MB Patil: ಏನು ಕೆಲಸ ಮಾಡಿದ್ದೀರಿ ಎಂದ ಯುವಕನ ಕಪಾಳಕ್ಕೆ ಬಾರಿಸಿದ ಸಿಎಂ ಆಕಾಂಕ್ಷಿ ಎಂಬಿ ಪಾಟೀಲ್!
ಕರ್ನಾಟಕದಲ್ಲಿ 2023ರ ವಿಧಾನಸಭೆ ಚುನಾವಣೆಯ ಕಾವು ಜೋರಾಗಿದ್ದು, ಮೇ 10ರಂದು ನಡೆಯುವ ಮತದಾನಕ್ಕೆ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಭರ್ಜರಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.
ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ತಮ್ಮ ಸೇವೆ, ಜನಪರ ಮತ್ತು ಅಭಿವೃದ್ಧಿ ಕೆಲಸಗಳನ್ನು ಮುಂದಿಟ್ಟು ಮತದಾರರನ್ನು ಓಲೈಸಿಕೊಳ್ಳುವುದು ಸಾಮಾನ್ಯ. ಆದರೆ, ಕಾಂಗ್ರೆಸ್ ಹಿರಿಯ ನಾಯಕರೊಬ್ಬರು ಕೆಲಸ ಕೇಳಿದ್ದಕ್ಕೆ ಯುವಕನಿಗೆ ಕಪಾಳಮೋಕ್ಷ ಮಾಡಿದ್ದಾರೆ.

ಹೀಗೆ ಕಪಾಳಮೋಕ್ಷ ಮಾಡಿದ್ದ ರಾಜಕಾರಣಿ ಬೇರಾರು ಅಲ್ಲ, ಮಾಜಿ ಸಚಿವ ಮತ್ತು ಬಬಲೇಶ್ವರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ಬಿ. ಪಾಟೀಲ್. ಈ ಕ್ಷೇತ್ರದಲ್ಲಿ ಸತತವಾಗಿ ಗೆದ್ದು ಬರುತ್ತಿರುವ ಎಂ.ಬಿ. ಪಾಟೀಲ್ ಅವರು ಯುವಕನ ಕೆನ್ನೆಗೆ ಬಾರಿಸಿದ ಘಟನೆ ವಿಜಯಪುರ ಜಿಲ್ಲೆ ಬಬಲೇಶ್ವರದ ದೇವಾಪೂರ ಗ್ರಾಮದಲ್ಲಿ ನಡೆದಿದೆ.
ಬಬಲೇಶ್ವರ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಎಂ.ಬಿ. ಪಾಟೀಲ್ ಶನಿವಾರ ತಡರಾತ್ರಿ ಪ್ರಚಾರಕ್ಕೆ ಬಂದಿದ್ದರು. ಈ ವೇಳೆ ಬಬಲೇಶ್ವರ ಕ್ಷೇತ್ರದ ದೇವಾಪೂರ ಗ್ರಾಮದ ಯುವಕ ಹಣಮಂತ ತುಪ್ಪದ್ ಅವರಿಗೆ ಕಪಾಳ ಮೋಕ್ಷ ಮಾಡಿದರು.
ಬಬಲೇಶ್ವರ ಕ್ಷೇತ್ರದ ದೇವಾಪೂರ ಗ್ರಾಮದ ಯುವಕ ಹಣಮಂತ ಅವರು, ಚುನಾವಣೆ ಬರುತ್ತಿದ್ದಂತೆ 5 ವರ್ಷಗಳ ನಂತರ ಗ್ರಾಮಕ್ಕೆ ಆಗಮಿಸಿದ್ದೀರಿ. ನಮ್ಮ ಗ್ರಾಮದಲ್ಲಿ ಏನು ಅಭಿವೃದ್ಧಿ ಮಾಡಿದ್ದೀರಿ ಎಂದು ಪ್ರಶ್ನಿಸಿದ್ದಾನೆ. ಇದರಿಂದಾಗಿ ಕುಪಿತರಾದ ಮಾಜಿ ಸಚಿವ ಎಂ.ಬಿ. ಪಾಟೀಲ್ ತುಂಬಿದ ಸಭೆಯಲ್ಲೇ ಯುವಕನಿಗೆ ಕಪಾಳಮೋಕ್ಷ ಮಾಡಿದ್ದಾರೆ.

