ಎಲ್ಲಾ ನಾಮಪತ್ರ ಕ್ರಮಬದ್ಧ; ಕುತೂಹಲ ಕೆರಳಿಸಿದ ಸಿಂಧಗಿ ಉಪ ಚುನಾವಣೆ
ವಿಜಯಪುರ, ಅಕ್ಟೋಬರ್ 11; ವಿಜಯಪುರ ಜಿಲ್ಲೆಯ ಸಿಂಧಗಿ ಉಪ ಚುನಾವಣೆ ಕುತೂಹಲಕ್ಕೆ ಕಾರಣವಾಗಿದೆ. ಎಲ್ಲಾ 8 ಅಭ್ಯರ್ಥಿಗಳ ನಾಮಪತ್ರ ಕಮಬದ್ಧವಾಗಿದೆ. ನಾಮಪತ್ರ ವಾಪಸ್ ಪಡೆಯಲು ಅಕ್ಟೋಬರ್ 13 ಕೊನೆಯ ದಿನ.
ಸೋಮವಾರ ನಾಮಪತ್ರಗಳ ಪರಿಶೀಲನೆ ನಡೆಯಿತು. ಮೂರು ಪ್ರಮುಖ ಪಕ್ಷಗಳು ಸೇರಿದಂತೆ ಎಲ್ಲ 8 ಅಭ್ಯರ್ಥಿಗಳು ಸಲ್ಲಿಕೆ ಮಾಡಿದ ನಾಮಪತ್ರಗಳು ಕ್ರಮಬದ್ಧವಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಪಿ. ಸುನೀಲ್ ಕುಮಾರ್ ಹೇಳಿದರು.
ಅಭ್ಯರ್ಥಿಗಳು ನಾಮಪತ್ರವನ್ನು ವಾಪಸ್ ಪಡೆಯಲು ಅಕ್ಟೋಬರ್ 13 ಕೊನೆಯ ದಿನವಾಗಿದೆ. ಅಕ್ಟೋಬರ್ 30ರಂದು ಮತದಾನ ನಡೆಯಲಿದ್ದು, ನವೆಂಬರ್ 2ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.

ನಾಮಪತ್ರಗಳು; ಕಾಂಗ್ರೆಸ್‌ನ ಅಶೋಕ ಮನಗೂಳಿ, ಬಿಜೆಪಿಯ ರಮೇಶ ಭೂಸನೂರ, ಜೆಡಿಎಸ್‌ನ ನಾಜಿಯಾ ಶಕೀಲ್ ಅಂಗಡಿ, ರಾಷ್ಟ್ರೀಯ ಸಮಾಜ ಪಕ್ಷದ ವಿಕ್ರಮ್ ಪಂಡಿತ, ಕರ್ನಾಟಕ ರಾಷ್ಟ್ರ ಸಮಿತಿಯ ಡಾ. ಸುನೀಲ್ ಕುಮಾರ್ ಹೆಬ್ಬಿ ನಾಮಪತ್ರಗಳು ಕ್ರಮಬದ್ಧವಾಗಿದೆ.
ಪಕ್ಷೇತರ ಅಭ್ಯರ್ಥಿಗಳಾದ ಅಬ್ದುಲ್ ರೆಹಮಾನ್ ದುಂಡಿಸಿ, ಜಿಲಾನಿ ಮುಲ್ಲಾ ಮತ್ತು ದೀಪಿಕಾ ಎಸ್. ನಾಮಪತ್ರಗಳು ಕ್ರಮಬದ್ಧವಾಗಿವೆ ಎಂದು ಜಿಲ್ಲಾಧಿಕಾರಿ ಮತ್ತು ಚುನಾವಣಾಧಿಕಾರಿ ಪಿ. ಸುನೀಲ್ ಕುಮಾರ್ ಮಾಹಿತಿ ನೀಡಿದ್ದಾರೆ.
ಪ್ರಚಾರದ ಭರಾಟೆ; ಸಿಂಧಗಿ ಕ್ಷೇತ್ರದ ಶಾಸಕರಾಗಿದ್ದ ಜೆಡಿಎಸ್‌ನ ಎಂ. ಸಿ. ಮನಗೂಳಿ ನಿಧನದಿಂದ ತೆರವಾದ ಸ್ಥಾನಕ್ಕೆ ಉಪ ಚುನಾವಣೆ ನಡೆಯುತ್ತಿದೆ. ತಂದೆಯ ಮರಣದ ಬಳಿಕ ಎಂ. ಸಿ. ಮನಗೂಳಿ ಪುತ್ರ ಅಶೋಕ ಮನಗೂಳಿ ಕಾಂಗ್ರೆಸ್ ಸೇರಿದ್ದಾರೆ. ಉಪ ಚುನಾವಣೆಗೆ ಕಾಂಗ್ರೆಸ್‌ನಿಂದ ಅವರೇ ಅಭ್ಯರ್ಥಿ.
