ಸಿದ್ದರಾಮಯ್ಯ ಬಿಜೆಪಿ ಜತೆ ಸೇರಿದರೂ ಅಚ್ಚರಿ ಇಲ್ಲ: ಕುಮಾರಸ್ವಾಮಿ
ವಿಜಯಪುರ, ಫೆಬ್ರವರಿ 02: ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ 40-50 ಸೀಟು ಗೆದ್ದು ಸಿದ್ದರಾಮಯ್ಯ ಅವರೇ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದರೂ ಅಚ್ಚರಿ ಇಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಭವಿಷ್ಯ ನುಡಿದಿದ್ದಾರೆ.
ವಿಜಯಪುರದ ಆಲಮಟ್ಟಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು 'ಸಿದ್ದರಾಮಯ್ಯ ಬಿಜೆಪಿ ಸೇರುವ ವಿಚಾರ ನಾನು ತಮಾಷೆಗೆ ಹೇಳುತ್ತಿಲ್ಲ, ಅವರಿಗೆ ಅಧಿಕಾರ ಬೇಕಿದೆ ಅಷ್ಟೆ ಅದಕ್ಕಾಗಿ ಒಳರಾಜಕೀಯ ಮಾಡಿ ಅವರು ಸಿದ್ದವಾಗಿದ್ದಾರೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ಸಿದ್ದರಾಮಯ್ಯ ಬಿಜೆಪಿಗೆ ಹೋಗುವ ತಮ್ಮ ಹೇಳಿಕೆಗೆ ಪೂರಕವಾದ ವಾದವನ್ನೂ ಮಂಡಿಸಿದ ಎಚ್.ಡಿ.ಕುಮಾರಸ್ವಾಮಿ, 'ಸಿದ್ದರಾಮಯ್ಯ ಹೇಳಿದವರಿಗೆ ಮಾತ್ರ ಹೈಕಮಾಂಡ್ ಟಿಕೆಟ್ ಕೊಡುತ್ತದೆ, ಹಾಗಾಗಿ ಸಿದ್ದರಾಮಯ್ಯ ತಮ್ಮ ನಿಷ್ಠರಿಗೆ ಮಾತ್ರ ಟಿಕೆಟ್ ಕೊಡಿಸುತ್ತಾರೆ, ಚುನಾವಣೆ ಫಲಿತಾಂಶ ಬಂದು ಅತಂತ್ರ ಸ್ಥಿತಿ ನಿರ್ಮಾಣವಾದರೆ ಅವರೇ ಮೊದಲು ತಮ್ಮ ಬೆಂಬಲಿಗರನ್ನು ಕರೆದು ಕೊಂಡು ಹೋಗಿ ಮೋದಿ ಮುಂದೆ ನಿಲ್ಲುತ್ತಾರೆ. ನೋಡುತ್ತಿರಿ' ಎಂದು ಭವಿಷ್ಯ ನುಡಿದರು.

ಸಿದ್ದರಾಮಯ್ಯ ಅವರ ಈಗಿನ ನಡುವಳಿಕೆ ನೋಡಿದರೆ ಹಾಗೇ ಎನ್ನಿಸುತ್ತಿದೆ 40-50 ಸೀಟ್ ಡಿವೈಡ್ ಮಾಡ್ಕೊಂಡು ಅವರೇ ಬಿಜೆಪಿ ಜೊತೆ ಸೇರಿ ಸರ್ಕಾರ ಮಾಡುವ ವಾತಾವರಣ ನಿರ್ಮಾಣ ಮಾಡಿದರೂ ಆಶ್ಚರ್ಯ ಪಡುವ ಹಾಗಿಲ್ಲ. ಕಾಂಗ್ರೆಸ್ ಗೆ ಮತ ಹಾಕುವ ಮೊದಲು ಇದನ್ನು ನಮ್ಮ ಅಲ್ಪಸಂಖ್ಯಾತರು ಸೂಕ್ಷ್ಮವಾಗಿ, ಗಮನಿಸಬೇಕಿರುವುದು ಸೂಕ್ತ ಎಂದು ಎಚ್ಚರಿಕೆ ನುಡಿದರು.












Click it and Unblock the Notifications