ನೀಡಲು ಏರ್ಪಾಟಾದ ಕಾರ್ಯಕ್ರಮವದು. ಆರ್ಕೇಸ್ಟ್ರಾ ಕಾರ್ಯಕ್ರಮದ ವಿಷಯ ಕೇಳಿದ ತಕ್ಷಣ ಆತ ನನ್ನನ್ನು ಕೇಳಿದ್ದೇನು ಗೊತ್ತಾ ?
ಕಾರ್ಯಕ್ರಮ ಉಚಿತ ತಾನೆ?- ಆತನ ಪ್ರಶ್ನೆಗೆ, ಇಲ್ಲ , ಅದು ಉಚಿತ ಕಾರ್ಯಕ್ರಮವಲ್ಲ . ಕಾರ್ಯಕ್ರಮಕ್ಕೆ 7 ಡಾಲರ್ ಪ್ರವೇಶ ಶುಲ್ಕವಿರುವುದೆಂದೂ, ಆ ಹಣ ಡಬ್ಲ್ಯೂಟಿಸಿ ಸಂತ್ರಸ್ತರ ನೆರವಿಗೆ ಬಳಕೆಯಾಗುವುದೆಂದೂ ಹೇಳಿದೆ. ಆತ ತಕ್ಷಣವೇ ಹೇಳಿದ- ಡಬ್ಲ್ಯೂಟಿಸಿ ಸಂತ್ರಸ್ತರಿಗೆ ನಾನೇಕೆ ಹಣ ನೀಡಬೇಕು? ಆರ್ಥಿಕವಾಗಿ ಸುಸ್ಥಿತಿಯಲ್ಲಿರುವ ವ್ಯಕ್ತಿಯಾಬ್ಬನ ನಡವಳಿಕೆಯಿದು.
ಈತನೊಬ್ಬನೇ ಅಲ್ಲ , ಇಂಥ ಮನೋಭಾವದವರ ಸಂಖ್ಯೆ ದೊಡ್ಡದಿದೆ ಎನ್ನುವುದನ್ನು ನಾನು ಖಚಿತವಾಗಿ ಹೇಳಬಲ್ಲೆ . ಡಬ್ಲ್ಯೂಟಿಸಿ ದಾಳಿಯಲ್ಲಿ 250 ಭಾರತೀಯ ಸೋದರರು ಸಾವನ್ನಪ್ಪಿದ್ದಾರೆ ಅನ್ನುವ ಸುದ್ದಿಯಿಂದ ಆತ ವಿಚಲಿತನಾಗುವುದಿಲ್ಲ . ಇಲ್ಲದವರಿಗೆ ನೆರವು ನೀಡುವುದರಲ್ಲಿನ ಸಂತೋಷವನ್ನು ಇವರೆಂದೂ ಅನುಭವಿಸಲಾರರು.
ಆಶ್ಚರ್ಯದ ಸಂಗತಿಯೆಂದರೆ- ಅನೇಕ ವರ್ಷಗಳಿಂದ ಅಮೆರಿಕದಲ್ಲಿ ನೆಲೆಸಿರುವವರು ಕೂಡ, ಸ್ಥಳೀಯ ಅಮೆರಿಕನ್ನರು ತಮ್ಮ ಸಮುದಾಯದವರಿಗೆ ನೆರವು ನೀಡುವ ಬಗೆಯನ್ನು ಅರ್ಥ ಮಾಡಿಕೊಂಡಿಲ್ಲ . ಅವರ ಒಳ್ಳೆಯ ಗುಣಗಳನ್ನು ರೂಢಿಸಿಕೊಂಡಿಲ್ಲ . ಯೋಚಿಸಿ : ನಾವು ಇಲ್ಲಿರುವುದು ಕೇವಲ ನಮ್ಮ ಬ್ಯಾಂಕ್ ಬ್ಯಾಲೆನ್ಸ್ ಗಳ ಹೆಚ್ಚಿಸುವುದಕ್ಕಾಗಿ ಮಾತ್ರವೇ ?
ಸ್ವಾರ್ಥದ ಮೂಲವನ್ನು ಹುಡುಕುತ್ತಾ ಹೊರಟರೆ ನಮ್ಮ ಬೇರುಗಳಲ್ಲೇ ದೋಷವಿದೆ ಎನಿಸುತ್ತದೆ. ಸಮುದಾಯಕ್ಕಾಗಿ ಹಿಂತಿರುಗಿಸುವುದು ಎನ್ನುವ ಮನೋಭಾವ ಅಥವಾ ಯೋಚನೆಯೆ ಭಾರತೀಯ ಕುಟುಂಬಗಳಲ್ಲಿ ಕಡಿಮೆ. 3, 4, 5.. ಮನೆಗಳನ್ನು ಕಟ್ಟುವುದು, ಬಂಗಾರ ಕೊಳ್ಳುವುದು, ಬೆಲೆಬಾಳುವ ವಸ್ತುಗಳನ್ನು ಕೂಡಿಡುವುದು- ಇದೇ ಬಹಳಷ್ಟು ಭಾರತೀಯರ ಜೀವಿತದ ಗುರಿ. ತಾವು ಮಾತ್ರ ಸಂತೋಷವಾಗಿರುವ ಈ ಮಂದಿ ತಮಗಿಂತ ಕೆಳಗಿನ ನೆರೆಯವರ ಬಗ್ಗೆ ತಲೆಕೆಡಿಸಿಕೊಳ್ಳುವುದೇ ಇಲ್ಲ .
ಹಣಕ್ಕಿಂಥಾ ಹೆಚ್ಚಾಗಿ, ನಮ್ಮ ಮನೋಭಾವ ಹಾಗೂ ಯೋಚನಾ ಲಹರಿಯ ದಿಕ್ಕು ಬದಲಾಗಬೇಕು. ಚಿಪ್ಪುಗಳೊಳಗಿರುವ ಇಂಥ ಮನಸ್ಸುಗಳನ್ನು ಸುಲಭಕ್ಕೆ ಬದಲಿಸಲು ಸಾಧ್ಯವಿಲ್ಲ , ಒಪ್ಪುತ್ತೇನೆ. ಅವನೊಳಗೆ/ ಅವಳೊಳಗೆ ಆತ್ಮಾವಲೋಕನ, ಮಂಥನ ನಡೆದಾಗಷ್ಟೇ ಬದಲಾವಣೆಯನ್ನು ನಿರೀಕ್ಷಿಸಬಹುದು. ಸಮುದಾಯಕ್ಕೆ ಹಿಂತಿರುಗಿಸುವುದು ಎನ್ನುವ ಯೋಚನೆ ಯಾರಲ್ಲಿಯಾದರೂ ಮೂಡುವುದಾದರೆ... ಅದಷ್ಟೇ ನನ್ನೀ ಲೇಖನದ ಉದ್ದೇಶ. ಆ ಯೋಚನೆ ಭಾರತಕ್ಕೂ ಒಳ್ಳೆಯ ಬದಲಾವಣೆಯನ್ನು ನೀಡೀತು.
ಮುಖಪುಟ / ಸಾಹಿತ್ಯ ಸೊಗಡು