VRL Bus Accident: ಬೆಂಗಳೂರಿಗೆ ಬರುತ್ತಿದ್ದ ವಿಆರ್‌ಎಲ್ ಬಸ್ ಪಲ್ಟಿ: ಇಬ್ಬರು ಸಾವು
ಯಾದಗಿರಿ, ಜೂನ್ 03: ಬೆಂಗಳೂರಿಗೆ ಬರುತ್ತಿದ್ದ ವಿಆರ್‌ಎಲ್ ಸಂಸ್ಥೆಯ ಬಸ್ ಪಲ್ಟಿಯಾಗಿ ಇಬ್ಬರು ಸಾವನ್ನಪ್ಪಿರುವ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಹತ್ತಿಗೂಡುರ ಗ್ರಾಮದ ಬ್ರಿಡ್ಜ್ ಬಳಿ ನಡೆದಿದೆ. ಮೃತರು ಕಲಬುರ್ಗಿಯ ಮೂಲದ ನಿವಾಸಿಗಳು ಎಂದು ಗುರುತಿಸಲಾಗಿದೆ.
37 ಜನ ಪ್ರಯಾಣಿಕರನ್ನೊಳಗೊಂಡ ವಿಆರ್‌ಎಲ್ ಬಸ್ ಕಲಬುರ್ಗಿಯಿಂದ ಬೆಂಗಳೂರು ಕಡೆ ತೆರಳುತ್ತಿತ್ತು ಈ ವೇಳೆ ಹತ್ತಿಗೂಡುರ ಗ್ರಾಮದ ಬ್ರಿಡ್ಜ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿದೆ. ಘಟನೆಯಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, 7 ಜನರ ಸ್ಥಿತಿ ಚಿಂತಾಜನಕವಾಗಿದೆ. ಬಸ್‌ನಲ್ಲಿ ಸಿಲುಕಿದ್ದ ಗಾಯಾಳುಗಳನ್ನು ಹೊರತೆಗೆಯಲು ಪೊಲೀಸರು ಹರಸಾಹಸ ಪಟ್ಟಿದ್ದು, ಗಾಯಾಳುಗಳನ್ನು ಶಹಾಪುರ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ.

ಶಹಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸುರಪುರ ಡಿವೈಎಸ್ಪಿ ಜಾವೇದ್ ಇನಾಮ್ದಾರ್ ಹಾಗೂ ಸ್ಥಳೀಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಹಾಸನದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ: ಬೈಕ್ ಸವಾರ ಸಾವು
ಹಾಸನ: ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆಯ ಆಲೂರು ತಾಲೂಕಿನ ಯಡಿಯೂರು ಕೊಡಿಗೆ ಬಳಿ ನಡೆದಿದೆ. ರಂಗಸ್ವಾಮಿ ಮೃತ ದುರ್ದೈವಿ ಎಂದು ಗುರುತಿಸಲಾಗಿದೆ.
ರಂಗಸ್ವಾಮಿ ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡುತ್ತಿದ್ದು, ಇಂದು ಕೆಲಸ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದರು. ಈ ವೇಳೆ ರಂಗಸ್ವಾಮಿ ಬೈಕ್‌ಗೆ ಹಾಸನ ಕಡೆಯಿಂದ ಆಲೂರು ಕಡೆಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿಯಾಗಿದೆ. ಬಸ್ ಗುದ್ದಿದ ರಭಸಕ್ಕೆ ಬೈಕ್ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಬೈಕ್ ಸವಾರ ರಂಗಸ್ವಾಮಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಆಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.












Click it and Unblock the Notifications