ಯಡಿಯೂರಪ್ಪರಿಗೆ ಅದೃಷ್ಟ ತಂದಿದ್ದ ಬಂಗಲೆ ಪಕ್ಕದ ಸರ್ಕಾರಿ ನಿವಾಸಕ್ಕೆ ಸಿಎಂ ಬೊಮ್ಮಾಯಿ ಶಿಫ್ಟ್!
ಬೆಂಗಳೂರು, ಆ. 18: ಒಂದು ಕಾಲದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ಅದೃಷ್ಟದ ಮನೆಯೆಂದೆ ಗುರುತಿಸಲ್ಪಟ್ಟಿದ್ದ ಸರ್ಕಾರಿ ನಿವಾಸದ ಪಕ್ಕಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಾಸ್ತವ್ಯ ಬದಲಿಸುತ್ತಿದ್ದಾರೆ. ಸದ್ಯ ಬೆಂಗಳೂರಿನ ಆರ್‌ಟಿ ನಗರದ ಖಾಸಗಿ ನಿವಾಸದಲ್ಲಿ ವಾಸ್ತವ್ಯ ಮಾಡುತ್ತಿರುವ ಸಿಎಂ ಬೊಮ್ಮಾಯಿ ಸರ್ಕಾರದ ಶಿಷ್ಟಾಚಾರದಂತೆ ಸರ್ಕಾರಿ ನಿವಾಸಕ್ಕೆ ವಾಸ್ತವ್ಯ ಬದಲಿಸಲಿದ್ದಾರೆ.
ಸಾಂಪ್ರದಾಯಿಕವಾಗಿ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾ ಪಕ್ಕದಲ್ಲಿರುವ ಅನುಗ್ರಹ ಅಥವಾ ಕಾವೇರಿ ಸರ್ಕಾರಿ ಬಂಗಲೆಗಳಲ್ಲಿ ಸಿಸಿಂ ಅಧಿಕೃತ ನಿವಾಸವಾಗಿ ಬಳಸಿಕೊಳ್ಳುವುದು ವಾಡಿಕೆ. ಆದರೆ ಈಗಾಗಲೇ ಆ ಎರಡೂ ಬಂಗಲೆಗಳು ಭರ್ತಿಯಾಗಿವೆ. ಕಾವೇರಿಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ವಾಸ್ತವ್ಯ ಮಾಡಿದ್ದಾರೆ. ಅನುಗ್ರಹದಲ್ಲಿ ಲೋಕಾಯುಕ್ತ ನ್ಯಾಯಮೂರ್ತಿ ಪಿ. ವಿಶ್ವನಾಥ ಶೆಟ್ಟಿ ವಾಸವಾಗಿದ್ದಾರೆ. ಜೊತೆಗೆ ಎರಡೂ ಬಂಗಲೆಗಳು ಮುಖ್ಯಮಂತ್ರಿಗಳಾದವರಿಗೆ ಅದೃಷ್ಟದ ನಿವಾಸಗಳಲ್ಲಿ ಎಂದು ಕೆರಯಲಾಗುತ್ತದೆ.
ಹೀಗಾಗಿ ಕಾವೇರಿ ಅಥವಾ ಅನುಗ್ರಹ ಬಂಗಲೆಗಳ ಬದಲಿಗೆ ಈ ಹಿಂದೆ ಯಡಿಯೂರಪ್ಪ ಅವರಿಗೆ ಅದೃಷ್ಟದ ನಿವಾಸವೆಂದೇ ಕರೆಯಲ್ಪಡುತ್ತಿದ್ದ, ಹಾಗೂ ಅವರು ವಿಪಕ್ಷ ನಾಯಕ, ನಂತರ ಉಪ ಮುಖ್ಯಮಂತ್ರಿ ಹಾಗೂ ಕೊನೆಗೆ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೇರಿದ ಬಂಗಲೆಯ ಪಕ್ಕದ ನಿವಾಸಕ್ಕೆ ಸಿಎಂ ಬೊಮ್ಮಾಯಿ ವಾಸ್ತವ್ಯ ಬದಲಿಸಿದ್ದಾರೆ. ಅಷ್ಟಕ್ಕೂ ಯಡಿಯೂರಪ್ಪ ಅವರಿಗೆ ಅದೃಷ್ಟದ ಬಂಗಲೆಯಾಗಿದ್ದ ಮನೆ ಯಾವುದು?

