ಯಾದಗಿರಿ: ಮತಯಂತ್ರದ ಮೇಲೆ ಅನುಮಾನ ಮುಂದುವರೆಸಿದ ಸಿಎಂ
ಯಾದಗಿರಿ, ಡಿಸೆಂಬರ್ 18: 'ಗುಜರಾತ್‌ನಲ್ಲಿ ಬಿಜೆಪಿ ಆಡಳಿತ ವಿರೋಧಿ ಅಲೆ ಇದೆ. ಈ ಮಧ್ಯೆಯೂ ಬಿಜೆಪಿ ಬಹುಮತ ಪಡೆದಿದೆ ಎಂದರೆ ವಿದ್ಯುನ್ಮಾನ ಮತಯಂತ್ರಗಳಲ್ಲಿನ ಲೋಪಕ್ಕೆ ಇದು ಪುಷ್ಟಿ ನೀಡುತ್ತದೆ ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಇವಿಎಂ ಮೇಲಿನ ಅನುಮಾನವನ್ನು ಮುಂದುವರೆಸಿದ್ದಾರೆ.
ನಗರದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 'ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದೆ, ಗುಜರಾತ್ ನಲ್ಲಿಯೂ ಬಿಜೆಪಿಯದ್ದೇ ಆಡಳಿತ, ನರೇಂದ್ರ ಮೋದಿ ಮತ್ತು ಅಮಿತ್ ಷಾ ಗುಜರಾತ್‌ನವರು. ಹಿಂದುತ್ವದ ಪ್ರಭಾವ ಬೀರಿ, ಹಣದ ಹೊಳೆ ಹರಿಸಿ ಬಿಜೆಪಿಯವರು ಗೆಲುವು ಪಡೆದಿದ್ದಾರೆ ಎಂದು ಅವರು ಆರೋಪ ಮಾಡಿದರು.

'ಮುಂಬರುವ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಹೊಸದಾಗಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾಗಿರುವ ರಾಹುಲ್ ಗಾಂಧಿಗೆ ಕರ್ನಾಟಕ ಕಾಂಗ್ರೆಸ್ ಉಡುಗೊರೆ ನೀಡಲಿದೆ ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಕಳೆದ ಚುನಾವಣೆಗೆ ಹೋಲಿಸಿದರೆ ಗುಜರಾತ್ ನಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನಗಳನ್ನು ಗಳಿಸಿದೆ. ಇದು ರಾಹುಲ್ ಗಾಂಧಿಯನ್ನು ಅಲ್ಲಿನ ಜನರು ನಿಧಾನವಾಗಿ ಬೆಂಬಲಿಸುತ್ತಿರುವುದನ್ನು ಸೂಚಿಸುತ್ತಿದೆ' ಎಂದು ವಿಶ್ಲೇಷಿಸಿದರು.
'ಕೇಂದ್ರದಲ್ಲಿ ಬಿಜೆಪಿ ಅಧಿಕಾರ ಹಿಡಿದ ಮೇಲೆ ಸಿಬಿಐ, ಆದಾಯ ತೆರಿಗೆ ಇಲಾಖೆಯನ್ನು ಅಸ್ತ್ರವನ್ನಾಗಿ ಬಳಸಿಕೊಂಡಿದ್ದಾರೆ ಎಂದ ಅವರು, ಶಂಕರ್ ವಘೇಲಾ ಪಕ್ಷ ತ್ಯಜಿಸಿದ್ದರಿಂದ ಯಾವುದೇ ಪರಿಣಾಮ ಇಲ್ಲ. ಅಲ್ಲದೇ ಒಂದು ರಾಜ್ಯ ಚುನಾವಣಾ ಫಲಿತಾಂಶ ಇನ್ನೊಂದು ರಾಜ್ಯದ ಮೇಲೆ ಪರಿಣಾಮ ಉಂಟು ಮಾಡುವುದಿಲ್ಲ. ಹಾಗಿದಿದ್ದರೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುತ್ತಿರಲಿಲ್ಲ' ಎಂದರು.












Click it and Unblock the Notifications