ವಿಜಯಪುರ : ಲಕ್ಷ್ಮೀ ಪೂಜೆ ಮಾಡಿ ಮಸೀದಿ ಉದ್ಘಾಟನೆ!
ವಿಜಯಪುರ, ಸೆಪ್ಟೆಂಬರ್ 04 : ಲಕ್ಷ್ಮೀ ಪೂಜೆ ಮಾಡುವ ಮೂಲಕ ಮಸೀದಿಯನ್ನು ಉದ್ಘಾಟಿಸಿದ ಘಟನೆ ವಿಜಯಪುರದಲ್ಲಿ ನಡೆದಿದೆ. ಸಹಬಾಳ್ವೆಯ ಸಂದೇಶ ಸಾರಿದ ಗ್ರಾಮಸ್ಥರ ನಡೆಯನ್ನು ಹಲವರು ಸ್ವಾಗತಿಸಿದ್ದಾರೆ.
ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಯಕ್ಕುಂಡಿಯಲ್ಲಿ ನಿರ್ಮಿಸಿದ್ದ ಮಸೀದಿಯನ್ನು ಲಕ್ಷ್ಮೀಪೂಜೆ ಮಾಡುವ ಮೂಲಕ ವಿನೂತನವಾಗಿ ಉದ್ಘಾಟನೆ ಮಾಡಲಾಗಿದೆ. ಮುಸ್ಲಿಂ ಮತ್ತು ಹಿಂದೂ ಸಮುದಾಯದ ಹಲವಾರು ಜನರು ಇದರಲ್ಲಿ ಒಟ್ಟಾಗಿ ಪಾಲ್ಗೊಂಡಿದ್ದರು.

ಯಕ್ಕುಂಡಿಯ ಗ್ರಾಮಸ್ಥರು 10 ಲಕ್ಷ ರೂಪಾಯಿ ವೆಚ್ಚದಲ್ಲಿ ಲಾಲಸಾಬ ಅಲಿ ಫೀರಾ ಮಸೀದಿಯನ್ನು ನಿರ್ಮಾಣ ಮಾಡಿದ್ದರು. ದೀಪಗಳನ್ನು ಹಚ್ಚಿ ಲಕ್ಷ್ಮೀ ಪೂಜೆ ಮಾಡುವ ಮೂಲಕ ಮಸೀದಿಯನ್ನು ಉದ್ಘಾಟನೆ ಮಾಡಲಾಯಿತು.
ಕಾಂಗ್ರೆಸ್ ನಾಯಕ, ಮಾಜಿ ಸಚಿವ ಮತ್ತು ಬಬಲೇಶ್ವರ ಕ್ಷೇತ್ರದ ಶಾಸಕ ಎಂ. ಬಿ. ಪಾಟೀಲ್ ಈ ವಿನೂತನ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು. ಕೋಮು ಸೌಹಾರ್ದತೆ ಮೆರೆದ ಗ್ರಾಮದ ಜನರ ನಡೆಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮಸೀದಿ ಉದ್ಘಾಟನಾ ಸಂದರ್ಭದಲ್ಲಿ ಲಕ್ಷ್ಮೀ ಪೂಜೆ ಮಾಡಿದ ಅವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕುರಿತು ಟ್ವೀಟ್ ಮಾಡಿದ್ದಾರೆ. "ಭಾವೈಕ್ಯತೆ ಸಾರುವ ಇಂತಹ ಸಹಬಾಳ್ವೆಯು ಎಲ್ಲೆಡೆ ಹರಡಲಿ ಎಂದು ಹಾರೈಸುತ್ತೇನೆ" ಎಂದು ಹೇಳಿದ್ದಾರೆ.

ಎಂ. ಬಿ. ಪಾಟೀಲ್ ಟ್ವೀಟ್ : ಜಾತಿ-ಧರ್ಮಗಳ ನಡುವಿನ ಸಾಮರಸ್ಯವು ಅತೀ ಅವಶ್ಯಕವಾಗಿರುವ ಈ ಸಮಯದಲ್ಲಿ ನಮ್ಮ ಮತಕ್ಷೇತ್ರದ ಯಕ್ಕುಂಡಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ್ದ ಮಸೀದಿಯಲ್ಲಿ ಗ್ರಾಮಸ್ಥರೆಲ್ಲರೂ ಸೇರಿ ಲಕ್ಷ್ಮೀಪೂಜೆ ಮಾಡಿಸಿ ಉದ್ಘಾಟನೆಯನ್ನು ನೆರವೇರಿಸಿರುವುದು ಅತ್ಯಂತ ಹೆಮ್ಮೆಯ ವಿಷಯ. ಭಾವೈಕ್ಯತೆ ಸಾರುವ ಇಂತಹ ಸಹಬಾಳ್ವೆಯು ಎಲ್ಲೆಡೆ ಹರಡಲಿ ಎಂದು ಹಾರೈಸುತ್ತೇನೆ












Click it and Unblock the Notifications