ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಾಕ್ಟರಾದ ಮೇಲೆ.... ಪುಟ- 4

By Staff
|
Google Oneindia Kannada News

ಹರ್ನಿಯಾ ಆಪರೇಷನ್‌ ಉಚಿತ, ಆದರೆ 6 ತಿಂಗಳು ಕಾಯಬೇಕು

Doctors Dilemmaಈ ಜಗತ್ತಿನಲ್ಲಿರುವವರೆಲ್ಲರೂ ಸಮಾನ ಚಿಕಿತ್ಸೆಗೆ ಅರ್ಹರೇ? ನೀವು ಸಮಾಜವಾದಿಯಾಗಿದ್ದರೆ ಹೌದು ಎನ್ನುತ್ತೀರಿ. ಒಬ್ಬ ಕೂಲಿಯವನಿಗೂ ಬಿಲ್‌ಗೇಟ್ಸಿಗೂ ಒಂದೇ ಚಿಕಿತ್ಸೆ ಸಿಗುವ ಕಲ್ಪನೆ ಬಹಳ ಸುಂದರ ಕನಸು, ಅಷ್ಟೇ. ಜಗತ್ತಿನ ಎಲ್ಲರಿಗೂ ಎಲ್ಲವೂ ಸಿಗಬಾರದೆಂಬುದೇ ಆ ಸೃಷ್ಟಿಕರ್ತನ ನಿಯಮ. ತಾರತಮ್ಯವೇ ಸಾರ. ಇಲ್ಲವಾದಲ್ಲಿ ಚರ್ಮಕ್ಕೆ ಬೇರೆ ಬೇರೆ ಬಣ್ಣವೇಕಿದೆ? ನಮ್ಮಲ್ಲಿ ಕೆಲವರೇಕೆ ಬೆವರ್ಲಿ ಹಿಲ್ಸ್‌ನಲ್ಲಿ ಹುಟ್ಟುತ್ತೇವೆ, ಇನ್ನು ಕೆಲವರು ಸೋಮಾಲಿಯಾದಲ್ಲಿ ಹುಟ್ಟುವ ಮುಂಚೆಯೇ ಸಾಯುವಾಗ. ಕಮ್ಯೂನಿಸಂ ಏಕೆ ಸಾಯುತ್ತಿದೆ? ಎಲ್ಲಾ ಲಭ್ಯವಿರುವ ಸಾಧನ, ಉಪಾಯಗಳನ್ನೂ ಪೂರ್ಣಪ್ರಮಾಣದಲ್ಲಿ ಬಳಸಿಕೊಂಡರೂ ಅದು ಎಲ್ಲರಿಗೂ ಎಲ್ಲವನ್ನೂ ಕೊಡುವುದಿಲ್ಲ. ಇದೇ ಹಾದಿಯಲ್ಲಿ ’ಸೋಷಿಯಲೈಸ್ಡ್‌ ಮೆಡಿಸಿನ್‌‘ ಅನ್ನುವ ಸಿದ್ಧಾಂತವನ್ನು ರೂಢಿಸಿಕೊಂಡು ಬರಲು ಪ್ರಯತ್ನಿಸುತ್ತಿರುವ ಇಂಗ್ಲೆಂಡ್‌, ಕೆನಡಾಗಳನ್ನೇ ನೋಡಿ. ಏನೂ ದುಡ್ಡು ಕೊಡದೇ ಹರ್ನಿಯಾ ಆಪರೇಷನ್‌ ಆಗಬೇಕೆ? ಮಾಡುತ್ತೇವೆ. ಆದರೆ ನೀವು ಆರು ತಿಂಗಳು ಕಾಯಬೇಕು. ದುಡ್ಡು ಕೊಡುತ್ತೀರೇ, ಹಾಗಾದರೆ ನಾಳೆಯೇ ನಿಮಗೆ ಆಪರೇಷನ್‌. ಮಧ್ಯೆ ತೊಂದರೆಯಾದರೆ ಇದ್ದೇ ಇದೆ, ಸರ್ಕಾರಿ ಆಸ್ಪತ್ರೆ, ನಮಗೆ ಇದರ ಹತ್ತಿರದ ಉದಾಹರಣೆಯೆಂದರೆ ಮಠ, ಬಾಬಾಗಳ ಆಸ್ಪತ್ರೆ. ಉದ್ದೇಶ ಒಲ್ಲೆಯದೇ, ಆದರೆ ನಮಗಿರುವ ರೋಗಿಗಳ ಸಂಖ್ಯೆ ಡಾಕ್ಟರುಗಳನ್ನು, ಸಲಕರಣಿಗಳನ್ನು ಒದಗಿಸಲು ಯಾರಿಗೂ ಸಾಧ್ಯವೇ ಇಲ್ಲ.

