ಅಕ್ಟೋಬರ್ ಕೊನೆ ಹೊತ್ತಿಗೆ ವಿಶ್ವಸಂಸ್ಥೆಯ ಬಳಿ ಖರ್ಚಿಗೂ ಹಣವಿಲ್ಲ
ವಾಷಿಂಗ್ಟನ್, ಅಕ್ಟೋಬರ್ 8: $ 230 ಮಿಲಿಯನ್ ಕೊರತೆಯಲ್ಲಿ ವಿಶ್ವಸಂಸ್ಥೆ ನಡೆಯುತ್ತಿದೆ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟೋನಿಯೋ ಗುಟೆರೆಸ್ ಸೋಮವಾರ ಹೇಳಿದ್ದಾರೆ. ಅಕ್ಟೋಬರ್ ಅಂತ್ಯದ ಹೊತ್ತಿಗೆ ಹಣವೇ ಇಲ್ಲದಂತೆ ಆಗುತ್ತದೆ ಎಂದು ಕೂಡ ಅವರು ಹೇಳಿದ್ದಾರೆ.
ವಿಶ್ವಸಂಸ್ಥೆಯ ಕಾರ್ಯಾಲಯದಲ್ಲಿ ಇರುವ 37,000 ಸಿಬ್ಬಂದಿಯನ್ನು ಉದ್ದೇಶಿಸಿ ಬರೆದ ಪತ್ರವು ಎಎಫ್ ಪಿಗೆ ದೊರೆತಿದ್ದು, ಅದರಲ್ಲಿ ಗುಟೆರೆಸ್, ಕೊರತೆ ನೀಗಿಸಲು ಹೆಚ್ಚುವರಿಯಾಗಿ ಕ್ರಮ ತೆಗೆದುಕೊಳ್ಳುವ ಬಗ್ಗೆ ಹೇಳಿದ್ದಾರೆ. ಸಂಬಳ- ಭತ್ಯೆ ಇತ್ಯಾದಿ ಪಾವತಿಗೆ ಅಗತ್ಯ ಕ್ರಮ ತೆಗೆದುಕೊಳ್ಳುವ ಪ್ರಸ್ತಾವ ಮಾಡಿದ್ದಾರೆ.
ಈ ವರ್ಷ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳು ಪಾವತಿಸಿರುವುದು ಶೇಕಡಾ ಎಪ್ಪತ್ತರಷ್ಟು ಖರ್ಚಿನ ಭಾಗ ಮಾತ್ರ. ಅದನ್ನು ನಗದು ಕೊರತೆ ಮೊತ್ತಕ್ಕೆ ಹೊಂದಿಸಿ ಹೇಳಬೇಕು ಅಂದರೆ, ಸೆಪ್ಟೆಂಬರ್ ಕೊನೆ ಹೊತ್ತಿಗೆ $ 230 ಮಿಲಿಯನ್ ಆಗಿದೆ. ಈ ತಿಂಗಳ ಕೊನೆ ಹೊತ್ತಿಗೆ ನಗದು ಮೀಸಲು ನಿಧಿಯಲ್ಲಿ ಕೊರತೆ ಆಗುತ್ತದೆ.

ವೆಚ್ಚ ಕಡಿತಗೊಳಿಸುವ ಕಾರಣಕ್ಕೆ ಸಭೆ, ಸಮಾವೇಶಗಳನ್ನು ಮುಂದೂಡಲು ತೀರ್ಮಾನಿಸಲಾಗಿದೆ. ಸೇವೆಯಲ್ಲಿ ಕಡಿತ, ಅಧಿಕಾರಿಗಳ ಪ್ರಯಾಣದ ಮೇಲೆ ನಿರ್ಬಂಧ- ಅಗತ್ಯ ಚಟುವಟಿಕೆಗೆ ಮಾತ್ರ ಅನುಮತಿ, ಜತೆಗೆ ವಿದ್ಯುಚ್ಛಕ್ತಿ ಉಳಿತಾಯಕ್ಕೆ ಗುಟೆರೆಸ್ ಮನವಿ ಮಾಡಿದ್ದಾರೆ.
ನಗದು ಕೊರತೆ ಸಮಸ್ಯೆ ಆಗಬಹುದು. ಆದ್ದರಿಂದ ಸದಸ್ಯ ರಾಷ್ಟ್ರಗಳು ನೀಡುವ ಪಾಲನ್ನು ಹೆಚ್ಚಿಸಬೇಕು ಎಂದು ಗುಟೆರೆಸ್ ಮನವಿ ಮಾಡಿದ್ದರು. ಆದರೆ ಅದಕ್ಕೆ ಸದಸ್ಯ ರಾಷ್ಟ್ರಗಳು ಒಪ್ಪಿರಲಿಲ್ಲ. "ವಿಶ್ವಸಂಸ್ಥೆಯ ಆರ್ಥಿಕ ಸ್ಥಿತಿಯನ್ನು ಚೆನ್ನಾಗಿರುವಂತೆ ನೋಡಿಕೊಳ್ಳುವುದು ಸದಸ್ಯ ರಾಷ್ಟ್ರಗಳದೇ ಜವಾಬ್ದಾರಿ" ಎಂದು ಗುಟೆರೆಸ್ ಹೇಳಿದ್ದಾರೆ.
ಶಾಂತಿಸ್ಥಾಪನೆ ಕಾರ್ಯಾಚರಣೆಗೆ ಎಷ್ಟು ಹಣ ಖರ್ಚು ಮಾಡುತ್ತದೆ ಎಂಬ ಬಗ್ಗೆ ವಿಶ್ವಸಂಸ್ಥೆ ಮಾಹಿತಿ ನೀಡಿಲ್ಲ. 2018- 2019ನೇ ಸಾಲಿನಲ್ಲಿ ವಿಶ್ವಸಂಸ್ಥೆಯ ಕಾರ್ಯ ಚಟುವಟಿಕೆ ಬಜೆಟ್ $ 5.4 ಬಿಲಿಯನ್. ಅದರಲ್ಲಿ ಯುನೈಟೆಡ್ ಸ್ಟೇಟ್ಸ್ ನ ಪಾಲು 22 ಪರ್ಸೆಂಟ್.












Click it and Unblock the Notifications