ಮೂರು ಪಕ್ಷಗಳು ಚುನಾವಣಾ ಪ್ರಚಾರವನ್ನು ಆರಂಭಿಸಿವೆ. 2018ರಲ್ಲಿ ಗೆದ್ದಿದ್ದ ಕ್ಷೇತ್ರವನ್ನು ಉಳಿಸಿಕೊಳ್ಳಲು ಜೆಡಿಎಸ್ ಪ್ರಯತ್ನ ನಡೆಸಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ ಉಪ ಚುನಾವಣೆ ಗೆಲ್ಲುವುದು ಬಿಜೆಪಿಗೆ ಸವಾಲಾಗಿದೆ. ಕಾಂಗ್ರೆಸ್ ಕ್ಷೇತ್ರದಲ್ಲಿ ಗೆದ್ದು ಬಿಜೆಪಿಗೆ ಮುಖಭಂಗ ಉಂಟು ಮಾಡಲು ತಂತ್ರ ರೂಪಿಸಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಚುನಾವಣಾ ಪ್ರಚಾರವನ್ನು ನಡೆಸಲಿದ್ದಾರೆ. ಈ ವಾರ ಚುನಾವಣಾ ಪ್ರಚಾರದ ಕಾವು ಏರುವ ನೀರಿಕ್ಷೆ ಇದೆ.
ಕೋವಿಡ್ ಮಾರ್ಗಸೂಚಿಗಳನ್ನು ಪಾಲನೆ ಮಾಡಿಕೊಂಡು ಉಪ ಚುನಾವಣೆ ನಡೆಸಲಾಗುತ್ತಿದೆ. ಬೆಳಗ್ಗೆ 10 ರಿಂದ ಸಂಜೆ 7 ಗಂಟೆಯ ತನಕ ಮಾತ್ರ ಪ್ರಚಾರ ನಡೆಸಲು ಸಮಯ ನೀಡಲಾಗಿದೆ. ಉಪ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ಒಟ್ಟು 30.80 ಲಕ್ಷ ರೂ. ವೆಚ್ಚ ಮಾಡಬಹುದಾಗಿದೆ.
ಉಪ ಚುನಾವಣೆ ಪ್ರಚಾರಕ್ಕೆ ಸ್ಟಾರ್ ಪ್ರಚಾರಕರು ಬಂದರೆ 1 ಸಾವಿರದೊಳಗೆ ಜನ ಸೇರಲು ಅವಕಾಶ ನೀಡಲಾಗಿದೆ. ಸ್ಟಾರ್ ಪ್ರಚಾರಕರಲ್ಲದವರು ಇದ್ದರೆ 500 ಜನರು ಸೇರಲು ಕೋವಿಡ್ ಮಾರ್ಗಸೂಚಿ ಅನ್ವಯ ಅವಕಾಶ ನೀಡಲಾಗಿದೆ.
ತ್ರಿಕೋನ ಸ್ಪರ್ಧೆ; ಸಿಂಧಗಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಸ್ಪರ್ಧೆ ಇದೆ ಎಂದು ಅಂದಾಜಿಸಲಾಗಿತ್ತು. ಆದರೆ ಜೆಡಿಎಸ್ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡಿ, ಚುನಾವಣಾ ಚಿತ್ರಣ ಬದಲಿಸಿದ್ದು, ತ್ರಿಕೋನ ಸ್ಪರ್ಧೆ ನಿರೀಕ್ಷಿಸಲಾಗಿದೆ.
ಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಡೆದ ಮತಗಳು ಕೇವಲ 22,818. ಬಿಜೆಪಿ ಅಭ್ಯರ್ಥಿ 61,560 ಮತಗಳನ್ನು ಪಡೆದಿದ್ದರು. ಈ ಬಾರಿ ಮೂರು ಪಕ್ಷಗಳ ನಡುವೆ ಪ್ರಬಲ ಪೈಪೋಟಿ ನಿರೀಕ್ಷಿಸಲಾಗಿದೆ. ಎಂ. ಸಿ. ಮನಗೂಳಿ ಪುತ್ರ ಅಶೋಕ ಮನಗೂಳಿ ಕಾಂಗ್ರೆಸ್ ಸೇರಿರುವುದು ಪಕ್ಷಕ್ಕೆ ಸಹಕಾರಿಯಾಗಲಿದೆಯೇ? ಕಾದು ನೋಡಬೇಕಿದೆ.
ಕ್ಷೇತ್ರದಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳನ್ನು ಪತ್ತೆ ಹಚ್ಚಲು 18 ಫ್ಲೈಯಿಂಗ್ ಸ್ಕ್ವಾಡ್ ತಂಡಗಳನ್ನು ನೇಮಿಸಲಾಗಿದೆ. ಅಕ್ಟೋಬರ್ 30ರಂದು ಮತದಾನ ನಡೆಯಲಿದೆ. ಮತದಾನಕ್ಕಾಗಿ ಒಟ್ಟು 297 ಮತಗಳಟ್ಟೆಗಳನ್ನು ಸ್ಥಾಪನೆ ಮಾಡಲಾಗುತ್ತದೆ.












Click it and Unblock the Notifications