ಒಪ್ಪಂದಕ್ಕೆ ಒಳಗಾಗುವ ವೈದ್ಯ ಒಳಗೇ ರೋದಿಸುತ್ತಾನೆ

ಕೊಡುವಾತ ತಡೆದು ತಡೆದು ಕೊಟ್ಟಲ್ಲಿ ವೈದ್ಯ ಮಾಡುವುದರಲ್ಲಿ ಎಷ್ಟು ಕುಂಟಬೇಕಾಗುತ್ತದೆ ಎನ್ನುವುದಕ್ಕೆ ಇಷ್ಟೆಲ್ಲಾ ಹೇಳಬೇಕಾಯಿತು. ಈ ಕೊಡುವಾತ ಸರ್ಕಾರವಾದಲ್ಲಿ ಎಲ್ಲ ಆಸ್ಪತ್ರೆಗಳು ನಮ್ಮ ಸರ್ಕಾರಿ ಆಸ್ಪತ್ರೆಗಳಂತಾಗುತ್ತವೆ. ಇಲ್ಲಿ ಬರುವವರಿಗೆ ಯಾವ ತಡೆಯೂ ಇಲ್ಲದಿರುವುದರಿಂದ ಆ ಸಂಖ್ಯೆಯೇ ಅವರುಗಳಿಗೆ ದೊರಕುವ ಚಿಕಿತ್ಸೆಗೆ ತಡೆಯಾಗುತ್ತದೆ. ಅಮೆರಿಕಾದಂಥ ಶ್ರೀಮಂತ ದೇಶಗಳಲ್ಲಿ ವಿಮೆ ವ್ಯಾಪಕವಾಗಿರುವುದರಿಂದ ಕೊಡುವಾತ ವಿಮೆಯಾತ. ಒಳ್ಳೆಯ ವೈದ್ಯವನ್ನು ಕಾಪಾಡಿಕೊಂಡು ಬರುವ ಜತೆಗೆ ತನ್ನ ಕಂಪೆನಿ ದಿವಾಳಿ ಏಳದಂತೆಯೂ ನೋಡಬೇಕು ಆತ. ಹಾಗಾಗಿ, ಉತ್ತಮ ಚಿಕಿತ್ಸೆಗೆ ವೈಜ್ಞಾನಿಕವಾಗಿ ಇರುವ ಸಾಕ್ಷಿಗಳನ್ನು ಹಾಗೂ ಹೀಗೂ ತಿರುಚಿ, ಹಾಗೆಯೇ ಅದು ಕೆಟ್ಟ ವೈದ್ಯವೂ ಆಗದಂತೆ ಮಧ್ಯೆ ಒಂದು ಒಪ್ಪಂದಕ್ಕೆ ಬರುತ್ತಾನೆ. ಈ ಒಪ್ಪಂದಕ್ಕೆ ವೈದ್ಯ ಒಪ್ಪಲಿ, ಬಿಡಲಿ ತಲೆ ತಗ್ಗಿಸಲೇ ಬೇಕಾಗುತ್ತದೆ. ಮಾಡುತ್ತಿರುವುದು ತಪ್ಪೆಂದು ತಿಳಿದರೂ ಮಾಡಲೇಬೇಕಾದ, ಸರಿಯೆಂದು ತಿಳಿದರೂ ಮಾಡಲಾಗದ ಅನಿವಾರ್ಯತೆಗೆ ಒಳಗಾಗುತ್ತಾನೆ, ಒಳಗೇ ರೋದಿಸುತ್ತಾನೆ.