ಕಾಂಗ್ರೆಸ್ ಹಿರಿಯ ನಾಯಕ ಎಂ.ಬಿ. ಪಾಟೀಲ್ ಕೃತ್ಯಕ್ಕೆ ಗ್ರಾಮಸ್ಥರು ಮತ್ತು ಕ್ಷೇತ್ರದ ಸಾರ್ವಜನಿಕರಿಂದ ತೀವ್ರ ವ್ಯಕ್ತವಾಗಿದ್ದು, ಒಬ್ಬ ಜನಪ್ರತಿನಿಧಿ ನಡೆದುಕೊಳ್ಳುವ ರೀತಿ ಇದಲ್ಲ ಎಂದಿದ್ದಾರೆ.
2023ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು, ಈಗಾಗಲೇ ನಾಮಪತ್ರ ಸಲ್ಲಿಕೆ ಮತ್ತು ಪರಿಶೀಲನೆ ಪ್ರಕ್ರಿಯೆ ಮುಕ್ತಾಯವಾಗಿದೆ. ಇನ್ನು ನಾಮಪತ್ರ ವಾಪಸ್ ಪಡೆಯಲು ನಾಳೆ (ಏಪ್ರಿಲ್ 24) ಕೊನೆಯ ದಿನಾವಾಗಿದೆ. ಮೇ 10ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದರೆ, ಮೇ 13ರಂದು ಫಲಿತಾಂಶ ಪ್ರಕಟವಾಗಲಿದೆ.
ಎಂ.ಬಿ. ಪಾಟೀಲ್ ರಾಜಕೀಯ ಜೀವನ
ರಾಜ್ಯ ಕಾಂಗ್ರೆಸ್‌ನ ಹಿರಿಯ ನಾಯಕರಲ್ಲಿ ಎಂ.ಬಿ. ಪಾಟೀಲ್ ಕೂಡ ಒಬ್ಬರು. ಸದ್ಯ ಬಬಲೇಶ್ವರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಎಂಬಿ ಪಾಟೀಲ್ ಶಾಸಕರಾಗಿ, ಸಂಸದರಾಗಿ, ಸಚಿವ ಸಂಪುಟದಲ್ಲಿ ಜಲಸಂಪನ್ಮೂಲ ಖಾತೆ, ಗೃಹ ಖಾತೆಯಂತ ಪ್ರಮುಖ ಖಾತೆಯನ್ನು ನಿರ್ವಹಿಸಿ, ರಾಜಕಾರಣ ಮತ್ತು ಆಡಳಿತದಲ್ಲಿ ಅಪಾರ ಅನುಭವ ಪಡೆದಿದ್ದಾರೆ.
ಅನಿವಾರ್ಯವಾಗಿ ರಾಜಕೀಯಕ್ಕೆ ಬಂದ ಎಂ.ಬಿ. ಪಾಟೀಲ್
ಎಂ.ಬಿ. ಪಾಟೀಲ್ ರಾಜಕೀಯ ಹಿನ್ನೆಲೆಯ ಕುಟುಂಬದಿಂದ ಬಂದವರಾಗಿದ್ದು, ಅವರ ತಂದೆ ಬಿ.ಎಂ. ಪಾಟೀಲ್ ಶಾಸಕರಾಗಿದ್ದರು. 1991ರಲ್ಲಿ ಬಿ.ಎಂ. ಪಾಟೀಲ್ ನಿಧನರಾದಾಗ, ಅನಿವಾರ್ಯವಾಗಿ ಎಂ.ಬಿ. ಪಾಟೀಲ್ ರಾಜಕೀಯ ಪ್ರವೇಶ ಮಾಡಬೇಕಾಯಿತು. ಆಗ ಅವರ ವಯಸ್ಸು ಬರೀ 27 ವರ್ಷ! ತಿಕೋಟಾ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸಿ 27ನೇ ವಯಸ್ಸಿಗೆ ಎಂ.ಬಿ. ಪಾಟೀಲ್ ಗೆದ್ದು ಶಾಸಕರಾದರು.
ನಂತರ, 1994 ಮತ್ತು 1999ರಲ್ಲಿ ನಡೆದ ತಿಕೋಟಾ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಪ್ರಭಾವಿ ನಾಯಕ ಶಿವಾನಂದ ಪಾಟೀಲ್ ವಿರುದ್ಧ ಎಂಬಿ ಪಾಟೀಲ್ ಸೋತರು. 1998ರಲ್ಲಿ ನಡೆದಿದ್ದ ವಿಜಯಪುರ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.
ಬಳಿಕ 2004ರಲ್ಲಿ ತಿಕೋಟಾ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಗೆದ್ದು, ಎರಡನೇ ಬಾರಿಗೆ ವಿಧಾನಸಭೆ ಪ್ರವೇಶ ಮಾಡಿದರು. ನಂತರ ಕ್ಷೇತ್ರ ಮರುವಿಂಗಡಣೆ ಬಳಿಕ ವಿಜಯಪುರ ಜಿಲ್ಲೆಯ ಬಬಲೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ 2008, 2013 ಮತ್ತು 2018ರಲ್ಲಿ ಸ್ಪರ್ಧಿಸಿ ಸತತ ಮೂರು ಬಾರಿ ಗೆದ್ದು ಶಾಸಕರಾಗಿದ್ದಾರೆ. 2023ರ ವಿಧಾನಸಭೆ ಚುನಾವಣೆಗೂ ಸ್ಪರ್ಧಿಸಿದ್ದಾರೆ.












Click it and Unblock the Notifications