Yadagiri: ಯಾದಗಿರಿಯ ಸಕ್ಕರೆ ಕಾರ್ಖಾನೆ ವಿರುದ್ಧ ಕಬ್ಬು ಬೆಳೆಗಾರರ ಪ್ರತಿಭಟನೆ
ಯಾಗದಿಗಿ ಮಾರ್ಚ್ 26: ಯಾದಗಿರಿಯ ಅನ್ನದಾತರ ಬದುಕಿಗೆ ಸಿಹಿಯಾಗಬೇಕಿದ್ದ ಕಬ್ಬು ಕಹಿಯಾಗಿದೆ. ಬಾಕಿ ಬಿಲ್ ಪಾವತಿಸದೆ ಸಕ್ಕರೆ ಕಾರ್ಖಾನೆಯೊಂದು ಸತಾಯಿಸುತ್ತಿದ್ದು ರೈತರು ಕಂಗಾಲಾಗಿದ್ದಾರೆ. ಕೂಡಲೇ ಬಾಕಿ ಹಣ ಪಾವತಿಸುವಂತೆ ಒತ್ತಾಯಿಸಿ ರೈತರು ಬೀದಿಗಿಳಿದು ಪ್ರತಿಭಟನೆಗೆ ಮುಂದಾಗಿದ್ದಾರೆ.
ಹೌದು.. ಯಾದಗಿರಿಯ ಕೋರ್ ಗ್ರೀನ್ ಸಕ್ಕರೆ ಕಾರ್ಖಾನೆ ಕಬ್ಬು ಬೆಳೆಗಾರರಿಗೆ ಬಾಕಿ ಹಣ ಪಾವತಿಸದೆ ಅಲೆದಾಡಿಸುತ್ತಿದೆ. ಕೋರ್ ಗ್ರೀನ್ ಸಕ್ಕರೆ ಕಾರ್ಖಾನೆ ರೈತರಿಗೆ ಬರೋಬ್ಬರಿ 8 ಕೋಟಿ ಹಣ ನೀಡುವುದು ಬಾಕಿ ಉಳಿಸಿಕೊಂಡಿದೆ. ಹೀಗಾಗಿ ರೈತರು ಹಣ ಪಾವತಿಗೆ ಒತ್ತಾಯಿಸಿ ಪ್ರತಿಭಟನೆ ಮಾಡುತ್ತಿದ್ದಾರೆ.

ಈ ಕಾರ್ಖಾನೆಗೆ ರೈತರು ಕಬ್ಬನ್ನು ನೀಡಿದ್ದರು. ಆದರೆ ಈ ಕಬ್ಬು ಪಡೆದ ಕಾರ್ಖಾನೆ ಹಣವನ್ನು ಪಾವತಿಸದೆ ರೈತರಿಗೆ ಸತಾಯಿಸುತ್ತಿದೆ. ಇದರಿಂದಾಗಿ ರೈತರು ಆರ್ಥಿಕ ಸಂಕಷ್ಟವನ್ನು ಎದುರಿಸುವಂತಾಗಿದೆ. ಮಕ್ಕಳ ಮದುವೆ, ಇನ್ನಿತರ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯಲು ನಮ್ಮ ಹಣ ನಮಗೆ ಕೊಡಿ ಎಂದು ರೈತರು ಬೀದಿಗಿಳಿದು ಪ್ರತಿಭಟನೆಗೆ ಮುಂದಾಗಿದ್ದಾರೆ.
ಕಬ್ಬನ್ನು ಪಡೆದು 35 ದಿನಗಳ ಒಳಗಾಗಿ ಕಾರ್ಖಾನೆ ರೈತರಿಗೆ ಬಿಲ್ ಕೊಡಬೇಕು. ಆದರೆ ಕಬ್ಬು ನೀಡಿ ನಾಲ್ಕು ತಿಂಗಳು ಆಗಿದೆ. ಆದರೂ ಕೂಡ ಬಿಲ್ ಅನ್ನು ಕೊಟ್ಟಿಲ್ಲ. ಹೀಗಾಗಿ ಅನ್ನದಾತರು ಆಕ್ರೋಶ ಹೊರ ಹಾಕಿದ್ದಾರೆ. ನಮ್ಮ ಹಣ ನಮಗೆ ಕೊಡಿ ಎಂದು ರೈತರು ಪಟ್ಟು ಹಿಡಿದಿದ್ದಾರೆ. ಕೋಪಗೊಂಡ ರೈತರು ಫ್ಯಾಕ್ಟರಿ ಗೇಟ್ ಬಂದ್ ಮಾಡಿ ಪ್ರತಿಭಟನೆ ಮಾಡುತ್ತಿದ್ದಾರೆ. ಬಿಲ್ ನೀಡದೇ ಹೋದರೆ ಫ್ಯಾಕ್ಟರ್ ಸೀಜ್ ಮಾಡಬೇಕು ಎಂದು ಆಕ್ರೋಶ ಹೊರಹಾಕಿದ್ದಾರೆ.