ಮೇಲೆ ನಾನು ಕೊಟ್ಟ ಉದಾಹರಣೆಗಳಲ್ಲೇ ನೋಡಿ. ಎರಡೂ ಕಡೆಗೂ ನಾನೇ ವೈದ್ಯ. ಯಾರಿಗೆ ಏನು ಚಿಕಿತ್ಸೆ ಮಾಡಿದರೆ ಸರಿ ಎಂದು ನನಗೆ ಗೊತ್ತಿದೆ. ರೋಗಿಯ ಜ್ಞಾನ ಅಜ್ಞಾನಗಳು ಹೇಗೆ ಕೆಲಸ ಮಾಡಿವೆ, ಇಲ್ಲಿ. ಮೊದಲ ಸೆಲಿನಾ ಎಂಬ ಮುದುಕಿಗೆ ದುಬಾರಿ ಶುಶ್ರೂಷೆಯಿಂದ ಏನೂ ಉಪಯೋಗವಿಲ್ಲವೆಂಬುದು ನನಗೆ ಗೊತ್ತಿದೆ, ಹಾಗೂ ಆ ದುಡ್ಡಿನಿಂದ ಇನ್ನೂ ನಾಲ್ಕು ಜೀವಗಳನ್ನು ಉಳಿಸಲು ಸಾಧ್ಯವೆಂದೂ ನನಗೆ ಗೊತ್ತಿದೆ. ಆದರೆ ನನ್ನ ನಂಬಿಕೆಗಳನ್ನು ಮತ್ತು ಅದಕ್ಕಿರುವ ವೈಜ್ಞಾನಿಕ ಸಾಕ್ಷಿಗಳನ್ನು ಆತನ ಗಂಡನ ಪಾಸಿಟಿವ್‌ ನಂಬಿಕೆಗಳೊಂದಿಗೆ ಸಮೀಕರಿಸಲು ನನಗೆ ಸಾಧ್ಯವಾಗುತ್ತಿಲ್ಲ. ಐವತ್ತು ವರ್ಷ ಜತೆಗೆ ಜೀವನ ಮಾಡಿದ ವೃದ್ಧ ಗಂಡನ ಭಾವನೆಗಳಿಗೆ ನಾನು ಬೆಲೆ ಕೊಡಲೇಬೇಕಲ್ಲವೇ? ತನ್ನ ಹೆಂಡತಿ ಸಾಯುತ್ತಿದ್ದಾಳೆಂದು ಆತ ಒಪ್ಪದಿದ್ದುದು ಆತನ ತಪ್ಪೇ? ಆತ ನನ್ನನ್ನು ಅವನ ಸ್ಥಿತಿಯಲ್ಲಿ ಊಹಿಸಿಕೊಂಡು ಉತ್ತರ ಕೊಡೆಂದು ಕೇಳಿದಾಗ ನನಗೇಕೆ ಕಸಿವಿಸಿಯಾಯಿತು? ನನ್ನ ಕುಟುಂಬದವರೆಲ್ಲಾ ಆರೋಗ್ಯವಾಗಿದ್ದಾರೆಂಬ ಹಾಗೂ ಹೀಗೇ ಇರುತ್ತಾರೆಂಬ ನನ್ನ ನಂಬಿಕೆ ಈ ಸನ್ನಿವೇಶದಿಂದ ನನ್ನನ್ನು ಪ್ರಯತ್ನಪೂರ್ವಕವಾಗಿ ಹೊರಗುಳಿಸುತ್ತಿದೆಯೇ?