ಮಾಜಿ ಸಿಎಂ ಯಡಿಯೂರಪ್ಪ ಅದೃಷ್ಟದ ನಿವಾಸ?
ರಾಜ್ಯದ ಬಹುತೇಕ ಮುಖ್ಯಮಂತ್ರಿಗಳು ಒಂದೊ ಕಾವೇರಿ ಅಥವಾ ಅನುಗ್ರಹವನ್ನು ತಮ್ಮ ಅಧಿಕೃತ ನಿವಾಸವನ್ನಾಗಿ ಮಾಡಿಕೊಂಡು ವಾಸ್ತವ್ಯ ಮಾಡಿದ್ದಾರೆ. ಆದರೆ 2008ರಲ್ಲಿ ಮುಖ್ಯಮಂತ್ರಿ ಹುದ್ದೆಗೆ ಏರಿದ್ದ ಮಾಜಿ ಸಿಎಂ ಯಡಿಯೂರಪ್ಪ ಮಾತ್ರ ತಮ್ಮ ಅಧಿಕೃತ ನಿವಾಸವನ್ನಾಗಿ ರೇಸ್‌ಕೋರ್ಸ್ ರಸ್ತೆಯ ಕಾಟೇನ್ ನಂಬರ್ 2ನ್ನು ಆಯ್ದುಕೊಂಡಿದ್ದರು. ಅದು ಅವರಿಗೆ ಅದೃಷ್ಟದ ಮನೆಯೆಂದೆ ಕರೆಯಲ್ಪಡುತ್ತಿತ್ತು. ಅದಕ್ಕೆ ಕಾರಣವೂ ಇತ್ತು.

ಯಡಿಯೂರಪ್ಪರಿಗೆ ಅಧಿಕಾರ ಸಿಕ್ಕಿದ್ದು ಇದೇ ಮನೆಯಲ್ಲಿ!
2004ರಲ್ಲಿ ಅವಧಿಗಿಂತ ಮೊದಲೇ ಅಂದಿನ ಸಿಎಂ ಎಸ್.ಎಂ. ಕೃಷ್ಣ ಚುನಾವಣೆಗೆ ಹೋದರು. ಆಗ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಮುಖ್ಯಮಂತ್ರಿಯಾಗುವ ಭಾಗ್ಯ ಬಿ.ಎಸ್. ಯಡಿಯೂರಪ್ಪ ಅವರಿಗೆ ಒಲಿದಿರಲಿಲ್ಲ. ಹೀಗಾಗಿ ವಿಪಕ್ಷನಾಯಕರಾಗು ಮುಂದುವರೆದು, ಮುಂದೆ 2006ರಲ್ಲಿ ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಮೊದಲ ಬಾರಿ ಅಧಿಕಾರಕ್ಕೆ ಏರಿದ್ದು ಇದೇ ರೇಸ್‌ಕೋರ್ಸ್ ಕಾಟೇಜ್ ನಂ. 1ರ ಬಂಗಲೆಯಲ್ಲಿದ್ದಾಗ. ನಂತರ ಮೈತ್ರಿ ಮುರಿದು ಸಿಎಂ ಹುದ್ದೆಗೆ ರಾಜಿನಾಮೆ ಕೊಟ್ಟು, 2008ರಲ್ಲಿ ಮತ್ತೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದು ಅದೇ ನಿವಾಸದಲ್ಲಿ, ಹೀಗಾಗಿ ರೇಸ್‌ಕೋರ್ಸ್ ರಸ್ತೆ ನಿವಾಸ ಒಂದು ಅರ್ಥದಲ್ಲಿ ಯಡಿಯೂರಪ್ಪ ಅವರಿಗೆ ಅದೃಷ್ಟದ ಮನೆಯೆಂದೆ ಪರಿಗಣಿತವಾಗಿತ್ತು.

