ಸೊಳ್ಳೆ ನಿಯಂತ್ರಣಕ್ಕೆ ಹೊಸ ಸರಳ ತಂತ್ರ: ನೀವೂ ಮಾಡಬಹುದು
ಯಾದಗಿರಿ, ಅಕ್ಟೋಬರ್ 05: ಸೊಳ್ಳೆ ಕಾಟ ಎಲ್ಲಿಲ್ಲ ಹೇಳಿ. ಭಾರತದಲ್ಲಿಯಂತೂ ಇದು ಅತ್ಯಂತ ದೊಡ್ಡ ಸಮಸ್ಯೆ. ಅನೇಕಾನೇಕ ಕಾಯಿಲೆಗಳಿಗೆ ಸೊಳ್ಳೆಯೇ ಮೂಲ. ಮಾರುಕಟ್ಟೆಯಲ್ಲಿ ಸಿಗುವ ಕಾಯಿಲ್‌ಗಳಿಗೆ ಸೊಳ್ಳೆಗಳು ನಿಯಂತ್ರಣಕ್ಕೆ ಬರುವುದಿಲ್ಲ, ಆದರೆ ಇಲ್ಲೊಂದು ಹೊಸ ಮಾರ್ಗವಿದೆ, ಇದರ ಮೂಲಕ ಸೊಳ್ಳೆಗಳನ್ನು ಸುಲಭವಾಗಿ ನಿಯಂತ್ರಿಸಬಹುದು.
ಯಾದಗಿರಿ ನಗರಸಭೆ ಅಧಿಕಾರಿಗಳು ಸೊಳ್ಳೆಗಳನ್ನು ನಿಯಂತ್ರಿಸಲು ಹೊಸದೊಂದು ತಂತ್ರವನ್ನು ಪ್ರಯೋಗಿಸುತ್ತಿದ್ದಾರೆ. ಅತ್ಯಂತ ಸರಳವೂ, ಸುಲಭವೂ ಆಗಿರುವ ಈ ಪ್ರಯೋಗವನ್ನು ಯಾರು ಬೇಕಾದರೂ ಸುಲಭವಾಗಿ ಮಾಡಬಹುದು.
ಸೊಳ್ಳೆಗಳನ್ನು ನಿಯಂತ್ರಿಸುವ ಸುಲಭ ದಾರಿಯೆಂದರೆ ಸೊಳ್ಳೆಗಳ ಮೊಟ್ಟೆ (ಲಾರ್ವಾ)ಗಳನ್ನು ಕೊಲ್ಲುವುದು. ಯಾದಗಿರಿ ನಗರಸಭೆ ಬಳಸುತ್ತಿರುವ ತಂತ್ರದಿಂದ ಲಾರ್ವಾಗಳನ್ನು ಸುಲಭವಾಗಿ ನಾಶಪಡಿಸಬಹುದಾಗಿದೆ.

ಕೆಲವೇ ವಸ್ತುಗಳು ಸಾಕು
ಮೊದಲಿಗೆ ಹತ್ತಿಯ ಸಣ್ಣ ಬಟ್ಟೆತುಂಡನ್ನು ತೆಗೆದುಕೊಂಡು ಅದರೊಳಕ್ಕೆ ಸಾಮಿಲ್‌ನಲ್ಲಿ ಸಿಗುವ ಮರದ ಪುಡಿ ಹಾಕಬೇಕು. ನಂತರ ಅದನ್ನು ಸುಟ್ಟ ಆಯಿಲ್ ಅಥವಾ ಬಳಸಿರುವ ಆಯಿಲ್ (ಮೆಕ್ಯಾನಿಕ್ ಶಾಪ್‌ಗಳಲ್ಲಿ ಸುಲಭವಾಗಿ ಸಿಗುತ್ತದೆ) ನಲ್ಲಿ ಅರ್ಧಗಂಟೆ ನೆನೆಸಬೇಕು.

ಚರಂಡಿಯಲ್ಲಿ 15 ಅಡಿಗೆ ಒಂದರಂತೆ ಇಡಬೇಕು
ನೆನೆಸಿದ ನಂತರ ಅದು ಕಪ್ಪನೆಯ ಆಯಿಲ್ ಉಂಡೆಯಂತಾಗುತ್ತದೆ. ಅದನ್ನು ಮನೆಯ ಮುಂದೆ ಚರಂಡಿ ಇದ್ದಲ್ಲಿ ಅದರ ಒಳಗೆ ಇಡಬೇಕು. ಇದರಿಂದ ಸೊಳ್ಳೆಯ ಮೊಟ್ಟೆಗಳು ಸತ್ತುಹೋಗುತ್ತವೆ. ಆಯಿಲ್ ಉಂಡೆಗಳನ್ನು 15 ಅಡಿಗೆ ಒಂದರಂತೆ ಇಡಬೇಕು. ಈ ಮಾದರಿಯನ್ನು ಚರಂಡಿಗಳಲ್ಲಿಯಷ್ಟೆ ಮಾಡಲು ಸಾಧ್ಯ.

ಈ ಪ್ರಯೋಗವನ್ನು ಆಂಧ್ರದಲ್ಲಿ ಮಾಡಲಾಗಿದೆ
ಈ ಪ್ರಯೋಗವನ್ನು ಮೊದಲಿಗೆ ಆಂಧ್ರಪ್ರದೇಶದಲ್ಲಿ ಮಾಡಲಾಯಿತಂತೆ, ಅಲ್ಲಿ ಶೇ 100% ಫಲಿತಾಂಶ ದೊರೆತಿದೆ. ಈಗ ಅದರನ್ನು ಈಗ ಯಾದಗಿರಿ ಜಿಲ್ಲೆಯ ಹಲವು ವಾರ್ಡ್‌ಗಳಲ್ಲಿ ಬಳಸಲಾಗುತ್ತಿದೆ. ಇಲ್ಲಿಯೂ ಉತ್ತಮ ಫಲಿತಾಂಶದ ನಿರೀಕ್ಷೆಯಲ್ಲಿದ್ದಾರೆ ನಗರಸಭೆ ಸಿಬ್ಬಂದಿ.

ನೀರು ನಿಲ್ಲುವ ಜಾಗದಲ್ಲಿ ಸೊಳ್ಳೆ ಉತ್ಪತ್ತಿ
ಮನೆಯ ಸುತ್ತ ನೀರು ನಿಲ್ಲುವ ಜಾಗದಲ್ಲಿ ಸೊಳ್ಳೆಗಳ ಉತ್ಪತ್ತಿ ಆಗುತ್ತದೆ. ಚರಂಡಿಗಳಲ್ಲಿ ಸೊಳ್ಳೆಯ ಉತ್ಪತ್ತಿ ಹೆಚ್ಚು. ಮನೆಯ ಸುತ್ತ-ಮುತ್ತ ನೀರು ನಿಲ್ಲದಂತೆ ನೋಡಿಕೊಂಡರೆ ಸೊಳ್ಳೆ ಕಾಟದಿಂದ ಬಹುತೇಕ ಮುಕ್ತಪಡೆಯಬಹುದು.












Click it and Unblock the Notifications