ಇನ್ನು ಚಾಮಯ್ಯ. ತಾನು ಸಾಯುತ್ತಿರುವ ಪರಿವೆಯೇ ಇಲ್ಲ. ತನ್ನ ಜೀವಕ್ಕಿಂತ ರಾಜ್‌ಕುಮಾರ್‌ರವರ ಸಿನಿಮಾ ಆತನಿಗೆ ಮುಖ್ಯ. ಇಲ್ಲಿ ದುಡ್ಡು ಅವನ ನಿರ್ಣಯಕ್ಕೆ ನೇರವಾಗಿ ಪ್ರಭಾವ ಬೀರಿಲ್ಲದಂತೆ ಕಾಣಿಸಬಹುದು. ಅವನ ಮುಟ್ಠಾಳತನದಿಂದ ಆತ ಸಾಯುತ್ತಿದ್ದಾನೆಂದು ಹೇಳಿಬಿಡುವುದು ತೀರಾ ಸುಲಭ. ಆದರೆ ಒಂದು ಸತ್ಯ ಏನು ಗೊತ್ತೇ? ಈತ ಇಷ್ಟೇ ಮುಟ್ಠಾಳನಾಗಿದ್ದರೂ ದುಡ್ಡಿದ್ದಿದ್ದರೆ ಬದುಕಿಕೊಂಡಿರುತ್ತಿದ್ದ. ಏಕೆ ಗೊತ್ತೇ? ಈತನಿಗೆ ಸರಿಯಾಗಿ ತಿಳಿಹೇಳಲು ಈತನ ಹಿಂದೆ ದೊಡ್ಡ ದಂಡೇ ಇರುತ್ತಿತ್ತು. ವೈದ್ಯರುಗಳ ನಡವಳಿಕೆ ಬದಲಾಗಿರುತ್ತಿತ್ತು. ಮೇಲಾಗಿ ಈತ ಸರ್ಕಾರಿ ಆಸ್ಪತ್ರೆಗೆ ಹೋಗುತ್ತಿರಲಿಲ್ಲ. ಎಲ್ಲವೂ ಬೆರಳ ತುದಿಯಲ್ಲಿ ಸಿಗುತ್ತಿದೆ ಅನ್ನುವ ತಿಳಿವಳಿಕೆ ಆತನ ಜೀವದ ಬೆಲೆಯನ್ನು ತಂತಾನೇ ಏರಿಸುತ್ತಿತ್ತು. ತಾನು ಬಡವ, ಸರ್ಕಾರಿ ಆಸ್ಪತ್ರೆಯಲ್ಲಿದ್ದೇನೆ, ಇಲ್ಲಿ ಸಾಯುತ್ತಿದ್ದೇನೆ. ಬೇರೆ ಎಲ್ಲಿ ಹೋಗಲೂ ನನಗೆ ಸಾಧ್ಯವಿಲ್ಲ. ಜೀವನದಲ್ಲಿ ನಾನು ಮಾಡಿರುವ ಅತಿ ಮುಖ್ಯವಾದ ಕೆಲಸ ಏನು? ಸಿನೆಮಾ ನೋಡುವುದು, ಸಾಯುವ ಮುಂಚೆ ಸಿನೆಮಾ ನೋಡಿ ಸಾಯುತ್ತೇನೆ ಎಂದು ನಿರ್ಧರಿಸಿದ. ಅವನಿಗೆ ತಿಳಿಯದೆಯೇ ಈ ಎಲ್ಲಾ ಅಂಶಗಳು ಅವನ ನಿರ್ಧಾರಕ್ಕೆ ಪೂರಕವಾಗಿದ್ದವು.

ಸೆಲಿನಾಗೊಂದು ತೊಟ್ಟು , ಚಾಮಯ್ಯನಿಗೊಂದು ತೊಟ್ಟು ...