ರೇಸ್‌ಕೋರ್ಸ್ ರಸ್ತೆ ನಿವಾಸಕ್ಕಾಗಿ ರಾಜಕಾರಣಿಗಳ ಪೈಪೋಟಿ
ಯಡಿಯೂರಪ್ಪ ವಾಸವಾಗಿದ್ದ ರೇಸ್‌ಕೋರ್ಸ್ ರಸ್ತೆ ನಿವಾಸ ರಾಜಕಾರಣಿಗಳಿಗೆ ಅದೃಷ್ಟದ ಮನೆ ಎನ್ನಲಾಗುತ್ತಿದೆ. ಹೀಗಾಗಿ ಅದನ್ನು ಪಡೆಯಲು ಹಿಂದೆ ಬಾಲಚಂದ್ರ ಜಾರಕಿಹೊಳಿ ಸೇರಿದಂತೆ ಅನೇಕರುನ ಪೈಟೋಟಿ ಮಾಡಿದ್ದಿದೆ. ಈಗ ಅದರ ಪಕ್ಕದ ನಿವಾಸಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶಿಫ್ಟ್ ಆಗುತ್ತಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನವಾದ ಬಳಿಕ ಮತ್ತೆ ರೇಸ್‌ಕೋರ್ಸ್ ಕಾಟೇಜ್ ನಂ.1ಕ್ಕೆ ವಾಸ್ತವ್ಯ ಬದಲಿಸಲು ಮಾಜಿ ಸಿಎಂ ಯಡಿಯೂರಪ್ಪ ಪ್ರಯತ್ನಿಸಿದ್ದರು. ಆದರೆ ಕೊನೆ ಕ್ಷಣದಲ್ಲಿ ಕಾವೇರಿ ಬಂಗಲೆಯಲ್ಲಿರಲು ನಿರ್ಧಾರ ಮಾಡಿದ್ದರು. ಇದೀಗ ಆ ಬಂಗಲೆ ಪಕ್ಕದ ನಿವಾಸಕ್ಕೆ ಸಿಎಂ ಬೊಮ್ಮಾಯಿ ವಾಸ್ತವ್ಯ ಬದಲಿಸುತ್ತಿದ್ದಾರೆ.

ಯಡಿಯೂರಪ್ಪ ಅದೃಷ್ಟದ ಮನೆ ಪಕ್ಕದ ಬಂಗಲೆಗೆ ಬೊಮ್ಮಾಯಿ!
ವಿಪಕ್ಷ ನಾಯಕ, ಉಪ ಮುಖ್ಯಮಂತ್ರಿ ಆಮೇಲೆ ಮುಖ್ಯಮಂತ್ರಿ ಹೀಗೆ ಅಧಿಕಾರದ ಗದ್ದುಗೆ ಹಿಡಿಯುವಾಗ ಮಾಜಿ ಸಿಎಂ ಯಡಿಯೂರಪ್ಪ ವಾಸವಾಗಿದ್ದ ಅದೃಷ್ಟದ ಮನೆಯ ಪಕ್ಕಕ್ಕೆ ಇದೀಗ ಸಿಎಂ ಬಸವರಾಜ ಬೊಮ್ಮಾಯಿ ವಾಸ್ತವ್ಯ ಮಾಡಲು ತೀರ್ಮಾನಿಸಿದ್ದಾರೆ. ಆ ಬಂಗಲೆಯಲ್ಲಿ ಈಗ ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ ವಾಸವಾಗಿದ್ದಾರೆ.
ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಸರ್ಕಾರಿ ವಸತಿ ಗೃಹ ಹಂಚಿಕೆ ಮಾಡಬೇಕಾಗಿದ್ದು, ಸಚಿವ ಡಾ. ಅಶ್ವಥ್ ನಾರಾಯಣ ಅವರಿಗೆ ಹಂಚಿಕೆ ಮಾಡಲಾಗಿದ್ದ ರೇಸ್‌ಕೋರ್ಸ್ ರಸ್ತೆಯ ನಂ. 1 ರೇಸ್‌ವ್ಯೂ ಕಾಟೇಜ್‌ನ್ನು ಹಿಂದಕ್ಕೆ ಪಡೆದು ಅದನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಹಂಚಿಕೆ ಮಾಡಲಾಗಿದೆ ಎಂದು ಡಿಪಿಎಆರ್ ಶಿಷ್ಟಾಚಾರ ವಿಭಾಗದ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ. ಹೀಗಾಗಿ ಯಡಿಯೂರಪ್ಪ ಅವರ ಬೆಂಬಲದಿಂದ ಸಿಎಂ ಆಗಿರುವ ಬೊಮ್ಮಾಯಿ ಅವರು ಯಡಿಯೂರಪ್ಪ ಅವರಿಗೆ ಅದೃಷ್ಟ ತಂದಿದ್ದ ಮನೆಯ ಪಕ್ಕದಲ್ಲಿ ಶಿಫ್ಟ್ ಆಗುತ್ತಿದ್ದಾರೆ.












Click it and Unblock the Notifications