ಬ್ಯಾಂಕ್ ಸಮಸ್ಯೆಯಿಂದಾಗಿ ಹಣ ಪಾವತಿ ಮಾಡಲು ಆಗಿಲ್ಲ. ಮುಂದಿನ ಏಪ್ರಿಲ್ ಒಳಗೆ ರೈತರ ಬಿಲ್ ಪಾವತಿ ಮಾಡಲಾಗುತ್ತದೆ. ಬಾಕಿ ಇರುವ ಎಲ್ಲಾ ಹಣವನ್ನು ನೀಡಲಾಗುತ್ತದೆ ಎಂದು ಕಾರ್ಖಾನೆ ಸಮಜಾಯಿಸಿ ನೀಡಿದಿದೆ.
'ನಾವು ಕಷ್ಟು ಪಟ್ಟು ಕಳೆದ ಬೇಸಿಗೆಯಲ್ಲಿ ಕಬ್ಬು ಹಚ್ಚಿ ಈ ಬೇಸಿಗೆವರೆಗೂ ಕಾದು ಬೆಳೆ ಬೆಳೆದು ತಂದು ಫ್ಯಾಕ್ಟರಿಗೆ ಹಾಕಿದ್ದೇವೆ. ಕಬ್ಬ ತೆಗೆಯುವ ಯಂತ್ರ ಹಾಗೂ ಅದನ್ನು ಸಾಗಿಸುವ ಲಾರಿ ಚಾಲಕರಿಗೆ ಹಣ ನೀಡಬೇಕು. ಅಲ್ಲದೆ ಕಬ್ಬ ಬೆಳೆಯಲು ಕೂಡ ಸಾಲ ಮಾಡಿದ್ದೇವೆ. ಕೂಲಿಗಳಿಗೆ ಸಂಬಳ ಕೊಡಬೇಕು. ಎಣ್ಣೆ, ಗೊಬ್ಬರ ಬೀಜಕ್ಕೆ ಸಾಲ ಮಾಡಿ ಹಣ ಖರ್ಚು ಮಾಡಿದ್ದೇವೆ.
ನಮ್ಮ ಹಣ ನಮಗೆ ಕೊಡಲು ಕೇಳಿದರೆ ಈ ಕಾರ್ಖಾನೆ ನಮಗೆ ಪ್ರತಿಕ್ರಿಯೆ ನೀಡುತ್ತಿಲ್ಲ. ಬೆಳಗ್ಗೆ ಬಂದರೆ ಮಧ್ಯಾಹ್ನ ಆದರೂ ಕೂಡ ಅಧಿಕಾರಿಗಳು ಕೈಗೆ ಸಿಗದೆ ಕಣ್ಣು ತಪ್ಪಿಸಿ ಓಡಾಡುತ್ತಿದ್ದಾರೆ. ಸೌಜನ್ಯಕ್ಕಾದರೂ ಕಾರ್ಖಾನೆಯ ಮೇಲಾಧಿಕಾರಿಗಳು ನಮ್ಮನ್ನು ಮಾತನಾಡಿಸಿಲ್ಲ. ಈ ರೀತಿ ವರ್ತನೆ ನಮಗೆ ನಮ್ಮ ಹಣದ ಬಗ್ಗೆ ಭಯ ಹುಟ್ಟಿಸಿದೆ. ದಯಮಾಡಿ ನಮ್ಮ ಹಣ ನಮಗೆ ಕೊಡಿಸಿ' ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
'ನಿತ್ಯ ನಾವು ಬರಬೇಕು ಕಾರ್ಖಾನೆ ಮುಂದೆ ಅಧಿಕಾರಿಗಳಿಗಾಗಿ ಕಾಯಬೇಕು. ಅವರು ನಮ್ಮ ಕಣ್ಣು ತಪ್ಪಿಸಲು ಇಲ್ಲಸಲ್ಲದ ನೆಪ ಹೇಳುತ್ತಾ ಓಡಾಡಿಕೊಂಡು ಇದ್ದಾರೆ. ನಮಗೆ ನಮ್ಮ ಹಣ ಕೊಡಿಸಿ. ನಾನು ಮಕ್ಕಳ ಮದುವೆ ಮಾಡಬೇಕು' ಎಂದು ಮತ್ತೊಬ್ಬ ಕಬ್ಬು ಬೆಳೆಗಾರ ಕಣ್ಣೀರು ಹಾಕಿದ್ದಾರೆ.
'ನಾವು ದೂರದ ಊರುಗಳಿಂದ ಕಾರ್ಖಾನೆಗೆ ಬರಬೇಕು. ಕಬ್ಬು ಸಾಗಿಸಲು ಹೆಚ್ಚು ಹಣ ಖರ್ಚು ಮಾಡಬೇಕು. ಕಬ್ಬು ಬೆಳೆಯಲು ಒಂದು ವರ್ಷ ಕಾದಿದ್ದೇವೆ. ಆದರೆ ಅದರಿಂದ ನಮಗೆ ಒಂದು ರೂಪಾಯಿ ಸಿಕ್ಕಿಲ್ಲ. ಹೀಗಾದರೆ ನಾವು ಜೀವನ ಮಾಡುವುದು ಹೇಗೆ' ಎಂದು ಮತ್ತೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.












Click it and Unblock the Notifications