ಒಟ್ಟು ಏನು ಗೊತ್ತೇ, ಸೆಲಿನಾ, ಚಾಮಯ್ಯ ಇಬ್ಬರಿಗೂ ನನಗೆ ಸರಿಯೆನಿಸಿದ ಚಿಕಿತ್ಸೆ ಮಾಡಲು ಡಾಕ್ಟರಾಗಿ ನಾನು ಸೋತಿದ್ದೆ. ಅವರಿಬ್ಬರೂ ಗೆದ್ದಿದ್ದರು. ನೀವು ಮಾನವ ಹಕ್ಕುಗಳ ಸಂರಕ್ಷಕರು ಮಾತ್ರ ಆಗಿದ್ದಲ್ಲಿ ಇದು ತಪ್ಪೆಂದು ನಿಮಗೆ ಅನ್ನಿಸುವುದಿಲ್ಲ. ತಪ್ಪಲ್ಲವೇನೋ, ಯಾರಿಗೆ ಗೊತ್ತು. ಎಲ್ಲವೂ ಸಾಪೇಕ್ಷವಲ್ಲವೇ?

ನಿಜವಾದ ಡಾಕ್ಟರಾದ ಈ ಕಳೆದ ಆರು ವರ್ಷಗಳಲ್ಲಿ ನಾನೇನು ಕಲಿತಿದ್ದೇನೆ ಗೊತ್ತೇ? ಯಾರ ಜೀವ ಉಳಿಸುವುದು ಅಥವಾ ತೆಗೆಯುವುದು ನನ್ನ ಕೆಲಸವಲ್ಲ. ಹಾಗೆ ಯೋಚಿಸುವ ಹಕ್ಕೂ ನನಗಿಲ್ಲ. ಸೆಲಿನಾ ಬದುಕಬೇಕೆಂದು ಬಯಸಿದರೆ ಅಥವಾ ಚಾಮಯ್ಯ ಸಾಯಲು ಇಷ್ಟಪಟ್ಟರೆ ಅದನ್ನು ತಡೆಯಲು ನಾನು ಯಾರು? ನಾನೊಬ್ಬ ಕೇವಲ ಮನುಷ್ಯ. ನಾನೆಂದೂ ದೇವರಾಗಲಾರೆ. ಎಲ್ಲರೂ ಮಾಡುವ ಹಾಗೆ ನಾನೂ ನನ್ನ ಕೆಲಸ ಮಾಡಬೇಕು, ಅಷ್ಟೇ. ನಾನು ನನ್ನ ಕೆಲಸವನ್ನು ಸರಿಯಾಗಿ ಮಾಡಿದರೆ ಯಾರಿಗೆ ಗೊತ್ತು ಒಂದಲ್ಲ ಒಂದು ದಿನ ನಾನೂ ಈ ಪ್ರಪಂಚವನ್ನು ಉಳಿಸಬಹುದೇನೋ. ಆದರೆ ಹೀಗನಿಸಿದಾಗ ಯಾಕೋ, ಮೆಡಿಕಲ್‌ ಕಾಲೇಜಿಗೆ ಸೇರಿದಾಗ ನಾನು ಕಲ್ಪಿಸಿಕೊಂಡ ಆದರ್ಶ ವೈದ್ಯನಾರಾಯಣನ ರೂಪ ನಾನು ಈಗಿರುವುದಕ್ಕಿಂತ ತೀರಾ ಬೇರೆ ಎನ್ನಿಸುತ್ತದೆ. ಆದರೆ ಆ ಕಲ್ಪನೆಯೂ ನೆನಪಿಗೆ ಬರದಷ್ಟು ನಾನು ಬದಲಾಗಿಹೋಗಿದ್ದೇನೆ ಎನ್ನಿಸಿದಾಗ ನನಗರಿವಿಲ್ಲದಂತೆ ಕಣ್ಣಂಚಿನಿಂದ ಎರಡು ತೊಟ್ಟು ನೀರು ಬಂತು. ಬ್ರೇಕ್‌ರೂಮಿನಲ್ಲಿ ಯಾರೂ ಇಲ್ಲವೆಂದು ತಿಳಿಸಿದಾಗ ಸಮಾಧಾನವಾಯಿತು. ಸೆಲಿನಾಳಿಗೊಂದು ತೊಟ್ಟು, ಚಾಮಯ್ಯನಿಗೊಂದು ತೊಟ್ಟು ಅಂದುಕೊಂಡು ಸೆಲಿನಾಳ ಮಂಚದ ಬಳಿ ಹೋದೆ.

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X