Karnataka Election 2023: ಈ ಬಾರಿ ಆಪರೇಷನ್ ಕಮಲ ಸಾಧ್ಯವಿಲ್ಲ ಎಂದ ರಾಹುಲ್ ಗಾಂಧಿ
ಈ ಬಾರಿ ಚುನಾವಣೆಯಲ್ಲಿ ರಾಜ್ಯದಲ್ಲಿ ಆಪರೇಷನ್ ಕಮಲ ನಡೆಯಲ್ಲ, ಕಾಂಗ್ರೆಸ್ ಪಕ್ಷ 150 ಸೀಟುಗಳನ್ನು ಗೆಲ್ಲುವ ಮೂಲಕ ಸರ್ಕಾರ ರಚನೆ ಮಾಡಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದರು. ವಿಜಯಪುರದಲ್ಲಿ ರೋಡ್‌ಶೋ ವೇಳೆ ಮಾತನಾಡಿದ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 150 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದ್ದು, ರಾಜ್ಯದಲ್ಲಿ ಬಿಜೆಪಿಗೆ ಆಪರೇಷನ್ ಕಮಲ ಮಾಡಲು ಅವಕಾಶ ಇರುವುದಿಲ್ಲ ಎಂದು ಹೇಳಿದರು. ವಿಜಯಪುರದ ಶಿವಾಜಿ ವೃತ್ತದಲ್ಲಿ ಶಿವಾಜಿ ಪ್ರತಿಮೆಗೆ ಹೂವಿನ ಹಾರ ಹಾಕುವ ಮೂಲಕ ಅವರು ಕಾಂಗ್ರೆಸ್‌ನ ಬೃಹತ್ ರೋಡ್‌ಶೋಗೆ ಚಾಲನೆ ನೀಡಿದರು.

ನಗರದ ಶಿವಾಜಿ ವೃತ್ತದಿಂದ ಕನಕದಾಸ ವೃತ್ತದವರೆಗೂ ನಡೆಯಲಿರುವ ಬೃಹತ್ ರೋಡ್ ಶೋ ನಡೆಯಿತು. ಬೃಹತ್ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಬಿಜೆಪಿಯವರು ನನ್ನ ನಿವಾಸವನ್ನು ಕಿತ್ತುಕೊಂಡರು. ಆದರೆ ನೂರಾರು ಜನ ತಮ್ಮ ಮನೆ ತಗೊಳ್ಳಿ ಎಂದು ಹೇಳಿದರು. ಬಿಜೆಪಿ ಮನೆ ಕಿತ್ತುಕೊಂಡಿದ್ದು ನನಗೆ ಒಳ್ಳೆಯದೇ ಆಗಿದೆ ಎಂದು ಹೇಳಿದರು.
ಬಿಜೆಪಿ ಸರ್ಕಾರದ ವಿರುದ್ಧ ರಾಹುಲ್ ಕಿಡಿ
ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಮಿತಿ ಮೀರಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಏನೇ ಕೆಲಸ ಆಗಬೇಕೆಂದು 40 ಪರ್ಸೆಂಟ್ ಕಮಿಷನ್ ಪಡೆಯುತ್ತಾರೆ. ಪಿಎಸ್‌ಐ ನೇಮಕಾತಿಯಲ್ಲೂ ಕೋಟಿಗಟ್ಟಲೆ ಹಗರಣ ಮಾಡಿದ್ದಾರೆ. ಇಂಜಿನಿಯರ್ ಗಳ ಮುಖಾಂತರ ಲೂಟಿ ಮಾಡಿದ್ದಾರೆ. ಗುತ್ತಿಗೆದಾರರು 40 ಪರ್ಸೆಂಟ್ ಕಮಿಷನ್ ಬಗ್ಗೆ ಪ್ರಧಾನಿ ಮೋದಿಗೆ ಪತ್ರ ಬರೆದರೂ ಅವರಿಂದ ಯಾವುದೇ ಉತ್ತರ ಬಂದಿಲ್ಲ. ಪ್ರಚಾರ ಮಾಡುವಾಗ ಮಾತ್ರ ಮೋದಿ ನಾನು ಭ್ರಷ್ಟಾಚಾರ ವಿರೋಧಿ ಎಂದು ಹೇಳಿಕೊಳ್ಳುತ್ತಾರೆ ಎಂದು ರಾಹುಲ್ ಗಾಂಧಿ ಟೀಕೆ ಮಾಡಿದ್ದಾರೆ.
ಶಾಸಕರನ್ನು ಖರೀದಿ ಮಾಡುವ ಮೂಲಕ ಸರ್ಕಾರ ರಚನೆ ಮಾಡಿದ್ದಾರೆ, ಶಾಸಕರನ್ನು ಖರೀದಿ ಮಾಡಲು ಬಿಜೆಪಿಗೆ ಹಣ ಎಲ್ಲಿಂದ ಬಂತು ಎಂದು ಪ್ರಧಾನಿ ಮೋದಿ ಹೇಳಬೇಕು. ಭ್ರಷ್ಟಾಚಾರ ಮಾಡಿ ಕೂಡಿಟ್ಟಿರುವ ಹಣದಲ್ಲಿ ಶಾಸಕರ ಖರೀದಿ ಮಾಡಲಾಗುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ನನ್ನ ಮೇಲೆ ಪ್ರಕರಣಗಳನ್ನು ದಾಖಲಿಸುವ ಮೂಲಕ ಮನೆಯನ್ನು ಕಿತ್ತುಕೊಂಡಿದೆ. ಓಬಿಸಿ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದೇನೆ ಎಂದು ಆರೋಪ ಮಾಡಿದ್ದಾರೆ. ನನಗೆ ಎಲ್ಲರ ಬಗ್ಗೆಯೂ ಗೌರವ ಇದೆ, ದ್ವೇಷದ ಊರಿನಲ್ಲಿ ಪ್ರೀತಿಯ ಸಾಮ್ರಾಜ್ಯ ಕಟ್ಟುತ್ತೇನೆ. ಯುಪಿಎ ಅವಧಿಯಲ್ಲಿ ಜಾತಿ ಸಮೀಕ್ಷೆ ಮಾಡಿದ್ದೇವೆ, ಆ ಸಮೀಕ್ಷೆಯನ್ನು ಬಿಜೆಪಿ ಸರ್ಕಾರ ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು.












Click it and Unblock the Notifications