ಅಮೆರಿಕದಲ್ಲಿ ಇಮ್ರಾನ್ ಖಾನ್ ಗೆ ಅವಮಾನ! ಸ್ವಾಗತಿಸಲು ಯಾರೂ ಇಲ್ಲ!
ವಾಷಿಂಗ್ಟನ್, ಜುಲೈ 22: ಅಮೆರಿಕ ಪ್ರವಾಸದಲ್ಲಿರುವ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಮುಜುಗರವಾಗುವಂಥ ಘಟನೆ ನಡೆದಿದೆ.
ಪಾಕಿಸ್ತಾನ ಹಣಕಾಸಿನ ಮುಗ್ಗಟ್ಟು ಎದುರಿಸುತ್ತಿರುವುದರಿಂದ ಇಮ್ರಾನ್ ಖಾನ್ ಅವರು ಖಾಸಗಿ ವಿಮಾನದ ಬದಲಾಗಿ ಕಮರ್ಶಿಯಲ್ ವಿಮಾನದಲ್ಲೇ ಪ್ರಯಾಣಿಸಿದ್ದರು. ಕತಾರ್ ಏರ್ವೇಸ್ ನಲ್ಲಿ ಪ್ರಯಾಣಿಸಿದ ಅವರು ಅಮೆರಿಕದ ಡಲ್ಲಸ್ ಏಪೋರ್ಟ್ ಗೆ ಬಂದಿಳಿದರೆ ಅವರನ್ನು ಸ್ವಾಗತಿಸಲು ಅಮೆರಿಕ ಸರ್ಕಾರದ ಯಾವೊಬ್ಬ ಹಿರಿಯ ಅಧಿಕಾರಿಗಳೂ ಇರಲಿಲ್ಲ. ಶಿಷ್ಟಾಚಾರ ವಿಭಾಗದ ಕಾರ್ಯಾಧ್ಯಕ್ಷರಾಗಿದ್ದ ಮೇರಿ ಕೇಟ್ ಫಿಶರ್ ಅವರನ್ನು ಬಿಟ್ಟರೆ ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೆಹ್ಮೂದ್ ಖುರೇಶಿ ಮಾತ್ರವೇ ಅಲ್ಲಿದ್ದರು.
ನಂತರ ಇಮ್ರಾನ್ ಖಾನ್ ಅವರು ಕಾರಿನ ಬದಲಾಗಿ ಮೀಟ್ರೋದಲ್ಲೇ ಚಲಿಸಿದರು. ಇಮ್ರಾನ್ ಖಾನ್ ಅವರಿಗೆ ಸ್ವಾಗತ ಕಾರ್ಯಕ್ರಮ ಏರ್ಪಡಿಸಲು ಪಾಕ್ ಸರ್ಕಾರವೇ 2,50,000 ಡಾಲರ್ ನೀಡಬೇಕಿತ್ತು. ಆದರೆ ಆ ಹಣವನ್ನು ಉಳಿಸುವ ಸಲುವಾಗಿ ಇಮ್ರಾನ್ ಖಾನ್ ಅವರೇ ಈ ಸ್ವಾಗತ ಕಾರ್ಯಕ್ರಮವನ್ನೂ, ಔಪಚಾರಿಕತೆ, ಶಿಷ್ಟಾಚಾರವನ್ನೂ ತಿರಸ್ಕರಿಸಿದರು ಎಂದು ಮೂಲಗಳು ತಿಳಿಸಿವೆ.

ಭಾರತದ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕ ದಾಳಿ ಆ ನಂತರದ ಏರ್ ಸ್ಟ್ರೈಕ್ ನಂತರ ಪಾಕಿಸ್ತಾನದ ವಿರುದ್ಧ ಭಯೋತ್ಪಾದಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಡ ಹೇರಿದ್ದ ದೇಶಗಳಲ್ಲಿ ಅಮೆರಿಕವೂ ಒಂದಾಗಿತ್ತು. ಅದೂ ಅಲ್ಲದೆ, ಪ್ರತಿ ಬಾರಿ ಪಾಕಿಸ್ತಾನಕ್ಕೆ ನೀಡುತ್ತಿದ್ದ ಭದ್ರತಾ ನೆರವನ್ನೂ ಅಮೆರಿಕ ಹಿಂಪಡೆದಿದ್ದು, ಇನ್ನು ಮುಂದೆ ಯಾವುದೇ ರೀತಿಯ ಭದ್ರತಾ ನೆರವು ನೀಡುವುದಿಲ್ಲ ಎಂದಿ ಸ್ಪಷ್ಟಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications